ರಕ್ಷಕರೇ ಭಕ್ಷಕರಾದಾಗ! : ಪೊಲೀಸ್ ದೌರ್ಜನ್ಯ ಮತ್ತು ಸಂಬಂಧಿತ ಕಾನೂನುಗಳು

ನಮ್ಮ ದೇಶವೇ ಹಾಗೆ. ಕೆಲವು ಅಹಿತಕರ ಘಟನೆಗಳು ಉಂಟಾದಾಗ, ಜನರು ಘೋರಾಕಾರವಾಗಿ ಅವುಗಳ ಬಗ್ಗೆ ಚರ್ಚೆ ನಡೆಸಿ, ಅಲ್ಲೋಲ – ಕಲ್ಲೋಲ ಮಾಡಿ ಇನ್ನು ಮೇಲೆ ಅಂತಹ ಸಮಸ್ಯೆಗೆ ಎಡೆಯೇ ಇರದು ಎಂಬಂತ ಚಿತ್ರಣವನ್ನು ಜನ ಮೂಡಿಸಿಬಿಡುತ್ತಾರೆ. ಆದರೆ ಹೊಸ ಸುದ್ದಿ ಬರುತ್ತಲೇ, ಹಳೆಯದನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ತಮಿಳುನಾಡಿನ ಪೊಲೀಸ್ ದೌರ್ಜನ್ಯದ ಪ್ರಕರಣವನ್ನೇ ತೆಗೆದುಕೊಳ್ಳಿ. ಪ್ರಕರಣವನ್ನು ಮದ್ರಾಸ್ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಸಿಬಿಐ ತನಿಖೆಗೆ ಒಪ್ಪಿಸಿಯಾದ ನಂತರ ನಾವೆಲ್ಲರೂ ಆ ಪ್ರಕರಣವನ್ನೇ ಮರೆತುಬಿಟ್ಟಿದ್ದೇವೆ. ಇನ್ನೊಂದು ದುರ್ಘಟನೆ ನಡೆಯುವವರೆಗೂ ಜಯರಾಜ್ ಮತ್ತು ಬೆನ್ನಿಕ್ಸ್ ನಮ್ಮ ಸ್ಮೃತಿಪಟಲದತ್ತ ಹಾಯುವ ಸಾಧ್ಯತೆ ದುರ್ಲಭವೆಂದೇ ಹೇಳಬಹುದು. ಅಧಿಕಾರದ ಕರಾಳ ಮುಖ ತೋರುವ ಪೊಲೀಸ್ ದೌರ್ಜನ್ಯದ ಸಮಸ್ಯೆ ಕ್ಷಣಿಕ ಆಕ್ರೋಶವನ್ನು ಹೊರಗೆಡವುಹ ವೇದಿಕೆಯಾಗದೆ, ಸತತವಾಗಿ ನಮ್ಮ ಬೌದ್ಧಿಕ, ಭಾವನಾತ್ಮಕ ಹಾಗೂ ಕಾನೂನಾತ್ಮಕ ಚರ್ಚೆಯ ಭಾಗವಾಗಿ ಶಾಶ್ವತ ಪರಿಹಾರದತ್ತ ಕೊಂಡೊಯ್ಯಲಿ ಎಂಬ ಆಶಯದ ನಿಟ್ಟಿನಲ್ಲಿ ಈ ಲೇಖನ.

ಪೋಲೀಸರ ದೌರ್ಜನ್ಯ ಇಂದು ನಿನ್ನೆಯದಲ್ಲ. ವಿಚಾರಣೆಯ ನೆಪದಲ್ಲಿ ಎಸಗುವ ದೌರ್ಜನ್ಯಕ್ಕೆ ಎಷ್ಟೋ ಶತಮಾನಗಳ ಇತಿಹಾಸವಿದೆ. ಬಹಳಷ್ಟು ಪ್ರಕರಣಗಳಲ್ಲಿ ದೌರ್ಜನ್ಯ ವಿಚಾರಣೆಯ ಒಂದು ವಿಧಾನವಾಗಿದೆ, ಅನೌಪಚಾರಿಕ ಪದ್ಧತಿಯಾಗಿ ಮಾರ್ಪಾಡಾಗಿದೆ. ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಎಷ್ಟೋ ಜನ ಜೀವನ ಪರ್ಯಂತ ಅಂಗವೈಕಲ್ಯ ಮತ್ತಿತರ ಸಮಸ್ಯೆಯನ್ನು ಎದುರಿಸುವಂತಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (NCRB) ಪ್ರಕಾರ 2006 ರಿಂದ 2016 ನೇ ಇಸವಿಯವರೆಗೆ ಸರಿಸುಮಾರು 1022 ಸಾವು ಆರಕ್ಷಕ ಠಾಣೆಯಲ್ಲಿ ವರದಿಯಾಗಿದೆ. ದಿ ಹಿಂದೂ ಪತ್ರಿಕೆಯ ಸಮೀಕ್ಷೆಯ ಪ್ರಕಾರ ಕೇವಲ 2019 ನೇ ಇಸವಿಯಲ್ಲಿ 1730 ಸಾವುಗಳು ವರದಿಯಾಗಿವೆ. ಅಂದರೆ ದಿನವೊಂದಕ್ಕೆ 5 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಬಹುದು. ಈ ಪ್ರಕರಣಗಳಲ್ಲಿ ದುರಾದೃಷ್ಟವಶಾತ್ ಕೇವಲ 5 ಪ್ರತಿಶತ ಪೊಲೀಸರನ್ನು ಅಪರಾಧಿಗಳೆಂದು ನಿರ್ಣಯಿಸಲಾಗಿದೆ. ಈ ಅಂಕಿ ಅಂಶಗಳು ಪೊಲೀಸ್ ದೌರ್ಜನ್ಯವನ್ನು ತಡೆಗಟ್ಟುವುದರಲ್ಲಿ ವ್ಯವಸ್ಥೆಯ ವೈಫಲ್ಯಕ್ಕೆ ಕೈಗನ್ನಡಿ ಹಿಡಿಯುವಂತಿದೆ.

ಸ್ವಾತಂತ್ರ್ಯಾಪೂರ್ವ ಸಂದರ್ಭದಲ್ಲಿ ಬ್ರಿಟೀಷರಿಗೆ ಭಾರತೀಯರನ್ನು ನಿಗ್ರಹಿಸುವುದು ಬಹುದೊಡ್ಡ ಸವಾಲಾಗಿತ್ತು. ಈ ಕೆಲಸವನ್ನು ಕಾನೂನಾತ್ಮಕವಾಗಿ ಮಾಡುವ ಇರಾದೆಯೊಂದಿಗೆ 1861 ರಲ್ಲಿ ಭಾರತೀಯ ಪೊಲೀಸು ಕಾಯ್ದೆ (Indian Police Act) ಯನ್ನು ಜಾರಿಗೊಳಿಸಿತು. ಅಸಂತುಲಿತವಾದ ಮತ್ತು ವಿಶಾಲವಾದ ಅಧಿಕಾರವನ್ನು ಅಷ್ಟು ಸ್ಪಷ್ಟತೆಯಿಲ್ಲದೆ  ಹಲವಾರು ವಿಶ್ಲೇಷಣೆಗೆ ಅವಕಾಶ ಕೊಡುವಂತಹ ಭಾಷೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಈ ಕಾನೂನಿನಲ್ಲಿ ನೀಡಲಾಯಿತು. ಸ್ವಾತಂತ್ರ್ಯ ದೊರಕಿ ಇಷ್ಟು ವರ್ಷಗಳು ಕಳೆದರೂ  2006 ನೇ ವರ್ಷದ ತನಕ ಕೇವಲ ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ದೆಹಲಿ ಈ ೪ ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಕಾಯಿದೆಗಳನ್ನು ಹೊಂದಿದ್ದವು. ಸ್ವಾತಂತ್ರ್ಯಾನಂತರದ ಕಾನೂನುಗಳು ಇವಾಗಿದ್ದರೂ ಸಹ ಈ ಎಲ್ಲಾ ಕಾಯಿದೆಗಳೂ ಬ್ರಿಟೀಷರು ರಚಿಸಿದಂತಹ ಭಾರತೀಯ ಪೋಲೀಸು ಕಾಯ್ದೆ 1861 ರ ಆಧಾರಿತವಾಗಿದ್ದು, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಸುಧಾರಣೆಯನ್ನೇನೂ ಮಾಡಿಲ್ಲ.

2006 ನೇ ಇಸವಿಯಲ್ಲಿ ಭಾರತೀಯ ಸರ್ವೋಚ್ಛ ನ್ಯಾಯಾಲಯವು ಪ್ರಕಾಶ್ ಸಿಂಗ್ ವಿರುದ್ಧ ಭಾರತೀಯ ಒಕ್ಕೂಟ [(2006) 8 SCC 1] ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸುಧಾರಣೆಗಾಗಿ ಮಾರ್ಗ ಸೂಚಿಗಳನ್ನು ನೀಡಿತ್ತು. ಹೊಸ ಕಾನೂನು ರಚನೆ, ಇಲಾಖೆಯ ಕಾರ್ಯವೈಖರಿಯನ್ನು ಮೇಲ್ತನಿಖೆ ಮಾಡಲು ರಾಜ್ಯ ಮಟ್ಟದ ಸಮಿತಿ, ಪೊಲೀಸ್ ದೂರು ಪ್ರಾಧಿಕಾರದ ಸ್ಥಾಪನೆ ಮೊದಲಾದವುಗಳು ಮಾರ್ಗಸೂಚಿಯ ಪ್ರಮುಖ ಅಂಶಗಳು. ಇದಕ್ಕೆ ಅನುಗುಣವಾಗಿ ಕೆಲವು ರಾಜ್ಯಗಳು ಪೋಲೀಸರ ನೀತಿ ಸಂಹಿತೆ ಹಾಗೂ ಇತರ ಅಂಶಗಳನ್ನೊಳಗೊಂಡ ಹೊಸ ಕಾಯಿದೆಗಳನ್ನು ರಚಿಸಿಕೊಂಡವು. ಇದರಿಂದ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಆಶಾಭಾವನೆ ಹುಟ್ಟಿಸುವ ಬದಲಾವಣೆ ಆದರೂ ಆಮೂಲಾಗ್ರವಾದ ಯಾವ ಮಾರ್ಪಾಡೂ ಇಲಾಖೆಯಲ್ಲಿ ಬರದೇ ಇರುವುದು ಕಹಿ ಸತ್ಯ. ಇವತ್ತಿಗೂ ನಮ್ಮವರಲ್ಲದವರು ರಚಿಸಿದ ಕಾನೂನು ನಮ್ಮನ್ನು ಆಳುತ್ತಿದೆ.

ವಿಶ್ವಸಂಸ್ಥೆಯು 1987 ರಲ್ಲಿ ಚಿತ್ರಹಿಂಸೆಯ ವಿರುದ್ಧ ಒಂದು ಸಮಾವೇಶವನ್ನು ಏರ್ಪಡಿಸಿತ್ತು. ಭಾರತ ಕೂಡ ಸಮಾವೇಶದಲ್ಲಿ ಭಾಗವಹಿಸಿತ್ತು ಹಾಗೂ ಅಕ್ಟೋಬರ್ 14, 1997 ರಲ್ಲಿ ಈ ಸಮಾವೇಶಕ್ಕೆ ಸಹಿ ಹಾಕಿತ್ತು. ಸುಮಾರು 20 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿ, ಸಮಾವೇಶಕ್ಕೆ ಅನುಮೋದನೆಯನ್ನು ನೀಡಿ ತಮ್ಮ ಕಾನೂನು ವ್ಯವಸ್ಥೆಗಳಲ್ಲಿ ಚಿತ್ರಹಿಂಸೆ ವಿರುದ್ಧದ ಕಾಯಿದೆಗಳನ್ನು ಜಾರಿಗೊಳಿಸಿವೆ. ಆದರೆ ಭಾರತ ದೇಶ ಇಂದಿಗೂ ಸಹ ಈ ಸಮಾವೇಶಕ್ಕೆ ಅನುಮೋದನೆಯನ್ನು ನೀಡಿಲ್ಲ.

2005 ರಲ್ಲಿ ದಂಡ ಪ್ರಕ್ರಿಯಾ ಸಂಹಿತೆ, 1973 ಕ್ಕೆ ಕಲಂ 176 (1A) ಅನ್ನು ಅಳವಡಿಸಲಾಯಿತು. ಈ ಕಲಂ ಪ್ರತ್ಯೇಕವಾಗಿ ಆರಕ್ಷಕ ಠಾಣೆಯಲ್ಲಿ ಉಂಟಾಗುವ ದೌರ್ಜನ್ಯ, ಅತ್ಯಾಚಾರ, ಕೊಲೆಗಳನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸುತ್ತದೆ. ಕಲಂ 176 (5) ರ ಪ್ರಕಾರ ಮರಣ ಉಂಟಾದ ೨೪ ಘಂಟೆಯೊಳಗೆ ಮ್ಯಾಜಿಸ್ಟ್ರೇಟ್ ವಿಚಾರಣೆಯನ್ನು ನಡೆಸಬೇಕು. ಮೇಲ್ನೋಟಕ್ಕೆ ಈ ತಿದ್ದುಪಡಿ ದೌರ್ಜನ್ಯ ತಡೆಗೆ ಕಡಿವಾಣ ಹಾಕುವಂತೆ ಕಂಡರೂ, ಈ ತಿದ್ದುಪಡಿಯ ನಂತರವೂ ವ್ಯಾಪಕವಾಗಿ ಪೊಲೀಸ್ ದುರಾಚಾರದ ಸಂಖ್ಯೆ ಹೆಚ್ಚುತ್ತಲೇ ಇರುವುದನ್ನು ಗಮನಿಸಿದಾಗ, ಇದು ಹಿಂಸೆಯ ಪ್ರಕರಣಗಳನ್ನು ತಡೆಯುವುದರಲ್ಲಿ ಅಷ್ಟೇನೂ ಪರಿಣಾಮವನ್ನುಂಟು ಮಾಡಿಲ್ಲ ಎಂದೇ ಗಣಿಸಬೇಕಾಗುತ್ತದೆ.

ಪೊಲೀಸ್ ಅಧಿಕಾರಿಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಹೊಸ ಕಾನೂನಿನ ಅಗತ್ಯ ಯಾಕಿದೆಯೆಂದರೆ, ಭಾರತೀಯ ದಂಡ ಸಂಹಿತೆಯಲ್ಲಿ ಮತ್ತು ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಹಲವಾರು ಅಡೆತಡೆಗಳಿವೆ. ಹಲವು ರೀತಿಯಲ್ಲಿ ಸರಕಾರೀ ನೌಕರರು ಅದರಲ್ಲಿಯೂ ಪೊಲೀಸ್ ಅಧಿಕಾರಿಗಳಿಗೆ ಸಂರಕ್ಷಣೆ ಇದೆ. ಹಾಗಾಗಿ 2010 ನೇ ವರ್ಷದಲ್ಲಿ ಆರಕ್ಷಕ ಠಾಣೆಯಲ್ಲಿನ ದೌರ್ಜನ್ಯ ನಿಗ್ರಹಿಸುವ ಕಾಯಿದೆಯನ್ನು ರಚಿಸಲೋಸುಗ ರಾಜ್ಯಸಭೆಯ ಆಯ್ಕೆ ಸಮೀತಿಯೊಂದು ರಚಿಸಲ್ಪಟ್ಟಿತ್ತು. ಶ್ರೀ ಅಶ್ವಿನಿ ಕುಮಾರ್ ರವರ ನೇತೃತ್ವದಲ್ಲಿನ ಈ ಸಮೀತಿ ಕಾಯಿದೆಯ ಮಾದರಿಯನ್ನು ರಚಿಸಿ ಸಂಸತ್ತಿನ ಮುಂದೆ ಹಾಜರು ಪಡಿಸಿತ್ತು. ಆದರೆ ಸಂಸತ್ತು ನಿಷ್ಕ್ರಿಯವಾಗಿದ್ದರಿಂದ ಮಸೂದೆಯ ಚರ್ಚೆ ಆಗಲಿಲ್ಲ. ಶ್ರೀಯುತರು 2014 ರಲ್ಲಿ ಪ್ರಧಾನಮಂತ್ರಿಗಳಿಗೆ ಕಾಯಿದೆಯ ಚರ್ಚೆಗೆ ಪ್ರಾಶಸ್ತ್ಯ ನೀಡುವುದರ ಬಗ್ಗೆ ಪತ್ರವನ್ನೂ ಬರೆದಿದ್ದರೂ ಅದು ಕೈಗೂಡಲಿಲ್ಲ.

2017 ರಲ್ಲಿ ಭಾರತದ ಕಾನೂನು ಆಯೋಗ (Law Commission of India) ವಿಶ್ವಸಂಸ್ಥೆಯ ಚಿತ್ರಹಿಂಸೆ ವಿರುದ್ಧದ ಸಮಾವೇಶವನ್ನು ಅನುಷ್ಠಾನಗೊಳಿಸುವುದರ ಬಗ್ಗೆ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು, ಜೊತೆಗೆ ಚಿತ್ರಹಿಂಸೆ ತಡೆಗಟ್ಟುವ ಮಸೂದೆ 2017 ರ ಮಾದರಿಯನ್ನೂ ಸಲ್ಲಿಸಿತ್ತು. ಇದರ ಪ್ರಕಾರ ಚಿತ್ರಹಿಂಸೆಯನ್ನು ಎಸಗಿದವರಿಗೆ 10 ವರ್ಷಗಳ ಕಾಲ ಕಠಿಣ ಕಾರಾಗ್ರಹ ಶಿಕ್ಷೆಯನ್ನು ವಿಧಿಸುವಂತೆ ಪ್ರಸ್ತಾಪಿಸಲಾಗಿತ್ತು. ಆಯೋಗವು ಪ್ರತ್ಯೇಕವಾಗಿ ಪೊಲೀಸ್ ಠಾಣೆಯಲ್ಲಿನ ದೌರ್ಜನ್ಯದ ವಿರುದ್ಧ ಕಾನೂನು ರಚಿಸುವಂತೆ ಶಿಫಾರಸ್ಸು ಮಾಡಿತ್ತು. ಆದರೆ, ನಮ್ಮ ಘನ ಸರ್ಕಾರ ಇವೆಲ್ಲ ಶಿಫಾರಸ್ಸುಗಳನ್ನು ಬದಿಗೊತ್ತಿ ಮತ್ತೊಮ್ಮೆ ಬೇಜವಾಬ್ದಾರಿ ಧೋರಣೆಯನ್ನು ತೋರಿಸಿದೆ.

ಪೊಲೀಸ್ ಅಟ್ಟಹಾಸವನ್ನು ಕೆಲ ಮಟ್ಟಿಗಾದರೂ ಹತೋಟಿಗೆ ತರಲು ನ್ಯಾಯಾಂಗ ತನ್ನ ತೀರ್ಪುಗಳ ಮೂಲಕ ಗಣನೀಯ ಕೊಡುಗೆ ನೀಡಿದೆ ಅಂದರೆ ಅತಿಶಯೋಕ್ತಿ ಆಗಲಾರದು. 1978 ರಲ್ಲಿ ಸುನಿಲ್ ಬಾತ್ರಾ ವಿರುದ್ಧ ಡೆಲ್ಲಿ ಆಡಳಿತ ಮಂಡಳಿ ಪ್ರಕರಣದಲ್ಲಿ [(1978) 4 SCC 409] ಆರಕ್ಷಕ ಠಾಣೆಯಲ್ಲಿ ಉಂಟಾಗುವ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಆರಕ್ಷಕ ಠಾಣೆಯ ಆಡಳಿತ ವರ್ಗವು ಹೊಣೆಯಾಗಿರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ನೀಡಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ‘ಹ್ಯಾಂಡ್ಸ್ ಆಫ್ ಸಿದ್ಧಾಂತ’ (Hands-off prisons principle) ಅಂದರೆ ನ್ಯಾಯಾಧೀಶರು ಖೈದಿಗಳ ಹಕ್ಕುಗಳನ್ನು ನಿರ್ಧರಿಸುವ ಅಧಿಕಾರ ಹೊಂದಿರುವುದಿಲ್ಲ ಎನ್ನುವ ಸಿದ್ಧಾಂತವನ್ನು ತಿರಸ್ಕರಿಸಿತು ಹಾಗೂ ಒಬ್ಬ ಆರೋಪಿ ಆರಕ್ಷಕ ಠಾಣೆಯಲ್ಲಿದ್ದ ಮಾತ್ರಕ್ಕೆ ಆತನ ಮೂಲಭೂತ ಹಕ್ಕುಗಳು ಆತನಿಂದ ಪಲಾಯನ ಮಾಡುವುದಿಲ್ಲ ಎಂದಿತು.

1994 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಜೋಗಿಂದರ್ ಸಿಂಗ್ ವಿರುದ್ಧ ಉತ್ತರ ಪ್ರದೇಶ ರಾಜ್ಯ ಪ್ರಕರಣದಲ್ಲಿ [(1994) 4 SCC 260] ಕೇವಲ ಆರೋಪದ ಆಧಾರದಲ್ಲಿ ಅಗತ್ಯವಿಲ್ಲದೆ, ನಗಣ್ಯವಾದ ವಿಚಾರಗಳಲ್ಲಿ ಕಾನೂನು ಅಧಿಕಾರ ನೀಡಿದರೂ ವ್ಯಕ್ತಿಗಳನ್ನು ಬಂಧಿಸಬಾರದು ಎಂಬ ತೀರ್ಪಿತ್ತಿತು. ಮತ್ತೊಂದು ಹೆಗ್ಗುರುತಿನ ತೀರ್ಪೆಂದರೆ ಡಿ.ಕೆ.ಬಾಸು ವಿರುದ್ಧ ಪಶ್ಚಿಮ ಬಂಗಾಲ ರಾಜ್ಯ [(1997) 1 SCC 416]. ಒಂದು ಪತ್ರದ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯ ಸ್ವಯಂ ದಾವೆಯನ್ನು ನಡೆಸಿತ್ತು. ಈ ತೀರ್ಪಿನ ಪ್ರಕಾರ ಒಬ್ಬ ವ್ಯಕ್ತಿಯನ್ನು ಬಂಧಿಸುವ ಸಮಯದಲ್ಲಿ ಪೊಲೀಸರು ಬಂಧನ ಪತ್ರವನ್ನು ಹೊಂದಿರಬೇಕು, ಆರೋಪಿಯನ್ನು ಪ್ರತೀ 48 ಘಂಟೆಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂಬಂತೆ ಇನ್ನಿತರ 9 ನಿರ್ದೇಶನಗಳನ್ನು ನೀಡಿತ್ತು.

ಇನ್ನು ನೀಲಾಬಾತಿ ಬೆಹೆರಾ ವಿರುದ್ಧ ಒರಿಸ್ಸಾ ರಾಜ್ಯ ಪ್ರಕರಣದಲ್ಲಿ [(1993) 2 SCC 746] ಸರ್ವೋಚ್ಚ ನ್ಯಾಯಾಲಯವು ಖೈದಿಗಳು ಹಾಗೂ ಅಪರಾಧಿಗಳು ಜೈಲಿನಲ್ಲಿದ್ದಾಗ ಭಾರತೀಯ ಸಂವಿಧಾನದ ಅನುಚ್ಛೇದ 21 ರಲ್ಲಿ ಉಲ್ಲೇಖಿಸಿರುವ ಜೀವಿಸುವ ಹಕ್ಕಿನಿಂದ ವಂಚಿತರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅತಿ ಮುಖ್ಯವಾಗಿ ಈ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬಕ್ಕೆ 1.5 ಲಕ್ಷ ರೂಪಾಯಿಗಳ ಪರಿಹಾರವನ್ನು ಆದೇಶಿಸಿತ್ತು. ಮೊದಲ ಬಾರಿಗೆ ನ್ಯಾಯಾಲಯವು ಪೊಲೀಸ್ ಠಾಣೆಯಲ್ಲಿ ಉಂಟಾಗುವ ದೌರ್ಜನ್ಯಕ್ಕೆ ಸರ್ಕಾರವನ್ನು ಹೊಣೆಗಾರನನ್ನಾಗಿಸಿತ್ತು. ಸಹೇಲಿ ಪ್ರಕರಣದಲ್ಲಿಯೂ [(1990) 1 SCC 422) ಸಹ ನ್ಯಾಯಾಂಗವು ಹಣದ ರೂಪದಲ್ಲಿ ಪರಿಹಾರವನ್ನು ಆದೇಶಿಸಿತ್ತು.

2016 ನೇ ವರ್ಷದಲ್ಲಿ ಸಂಸತ್ತಿಗೆ ಆರಕ್ಷಕ ಠಾಣೆಯಲ್ಲಿನ ದೌರ್ಜನ್ಯ ನಿಗ್ರಹಿಸುವ ಕಾಯಿದೆ ಜಾರಿಗೊಳಿಸಲು ನಿರ್ದೇಶಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗಿತ್ತು. (W P ಸಂಖ್ಯೆ 738 /2016) ಆದರೆ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ರಂಜನ್ ಗೊಗೋಯ್ ರನ್ನೊಳಗೊಂಡ ಪೀಠ ದಾವೆಯನ್ನು ತಳ್ಳಿ ಹಾಕಿತ್ತು ಹಾಗೂ ನ್ಯಾಯಾಲಯವು ಸಂಸತ್ತಿನ ಕಾರ್ಯ ನಿರ್ವಹಿಸಲಾರದು ಎಂಬ ತೀರ್ಪು ನೀಡಿತ್ತು. ಪ್ರತಿಯೊಂದು ಅಂಗಗಳಿಗೂ ಅವುಗಳದೇ ಆದ ಕಾರ್ಯವ್ಯಾಪ್ತಿ ಇರುವುದರಿಂದ ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ನಿರ್ದೇಶಿಸುವುದಕ್ಕೆ ಹಿಂದೇಟು ಹಾಕಿತ್ತು. ಆದರೆ ಮರ್ಯಾದಾ ಹತ್ಯೆಗಳಂಥ ದೌರ್ಜನ್ಯದ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಅನುಚ್ಛೇದ 141 ರ ಅಡಿಯಲ್ಲಿ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದಂತೆ ಇಲ್ಲಿಯೂ ಕೆಲವು ಮಾರ್ಗದರ್ಶನಗಳನ್ನು ನೀಡಿದ್ದರೆ, ಸರಕಾರಗಳ ನಿಷ್ಕ್ರಿಯತೆಯನ್ನು ಕೊಡವಬಹುದಿತ್ತೇನೋ !

ಒಂದು ಕಾನೂನು ಬಂದರೆ ಈ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಭ್ರಮೆಯೂ ನಮಗಿರಬಾರದು. ಇದಕ್ಕೆ ಉತ್ತಮ ನಿದರ್ಶನವೆಂದರೆ ತಮಿಳುನಾಡು ರಾಜ್ಯದಲ್ಲಿನ ಅಪರಾಧ ನಿಯಮಗಳು 2019. ಅಧ್ಯಾಯ 2, ನಿಯಮ 6 ರ ಪ್ರಕಾರ ಯಾವ ಅಪರಾಧಿಯನ್ನೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೇ ಬಂಧಿಸುವಂತಿಲ್ಲ ಹಾಗೂ ನಿಯಮ 6 (6) ರ ಪ್ರಕಾರ ಮ್ಯಾಜಿಸ್ಟ್ರೇಟ್ ಸರಿಯಾದ ಕರಣಗಳಿಲ್ಲದೆ ಒಬ್ಬ ಆರೋಪಿಯ ಬಂಧನಕ್ಕೆ ಆದೇಶಿಸುವಂತಿಲ್ಲ. ಆದರೆ ತೂತುಕುಡಿಯ ಆರಕ್ಷಕ ಠಾಣೆಯಲ್ಲಿ ಭೀಕರವಾಗಿ ಮರಣವನ್ನಪ್ಪಿದ ಬೆನ್ನಿಕ್ಸ್ ಹಾಗೂ ಜಯರಾಜ್ರನ್ನ ಈ ಕಾನೂನು ರಕ್ಷಿಸಲಿಲ್ಲ.

ಇಂತಹ ಕಾನೂನು ಸಾಕಾರವಾಗಬೇಕಾದರೆ ಪೊಲೀಸ್ ಅಧಿಕಾರಿಗಳು ಮತ್ತು ಜನತೆ ಕೈಜೋಡಿಸಿ ಪ್ರಯತ್ನಗಳನ್ನು ಮಾಡಬೇಕು. ಪೊಲೀಸ್ ಹಿಂಸೆಯನ್ನು ಚಲನಚಿತ್ರ, ನಾಟಕ ಮತ್ತು ಮಾಧ್ಯಮಗಳಲ್ಲಿ ವೈಭವೀಕರಿಸದೆ, ಅಧಿಕಾರಿಗಳನ್ನು ಅವರ ಚಟುವಟಿಕೆಗಳಿಗೆ ಹೊಣೆಗಾರರನ್ನಾಗಿಸಬೇಕು. ಪೊಲೀಸ್ ಅಧಿಕಾರಿಗಳಿಗೆ ಮಾನವ ಹಕ್ಕು ಮೊದಲಾದ ಮೂಲಭಾತವಾದ ಮಾನವೀಯ ಕಾನೂನುಗಳ ತರಬೇತಿಯಾಗಬೇಕು. ಸಂವಿಧಾನದ ಆದರ್ಶಗಳ ಅರಿವು ಜನರಿಗೆ ಹಾಗೂ ಪೊಲೀಸರಿಗೆ ತಲುಪಬೇಕು. ಪೊಲೀಸ್ ಅಧಿಕಾರಿಗಳ ಸಲುವಾಗಿ ಮಾನಸಿಕ ಒತ್ತಡ ನಿರ್ವಹಣೆ ಮುಂತಾದ ಧನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಮನಶಾಸ್ತ್ರದ ಕುರಿತಾಗಿಯೂ ಅಧಿಕಾರಿಗಳಿಗೆ ಜ್ಞಾನ ಸಿಗಬೇಕು. ಠಾಣೆಯಲ್ಲಿ ಮರಣಗಳಾದಾಗ ಸರಕಾರಗಳಿಗೆ ದೊಡ್ಡ ಮೊತ್ತದ ಜುಲ್ಮಾನೆ ವಿಧಿಸುವಂತಾದರೆ, ಸರಕಾರಗಳೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಠಾಣೆಯಲ್ಲಿ ಮರಣಗಳು ಸಂಭವಿಸುತ್ತಿರುವುದೂ ಮತ್ತು ಅವುಗಳಿಗೆ ಕೊನೆ ಇಲ್ಲದಾಗಿರುವುದೂ ಕೇವಲ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಯಲ್ಲ. ಇದು ಸಮಾಜದ ನ್ಯಾಯಾಂಗ – ಶಾಸಕಾಂಗ ಮತ್ತು ಕಾರ್ಯಾಂಗದ ಸಂಕೀರ್ಣ ನ್ಯೂನ್ಯತೆಗಳ ಒಟ್ಟು ಫಲ. ಹಾಗಾಗಿ ಇದಕ್ಕೆ ಪರಿಹಾರವನ್ನೂ ಅಷ್ಟೇ ಜಾಣ್ಮೆಯಿಂದ ನಾವು ಕಂಡುಕೊಳ್ಳಬೇಕಿದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ವಾಸವಿ ಹೆಗಡೆ

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಭ್ಯಸಿಸಿದ ವಾಸವಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭತ್ತಗುತ್ತಿಗೆಯವರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಾಂವಿಧಾನಿಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ. ‘ನ್ಯಾಯನಿಷ್ಠ’ದ ಪುಟ್ಟ ಬಳಗದ ಸದಸ್ಯರಲ್ಲೊಬ್ಬರು ವಾಸವಿಯವರು.

Scroll to Top