ಕೋವಿಡ್-೧೯ ಕಾಲದಲ್ಲಿ ಭಾರತದ ನ್ಯಾಯದಾನ ವ್ಯವಸ್ಥೆ
ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಹಿತ ಕಾಪಾಡಲು ನ್ಯಾಯ ವ್ಯವಸ್ಥೆಯ ಪಾತ್ರ ಬಹಳ ಮುಖ್ಯ. ನ್ಯಾಯಾಂಗ ‘ರಾಜ್ಯ’ದ ಮೂರು ಪ್ರಮುಖ ಅಂಗಗಳಲ್ಲೊಂದು. ಪ್ರಕರಣಗಳ ತ್ವರಿತ ವಿಚಾರಣೆ, ವಿಲೇವಾರಿಗಳು ಪರಿಣಾಮಕಾರಿ ನ್ಯಾಯದಾನದ ಒಂದು ಲಕ್ಷಣ. ವಿಶ್ವವೇ ಇಂದು ಕೋವಿಡ್-೧೯ ರ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಬೆಳವಣಿಗೆಗಳು ಹಠಾತ್ತಾಗಿ ಕುಸಿದಿವೆ. ಆದರೆ ಈ ಪರಿಸ್ಥಿತಿಯಲ್ಲೂ ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆ ನ್ಯಾಯದಾನದ ಸವಾಲನ್ನು ಸಮರ್ಥವಾಗಿ ಎದುರಿಸಿದೆ. ಕೊರೊನ ಸಮಯದಲ್ಲಿ ಭಾರತದಾದ್ಯಂತ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಸರಿಸುಮಾರು ೭೦೦೦ ಪ್ರಕರಣಗಳ ವಿಚಾರಣೆ ನಡೆಸಿದೆ, ಈ ಮೂಲಕ ವಿಶ್ವದ ಇತರೆ ನ್ಯಾಯಾಂಗಗಳಿಗೆ ಮಾದರಿಯಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ದೇಶದಲ್ಲಿ ಮಾರ್ಚ್ ತಿಂಗಳಿನಲ್ಲಿ ಹೇರಿದ 21 ದಿನಗಳ ಮೊದಲ ಲಾಕ್ಡೌನಿಂದ ಒಳಗೊಂಡು ನ್ಯಾಯಾಲಯಗಳು ಬಹುತೇಕ ಬಂದ್ ಆಗಿದ್ದ ಈ 3 ತಿಂಗಳ ಅವಧಿಯಲ್ಲಿ ನಮ್ಮ ನ್ಯಾಯಾಲಯಗಳ ಮುಂದಿದ್ದ ಮುಖ್ಯ ಸವಾಲು ನ್ಯಾಯದಾನ ಪ್ರಕ್ರಿಯೆಯನ್ನು ಹೇಗೆ ಕಾಲಕಾಲಕ್ಕೆ ತಕ್ಕಂತೆ ನಡೆಸುವುದು ಹಾಗೂ ಹೇಗೆ ಸಮಾಜಕ್ಕೆ ತಲುಪಿಸುವುದು ಎಂಬುದಾಗಿತ್ತು.ಈ ಸಂದರ್ಭದಲ್ಲಿ ಸಮಾಜದ ಹಾಗೂ ನ್ಯಾಯವ್ಯವಸ್ಥೆಯ ನಡುವೆ ಸೇತುವೆಯಾಗಿದ್ದು ತಂತ್ರಜ್ಞಾನ.ಇದರಲ್ಲಿ ಎರಡನೇ ಮಾತೇ ಇಲ್ಲ. ಕರ್ನಾಟಕ ಉಚ್ಛ ನ್ಯಾಯಾಲಯವು ಸಹ ಮಾರ್ಚ್ ೨೧ ರಂದು ನೋಟಿಫಿಕೇಶನ್ ಮುಖಾಂತರ ವರ್ಚುಯಲ್ ಕೋರ್ಟ್ಗಳ (Virtual Court) ಕಾರ್ಯಶೈಲಿಯನ್ನು ತನ್ನ ನ್ಯಾಯವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಇದೊಂದು ಕ್ರಾಂತಿಕಾರಿ ಬೆಳವಣಿಗೆ.
ಭಾರತದ ಸರ್ವೋಚ್ಛ ನ್ಯಾಯಾಲಯವು ಸಹ ಮಾರ್ಚ್ ೨೩ ರ ತನ್ನ ನೋಟಿಫಿಕೇಶನ್ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮುಖಾಂತರ ಪ್ರಕರಣಗಳ ವಿಲೇವಾರಿ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿತು. ಸು ಮೋಟು ಪ್ರಕರಣ ರೆ: ಗೈಡ್ಲೈನ್ಸ್ ಫಾರ್ ಕೋರ್ಟ್ ಫನ್ಕ್ಪನಿಂಗ್ ಥ್ರೂ ವಿಡಿಯೋ ಕಾನ್ಫರೆನ್ಸಿಂಗ್ ಡ್ಯೂರಿಂಗ್ ಕೋವಿಡ್-19 ಪ್ರಕರಣದಲ್ಲಿ, ಸರ್ವೋಚ್ಛ ನ್ಯಾಯಾಲಯವು ಲಾಕ್ಡೌನ್ ಕಾಲದಲ್ಲಿ ನ್ಯಾಯಾಲಯಗಳ ಕಾರ್ಯಶೈಲಿಯು ಹೇಗಿರಬೇಕು, ಪ್ರಕರಣ ವಿಲೇವಾರಿಗಳು ಹೇಗಾಗಬೇಕು ಎನ್ನುವುದರ ಬಗ್ಗೆ ತನ್ನ ನಿರ್ದೇಶನಗಳಲ್ಲಿ ಒತ್ತಿ ಹೇಳಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮುಖೇನವಾಗಿ ಪ್ರಕರಣಗಳನ್ನು ನಡೆಸುವುದು ಈ ಅನಿರೀಕ್ಷಿತ ಸಂದರ್ಭಕ್ಕೆ ತಕ್ಕ ಬೇಡಿಕೆಯಾಗಿತ್ತು ಏಕೆಂದರೆ ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ.ಈ ಕಾರಣಕ್ಕಾಗಿ ನ್ಯಾಯಾಲಯಗಳು ವಕೀಲರ ಮತ್ತು ಪಕ್ಷಗಾರರ ಪ್ರವೇಶವನ್ನು ನಿರ್ಬಂಧಿಸಿತು. ಈ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆಗಳು, ವಿಲೇವಾರಿಗಳು ಕಷ್ಟಸಾಧ್ಯವಾದವು. ಆಗ ವಕೀಲರಿಗೆ, ಸಾರ್ವಜನಿಕರಿಗೆ ವರವಾಗಿ ಪರಿಣಮಿಸಿದ್ದು ಈ ವರ್ಚುಯಲ್ ಕೋರ್ಟ್ಗಳು. ಸರ್ವೋಚ್ಛ ನ್ಯಾಯಾಲಯದ ಮಾಹಿತಿಯಂತೆ ಸರಿಸುಮಾರು ೨೮೯೩ ವಕೀಲರು ಸುಮಾರು ೧೦ ಸರ್ವೋಚ್ಛ ನ್ಯಾಯಾಲಯದ ಪೀಠಗಳ ಮುಂದೆ ಈ ವರ್ಚುಯಲ್ ಕೋರ್ಟ್ಗಳ ಮುಖೇನ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಈ ಮುಖಾಂತರ ಸರ್ವೋಚ್ಛ ನ್ಯಾಯಾಲಯದ ಪೀಠಗಳು ಈ ವರೆಗೆ ೭೧೯೭ ಪ್ರಕರಣಗಳನ್ನು ವಿಚಾರಣೆ ನಡೆಸಿದೆ. ೬೭೦ ಪ್ರಕರಣಗಳನ್ನು ತೀರ್ಮಾನಿಸಿದೆ. ೨೦೬ ಪ್ರಕರಣಗಳನ್ನು ತೀರ್ಪಿಗೆ ಕಾಯ್ದಿರಿಸಿದೆ.
ಸರ್ವೋಚ್ಛ ನ್ಯಾಯಾಲಯದ ಪ್ರತಿಯೊಂದು ಪೀಠವು ದಿನನಿತ್ಯ ಸರಿಸುಮಾರು ೪೦ ಪ್ರಕರಣಗಳನ್ನು ನಡೆಸುತ್ತಿದೆ.ಇವುಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳಿಂದ ಹಿಡಿದು ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳ ನಿರ್ವಹಣೆ ಮೊದಲಾದ ಮುಖ್ಯ ವಿಷಯಗಳ ಕುರಿತು ತೀರ್ಮಾನಿಸಿದೆ. ನ್ಯಾಯಾಲಯವು ಕೊರೊನ ಕಷ್ಟಕಾಲದಲ್ಲಿ ಭಾರತದ ಜೈಲುಗಳಲ್ಲಿ ವಿಪರೀತ ಕೈದಿಗಳ ಸಂಖ್ಯೆ ಹಾಗೂ ಸ್ಥಿತಿಗತಿಗಳ ಕುರಿತು ವಿಚಾರಣೆ ಹಾಗೂ ಬಿಡುಗಡೆ ಕುರಿತು ಕೂಲಂಕುಷ ಪರಿಶೀಲನೆ ನಡೆಸಿದೆ. ಸಮಸ್ಯೆಗಳಿಗೆ ಸ್ಪಂದಿಸಿದೆ. ಇನ್ನೂ ಅನೇಕ ದೇಶಾದ್ಯಂತ ಪರಿಣಾಮ ಬೀರುವ ಮುಖ್ಯ ವಿಷಯಗಳ ಬಗ್ಗೆ ಸ್ಪಂದಿಸಿದೆ. ಇವೆಲ್ಲದರಿಂದ ನ್ಯಾಯದಾನ ಪ್ರಕ್ರಿಯೆಯು ಭಾರತದಲ್ಲಿ ನಿರಂತರವಾಗಿ ನಡೆಯಲು ಸಹಾಯಕಾರಿಯಾಗಿದೆ. ಕೆಳಹಂತದ ನ್ಯಾಯಾಲಯಗಳು ಕೋವಿಡ್ ಕಾಲದಲ್ಲಿ ವಿಳಂಬ ನೀತಿಯನ್ನು ಅನುಸರಿಸಿದರೂ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯದ ಕಾರ್ಯಶೈಲಿಯು ವಿಶ್ವದ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ.
ಕೋವಿಡ್ ಸಂಕಷ್ಟದ ಸಮಯದಲ್ಲಿ ವಿಶ್ವದ ಇತರೆ ದೇಶಗಳ ನ್ಯಾಯಾಲಯಗಳ ಕಾರ್ಯಶೈಲಿಯನ್ನು ಗಮನಿಸುವುದಾದರೆ ಬ್ರಿಟನ್ನಿನ ಸರ್ವೋಚ್ಛ ನ್ಯಾಯಾಲಯವು ಕೇವಲ ೧೫ ಪ್ರಕರಣಗಳನ್ನು ತೀರ್ಮಾನಿಸಿದೆ. ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ಕೇವಲ ೨೦ ಪ್ರಕರಣಗಳನ್ನು ತೀರ್ಮಾನಿಸಿದೆ. ಆಸ್ಟ್ರೇಲಿಯಾದ ಸರ್ವೋಚ್ಛ ನ್ಯಾಯಾಲಯವು ೯೪ ಪ್ರಕರಣಗಳ ವಿಚಾರಣೆ ನಡೆಸಿ ಕೇವಲ ೧೨ ಪ್ರಕರಣಗಳನ್ನು ತೀರ್ಮಾನಿಸಿದೆ. ಕೆನಡಾದ ಸರ್ವೋಚ್ಛ ನ್ಯಾಯಾಲಯವು ೧೭೩ ಪ್ರಕರಣಗಳ ವಿಚಾರಣೆ ನಡೆಸಿ ಕೇವಲ ೫ ಪ್ರಕರಣಗಳನ್ನು ತೀರ್ಮಾನಿಸಿದೆ. ಹೀಗೆ ಎಲ್ಲ ಸಂಖ್ಯೆಗಳು ಬೆರೆಳೆಣಿಕೆಯವಷ್ಟೇ. ಸ್ಪೇನ್ ದೇಶ ಮಾತ್ರವೇ ೮೦೦ ಪ್ರಕರಣಗಳ ವಿಚಾರಣೆ ನಡೆಸಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ಈ ಹೊಸ ಬದಲಾವಣೆ ಹಲವು ಟೀಕೆಗಳನ್ನು ಎದುರಿಸಿದೆ. ಇದು ಭಾರತದ ಮುಕ್ತ ನ್ಯಾಯಾಲಯಗಳ ಪಾರದರ್ಶಕ ನ್ಯಾಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂಬುದು ಟೀಕಾಕಾರರ ಅಂಬೋಣ. ದಾಖಲೆಗಳನ್ನು ಸಲ್ಲಿಕೆಗೆ, ವಾದ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ವಿಷಯ ಸ್ಪಷ್ಟತೆಗೆ ಸಾಂಕೇತಿಕ ಅಡಚಣೆಗಳು ಇರುತ್ತದೆ. ಭಾರತದಲ್ಲಿ ನ್ಯಾಯಾಡಳಿತವು (administration of justice) ಕುಸಿಯುತ್ತದೆ ಎಂಬುದು ಇನ್ನೊಂದು ಟೀಕೆ. ಆದರೆ ಕೊರೊನದಂತಹ ಪಿಡುಗಿನ ಸಂದರ್ಭಗಳಲ್ಲಿ ದೇಶವಾಸಿಗಳ ಆರೋಗ್ಯ ರಕ್ಷಣೆಯ ಮುಂದೆ ಈ ಎಲ್ಲ ಟೀಕೆಗಳು ನಗಣ್ಯವೆನಿಸುತ್ತವೆ.
ಈ ವರ್ಚುಯಲ್ ಕೋರ್ಟ್ ವ್ಯವಸ್ಥೆಯಿಂದ ಭಾರತಕ್ಕೆ ಬಹಳ ಉಪಯೋಗಗಳಿವೆ. ಇದರಿಂದ ದಾವೆ ನಡೆಸುವವರ ಸಮಯ, ಶಕ್ತಿ ಹಾಗೂ ಹಣ ಉಳಿತಾಯವಾಗುತ್ತದೆ. ಸರ್ವೋಚ್ಛ ನ್ಯಾಯಾಲಯವು ತನ್ನ ಈ ಹೊಸ ಅವತಾರವನ್ನು ಬಲವಾಗಿ ಸಮರ್ಥಿಸಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ದೃಢವಾದ ಪ್ರಗತಿಪರವಾದ ನ್ಯಾಯದಾನದ ವ್ಯವಸ್ಥೆಯಾಗಿದೆ. ಕಾಲಕ್ಕೆ ತಕ್ಕಂತೆ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಈಗಿನ ಅನಿವಾರ್ಯತೆ. ಕ್ರಾಂತಿಕಾರಿ ಸುಧಾರಣೆಗಳಿಂದ ದೇಶವಾಸಿಗಳ ಸಮಸ್ಯೆಗೆ ಕಿವಿಯಾಗುವುದು ಅವರಿಗೆ ನೆರವಾಗುವುದು ನ್ಯಾಯಾಂಗದ ಪವಿತ್ರ ಕರ್ತವ್ಯ. ಅಂತಿಮವಾಗಿ ವಿಶ್ವದಾದ್ಯಂತ ಉದ್ಭವಾಗಿರುವ ಈ ಸಂಕಟದ ಪರಿಸ್ಥಿತಿ ಶೀಘ್ರ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಕಾರಣ ನ್ಯಾಯದಾನವು ನಿರಂತರವಾಗಿರಲು ಹೊಸ ಬದಲಾಣೆಗೆ ಒಗ್ಗಿಕೊಳ್ಳುವುದು ನ್ಯಾಯ ವ್ಯವಸ್ಥೆಯ ಭಾಗವಾಗಿರುವ ನಮ್ಮೆಲ್ಲರ ಆದ್ಯ ಕರ್ತವ್ಯ.
ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.
ಇತ್ತೀಚಿನ ಬ್ಲಾಗ್‌ಗಳು
ಲೇಖಕರ ಪರಿಚಯ

ಗುರುರಾಜ್ ಆರ್
ಮೂಲತಃ ಕುಮಟಾದವರಾದ ಗುರುರಾಜ್ ಆರ್ ರವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಗುರುರಾಜ್ ರವರು ಬೆಂಗಳೂರಿನಲ್ಲಿ ಉಚ್ಛನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇವರು ‘ನ್ಯಾಯನಿಷ್ಠ’ ಪುಟ್ಟ ಬಳಗದ ಸದಸ್ಯರೂ ಸಹ ಆಗಿದ್ದಾರೆ.