ಪರಿಸರ ಕಾನೂನುಗಳು, ಅಧ್ಯಯನ ವರದಿಗಳು ಮತ್ತು ಪರಿಸರ ತತ್ವಗಳು

ಗಂಗಾನದಿ ತಟದಲ್ಲಿ ಮೂವತ್ತು ವರ್ಷದ ನಂತರ ಕಾಣಸಿಕ್ಕ ಡಾಲ್ಫಿನ್ಗಳು, ಉತ್ತರ ಪಂಜಾಬ್ ಪ್ರಾಂತ್ಯಗಳಿಂದ ಮೂರು ದಶಕಗಳ ನಂತರ ಗೋಚರಿಸಿದ ಭವ್ಯ ಹಿಮಾಲಯ ಪರ್ವತಗಳು, ರಸ್ತೆಗಳಲ್ಲಿ ಸ್ವೇಚ್ಛೆಯಿಂದ ಓಡಾಡಿದ ಜಿಂಕೆ – ನವಿಲುಗಳು ಮತ್ತು ಶುದ್ಧವಾದ ಗಾಳಿ – ನೀರು ಇವೆಲ್ಲವೂ ನಮಗೆ ಕೇವಲ ೨೧ ದಿನಗಳ ಪ್ರಯೋಗದಿಂದ ದೊರಕಿದ ಸಣ್ಣ ಪ್ರಯೋಜನಗಳು. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಇವೆಲ್ಲವುಗಳನ್ನು ನಮ್ಮ ಮುಖಪುಸ್ತಕ ಖಾತೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಯ್ತು, ಸಂಭಮಪಟ್ಟಿದ್ದಾಯ್ತು. “ಅಯ್ಯೋ, ಪ್ರಕೃತಿಯನ್ನು ನಾವು ಎಷ್ಟರ ಮಟ್ಟಿಗೆ ಅದುಮಿಟ್ಟಿದ್ದೇವೆ”, “ಮನುಷ್ಯರೇ ಪರಿಸರವನ್ನು ಹಾಳುಮಾಡಿದ್ದು” ಮುಂತಾದ ಉದ್ಗಾರ ತೆಗೆದದ್ದೂ ಆಯ್ತು. ಈಗ ವೈರಸ್ ಆರ್ಭಟದ ನಡುವೆಯೂ ಜನ – ಜೀವನವನ್ನು ಸಾಮಾನ್ಯ ಗತಿಗೆ ತರಲು ಸರಕಾರಗಳು ಶತಾಯಗತಾಯ ಪ್ರಯತ್ನವನ್ನು ಮಾಡುತ್ತಿವೆ. ರಸ್ತೆಗಳಲ್ಲಿ ವಾಹನಗಳು ಓಡಾಡಲಾರಂಭಿಸಿವೆ, ಕಾರ್ಖಾನೆಗಳು ತೆರೆದಿವೆ ಮತ್ತು ಜನಜಂಗುಳಿ ಅಲ್ಲಲ್ಲಿ ಸಾಮಾನ್ಯವಾಗಲಾರಂಭಿಸಿವೆ. ಇದರೊಟ್ಟಿಗೆ ಸದ್ದಿಲ್ಲದೇ, ರಸ್ತೆಗಳಿಂದ ಪ್ರಾಣಿಗಳು ಮಾಯವಾದವು, ಗಾಳಿ- ನೀರಿನಲ್ಲಿ ವಿಷ ಪುನಃ ತುಂಬಿಕೊಳ್ಳಲು ಆರಂಭವಾದವು. ಹಿಮಾಲಯ ಪರ್ವತಗಳೂ, ಡಾಲ್ಫಿನ್ಗಳೂ ಕಣ್ಣಳತೆಯಿಂದ ದೂರ ಸರಿದವು.

ಆಹಾರ – ಆರೋಗ್ಯದ ಚರ್ಚೆಯಲ್ಲಿ ತೆರೆಗೆ ಸರಿದಿದ್ದ ಪರಿಸರ ಜಾಗೃತಿ ಮತ್ತೆ ಬೆಳಕಿಗೆ ಬಂದಿದ್ದು ಸರಕಾರ ಈ ಮಧ್ಯದಲ್ಲಿ ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ, ೨೦೨೦’ (Environment Impact Assessment Notification Bill, 2020) ನ್ನು ಅಂತಿಮಗೊಳಿಸಲು ಹೊರಟಾಗ. ಈ ಮೊದಲು ಕರಡು ಅಧಿಸೂಚನೆಗೆ ಆಕ್ಷೇಪ / ಸಲಹೆ ಸಲ್ಲಿಸಲು ಜೂನ್ ವರೆಗೆ ಸಮಯ ಪರಿಮಿತಿಗೊಳಿಸಿದ್ದರೂ, ನಮ್ಮ ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಪ್ರವೇಶದಿಂದ ಕೊನೆಯ ದಿನಾಂಕವನ್ನು ಸಪ್ಟೆಂಬರ್ ೭ ಕ್ಕೆ ವಿಸ್ತರಿಸಲಾಗಿದೆ. ನ್ಯಾಯನಿಷ್ಠದಲ್ಲಿ ಈಗಾಗಲೇ ಈ ಕುರಿತು ಜೀವಶಾಸ್ತ್ರಜ್ಞ ಡಾ. ಕೊರ್ಸೆಯವರ ಸಂದರ್ಶನವೂ ಪ್ರಸಾರವಾಗಿದೆ.

ಈ ಲೇಖನದಲ್ಲಿ ಎರಡು ಘಟ್ಟಗಳಿವೆ, ಮೊದಲನೆಯ ಘಟ್ಟವು ಹೇಗೆ ಈ ಅಧಿಸೂಚನೆ ಪರಿಸರ ಸಂರಕ್ಷಣೆಗೆ ತೊಡಕಾಗುತ್ತದೆ ಎಂಬ ವಿವರಿಸುತ್ತದೆ. ಎರಡನೆಯದು, ಒಟ್ಟಾರೆಯಾಗಿ ನಮ್ಮ ಪರಿಸರದ ಕಾನೂನುಗಳಿಗೆ ಇರಬೇಕಾದ ತಳಹದಿಯ ಕೊರತೆಗೆ ಪರಿಹಾರ ಹುಡುಕುವ ಪ್ರಯತ್ನವಾಗಿದೆ.

ಅಧಿಸೂಚನೆಯನ್ನು ಕೇಂದ್ರ ಸರಕಾರ ಕಲಂ ೩ ರಲ್ಲಿ ಸರಕ್ಕಾರಕ್ಕೆ ನಿಯಮಗಳನ್ನು ರೂಪಿಸಲು ನೀಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಹೊರಡಿಸಿದ್ದಾಗಿದೆ. ಕಲಂ ೩, ಕೇಂದ್ರ ಸರಕಾರಕ್ಕೆ ಪರಿಸರವನ್ನು ಸಂರಕ್ಷಿಸುವ ಉದ್ದೇಶದ ಸಲುವಾಗಿ ನಿಯಮಗಳನ್ನು ಹೊರಡಿಸುವ / ತಿದ್ದುವ ಅಧಿಕಾರವನ್ನು ನೀಡುತ್ತದೆ. ಆದ್ದರಿಂದ ತಿದ್ದುಪಡಿಯಾಗಿ ಬರಲಿರುವ ಹೊಸ ನಿಯಮಗಳು ಪರಿಸರ ಸಂರಕ್ಷಣೆಯನ್ನು ಮಾಡುವಲ್ಲಿ ವಿಫಲವಾಗುವಂತಿದ್ದರೆ. ಕಲಂ ೩ ರ ಪ್ರಕಾರ ಅವು ಅಸಿಂಧುವಾಗಿತ್ತವೆ.

ಈ ಅಧಿಸೂಚನೆಯು ಪ್ರಮುಖವಾಗಿ ಮೂರು ರೀತಿಯ ಬದಲಾವಣೆಗಳನ್ನು ತರಲು ಉದ್ದೇಶಿಸಿದೆ ಎಂದು ಹೇಳಬಹುದು. ಮೊದಲನೆಯದಾಗಿ ಉದ್ಯಮಗಳ ವಿಂಗಡಣೆಯ ದೃಷ್ಟಿಯಿಂದ. ಉದ್ಯಮಗಳನ್ನು/ ಯೋಜನೆಗಳನ್ನು ಎ, ಬಿ೧ ಮತ್ತು ಬಿ೨ ಪಟ್ಟಿಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿ ಬಿ೨ ಪಟ್ಟಿಯಲ್ಲಿ ಒಳಗೊಂಡ ಎಲ್ಲ ಉದ್ಯಮಗಳಿಗೂ ಸಾರ್ವಜನಿಕ ಸಮಾಲೋಚನೆಯಿಂದ ವಿನಾಯ್ತಿ ನೀಡಲಾಗಿದೆ. ಅವುಗಳಿಗೆ ಪರವಾನಿಗೆ ಕೊಡುವ ಪ್ರಕ್ರಿಯೆಯನ್ನು ‘ಸರಳೀಕರಣ’ಗೊಳಿಸಲಾಗಿದೆ. ಬಿ೨ ಪಟ್ಟಿಯಲ್ಲಿ ಸೇರಿರುವ ಉದ್ಯಮಗಳಲ್ಲಿ ಪ್ರಮುಖವಾದವು ಕಡಲಾಚೆಯ ಹಾಗೂ ಕಡಲತಡಿಯಲ್ಲಿ ನಡೆಯುವ ತೈಲ ಅನ್ವೇಷಣಗಳು, ೨೫ ಮೆಗಾವ್ಯಾಟ್ ವರೆಗಿನ ಜಲವಿದ್ಯುಚ್ಛಕ್ತಿ ಉತ್ಪಾದನೆ, ಸಣ್ಣ ಮತ್ತು ಮಧ್ಯಮ ಸಿಮೆಂಟ್ ಉತ್ಪಾದನಾ ಘಟಕಗಳು, ಅಮೋನಿಯಾ ಮತ್ತು ಸಲ್ಫರಿಕ್ ಅಲ್ಲದ ಇತರೆ ಆಸಿಡ್ ಉತ್ಪಾದನಾ ಘಟಕಗಳು, ಕೃತಕ ರಬ್ಬರ್ ಉತ್ಪಾದನೆ, ಮಧ್ಯಮ ಪ್ರಮಾಣದ ಬಣ್ಣ ಉತ್ಪಾದನಾ ಘಟಕಗಳು, ಎಲ್ಲಾ ಒಳನಾಡಿನ ಜಲಮಾರ್ಗ ಯೋಜನೆಗಳು, ೨೫ ಕಿ. ಮೀ. ಯಿಂದ ನೂರು ಕಿ. ಮೀ.ವರೆಗಿನ ಹೆದ್ದಾರಿ ಅಗಲೀಕರಣ ಮತ್ತು ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ರೋಪ್ ವೇ ಯೋಜನೆಗಳು ಒಳಗೊಂಡಿವೆ. ಈ ಪಟ್ಟಿಯಲ್ಲಿ ಒಮ್ಮೆ ಕಣ್ಣಾಯಿಸಿದರೂ ಸಾಕು, ಈ ಉದ್ಯಮಗಳನ್ನು ಸಾರ್ವಜನಿಕ ಸಮಾಲೋಚನೆಯ ಪರಿಧಿಯಿಂದ ಹೊರಗಿಡುವುದು ಎಂತಹ ಅಪಾಯಕಾರಿ ಪರಿಣಾಮಗಳಿಗೆ ದಾರಿಯಾಗಬಹುದೆಂಬ ಅರಿವಾಗುತ್ತದೆ.

ಎರಡನೆಯ ಪ್ರಮುಖ ಬದಲಾವಣೆಯೇನೆಂದರೆ ನೀತಿ ನಿರ್ಧಾರ ಪ್ರಕ್ರಿಯೆಯಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆಯ ಪಾತ್ರ ತೀರಾ ಕನಿಷ್ಠ ಮಟ್ಟಕ್ಕೆ ಕುಗ್ಗಿಹೋಗಿರುವುದು. ಬಹುತೇಕ ಉದ್ಯಮಗಳಿಗೆ ಸಾರ್ವಜನಿಕ ಸಮಾಲೋಚನೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಸಾಮಾನ್ಯರು ತಮ್ಮದೇ ಭೂಮಿಯಲ್ಲಿ/ ತಮ್ಮ ಆಸು-ಪಾಸಿನ ಪರಿಸರದಲ್ಲಿ ಆಗುವ ದುಷ್ಪರಿಣಾಮಗಳಿಂದ ರಕ್ಷಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಇಷ್ಟೇ ಅಲ್ಲದೆ, ಈಗ ಸಾರ್ವಜನಿಕ ಅಹವಾಲು ಸಲ್ಲಿಕೆಗೆ ೩೦ ದಿನಗಳ ಮುನ್ಸೂಚನೆ ನೀಡಬೇಕಾಗಿದೆ. ಆ ಅವಧಿಯನ್ನು ಅಧಿಸೂಚನೆಯಲ್ಲಿ ೨೦ ದಿನಗಳಿಗೆ ಕುಗ್ಗಿಸಲಾಗಿದೆ. ಪರಿಣಾಮವಾಗಿ, ಯಾವುದೇ ಒಂದು ಹೊಸ ಯೋಜನೆ ಜಾರಿಯಾಗುವ ಮುನ್ನ ಸಾರ್ವಜನಿಕರಿಗೆ ಆ ಕುರಿತಾಗಿ ಚಿಂತನ – ಮಂಥನ ನಡೆಸಲು ಅಗತ್ಯವಾದ ಸಮಯ ತೀರಾ ಇಲ್ಲವಾಗುತ್ತದೆ. ಸಂಪರ್ಕ ತೀರ ಕಡಿಮೆಯಾದ ಗುಡ್ಡಗಾಡು ಸ್ಥಳಗಳಲ್ಲಿ ಯೋಜನೆಯ ವಿರುದ್ಧ ಧ್ವನಿ ಎತ್ತುವುದು ಹಾಗಿರಲಿ, ಎಲ್ಲ ಭಾಗಗಳಿಗೂ ಪ್ರಾದೇಶಿಕ ಭಾಷೆಗಳಲ್ಲಿ ಸುದ್ದಿ ತಲುಪಿಸುವುದೂ ದುಸ್ತರವಾದೀತು. ಆಗಸ್ಟ್ ೧, ೨೦೨೦ರ ಹಿಂದೂ ದಿನಪತ್ರಿಕೆಯ ವರದಿಯ ಪ್ರಕಾರ ಪ್ರಸ್ತುತ ಅಧಿಸೂಚನೆಯೇ ಅಧಿಕೃತ ೨೨ ಭಾಷೆಗಳ ಬದಲಾಗಿ ಕೇವಲ ಮೂರು ಭಾಷೆಗಳಲ್ಲಿ ಪ್ರಕಟವಾಗಿದೆ. ಮಾಹಿತಿಯೇ ಇಲ್ಲದ ಜನರು ಜನರು ಯೋಜನೆಗಳ ಸಾಧಕ – ಭಾದಕಗಳ ಕುರಿತು ಹೇಗೆ ಚಿಂತಿಸಿಯಾರು?

ಇನ್ನೊಂದು ಪ್ರಮುಖವಾದ ಉದ್ದೇಶಿತ ಬದಲಾವಣೆಯೇನೆಂದರೆ ಯಾವುದೇ ಯೋಜನೆ / ಉದ್ದಿಮೆ ಪರವಾನಿಗೆ ಪಡೆಯುವ ಮುನ್ನವೇ ಕೆಲಸ ಆರಂಭಿಸಿದರೂ, ಅವುಗಳ ನಿರ್ವಹಿಸುವಿಕೆಯಲ್ಲಿ ಯಾವುದೇ ಕಾನೂನುರೀತ್ಯಾ ಉಲ್ಲಂಘನೆಗಳಿದ್ದರೂ ಅವುಗಳಿಗೆ ಕೆಲವು ಷರತ್ತು – ನಿಬಂಧನೆಗಳನ್ನು ಹೇರಿ, ಅನುಮತಿ ನೀಡಬಹುದು (Post- facto approval). ಇದು ಇಲ್ಲಿಯವರೆಗೆ ಜಗತ್ತಿನಾದ್ಯಂತ ಪರಿಸರ ಕಾನೂನುಗಳು ಮತ್ತು ನ್ಯಾಯಾಲಯಗಳು ಪ್ರತಿಪಾದಿಸಿದ ‘ಮುಂಜಾಗೃತಾ ಸಿದ್ಧಾಂತ’ (Precautionary Principle) ಕ್ಕೆ ಕೊಡಲಿಯೇಟು ನೀಡುತ್ತದೆ. ಇದರಿಂದಾಗುವ ಹಾನಿ ಎರಡು ಆಯಾಮಗಳದ್ದು. ಮೊದಲನೆಯದು ಪ್ರಕೃತಿಗೆ ಹಾಗೂ ಆ ನಿರ್ದಿಷ್ಟ ಪ್ರದೇಶದ ಜನರ ಮೇಲೆ ಯಾವ ಪರಿಣಾಮ ಆಗುತ್ತದೆ ಎಂಬ ಅಳತೆ ಸಿಗದೇ, ಅಪಾಯಕಾರಿಯಾದ ಯೋಜನೆಗಳು ಜಾರಿಯಾಗುವುದು. ಎರಡನೆಯ ಆಯಾಮ ಎಂದರೆ ಉದ್ದಿಮೆಗಳಿಗೆ ಪರಿಸರವನ್ನು ಪರಿಗಣಿಸದೆ ಆರಂಭಿಸಲು ಕುಮ್ಮಕ್ಕು ನೀಡಿದಂತೆ ಆಗುವುದು. ಮೇ ತಿಂಗಳಿನಲ್ಲಿ ಎಲ್.ಜಿ ಪೋಲಿಮಾರ್ ಅನಿಲ ಸೋರಿಕೆಯಿಂದ ವಿಶಾಖಪಟ್ಟಣಂನಲ್ಲಿ ಸಾವು – ನೋವು ಸಂಭವಿಸಿದ್ದು ನೆನಪಿದೆಯಲ್ಲವೇ? ಆ ಘಟಕಕ್ಕೆ ಕೇಂದ್ರ ಸರಕಾರದ ಹಸಿರು ಪರವಾನಗಿ ಇರಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ. ಪರಿಸ್ಥಿತಿ ಹೀಗಿರುವಾಗ, ಅಧಿಸೂಚನೆಯ ಈ ತಿದ್ದುಪಡಿ ಜಾರಿಗೆ ಬಂದರೆ ಬಳ್ಳಾರಿಯ ಗಣಿಗಳು, ಪಶ್ಚಿಮ ಘಟ್ಟಗಳ ರಸ್ತೆ- ರೈಲು ಯೋಜನೆಗಳು ಮತ್ತು ನದಿ ಜೋಡಣೆ ಯೋಜನೆಗಳು ಕಾನೂನಿನ ಶ್ರೀರಕ್ಷೆಯೊಂದಿಗೇ ಕೆಲಸ ಶುರುಮಾಡಿಕೊಳ್ಳುತ್ತವೆ.

ಹಾಗಾದರೆ ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ತಳಮಟ್ಟದಿಂದ ಬಲಗೊಳಿಸುತ್ತಿದೆಎಂದು ಬೆನ್ನು ತಟ್ಟಿಕೊಳ್ಳುವ ನಮ್ಮ ದೇಶ, ಹೇಗೆ ಇಂತಹ ಆಘಾತಕಾರಿಯಾದ ಹೆಜ್ಜೆಗಳನ್ನಿಡುತ್ತಿರುವುದು? ಹೇಗೆ ಮತ್ತು ಯಾಕೆ ಪರಿಸರ ಮತ್ತು ಅರಣ್ಯ ಕಾನೂನುಗಳು ದಿನಂದಿಂದ ದಿನಕ್ಕೆ ಉಗುರು ಮತ್ತು ಹಲ್ಲು ಇಲ್ಲದ ಕಾಗದದ ಹುಲಿಯಾಗುತ್ತಿರುವುದು?

ನಮ್ಮದೇ ಆದ ಒಂದು ‘ಪರಿಸರ ತತ್ವಶಾಸ್ತ್ರ’ (Environmental Philosphy) ನ್ಯಾಯವ್ಯವಸ್ಥೆಯ ತಳಹದಿಯಾಗಿ ನಿಲ್ಲದೆ ಇರುವುದು ಇಂತಹ ಆಘಾತಕಾರಿ ಬದಲಾವಣೆಗಳಿಗೆ ಆಸ್ಪದ ಕೊಡುತ್ತದೆ. ಮೂಲಭೂತವಾದ ತತ್ವಗಳು ನಮ್ಮ ಪರಿಸರ ಕಾನೂನುಗಳಿಗೆ ಚೌಕಟ್ಟು ನೀಡಿದರೆ, ಯಾವುದೇ ಸರಕಾರ ಬಂದರೂ, ಆ ಚೌಕಟ್ಟು ಮೀರುವುದು ಅಸಾಧ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಕನಿಷ್ಠ ಮಟ್ಟದ ಪರಿಸರ ರಕ್ಷಣೆ ಖಾತ್ರಿಯಾಗುತ್ತದೆ.

ಹಲವು ಕಾನೂನುಗಳಂತೆಯೇ ಪರಿಸರ ಕಾನೂನುಗಳನ್ನು, ಅವುಗಳ ಪರಿಕಲ್ಪನೆಗಳನ್ನು ನಾವು ಯೂರೋಪ್ – ಅಮೆರಿಕಾ ದೇಶಗಳ ವ್ಯವ್ಯಸ್ಥೆಗಳಿಂದ ಎರವಲು ಪಡೆದಿದ್ದು. ಎಪ್ಪತ್ತರ ದಶಕದ ನಂತರ ಜಾರಿಯಾದ ಪರಿಸರ ಕಾನೂನುಗಳ ಪಡೆ ವಿವಿಧ ದೇಶಗಳ ಒಮ್ಮತದಿಂದ ಏರ್ಪಟ್ಟ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಸಮಾವೇಶಗಳಿಂದ (Treaty and International Conventions) ಪ್ರೇರೇಪಿತವಾದದ್ದು. ನ್ಯಾಯಾಲಯಗಳು ಕೆಲವು ತೀರ್ಪುಗಳಲ್ಲಿ ಅಲ್ಲಲ್ಲಿ ಸಂಪ್ರದಾಯ – ಶ್ಲೋಕಗಳನ್ನು ಉಲ್ಲೇಖಿಸಿರಬಹುದಾಗಿದ್ದರೂ, ಸಂಸತ್ತು ಮತ್ತು ಸಂಸತ್ತಿನ ಸದಸ್ಯರು ಸಹಮತದಿಂದ ಅಂಗೀಕರಿಸಿ, ನಮ್ಮ ಕಾನೂನುಗಳ ಬೆನ್ನೆಲುಬಾಗಿಸಿರುವ ತತ್ವಗಳ ಕೊರತೆ ಇದೆ ನಮಗೆ.

ಆಧುನಿಕೋತ್ತರ (Post-modern) ಕಾಲಘಟ್ಟಕ್ಕೆ ಕಾಲಿಟ್ಟಿರುವ ನಾವು ಆಧುನಿಕತೆಯ ಕಾಲಘಟ್ಟದಲ್ಲಿ ಅರ್ಥೈಸಿದ್ದ ಹಲವಾರು ಪರಿಕಲ್ಪನೆಗಳನ್ನು ಮರುಪರಿಶೀಲಿಸುತ್ತಿದ್ದೇವೆ. ಅಂತಹ ಒಂದು ಬದಲಾವಣೆ ಪರಿಸರ ಕಾನೂನು ಅಧ್ಯಯನದಲ್ಲಿಯೂ ಕಾಣುತ್ತೇವೆ. ಪರಿಸರ ರಕ್ಷಣೆಯನ್ನು ಕೈಗಾರಿಕಾ ಕ್ರಾಂತಿಯ ನಂತರದಲ್ಲಿ ಹೆಚ್ಚಾಗಿ ವೆಚ್ಚ – ಉಪಯೋಗದ ದೃಷ್ಟಿಯಲ್ಲೇ ಪರಿಶೀಲನೆ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಇಡೀ ಪರಿಸರದ ಗಣನೆಗಿಂತ, ಪರಿಸರವನ್ನು ಗಾಳಿ, ನೀರು, ನೆಲ ಹಾಗೂ ಕಾಡು ಹೀಗೆ ವಿಘಟಿಕರಿಸಿ ಅವಲೋಕಿಸಲಾಗುತ್ತಿತ್ತು. ಆ ವಿಧಾನದಿಂದ ನಿಧಾನವಾಗಿ ನಾವು ದೂರ ಸರಿಯುತ್ತಿದ್ದು, ಪರಿಸರವನ್ನು ಸಂಪೂರ್ಣವಾದ ಒಂದು ವ್ಯವ್ಯಸ್ಥೆಯ (Ecosystem) ದೃಷ್ಟಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ. ಇದರ ಜೊತೆಗೇ ವೆಚ್ಚ – ಉಪಯೋಗದ ಶಿಥಿಲ ಲೆಕ್ಕಾಚಾರದಿಂದ ಹೊರಬರುವುದೂ ಅಗತ್ಯವಾಗಿದೆ. ಪರಿಸರ ತತ್ವಶಾಸ್ತ್ರದ ಅನ್ವೇಷಣೆಯೂ ಇಂತಹ ಒಂದು ಪ್ರಯತ್ನಗಳಲ್ಲಿ ಒಂದು ಎಂದು ಹೇಳಬಹುದು.

ಪರಿಸರ ತತ್ವಶಾಸ್ತ್ರದ ಪರಿಕಲ್ಪನೆಯ ಕುರಿತು ವಾಷಿಂಗ್ಟನ್ ಸಾರ್ವಜನಿಕ ವ್ಯವಹಾರ ಪದವಿ ವಿಶ್ವವಿದ್ಯಾಲಯದ ವಿಕ್ಟರ್ ಬಿ. ಪ್ಲೇಟ್ ಮತ್ತು ನಾರ್ವೆಯ ಟ್ರೊಮೋ ವಿಶ್ವವಿದ್ಯಾಲಯದ ವಿಟೋ ಡೆ ಲೂಸಿಯಾರವರು ಬರೆದ ಎರಡು ಸಂಶೋಧನಾ ಲೇಖನಗಳು ಗಮನ ಸೆಳೆಯುತ್ತವೆ. [Victor B. Flatt, Human Environment and Mind: Correcting NEPA Implementation by Treating Environmental Philosophy and Environmental Risk Allocation as Environmental Values under NEPA, 46 Hastings L.J. 85 (1994) ಮತ್ತು Vito De Lucia, Towards an Ecological Philosophy of Law : A Comparative Discussion, 4 J. Hum. Rts & Env’t 167 (2013)]

 ವಿಟೋ ಡೆ ಅವರು ನಮ್ಮ ಕಾನೂನು ವ್ಯವ್ಯವಸ್ಥೆಯ ತಳಹದಿಯೇ ಪರಿಸರ ತತ್ವಶಾಸ್ತ್ರವಾಗಿರಬೇಕು ಎಂದು ವಾದಿಸಿದರೆ, ವಿಕ್ಟರ್ ರವರು ಪರಿಸರ ತತ್ವಶಾಸ್ತ್ರವು ಪರಿಸರದ ಮೇಲಿನ ವಿಶ್ಲೇಷಣೆ ಅಧ್ಯಯನಗಳಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಪ್ರತಿಪಾದಿಸುತ್ತಾರೆ.

ವಿಟೋ ಡೆ ಅವರು ಸೂಸನ್ ಎಮ್ಮೆನೆಗ್ಗರ್ ಮತ್ತು ಎಕ್ಸಲ್ ಶೆಂಟ್ಷರ್ ಅವರ ‘Taking Nature’s Rights Seriously: The long way to Biocentrism in Environmental law (1994, 6 (3) Georgetown International Environmental law’) ನ್ನು ಆಧರಿಸಿ ಹೇಳುವುದೆಂದರೆ, ಅಂತಾರಾಷ್ಟ್ರೀಯ ಪರಿಸರ ಕಾನೂನು ಬರಿಯ ಮಾನವ ಕೇಂದ್ರಿತ ದೃಷ್ಟಿಕೋನದಿಂದ ‘ಪ್ರಕೃತಿಗೆ ಅದರದ್ದೇ ಆದ ಮೌಲ್ಯವಿದೆ’ ಎಂಬತ್ತ ಪ್ರಯಾಣ ಮಾಡುತ್ತಿದೆ. ಅವರು ಪಿ ಡಿ ಬಾರ್ಡೋನ್ ರವರ ‘ಭೂಮಿ ನ್ಯಾಯಶಾಸ್ತ್ರ’ (Earth Jurisprudence) ಮತ್ತು ಮರಿಯಾ ತಲ್ಲಾಚಿನಿ ಅವರ ‘ಪ್ರಕೃತಿಯ ಕಾನೂನು’ (Law of Nature) ಈ ಎರಡು ರೀತಿಯ ಪರಿಸರ ಕೇಂದ್ರಿತ ಪರಿಸರ ತತ್ವಗಳನ್ನು ಅವರ ಲೇಖನದಲ್ಲಿ ತುಲನೆ ಮಾಡುತ್ತಾರೆ.

ಸ್ಥೂಲವಾಗಿ ಹೇಳುವುದಾದರೆ ಭೂಮಿ ನ್ಯಾಯಶಾಸ್ತ್ರವು ಭೂಮಿಗೂ ಮತ್ತು ಅಲ್ಲಿ ವಾಸಿಸುವ ಎಲ್ಲ ಜೀವಚರಗಳಿಗೂ ಮಾನವನಷ್ಟೇ ಸಮಾನವಾಗಿ ಹಕ್ಕುಗಳಿವೆ ಎಂದು ಪ್ರತಿಪಾದಿಸುತ್ತದೆ. ಹಾಗೆಯೇ ಪ್ರಕೃತಿಯ ಕಾನೂನು ವಾದವೆಂದರೆ, ಮಾನವನು ಪ್ರಕೃತಿಯ ಕಾನೂನುಗಳಿಗೆ ಅಧೀನನಾಗಿ ನಡೆಯಬೇಕು ಎಂಬುದು. ಈ ಎರಡೂ ವಿಚಾರ ಹರಿವುಗಳನ್ನು ಕೂಲಂಕುಷವಾಗಿ ಅಭ್ಯಸಿಸಿದ ನಂತರ ಅಂತಿಮವಾಗಿ ಪರಿಸರದ ವಿಚಾರದಲ್ಲಿ ಯಾವುದೇ ನಿರ್ಧಿಷ್ಟವಾದ ಸಿದ್ಧಾಂತವನ್ನು ಸಾರ್ವತ್ರಿಕ ಎನ್ನುವುದು ಸಾಧ್ಯವಿಲ್ಲವೆಂದೂ, ಬೌದ್ಧ ಮತ ಉಪದೇಶಿಸುವಂತೆ ಆಯಾ ಸಮಸ್ಯೆಗಳಿಗೆ ಅದರದೇ ಆದ್ದ ಪರಿಹಾರ ಉಪಾಯಗಳಿವೆ ಎಂಬ ಸಿದ್ಧಾಂತವೇ ಲೇಸು ನಿಲುವಿಗೆ ವಿಟೋ ಡೇ ಅವರು ಬರುತ್ತಾರೆ.

ಕಾನೂನುಗಳ ತಳಹದಿಗಳನ್ನೇ ಬದಲಾಯಿಸಬೇಕು ಎಂದು ವಾದಿಸಿದ ವಿಟೋ ಡೆ ಅವರಿಗೆ ವ್ಯತಿರಿಕ್ತವಾಗಿ ವಿಕ್ಟರ್ ರವರು ಇರುವ ಕಾನೂನಿನ ಚೌಕಟ್ಟಿನಲ್ಲೇ ಹೇಗೆ ಪರಿಸರ ತತ್ವಗಳನ್ನು ಅಳವಡಿಸಿಕೊಳ್ಳಬಹುದು ಎಂದು ವಿವರಿಸುತ್ತಾರೆ. ಹೇಗೆ ಪರಿಸರ ತತ್ವಗಳನ್ನು ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧ್ಯಯನ’ ವರದಿ (EIA Report) ಯಲ್ಲಿ ಮಹತ್ವದ ಸ್ಥಾನವನ್ನು ಕೊಡಬೇಕು ಎಂದು ವಿವರಿಸುತ್ತಾರೆ. ಪರಿಸರದ ತತ್ವಗಳ ಆಧಾರದ ಮೇಲೆ ಹೇಗೆ ಅಪಾಯಗಳನ್ನು ಪ್ರಾಯೋಗಿಕವಾಗಿ ಅಳೆಯಬಹುದು ಎಂದೂ ಸೂಚಿಸುತ್ತಾರೆ. ವಿಕ್ಟರ್ ರವರು ಜಾರ್ಜ್ ಸೆಷನ್ಸ್ [The Deep Ecology Movement : A Review, II Env. Rev. 107 (1989)] ರವರ ಸಿದ್ಧಾಂತದ ಹಿನ್ನೆಲೆಯಲ್ಲಿ ಹೇಳುತ್ತಾರೆ, ಪರಿಸರದ ಮೌಲ್ಯಗಳಲ್ಲಾಗುವ ಬದಲಾವಣೆಗಳು ಸಮಾಜದ ಮತೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳೊಂದಿಗೆ ನೇರ ಸಂಬಂಧ ಹೊಂದಿವೆ. ಅವರ ಪ್ರಕಾರ ಯಾವ ಮೌಲ್ಯಗಳು ಮನುಷ್ಯನಿಗಾಗುವ ಲಾಭ – ನಷ್ಟಗಳನ್ನು ಮಾತ್ರ ಪರಿಗಣಿಸದೆ  ಪ್ರಕೃತಿಯನ್ನು ಅದರ ಮೂಲರೂಪದಲ್ಲಿಯೇ ಸಂರಕ್ಷಿಸಬೇಕು ಎಂದು ವಾದಿಸುತ್ತದೆಯೋ ಅವೆಲ್ಲ ಮೌಲ್ಯಗಳೂ ಪರಿಸರ ತತ್ವಗಳ ಭಾಗಗಳಾಗಿವೆ. ಅಂತಹ ಪರಿಸರ ತತ್ವಗಳನ್ನು ಕಾನೂನುಗಳಲ್ಲಿ ಬೆಸೆಯುವುದರಿಂದ ಈ ಅಧ್ಯಯನ ವರದಿಗಳು ಯೋಜನೆಗಳನ್ನು ಕಾನೂನು ಪ್ರಕಾರ ಜಾರಿಗೊಳಿಸುವ ಮಾರ್ಗವಾಗಿ ಉಳಿಯದೆ, ನಿಜವಾದ ಅರ್ಥದಲ್ಲಿ ಪರಿಸರ ಸಂರಕ್ಷಣೆಯನ್ನು ಮಾಡಲಿವೆ ಎಂದು ವಿಕ್ಟರ್ ರವರು ಪ್ರತಿಪಾದಿಸುತ್ತಾರೆ.

ಈ ಚರ್ಚೆಯ ಸಹಾಯದಿಂದ ನಾವು ಪರಿಸರ ತತ್ವಶಾಸ್ತ್ರವೆಂದರೆ ಏನು ಮತ್ತು ನಮ್ಮ ಪರಿಸರ ತತ್ವಶಾಸ್ತ್ರವೇನಿರಬಹುದು ಎಂದು ವಿಶ್ಲೇಷಿಸಬಹುದು. ಪರಿಸರದೊಂದಿಗೆ ಬೆಸೆದುಕೊಂಡಿರುವ ನಮ್ಮ ಸಾಂಸ್ಕೃತಿಕ, ಮತೀಯ ಮತ್ತು ಸಾಮಾಜಿಕ ರೂಢಿ, ಸಂಪ್ರದಾಯ ಮತ್ತು ಆಚಾರಗಳ ಒಟ್ಟೂ ಮೊತ್ತವನ್ನು ನಾವು ಪರಿಸರ ತತ್ವಶಾಸ್ತ್ರ ಎನ್ನಬಹುದು. ಇವು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸ ಹೊಂದುತ್ತವೆ. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಲಿ ದೇವರ ಕಾಡುಗಳಿವೆ, ಅವುಗಳಿಗೆ ಪೂಜೆಯ ದಿನಗಳಲ್ಲದೆ ಬೇರೆ ದಿನಗಳಲ್ಲಿ ಪ್ರವೇಶವಿಲ್ಲ. ಪೂಜೆಯ ದಿನಗಳೂ ಬಹಳ ಪರಿಮಿತಿಯಾದ ರೀತಿಯಲ್ಲಿ ಮಾನವ ಚಟುವಟಿಕೆಗಳು ನಡೆಯುತ್ತವೆ. ಕೆಲವೊಂದು ಕಡೆ ಬೀರ, ಜಟಕನ ‘ಕಾನು’ಗಳಿವೆ. ಇವು ಆ ಪ್ರದೇಶದ ಪರಿಸರ ತತ್ವ ಗಳು.

ಪ್ರಾದೇಶಿಕ ಪದ್ಧತಿಗಳಲ್ಲದೆ, ಜನರ ಜೀವನಗಳಲ್ಲಿ ಬೆಸೆದುಕೊಂಡಿರುವ ವಿವಿಧ ಮತಗಳ ನಂಬಿಕೆಗಳಿಗೂ ಹಸಿರು ಆಯಾಮಗಳಿವೆ. ಅಶ್ವತ್ಥ್ ವೃಕ್ಷವನ್ನು ಬ್ರಹ್ಮ-ವಿಷ್ಣು-ಮಹೇಶ್ವರರ ಸಂಗಮವೆನ್ನುವುದು ಸನಾತನಿಗಳ ನಂಬಿಕೆಯಾಗಿದ್ದು, ಅವುಗಳನ್ನು ಕಡಿಯುವುದು ಪಾಪವೆಂದು ಪರಿಗಣಿಸಲಾಗುತ್ತದೆ. ಆ ವೃಕ್ಷದ ಉಲ್ಲೇಖ ಕಠ ಉಪನಿಷತ್ ಮತ್ತು ಭಾಗವದ್ಗೀತೆಗಳಲ್ಲಿಯೂ ಕಾಣಬಹುದಾಗಿದೆ. ಇಸ್ಲಾಂ ನಲ್ಲಿ ಮರ ನೆಡುವುದನ್ನು ಒಂದು ಪುಣ್ಯದ ಕೆಲಸವಾಗಿ ಪರಿಗಣಿಸಲಾಗಿದ್ದು, ರಂಜಾನ್ ಸಮಯದಲ್ಲಿ ದಾನ – ಧರ್ಮಗಳನ್ನು ಮಾಡುವಂತೆಯೇ ಮರ ನೆಡಬೇಕು ಎಂದು ಹೇಳಲಾಗಿದೆ. (ಹದೀತ್ : ಬುಖಾರಿ) ಅಷ್ಟೇ ಅಲ್ಲದೆ, ಖುರಾನ್ ನಲ್ಲಿ ಹೇಳಲಾಗಿದೆ, “ಭೂಮಿಯ ಮೇಲೆ ಅಹಂಕಾರದಿಂದ ನಡೆಯಬೇಡ, ಏಕೆಂದರೆ ಭೂಮಿಯನ್ನು ನೀನು ಬಗೆಯಲಾರೆ ಮತ್ತು ಪರ್ವತದಷ್ಟು ಎತ್ತರವನ್ನು ಎಂದೂ ತಲುಪಲಾರೆ” (೧೭: ೩೭). ಬೈಬಲ್ (೩೫: ೩೩) ಮತ್ತು ಖುರಾನ್ (೨: ೬೦, ೨೮: ೭೭) ನಲ್ಲಿ ನಿಂತ ನೆಲವನ್ನು ಕಲುಷಿತಗೊಳಿಸಬೇಡ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಬೌದ್ಧ ಗ್ರಂಥಗಳಲ್ಲಿಯೂ ಪ್ರಕೃತಿಯೊಂದಿಗಿನ ಸಹಜೀವನ ಬಹಳ ಮುಖ್ಯ ಪಾಠವಾಗಿದೆ.

ಮತದ್ವೇಷವನ್ನು ಮತ್ತು ಮೂಢನಂಬಿಕೆಗಳನ್ನು ದೂರವಿಡುವ ನೆಪದಲ್ಲಿ ನಮ್ಮ ‘ಹಸಿರು ಬೇರುಗಳನ್ನು’ ನಾವು ಮರೆತಿದ್ದೇವೆ. ಹಸಿರು ನಂಬಿಕೆ – ಮತ್ತು ಆಚಾರಗಳು ನಮ್ಮ ಪರಿಸರ ತತ್ವಗಳ ಭಾಗಗಳಾಗಬೇಕು.  ಇಂತಹ ನಂಬಿಕೆಗಳು ಮತ್ತು ಆಚಾರಗಳು, ಅಂಕಿ – ಅಂಶಗಳಿಗಿಂತ, ವೆಚ್ಚ – ಉಪಯೋಗ ವಿಧಾನಗಳಿಗಿಂತ ಹೆಚ್ಚು ಪ್ರಭಾವಶಾಲಿ ಮತ್ತು ಪರಿಸರಸ್ನೇಹಿ. ಈ ಪರಿಸರ ತತ್ವಗಳನ್ನು ದೇಶದ ಮೂಲೆ ಮೂಲೆಯಲ್ಲೂ ಪಂಚಾಯತ್, ತಾಲ್ಲೂಕು ಮಟ್ಟದಲ್ಲಿ ಜನರೊಂದಿಗಿನ ಸಮಾಲೋಚನೆಯ ನಂತರ ರೂಪಿಸಬೇಕು. ಇಂತಹ ತತ್ವಗಳನ್ನು ಜನಸಂಖ್ಯೆಯ ಬಲದ ಮೇಲಲ್ಲದೆ, ಪರಿಸರ ಸಂರಕ್ಷಣೆಯ ತೀಕ್ಷ್ಣತೆಯನ್ನು ಕಾಪಾಡುವತ್ತ ಒಂದು ಆಚಾರದ ಕೊಡುಗೆ ಎಷ್ಟಿದೆ ಎಂಬುದರ ಆಧಾರದ ಮೇಲೆ ನಿರ್ಧರಿಸಬೇಕು. ಇದರಿಂದ, ಈ ತತ್ವಗಳನ್ನು ಅಲ್ಪಸಂಖ್ಯಾತ – ಬಹುಸಂಖ್ಯಾತ ರಾಜಕಾರಣದಿಂದ ಹೊರಗಿಡಬಹುದು ಮತ್ತು ಪರಿಸರದ ಗರಿಷ್ಟ ಮಟ್ಟದ ಸಂರಕ್ಷಣೆಯ ತತ್ವಗಳನ್ನು ರೂಪಿಸುವುದು ಸಾಧ್ಯವಾಗುತ್ತದೆ. ಈ ತತ್ವಗಳು, ಪರಿಸರ ಕಾನೂನುಗಳ ತಳಹದಿಯಾಗಬೇಕು ಮತ್ತು ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧ್ಯಯನ ವರದಿ (EIA report) ತಯಾರಿಸುವಾಗ ಈ ಪ್ರಾದೇಶಿಕ ಪರಿಸರ ತತ್ವಗಳನ್ನು ಪರಿಗಣಿಸಿಯೇ ಯೋಜನೆಯ ಕುರಿತು ತೀರ್ಮಾನ ಕೈಗೊಳ್ಳಬೇಕು.

ಅತಿವೃಷ್ಟಿಗಳು, ಭೂಕುಸಿತಗಳು, ಬರಗಾಲಗಳು ಮತ್ತು ಉಷ್ಣ -ಶೀತ ಬಿರುಗಾಳಿಗಳು ಒಂದಾದ ನಂತರ ಒಂದು ನಮ್ಮನ್ನು ಕಂಗೆಡಿಸುತ್ತಿರುವ ಈ ಸಮಯದಲ್ಲಿ, ನಮ್ಮ ಮಠ – ಮಂದಿರ – ಮಸೀದಿಗಳು ಪರಿಸರವನ್ನು ರಕ್ಷಿಸುವತ್ತ ತಮ್ಮ ಮತೀಯ ಹಾಗೂ ಸಾಂಸ್ಕೃತಿಕ ಆಚಾರ – ನಂಬಿಕೆ – ರೂಢಿಗಳನ್ನು ಹೊರಳಿಸಬೇಕಾದದ್ದು ಇಂದಿನ ಅಗತ್ಯ. ಅದರೊಟ್ಟಿಗೆ, ಪರಿಸರವಾದಿಗಳು, ಹೋರಾಟಗಾರರು ಸರಕಾರದ ಮೇಲೆ ನಮ್ಮದೇ ಆದ ಪರಿಸರ ತತ್ವಗಳನ್ನು ರೂಪಿಸುವತ್ತ ಮತ್ತು ಅವುಗಳನ್ನು ಕಾನೂನಿನ ತಳಹದಿಯಾಗಿಸುವತ್ತ ಗಂಭೀರ ಪ್ರಯತ್ನ ಮಾಡಬೇಕಾಗಿದೆ. ನಂಬಿಕೆಗಳಿಗೆ, ಜೀವ – ಜೀವನಗಳಿಗೆ ಅನಗತ್ಯ ಬಣ್ಣ ಬಳಿಯುವ, ಆ ಬಣ್ಣಗಳಲ್ಲೂ ತಾರತಮ್ಯ ಕಾಣುವ ನಾವು, ಹಸಿರು ಅಳಿದ ಮೇಲೆ, ಬೇರಾವ ಬಣ್ಣವೂ ಉಳಿಯದು ಎಂಬುದನ್ನು ಮರೆಯಬಾರದು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.

Scroll to Top