ಕೋವಿಡ್ ಮತ್ತು ಗ್ರಾಮೀಣ ಪ್ರದೇಶದ ವಕೀಲರು

ಮಾನವ ಇಡೀ ಭೂಮಂಡಲದಲ್ಲಿನ ಆಗು ಹೋಗುಗಳನ್ನು, ವಿಜ್ಞಾನ ಹಾಗೂ ತಂತ್ರಜ್ಞಾನದ ಮುಖಾಂತರ ಅರಿಯಬಲ್ಲ ಹಾಗೂ ಬದಲಾಯಿಸಬಲ್ಲ ಸಾಮರ್ಥ್ಯದಿಂದಲೇ ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವುದು. ತನಗೆದುರಾಗುವ ಪ್ರತಿಯೊಂದು ಸವಾಲುಗಳನ್ನು ಹೊಸ ಹೊಸ ಆವಿಷ್ಕಾರಗಳ ಸಹಾಯದಿಂದ ಮಾನವ ಪರಿಹರಿಸಬಲ್ಲ. ಆದರೆ ಕೆಲವೊಂದು ಸಮಸ್ಯೆಗಳು ಮನುಷ್ಯನ ಎಲ್ಲಾ ಮಂತ್ರ – ತಂತ್ರಗಳಿಗೆ ಮೀರಿ, ಇವತ್ತಿಗೂ ಬ್ರಹ್ಮಗಂಟಾಗಿ ಉಳಿದುಕೊಂಡಿವೆ. ಈ ಸಮಸ್ಯೆಗಳು ಅರಾಜಕತೆಯನ್ನೇ ಸೃಷ್ಠಿ ಮಾಡುತ್ತವೆ ಎನ್ನಬಹುದು. ಈ ಮಾತು ಸಧ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿ. ಬರಿಗಣ್ಣಿಗೆ ಗೋಚರವಾಗದ ಅಣು ಗಾತ್ರ ದಲ್ಲಿರುವ ಒಂದು ಚಿಕ್ಕ ವೈರಸ್ ಇಡೀ ಪ್ರಪಂಚವನ್ನ ತನ್ನ ಕಬ್ಜಕ್ಕೆ ತೆಗೆದುಕೊಂಡು ಸಮಸ್ತ ಭೂ ಮಂಡಲವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ.

ಕ್ಷಿಪ್ರಗತಿಯಲ್ಲಿ ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟಲು ಇದ್ದಂತಹ ಏಕೈಕ ಮಾರ್ಗ ‘ಲಾಕ್ ಡೌನ್ ‘ ಆಗಿತ್ತು. ಹಾಗಾಗಿ ಭಾರತದಲ್ಲಿ ಮಾರ್ಚ್ 24 ರಿಂದ ಲಾಕ್ ಡೌನ್ ಜಾರಿ ಮಾಡಲಾಯಿತು. ಭರದಿಂದ ಸಾಗುತ್ತಿದ್ದ ಜನರ ಜೀವನ ಕೆಲ ದಿನಗಳ ಮಟ್ಟಿಗೆ ನಿಂತ ನೀರಿನಂತಾಯಿತು. ಎಲ್ಲಾ ವಿಧದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬೇಗ ಜಡಿಯಲಾಯಿತು. ಬಹುಷಃ ಇದೆ ಪ್ರಥಮ ಬಾರಿಗೆ ದೇಶದಲ್ಲಿ ಕೋರ್ಟ್ಗಳು ಸತತವಾಗಿ ಎರಡುವರೆ ತಿಂಗಳುಗಳ ಕಾಲ ಮುಚ್ಚಲ್ಪಟ್ಟವು. ಈ ಲಾಕ್ ಡೌನ್ ಸಮಯದಲ್ಲಿ ಗ್ರಾಮೀಣ ಭಾಗದ ವಕೀಲರಿಗೆ ಎದುರಾದ ಸವಾಲುಗಳನ್ನು ಈ ಲೇಖನದ ಮೂಲಕ ವಿವರಿಸುವ ಒಂದು ಪ್ರಯತ್ನ.

ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠವಾದ ವೃತ್ತಿಗಳಲ್ಲೊಂದು ಎಂದು ಗುರುತಿಸಲ್ಪಟ್ಟಿದೆ. ಜನ ಸಾಮಾನ್ಯರಲ್ಲಿ ಎದುರಾಗುವ ಕಾನೂನು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿ ನ್ಯಾಯಾಂಗದ ಮುಖಾಂತರ ನ್ಯಾಯ ಒದಗಿಸುವ ಈ ವೃತ್ತಿಯ ಕಾರ್ಯ ವೈಖರಿ ಉಳಿದೆಲ್ಲ ವೃತ್ತಿಗಳಿಗಿಂತ ಕೊಂಚ ಭಿನ್ನ. ಒಂದು ಕಚೇರಿಗೋ, ಅಥವಾ ಪ್ರದೇಶಕ್ಕೋ ಸೀಮಿತವಾಗಿರುವುದಿಲ್ಲ ವಕೀಲರ ಕೆಲಸ- ಕಾರ್ಯಗಳು. ಒಬ್ಬ ವಕೀಲರು ಹಲವಾರು ದೈನಂದಿನ ಕೆಲಸದ ಭಾಗವಾಗಿ ಹಲವು ಕೋರ್ಟ್ಗಳಿಗೆ ಹೋಗಬೇಕಾಗುತ್ತದೆ, ಎಷ್ಟೋ ಕಕ್ಷಿದಾರರನ್ನು, ಇತರೆ ವಕೀಲರನ್ನು, ಪೊಲೀಸರನ್ನು, ನ್ಯಾಯಾಲಯದ ಅಥವಾ ಕಚೇರಿಯ ಸಿಬ್ಬಂದಿಗಳನ್ನು ಭೇಟಿಯಾಗಬೇಕಾಗುತ್ತದೆ. ಹಾಗಾಗಿ ಇತರ ವೃತ್ತಿಗಳಂತೆ ವಕೀಲ ವೃತ್ತಿಯು ಕೇವಲ ಅಂತರ್ಜಾಲ ಹಾಗೂ ಕೆಲವು ಜಾಲತಾಣಗಳಿಗಷ್ಟೇ ಸೀಮಿತವಾಗಿಲ್ಲ. ಎಷ್ಟೋ ಕೆಲಸಗಳು ಅಂತರ್ಜಾಲದ ಸಹಾಯದಿಂದ ಮಾಡಲಾಗದ ಕೆಲಸಗಳು ಎಂದರೆ ತಪ್ಪಿಲ್ಲ. ಉದಾಹರಣೆಗೆ, ಸಿವಿಲ್ ಪ್ರಕ್ರಿಯಾ ಸಂಹಿತೆಯ (Civil Procedure Code) Order 6, Rule 14ರ ಪ್ರಕಾರ ಸಿವಿಲ್ ನ್ಯಾಯಾಲಯದಲ್ಲಿ ಹಾಜರುಪಡಿಸುವ ದಾಖಲೆಗಳನ್ನು ಆಯಾ ಕಕ್ಷಿದಾರರು ಸಹಿ ಹಾಕಬೇಕಾಗುತ್ತದೆ. ಅಲ್ಲದೆ ಈ ಸಹಿಯನ್ನು ನನ್ನ ಮುಂದೆಯೇ ಹಾಕಲಾಗಿದೆ ಎಂದು ಒಬ್ಬ ವಕೀಲರು ಸಹಿ ಹಾಕುವ ಅಗತ್ಯವಿದೆ. ಉಳಿದ ನ್ಯಾಯಾಲಯಗಳ ನಿಯಮಗಳೂ, ಸಹಿಯನ್ನು ಕಡ್ಡಾಯ ಮಾಡಿರುವುದರಿಂದ ಹಾಗೂ ಡಿಜಿಟಲ್ ಸಹಿಗಳ ವ್ಯವಸ್ಥೆ ಇನ್ನೂ ಬರದೇ ಇರುವುದರಿಂದ ಕಕ್ಷಿದಾರರು ವಕೀಲರ ಕಚೇರಿಗೆ ಬರಬೇಕಾದದ್ದು ಅನಿವಾರ್ಯ.

ಶೇಕಡಾವಾರು ವಿಂಗಡಣೆ ಮಾಡುವುದಾದರೆ ಈ ವೃತ್ತಿಯಲ್ಲಿ ಶೇಕಡಾ 50 ರಷ್ಟು ಕೆಲಸ ಕೋರ್ಟ್ ಗಳಲ್ಲಿ ನಡೆಯುತ್ತವೆ ಹಾಗೂ ಇನ್ನುಳಿದ ಶೇಕಡಾ 50 ರಷ್ಟು ಕೆಲಸಗಳು ಕಚೇರಿಯಲ್ಲಿ ನಡೆಯುತ್ತವೆ. ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಕಚೇರಿಯಲ್ಲೆ ಇಡುವುದು ಸಂಪ್ರದಾಯ. ಹಾಗಾಗಿ ಒಬ್ಬ ವಕೀಲ ತನ್ನ ವಾಸಸ್ಥಳಕ್ಕಿಂತ ಜಾಸ್ತಿ ಕಚೇರಿ ಹಾಗೂ ಕೋರ್ಟ್ ಗಳಲ್ಲೇ ಕಾಲ ಕಳೆಯುವುದು ಹಿಂದಿನಿಂದಲೂ ನಡೆದು ಬಂದಂತಹ ಪದ್ಧತಿ. ಹೀಗಿರುವಾಗ, ಕೋವಿಡ್ ಹೊಡೆತಕ್ಕೆ ದೇಶದಲ್ಲಿರುವ ಪ್ರತಿಯೊಂದು ಕೋರ್ಟ್ ಹಾಗೂ ಕಚೇರಿಗಳನ್ನು ಮುಚ್ಚಿದಾಗ, ಎಷ್ಟೋ ವಕೀಲರು ತಮ್ಮ ಕಚೇರಿಗೆ ತೆರಳಲಾರದೆ, ಕಡತಗಳನ್ನು ತೆರೆಯಲಾರದೆ ನಿಸ್ಸಹಾಯಕರಾಗಿ ಹೋದರು. ಎಲ್ಲ ಕಡತಗಳೂ ಕಛೇರಿಯಲ್ಲೇ ಇರುವ ಕಾರಣದಿಂದ ಅವುಗಳನ್ನು ಅಭ್ಯಸಿಸುವುದು ಸಾಧ್ಯವಿರಲಿಲ್ಲ. ಆಯಾ ಪ್ರಕರಣಗಳಿಗೆ ಭಿನ್ನವಾದ ವಾಸ್ತವಾಂಶಗಳನ್ನು ಅರಿಯದೆ, ಅದರ ಬಗ್ಗೆ research ಮಾಡಲು ಅವಕಾಶವಾಗುತ್ತಿರಲಿಲ್ಲ. ಪ್ರಾಯಶಃ ತಮ್ಮ ವಾಸ ಸ್ಥಳದ ಆಸು ಪಾಸಿನಲ್ಲೇ ಕಛೇರಿಯನ್ನು ಇಟ್ಟುಕೊಂಡಂತಹ ವಕೀಲರಿಗೆ ತುಸು ನೆಮ್ಮದಿ ಇತ್ತೇನೋ! ಆದರೆಹೆಚ್ಚಿನ ವಕೀಲರು ಪರದಾಡಬೇಕಾಯಿತು. ಇನ್ನು ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಕಕ್ಷಿದಾರರ ಭೇಟಿ ಇಲ್ಲದಿರುವುದು. ಈ ವೃತ್ತಿ ಕಕ್ಷಿದಾರರ ಮೇಲೆ ಅವಲಂಬಿತವಾಗಿರುವುದರಿಂದ ಲಾಕ್ ಡೌನ್ ಸಮಯದಲ್ಲಿ ಕಕ್ಷಿದಾರರ ಭೇಟಿ ಇಲ್ಲದಿರುವಿಕೆಯು ವಕೀಲರಿಗೆ ಹೊಸ case ಗಳನ್ನು ಪಡೆಯುವುದರಿಂದ ವಂಚಿತರನ್ನಾಗಿಸಿತ್ತು. ಇದರಿಂದ ಬಹಳಷ್ಟು ವಕೀಲರು ಆರ್ಥಿಕ ಸಂಕಷ್ಟವನ್ನು ಅನುಭವಿಸುವಂತಾಯಿತು.

ಇನ್ನು ಕಿರಿಯ ವಕೀಲರುಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಉದ್ಯೋಗದ ಆಶಯದೊಂದಿಗೆ ತಮ್ಮ ಸ್ವಂತ ಊರನ್ನು ಬಿಟ್ಟು ನಗರ ಪ್ರದೇಶಗಳಿಗೆ ಬಂದಿದ್ದಂತಹ ಎಷ್ಟೋ ಯುವ ವಕೀಲರು ಲಾಕ್ ಡೌನ್ ಘೋಷಣೆಯಾಗುತ್ತದೆ ಎಂಬ ಸೂಚನೆ ಸಿಕ್ಕಿದ ಕೂಡಲೇ ತಾವು ತಂಗಿದ್ದಂತಹ hostel ಹಾಗೂ P.G ಗಳನ್ನು ಬಿಟ್ಟು ಪುನಃ ತಮ್ಮ ಸ್ವಂತ ಊರಿಗೆ ತೆರಳಿದರು. ಹಾಗಾಗಿ ಇಂತಹ ವಕೀಲರು ಕಛೇರಿಗಳ ಕೆಲಸ ಮಾಡದೇ ಇರುವಂತಾಯಿತು. ಇದರ ಪರಿಣಾಮವಾಗಿ ಎಷ್ಟೋ ಕಿರಿಯ ವಕೀಲರುಗಳು ಅವರ ಮಾಸಿಕ ವೇತನದಿಂದ ವಂಚಿತರಾದರು. ಮೊದಲೇ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿರುವ ಕಿರಿಯವಕೀಲರುಗಳ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿಕೊಂಡಿರುತ್ತದೆ. ಇನ್ನು ಈ ಲಾಕ್ ಡೌನ್ ಸಮಯದಲ್ಲಂತೂ ಮಾಸಿಕ ವೇತನವಿಲ್ಲದೇ ಕಿರಿಯ ವಕೀಲರುಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇವರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ಮಹದಾಶಯದೊಂದಿಗೆ ದೇಶದ ಹಲವಾರು ರಾಜ್ಯ ವಕೀಲರ ಪರಿಷತ್ತು ಆರ್ಥಿಕವಾಗಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿರುವ ಯುವ ವಕೀಲರುಗಳಿಗೆ ವಿಶೇಷ ಭತ್ಯೆ ವ್ಯವಸ್ಥೆಯನ್ನು ಕಲ್ಪಿಸಿದೆ. ದೆಹಲಿ ರಾಜ್ಯ ವಕೀಲರ ಪರಿಷತ್ತು 4639 ವಕೀಲರಿಗೆ ತಲಾ 5,000/- ರೂಪಾಯಿಗಳನ್ನು ಹಾಗೂ ತೆಲಂಗಾಣ ರಾಜ್ಯ ವಕೀಲರ ಪರಿಷತ್ತು ಸರಿ ಸುಮಾರು 3,400 ವಕೀಲರಿಗೆ ತಲಾ 3,500 ರೂಪಾಯಿಗಳ ಸಹಾಯವನ್ನು ಒದಗಿಸಿದೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೂಡ ಆರ್ಥಿಕ ನೆರವು ನೀಡಲು ಮುಂದಾಗಿದ್ದು, ಬರೋಬ್ಬರಿ 11,000 ಯುವ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಕೀಲರು ಅರ್ಜಿಯನ್ನು ಸಲ್ಲಿಸಿದ್ದರು. ಅವುಗಳಲ್ಲಿ ಕೇವಲ 250 ರಿಂದ 300 ವಕೀಲರುಗಳಿಗೆ ತಲಾ 5,000/- ರೂಪಾಯಿಗಳು ದೊರಕಿತಾದರೂ, ಸಂಕಷ್ಟದಲ್ಲಿರುವ ಯುವ ವಕೀಲರಿಗೆ ಆರ್ಥಿಕ ನೆರವು ನೀಡಲು ಮುಂದಾದ ರಾಜ್ಯ ವಕೀಲರ ಪರಿಷತ್ತಿನ ಈ ಪ್ರಯತ್ನ ಶ್ಲಾಘನೀಯ. ಅಷ್ಟೇ ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳೂ ರಾಜ್ಯ ವಕೀಲರ ಪರಿಷತ್ತಿನ ಪರಿಹಾರ ನಿಧಿಗೆ ೫ ಕೋಟಿ ನೆರವು ನೀಡುವಂತೆ ಆದೇಶ ಹೊರಡಿಸಿದ್ದಾರೆ. ಸಿರಿವಂತ ಹಾಗೂ ಬಡ ವಕೀಲರ ನಡುವಿನ ಅಂತರ ಹಿಂದೆಯೂ ದೊಡ್ಡದಾಗಿಯೇ ಇತ್ತು. ಆದರೆ ಇವತ್ತಿನ ಪರಿಸ್ಥಿತಿ ಆ ಅಂತರದ ಆಳ ಮತ್ತು ಅಗಲವನ್ನು ಹೆಚ್ಚು ಮಾಡಿದೆ ಎಂದರೆ ಸುಳ್ಳಲ್ಲ.

ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜನರು ನ್ಯಾಯವಂಚಿತರಾಗದೆ ಇರಲಿ ಎಂಬ ಸದುದ್ದೇಶದೊಂದಿಗೆ ಆನ್ಲೈನ್ ಕೋರ್ಟ್ (online court) ಗಳ ಬಳಕೆಯನ್ನು ಜಾರಿಗೊಳಿಸಲಾಯಿತು. ಇಲ್ಲಿ ಅತೀ ಮುಖ್ಯ ಹಾಗೂ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿತ್ತು ಹಾಗೂ ಉಳಿದವುಗಳನ್ನು ಮುಂದೂಡಲಾಗುತ್ತಿತ್ತು. ವಿಚಾರಣೆಗೆ ಒಳಪಡುವ case ಗಳ ದಿನಾಂಕವನ್ನು ಮೊದಲೇ ನಿಗದಿಪಡಿಸಿ, ಅದಕ್ಕೆ ಸಂಬಂಧಿಸಿದ web link ಅನ್ನು ಆಯಾ ವಕೀಲರಿಗೆ ಇ-ಅಂಚೆ (e-mail) ಮುಖಾಂತರ ಕಳುಹಿಸಲಾಗುತ್ತಿತ್ತು. ಆ web link ಗಳ ಸಹಾಯದಿಂದ ವಕೀಲರು ತಮ್ಮ ಮನೆ ಅಥವಾ ಕಛೇರಿಗಳಲ್ಲಿ ಕುಳಿತು ವಾದ ಮಾಡಲು ಸಾಧ್ಯವಿತ್ತು. ಹಾಗಾಗಿ ಕೆಲ ವಕೀಲರೂ ಕೆಲ ಕಾಲದ ಮಟ್ಟಿಗೆ ‘ಮನೆಯಿಂದಲೇ ಕೆಲಸ‘ (work from home) ಪದ್ಧತಿಯನ್ನು ಅನುಸರಿಸಿದರು. ಈ ವಿಧಾನವನ್ನು ಬಳಸಿ ನಮ್ಮ ನ್ಯಾಯಾಂಗವು ಸುಮಾರು ಪ್ರಕರಣಗಳನ್ನುಗಳನ್ನು ಇತ್ಯರ್ಥ ಗೊಳಿಸಿ ಕಾನೂನು ಕ್ಷೇತ್ರದ ಪ್ರಗತಿಗೆ ಹೊಸ ಆಯಾಮವನ್ನು ತಂದುಕೊಟ್ಟಿತು.

ಆದರೆ, online court ಪದ್ಧತಿ ಎಷ್ಟರ ಮಟ್ಟಿಗೆ ಸಮಾನತೆಯನ್ನು ಎತ್ತಿ ಹಿಡಿದಿದೆ ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಸಂಕೀರ್ಣ. ಈ ಪದ್ಧತಿಯ ಸಹಾಯದಿಂದಲೇ ವೃತ್ತಿ ಇನ್ನೂ ಜೀವಂತವಾಗಿದೆ. ಹಾಗೂ ಮನೆ ಅಥವಾ ಕಛೇರಿಗಳಿಂದಲೇ case ಗಳನ್ನು ನಡೆಸುವ ದೆಸೆಯಿಂದ ಮೊದಲಿನಷ್ಟು ಓಡಾಡುವ ಅಗತ್ಯ ಇರದುದರ ಪರಿಣಾಮ, ಕೆಲಸಗಳು ತಕ್ಕ ಮಟ್ಟಿಗೆ ಸುಲಭವಾಗಿವೆ ಎಂದರೆ ತಪ್ಪಾಗುವುದಿಲ್ಲ. ಆದರೆ ಈ ಸವಲತ್ತು ಯಾವ ಪ್ರದೇಶದಲ್ಲಿ ಅಂತರ್ಜಾಲದ ಸಂಪರ್ಕ ದೊರಕುತ್ತದೆಯೋ ಅಲ್ಲಿನವರಿಗೆ ಮಾತ್ರ ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದಿಂದ ಉದ್ಯೋಗಕ್ಕೋಸ್ಕರ ಬಂದಿದ್ದ ಬಹುತೇಕ ವಕೀಲರು ಲಾಕ್ ಡೌನ್ ಕಾರಣದಿಂದ ತಮ್ಮ ಊರುಗಳಿಗೆ ತೆರಳಿದ್ದರು. ಅಂತಹ ವಕೀಲರು ಈ ಸೌಲಭದಿಂದ ವಂಚಿತರಾಗಿ ತಾರತಮ್ಯ ಅನುಭವಿಸಿದರು ಎಂದರೆ ಅದು ಅತಿಶಯೋಕ್ತಿ ಅಲ್ಲ. ಏಕೆಂದರೆ, ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲದ ಸಂಪರ್ಕ ದೊರಕುವುದಿಲ್ಲ, ಮೊಬೈಲ್ network ಗಳೂ ಸಹ ಲಭ್ಯವಿರುವುದಿಲ್ಲ. ದೂರವಾಣಿ ಸಂಪರ್ಕ ಸಹಿತ ಕಷ್ಟವೇ. ಹೀಗಿದ್ದಾಗ ಗ್ರಾಮೀಣ ಭಾಗದಲ್ಲಿ ಸಿಲುಕಿರುವಂತಹ ವಕೀಲರು ಎಷ್ಟರ ಮಟ್ಟಿಗೆ online court ಗಳ ಫಲಾನುಭವಿಗಳಾಗಬಹುದು? ಹಾಗಾಗಿ ಗ್ರಾಮೀಣ ಭಾಗದ ವಕೀಲರು ಕೆಲಸದಿಂದ ವಂಚಿತರಾಗಿ, ಇರುವ ಕೆಲಸವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುವಂತಾಯಿತು. ಆದ್ದರಿಂದ ಈ online court ಪದ್ಧತಿ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ.

ಕೋವಿಡ್ ಭಾದೆ ತೀರಿದ ನಂತರವೂ ಆನ್ಲೈನ್ ಕೋರ್ಟ್ಗಳನ್ನು ಮುಂದುವರಿಸಬೇಕು ಎಂಬಂತ ಕೂಗು ಈಗ ಕೇಳಿ ಬರುತ್ತಿದೆ. ಅಂತಹ ರೀತಿಯಲ್ಲಿ ಸಂಪೂರ್ಣವಾಗಿ ನ್ಯಾಯಂಗವನ್ನೇ ಅಂತರ್ಜಾಲಕ್ಕೆ ಬದಲಾಯಿಸಿದರೆ, ಗ್ರಾಮೀಣ ಪ್ರದೇಶದ ನ್ಯಾಯವಾದಿಗಳಿಗೆ ಸರಿಪಡಿಸಲಾಗದ ಅನ್ಯಾಯ ಮಾಡಿದಂತಾಗುತ್ತದೆ. ಆನ್ಲೈನ್ ಕೋರ್ಟ್ ಪದ್ಧತಿಗೆ ಹಲವಾರು ಪ್ರಯೋಜನಗಳಿವೆ ಎಂಬುದು ನಿಜ. ಆದರೆ, ಹಳ್ಳಿ ಹಳ್ಳಿಗೂ ಸಂಪರ್ಕಜಾಲಗಳು ಹೋಗಿ ತಲುಪದೇ, ಪೂರ್ಣ ಪ್ರಮಾಣದಲ್ಲಿ ಈ ವ್ಯವ್ಯಸ್ಥೆಯನ್ನು ಜಾರಿಗೆ ತಂದರೆ, ಸಂವಿಧಾನದ ಸಮಾನತೆಯ ಆಶಯಗಳಿಗೆ ಹಾನಿಯಾಗುತ್ತದೆ ಎನ್ನಬಹುದೇನೋ!

ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಲಾಕ್ ಡೌನ್ ಸಮಯದಲ್ಲಿ ವೃತ್ತಿಗೆ ಸಂಬಂಧಿಸಿದ ಕೆಲಸಗಳು ಅಷ್ಟಾಗಿ ಇರುತ್ತಿರಲಿಲ್ಲ. ಪರಿಣಾಮವಾಗಿ ಹಲವಾರು ವಕೀಲರು ತಮ್ಮ ಈ ಸಮಯದಲ್ಲಿ ವಿವಿಧ ರೀತಿಯ ಹವ್ಯಾಸದೆಡೆಗೆ ಮೊರೆ ಹೋದರು. ಕೆಲವರು ತಮ್ಮ ಮನೆ ಮಂದಿಗಳ ಜೊತೆ ಉತ್ತಮ ಸಮಯವನ್ನು ಕಳೆದರು. ಸದಾ ಕೆಲಸದ ಒತ್ತಡ ಹಾಗೂ ಚಿಂತೆಯಲ್ಲಿರುತ್ತಿದ್ದ ವಕೀಲರಿಗೆ ಈಗ ಸ್ವಲ್ಪ ಶಾಂತಿ ಹಾಗೂ ಮಾನಸಿಕ ನೆಮ್ಮದಿ ದೊರಕುವಂತಾಯಿತು. ಹಿರಿಯ ವಕೀಲರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಅವಕಾಶ ವಾಯಿತು. ಕೆಲವು ವಕೀಲರು ಹೆಚ್ಚಿನ ರೀತಿಯಲ್ಲಿ ಕಾನೂನು ಅಧ್ಯಯನ ಮಾಡವುದು ಹಾಗೂ ಅಂಕಣಗಳನ್ನು ಬರೆಯುವ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಂಡರು. ಕೆಲವರು ಕೃಷಿ ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಒಟ್ಟಾರೆಯಾಗಿ ಹೇಳುವುದಾದರೆ ಈ ಲಾಕ್ ಡೌನ್ ಸಮಯ ವಿಶಿಷ್ಟ ಹಾಗೂ ವಿಭಿನ್ನ ವಾಗಿತ್ತು, ಹಾಗೂ ಹಲವು ಹೊಸ ಸಂಕಟಗಳನ್ನೂ, ಸಂತೋಷಗಳನ್ನೂ ನಮ್ಮ ಮಡಿಲು ತುಂಬಿಸಿತು ಎಂದರೆ ತಪ್ಪಾಗುವುದಿಲ್ಲ. ಇಡೀ ಪ್ರಪಂಚವೇ ಈ ವೈರಸ್ ನಿಂದಾಗಿ ಬಹಳಷ್ಟು ಹಿನ್ನಡೆ ಸಾಧಿಸಿರುವ ಸಂದರ್ಭದಲ್ಲಿ ನಮ್ಮ ದೇಶದ ಕಾನೂನು ಕ್ಷೇತ್ರ ಇಷ್ಟಾದರೂ ಪ್ರಗತಿ ಕಾಯ್ದುಕೊಂಡಿರುವುದು ನಮ್ಮೆಲ್ಲರ ಹೆಮ್ಮೆ. ಆದಷ್ಟು ಬೇಗ ಈ ವೈರಸ್ ಗಳ ಧಾಳಿಗೆ ತಿಲಾಂಜಲ ಬಿಡುವಂತಾಗಲಿ ಹಾಗೂ ನಮ್ಮೆಲ್ಲರ ಜೀವನ ಮೊದಲಿನ ಸ್ಥಿತಿಗೆ ಬಂದು ತಲುಪಲಿ ಎಂಬುದೇ ನಮ್ಮೆಲ್ಲರ ಆಶಯ.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ವಾಸವಿ ಹೆಗಡೆ

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಭ್ಯಸಿಸಿದ ವಾಸವಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭತ್ತಗುತ್ತಿಗೆಯವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಾಂವಿಧಾನಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ. ‘ನ್ಯಾಯನಿಷ್ಠ’ದ ಪುಟ್ಟ ಬಳಗದ ಸದಸ್ಯರಲ್ಲೊಬ್ಬರು ವಾಸವಿಯವರು.

Scroll to Top