ನೀರಿನಂತಹ ಬೆಂಕಿ ಬದುಕನ್ನು ಪಣಕ್ಕಿಟ್ಟಾಗ : ಆಸಿಡ್ ದಾಳಿಗಳು ಮತ್ತು ಕಾನೂನುಗಳು
2020 ರ ಆರಂಭದಲ್ಲಿ ದೀಪಿಕಾ ಪಡುಕೋಣೆ ನಟಿಸಿದ ಛಪಾಕ್ ಎಂಬ ಚಲನಚಿತ್ರ ಸಿನಿಮಾ ಪ್ರಿಯರ ಗಮನ ಸೆಳೆದಿತ್ತು. ದೀಪಿಕಾಳ ಅಭಿನಯಕ್ಕೆ ಪ್ರಶಂಸೆ ದೊರಕಿತು. ಚಲನಚಿತ್ರವನ್ನು ಬದಿಗಿಟ್ಟು, ಈ ಸಮಸ್ಯೆಯ ಆಳಕ್ಕಿಳಿದರೆ, ನಿಜವಾಗಿಯೂ ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿಯಂತಹ ಹೆಣ್ಣುಮಕ್ಕಳ ಜೀವನ ಹೇಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳುವುದೂ ಭಯಂಕರ. ಆಸಿಡ್ ದಾಳಿಗಳು ಮಾನವೀಯತೆಯ ಅಸ್ತಿತ್ವವನ್ನೇ ಪ್ರಶ್ನಿಸುವ ಕ್ರೂರ ಕೃತ್ಯಗಳು. ಅಸಾಮಾನ್ಯ ನೋವು ಮತ್ತು ವಿರೂಪವಾದ ಮುಖಗಳು ಮಹಿಳೆಯರ ಜೀವನಗಳನ್ನು ಮತ್ತು ಕನಸುಗಳನ್ನು ಛಿದ್ರ ಮಾಡುತ್ತವೆ. ಇಂತಹ ದಾಳಿಗಳು ಮತ್ತು ಅವುಗಳ ಸುತ್ತಲಿರುವ ಕಾನೂನು- ವ್ಯವಸ್ಥೆಯ ಕುರಿತು ಈ ಲೇಖನ.
ಆಸಿಡ್ ದಾಳಿಗಳು ಭಾರತದಲ್ಲಿ ಹೊಸದಲ್ಲ. ಈ ತರಹದ ಪ್ರಕರಣಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ಪ್ರಕಾರ 2011ರಲ್ಲಿ 83, 2012ರಲ್ಲಿ 85 ಹಾಗೂ 2013ರಲ್ಲಿ 66 ಆಸಿಡ್ ದಾಳಿಯ ಪ್ರಕರಣಗಳು ದಾಖಲಾಗಿವೆ. ಆದರೆ Acid Survivors Foundation India ದ ಪ್ರಕಾರ ಸರಿಸುಮಾರು 106 ಪ್ರಕರಣಗಳು 2012ರಲ್ಲಿ, 122 ಪ್ರಕರಣಗಳು 2013ರಲ್ಲಿ, ಹಾಗೂ 309 ಪ್ರಕರಣಗಳು 2014ರಲ್ಲಿ ದಾಖಲಾಗಿವೆ. ಈ ಅಂಕಿಸಂಖ್ಯೆಗಳನ್ನು ನೋಡಿದಾಗ ಹಲವಾರು ಪ್ರಕರಣಗಳು ದಾಖಲಾಗದೆ ಮರೆಮಾಚಿ ಹೋಗುತ್ತೇವೆ ಎಂಬುದು ಖಚಿತವಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶ ಪಶ್ಚಿಮಬಂಗಾಳ ಹಾಗೂ ನವದೆಹಲಿಯಲ್ಲಿ ಅತಿ ಹೆಚ್ಚು ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿವೆ. 2014ರಿಂದ 18ರಲ್ಲಿ ಬರೋಬ್ಬರಿ 1483 ಪ್ರಕರಣಗಳು ದಾಖಲಾಗಿವೆ.
ಆಸಿಡ್ ದಾಳಿಗೆ ಇಂತಹದೇ ನಿರ್ದಿಷ್ಟ ಕಾರಣಗಳಿರುತ್ತವೆ ಎಂದು ಗಟ್ಟಿಯಾಗಿ ಹೇಳಲಾಗುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರ ಮೇಲೆ ಈ ದೌರ್ಜನ್ಯವಾಗುವುದಾದರೂ ಈ ಅಮಾನವೀಯ ಕೃತ್ಯದ ಕಪಿಮುಷ್ಟಿಯಿಂದ ಮಕ್ಕಳೂ ಪುರುಷರೂ ಹೊರತಲ್ಲ. ಮದುವೆಗೆ ತಿರಸ್ಕರಿಸಿದಾಗ, ಅನೈತಿಕ ಸಂಬಂಧ ಮುರಿದು ಬಿದ್ದಾಗ, ವರದಕ್ಷಿಣೆ ತರಲು ನಿರಾಕರಿಸಿದಾಗ, ಕೌಟುಂಬಿಕ ಕಲಹಗಳು ಆದಾಗ ಅಥವಾ ಆಸ್ತಿಗಾಗಿ ಜಗಳವಾದಾಗ ಈ ರೀತಿಯ ದಾಳಿಗಳಾಗಬಹುದು. ಒಟ್ಟಿನಲ್ಲಿ ದ್ವೇಷ ಮತ್ತು ಅಸೂಯೆಗಳು ಇಂತಹ ದಾಳಿಗಳಿಗೆ ಮೂಲ ಕಾರಣ ಎಂದು ಹೇಳಬಹುದು. ಬಹುಶಃ ಇದಕ್ಕಾಗಿಯೇ ಆಸಿಡ್ ದಾಳಿಗಳು ಎಲ್ಲಿಯಾದರೂ, ಯಾವಾಗಲಾದರೂ, ಯಾರ ಮೇಲಾದರೂ, ಯಾರಿಂದಾದರೂ ಆಗಬಹುದು ಮತ್ತು ಇವುಗಳನ್ನು ಮುಂಗಡವಾಗಿ ತಡೆಯುವುದು ಅಷ್ಟು ಸುಲಭವಲ್ಲ.
ದಾಳಿಗೆ ತುತ್ತಾದ ಸಂತ್ರಸ್ತರ ನೋವು, ವೇದನೆಯನ್ನು ಬಣ್ಣಿಸಲಸದಳ. ಅವರು ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಲವಾರು ತೊಂದರೆಗಳನ್ನು ಎದುರಿಸುತ್ತಾರೆ. ಯಾವುದಾದರೂ ವ್ಯಕ್ತಿ ಆಸಿಡ್ ದಾಳಿಗೆ ತುತ್ತಾದಾಗ ಅವರ ದೇಹದ ಅಂಗಗಳಿಗೆ ಹಾನಿಯಾಗಬಹುದು. ಮುಖ ಸುಟ್ಟು ಹೋಗಬಹುದು, ಕಣ್ಣು ಕಳೆದುಕೊಳ್ಳಬಹುದು, ಕಿವಿಗಳು ಹಾಗೂ ಮೂಗು ಸುಟ್ಟು ಹೋಗಬಹುದು ಅಥವಾ ಮುಖ ವಿರೂಪವಾಗಬಹುದು. ಸಮಾಜದ ನಿರ್ದಿಷ್ಟ ಸೌಂದರ್ಯದ ಅಳತೆಗೋಲುಗಳು ಅವರ ಜೀವನವನ್ನು ಮತ್ತಷ್ಟು ಕಠಿಣವಾಗಿಸುತ್ತವೆ. ಈ ಸಮಾಜದಲ್ಲಿಯೇ ಬೆಳೆದುಬಂದ ಸಂತ್ರಸ್ತೆ ಮೊದಲು ತನ್ನನ್ನು ತಾನು ಸ್ವೀಕರಿಸಿಕೊಳ್ಳಲೇ ಕಷ್ಟಪಡಬಹುದು. ಆತ್ಮಸ್ಥೈರ್ಯವನ್ನು ಕಳೆದುಕೊಂಡು, ಜೀವನದ ಬಗ್ಗೆ ಜಿಗುಪ್ಸೆಗೊಂಡು, ಏಕಾಂಗಿಯಾದೆ ಎಂದು ನೊಂದುಕೊಳ್ಳಬಹುದು. ಕಾಲೇಜಿಗೆ ಹೋಗುವ ಹುಡುಗಿಯಾದರೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ದುಸ್ತರವಾಗಬಹದು, ಮದುವೆಯಾಗದ ಮಹಿಳೆಯಾಗಿದ್ದಾರೆ ವಿವಾಹಕ್ಕೆ ಧಕ್ಕೆ ಬರಬಹುದು, ಮದುವೆಯಾದ ಮಹಿಳೆಯಾಗಿದ್ದಾರೆ ವಿಚ್ಛೇದನವಾಗಬಹುದು, ಉದ್ಯೋಗಿಯಾಗಿದ್ದರೆ ಕೆಲಸವನ್ನ ಕಳೆದುಕೊಳ್ಳಬಹುದು, ಹೊಸ ಉದ್ಯೋಗಗಳು ಅವಳನ್ನು ಅರಿಸಿ ಬರಲು ಕಷ್ಟಸಾಧ್ಯವಾಗಬಹುದು. ಕ್ಷಣಾರ್ಧದಲ್ಲಿ ಆದ ಅವಘಡವು ಜೀವನವನ್ನೇ ಬದಲಾಯಿಸಬಹುದು. ಇನ್ನು ಆಸಿಡ್ ದಾಳಿಗೆ ತುತ್ತಾದವರ ವೈದ್ಯಕೀಯ ಖರ್ಚು ಸಹ ಬಹಳ ದುಬಾರಿಯಾಗಿದ್ದು, ಚಿಕಿತ್ಸೆಯು ಹಲವಾರು ವರ್ಷಗಳವರೆಗೆ ದೊರೆಯಬೇಕಾಗುತ್ತದೆ. ಹೀಗೆ ಸಂತ್ರಸ್ತರು ಹಲವಾರು ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನೆದುರಿಸಬೇಕಾಗುತ್ತದೆ.
ಆಸಿಡ್ ದಾಳಿಯಿಂದಾಗಿ ಆ ಸಂತ್ರಸ್ತ ಅಥವಾ ಸಂತ್ರಸ್ತೆಯರ ಮೂಲಭೂತ ಹಕ್ಕುಗಳು ಉಲ್ಲಂಘನೆ ಆಗುತ್ತವೆ. ಸಮಾನತೆಯ ಹಕ್ಕು, ಜೀವಿಸುವ ಹಕ್ಕು, ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಘನತೆಯಿಂದ ಬಾಳುವ ಹಕ್ಕು, ವಿವಾಹದ ಹಕ್ಕು, ಆರೋಗ್ಯದ ಹಕ್ಕು ಮುಂತಾದ ಹಕ್ಕುಗಳಿಂದ ಇವರು ವಂಚಿತರಾಗಬಹುದು. ಹೀಗಿದ್ದರೂ, ಭಾರತದಲ್ಲಿ ಆಸಿಡ್ ದಾಳಿಗಳನ್ನು ತಡೆಗಟ್ಟಲು ಯಾವುದೇ ನಿರ್ದಿಷ್ಟವಾದ ಕಾನೂನು ಇತ್ತೀಚಿನವರೆಗೆ ಇರಲಿಲ್ಲ. 226ನೇ ಭಾರತದ ಕಾನೂನು ಆಯೋಗ 2008ರಲ್ಲಿ ಆಸಿಡ್ ದಾಳಿಗಳನ್ನು ಪ್ರತ್ಯೇಕ ಅಪರಾಧವನ್ನಾಗಿಸಲು ಶಿಪಾರಸ್ಸು ಮಾಡಿತು. ನಂತರ ಅಪರಾಧಿಕ ನ್ಯಾಯವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು 2013 ರಲ್ಲಿ ರಚಿತವಾದ ನ್ಯಾ. ವರ್ಮಾ ಸಮಿತಿ ಯೂ ಕೂಡಾ ಅದೇ ಧಾಟಿಯಲ್ಲಿ ಶಿಫಾರಸ್ಸು ಮಾಡಿತು. ಈ ಶಿಪಾರಸ್ಸುಗಳನ್ನು ಗಣನೆಗೆ ತೆಗೆದುಕೊಂಡು ಅಪರಾಧಿಕ ತಿದ್ದುಪಡಿ ಕಾಯ್ದೆ, 2013 ಮೂಲಕ ಭಾರತೀಯ ದಂಡ ಸಂಹಿತೆಗೆ ಕಲಂ 326 A ಹಾಗೂ 326 B ಗಳನ್ನು ಸೇರ್ಪಡಿಸಲಾಯಿತು. ಈ ಎರಡು ಕಲಂಗಳ ಪ್ರಕಾರ ಆಸಿಡ್ ಎರಚುವುದು ಮತ್ತು ಎರಚಲು ಪ್ರಯತ್ನಿಸುವುದೂ ಶಿಕ್ಷಾರ್ಹ ಅಪರಾಧಗಳಾಗಿವೆ. ಆಸಿಡ್ ಎರಚಿದರೆ ಕಡಿಮೆಯೆಂದರೆ ಹತ್ತು ವರ್ಷ ಸೆರೆವಾಸ ಮತ್ತು ಹೆಚ್ಚೆಂದರೆ ಜೀವಾವಧಿ ಶಿಕ್ಷೆ ವಿಧಿಸಬಹುದು. ಎರಚಲು ಪ್ರಯತ್ನಿಸಿದರೆ ಏಳು ವರ್ಷದವರೆಗೆ ಸೆರೆವಾಸದ ಶಿಕ್ಷೆಯಾಗಬಹುದು.
2016ರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಆಸಿಡ್ ದಾಳಿಗೆ ತುತ್ತಾದವರ ಸಹಾಯಕ್ಕಾಗಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದರ ಉದ್ದೇಶಗಳು ಆಸಿಡ್ ದಾಳಿಗೆ ಒಳಗಾದವರಿಗೆ ಪರಿಹಾರ ಧನವನ್ನು ತಲುಪಿಸಲು ಮತ್ತು ವೈದ್ಯಕೀಯ ವೆಚ್ಚ ಭರಿಸಲು ಅಗತ್ಯವಾದ ಕಾನೂನು ಸಹಾಯ ನೀಡುವುದು. ಅಂತಹ ಮಹಿಳೆಯರು ನಿರ್ಭರವಾಗಿ ಜೀವನವನ್ನು ಸಾಗಿಸಲು ಕಾನೂನಿಗೆ ಸಂಬಂಧಪಟ್ಟ ಸಹಾಯಗಳನ್ನು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಅಲ್ಲದೆ, ಕೇಂದ್ರ ಸರ್ಕಾರ 2017ರಲ್ಲಿ ಆಸಿಡ್ ದಾಳಿ ತಡೆಗಟ್ಟುವಿಕೆ ಹಾಗೂ ಆಸಿಡ್ ದಾಳಿಗೆ ತುತ್ತಾದವರ ಪುನಶ್ಚೇತನಕ್ಕಾಗಿ ಮಸೂದೆಯೊಂದನ್ನೂ ತಂದಿದೆ.
ಆಸಿಡ್ ದಾಳಿಗೆ ತುತ್ತಾದವರಿಗೆ ತುತ್ತಾದವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗದ ಪಾತ್ರ ಬಹುಮುಖ್ಯವಾಗಿದೆ ಎಂದರೆ ತಪ್ಪಾಗಲಾರದು. ಅಪರಾಧಿಗೆ ಶಿಕ್ಷೆ ಕೊಡುವುದೊಂದನ್ನೇ ಗುರಿಯಾಗಿಸದೆ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಿ ಅವರಿಗೆ ನ್ಯಾಯ ಕೊಡಿಸುವತ್ತವೂ ನ್ಯಾಯಾಂಗದ ಪಾತ್ರ ದೊಡ್ಡದು.
ಜಾಲಹಳ್ಳಿ ಪೊಲೀಸ್ ಸ್ಟೇಷನ್ ವಿರುದ್ಧ ಜೋಸೆಫ್ ರೋಡ್ರಿಗಸ್ , 2006 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ಈ ಪ್ರಕರಣದ ತೀರ್ಪು ಪ್ರಪ್ರಥಮ ಬಾರಿಗೆ ಆಸಿಡ್ ದಾಳಿಗೆ ತುತ್ತಾದವರಿಗೆ ಅತಿ ಹೆಚ್ಚು ಪರಿಹಾರ ಒದಗಿಸಿದ್ದಾಗಿದೆ. ಈ ಪ್ರಕರಣದಲ್ಲಿ ಆಪಾದಿತರನ್ನು ಐಪಿಸಿ ಕಲಂ 307 ರ ಪ್ರಕಾರ ಅಪರಾಧಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಅದಷ್ಟೇ ಅಲ್ಲದ ಸಂತ್ರಸ್ತೆಗೆ ಸುಮಾರು 5 ಲಕ್ಷಗಳು ಪರಿಹಾರವನ್ನು ಒದಗಿಸಲಾಯಿತು.
2006ರಲ್ಲಿ ದಾಖಲಾದ ರಿಟ್ ಸಂಖ್ಯೆ 129, ಲಕ್ಷ್ಮಿ ವಿರುದ್ಧ ಭಾರತ ಒಕ್ಕೂಟ, ಈ ಪ್ರಕರಣವು ಇಡೀ ದೇಶದ ಗಮನ ಸೆಳೆಯಿತು. ಲಕ್ಷ್ಮಿ ಎಂಬ ನವ ದೆಹಲಿ ಮೂಲದ 22 ವರ್ಷದ ಆಸಿಡ್ ದಾಳಿ ಸಂತ್ರಸ್ತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ ಅದಾಗಿತ್ತು. ಲಕ್ಷ್ಮಿ ಬಡತನದ ಕಾರಣದಿಂದ ಇತರರ ಸಹಾಯದಿಂದಾಗಿ ಮಾತ್ರ 2.5 ಲಕ್ಷದ ವೈದ್ಯಕೀಯ ವೆಚ್ಚವನ್ನು ಭರಿಸಿದಳು. 4 ಪ್ಲಾಸ್ಟಿಕ್ ಸರ್ಜರಿಗಳ ನಂತರವೂ ಸಹ ಲಕ್ಷ್ಮಿಯ ಮುಖ ಮೊದಲಿನಂತಿಲ್ಲ. ಆದ್ದರಿಂದ ತನ್ನಂತಹ ಎಲ್ಲ ಸಂತ್ರಸ್ತರ ಒಳಿತಿಗಾಗಿ ಲಕ್ಷ್ಮಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಆಸಿಡ್ ವ್ಯಾಪಾರಕ್ಕೆ ಕಡಿವಾಣ ಹಾಕಿತು. ವ್ಯಾಪಾರಿಗಳು ಆಸಿಡ್ ಕೊಳ್ಳುವವರ ಗುರುತಿನ ಚೀಟಿಯನ್ನು ನೋಡಿ, 18 ವರ್ಷ ಮೇಲ್ಪಟ್ಟ ವ್ಯಕ್ತಿಯೊಂದಿಗೆ ಮಾತ್ರವೇ ವ್ಯವಹಾರ ಮಾಡಬೇಕು, ಆಸಿಡ್ ಕೊಳ್ಳುವುದಕ್ಕೆ ಕಾರಣವನ್ನು ಕೇಳಬೇಕು ಎಂಬಂತಹ ನಿಬಂಧನೆಗಳನ್ನು ಹೇರಿತು. ಹಾಗೆಯೇ ಎಲ್ಲಾ ರಾಜ್ಯ ಸರ್ಕಾರಗಳು ದಾಳಿಗೆ ತುತ್ತಾದವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 3 ಲಕ್ಷ ಧನಸಹಾಯವನ್ನು ಮಾಡಬೇಕು ಮತ್ತು ಒಂದು ಲಕ್ಷ ರೂಪಾಯಿಗಳನ್ನು ಘಟನೆ ನಡೆದ 15 ದಿನಗಳ ಒಳಗಾಗಿ ಹಾಗೂ ಉಳಿದ ಎರಡು ಲಕ್ಷ ರುಪಾಯಿಗಳನ್ನು ಘಟನೆಯ ನಡೆದ ಎರಡು ತಿಂಗಳುಗಳ ಒಳಗಾಗಿ ನೀಡಬೇಕೆಂದು ನಿರ್ದೇಶಿಸಿದೆ.
2013ರಲ್ಲಿ ದಾಖಲಿಸಿದ ರಿಟ್ ಅರ್ಜಿ ಸಂಖ್ಯೆ 867, ಪರಿವರ್ತನಾ ಕೇಂದ್ರ ವಿರುದ್ಧ ಭಾರತದ ಒಕ್ಕೂಟ, ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅಧಿಕೃತ ಅನುಮತಿಯಿಲ್ಲದೆ ಆಸಿಡ್ ಮಾರುವ, ಹಂಚುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆಸಿಡ್ ಹಂಚಿಕೆಯಲ್ಲಿ ಏರುಪೇರಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಯಾಗುವುದು ಎಂದು ಸ್ಪಷ್ಟ ಪಡಿಸಿತು. ಖಾಸಗಿ ಆಸ್ಪತ್ರೆಗಳು ಆಸಿಡ್ ದಾಳಿಗೆ ತುತ್ತಾದ ವ್ಯಕ್ತಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸಬಾರದು ಹಾಗೂ ಸರಿಯಾದ ಚಿಕಿತ್ಸೆಯನ್ನು ನೀಡಬೇಕೆಂದು ನಿರ್ದೇಶಿಸಿತು.
ಮೇಲಿನ ಎಲ್ಲ ತೀರ್ಪುಗಳನ್ನು ಗಮನಿಸಿದಾಗ ಸರ್ವೋಚ್ಛ ನ್ಯಾಯಾಲಯವು ಆಸಿಡ್ ದಾಳಿಗೆ ತುತ್ತಾದವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸ್ವಲ್ಪ ಮಟ್ಟಿಗಾದರೂ ಸಫಲವಾಗಿದೆ ಎಂದು ಹೇಳಬಹುದು. ಆದರೂ ದಾಳಿಯ ನಂತರದ ಸರಕಾರದ ಸಹಾಯಗಳು ಗಾಯಕ್ಕೆ ಮುಲಾಮು ಹಚ್ಚುವ ಕೆಲಸವೇ ಹೊರತು ಗಾಯವಾಗದೆ ನೋಡಿಕೊಳ್ಳುವುದಲ್ಲ. ಹಾಗೆ ಈ ದಾಳಿಗಳನ್ನು ತಡೆಗಟ್ಟಲು ನಮ್ಮ ವಿಚಾರಧಾರೆಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕೊಂಡು ಬಂದಲ್ಲಿ ಮಾತ್ರ ಸಾಧ್ಯ. ಹುಡುಗಿಯರ ಮುಖವನ್ನು ವಿರೂಪ ಮಾಡುವ ಕೃತ್ಯಗಳ ಹಿಂದೆ, ಬಾಹ್ಯ ಸೌಂದರ್ಯಕ್ಕೆ ಒತ್ತು ಕೊಡುವ ಸಮಾಜದ ಪಾಲು ಇದೆ. ಹಗೆಯನ್ನು ನೋವುಂಟು ಮಾಡುವ ಕೆಲಸಗಳ ಹಿಂದೆ, ನೈತಿಕ ಶಿಕ್ಷಣ ಸರಿಯಾಗಿ ಕೊಡದ ನಮ್ಮ ಪರಿಸರದ ಕೊಡುಗೆ ಇದೆ. ಈ ಹೀನ ಕೃತ್ಯಗಳ ಹಿಂದೆ ಬಲಹೀನರನ್ನು ದಮನಿಸುವ ಮತ್ತು ಶಿಕ್ಷಿಸುವ ಕ್ರೂರ ಮನೋಸ್ಥಿತಿ ಇದೆ. ಇವುಗಳನ್ನು ಕಿತ್ತೊಗೆಯುವುದು ಕಾನೂನಿನಿಂದ ಮಾತ್ರ ಆಗುವ ಕೆಲಸವಲ್ಲ. ನಾವು – ನೀವು ಬದಲಾಗಬೇಕು. ಸೌಂದರ್ಯ, ಹೆಣ್ತನ ಮತ್ತು ಯಶಸ್ಸಿನ ಕುರಿತಾದ ನಮ್ಮ ಆಲೋಚನೆಗಳ ದಿಶೆ ಬದಲಾಗಬೇಕು.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ

ಸ್ಮಿತಾ ಅಂಗಡಿ
ಸ್ಮಿತಾ ಅಂಗಡಿ ಅವರು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಮತ್ತು ದೆಹಲಿಯ ಭಾರತೀಯ ಕಾನೂನು ಮತ್ತು ಮ್ಯಾನೇಜ್ಮೆಂಟ್ ಅಕಾಡೆಮಿಯ ಆನ್ಲೈನ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಮಿತಾ ಅವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ, ಕಾನೂನಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪಿಎಚ್ ಡಿ ಅಧ್ಯಯನವನ್ನು ನಡೆಸಿದ್ದಾರೆ. ‘ನ್ಯಾಯನಿಷ್ಠ’ದ ಕನಸುಗಳನ್ನು ಹಂಚಿಕೊಂಡವರಲ್ಲಿ ಸ್ಮಿತಾ ಕೂಡಾ ಒಬ್ಬರು.