ದೌರ್ಜನ್ಯಕ್ಕೊಳಗಾಗುವರೆಲ್ಲ ಅಮಾಯಕರೇ?
‘ನ್ಯಾಯನಿಷ್ಠ’ದಲ್ಲಿ ಪ್ರಕಟವಾದ ಆರಕ್ಷಕ ಠಾಣೆಗಳಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ಎತ್ತಿರುವ ಧ್ವನಿ ಸಕಾಲಿಕವಾಗಿದೆ. ಸಮರ್ಥನೀಯವೂ ಆಗಿದೆ. ತಾವು ಎತ್ತಿರುವ ಧ್ವನಿಗೆ ಬಲ ಒದಗಿಸಲು ಲೇಖಕರು ೨೦೦೬ ನೆಯ ಇಸವಿಯಿಂದ ೨೦೨೬ರವರೆಗಿನ ಅವಧಿಯಲ್ಲಿ ಸರಿಸುಮಾರು ೧೦೨೨ ಠಾಣಾ ಸಾವುಗಳು ಸಂಭವಿಸಿವೆ ಎಂಬ ರಾಷ್ಟ್ರೀಯ ಅಪರಾಧ ಬ್ಯೂರೋ ಅಂಕಿಅಂಶಗಳನ್ನು ಉಲ್ಲೇಖಿಸಿದ್ದಾರೆ. ‘ದಿ ಹಿಂದೂ’ ಪತ್ರಿಕೆಯು “ಕೇವಲ ೨೦೧೯ನೆಯ ಇಸವಿಯೊಂದರಲ್ಲಿಯೇ ೧೭೩೦ ಸಾವುಗಳು ವರದಿಯಾಗಿವೆ. ಅಂದರೆ ದಿನವೊಂದಕ್ಕೆ ೫ ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಪ್ರಕಟಿಸಿದ್ದನ್ನೂ ಅವರಿಲ್ಲಿ ಉಲ್ಲೇಖಿಸಿದ್ದಾರೆ ಠಾಣೆಗಳಲ್ಲಿ ನಡೆಯುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವ್ಯವಸ್ಥೆಯ ವೈಫಲ್ಯಕ್ಕೆ ಈ ಅಂಕಿಅಂಶಗಳು ಕೈಗನ್ನಡಿ ಹಿಡಿಯುವಂತಿವೆ ಎಂದು ಲೇಖಕರು ಪ್ರತಿಪಾದಿಸಿದ್ದಾರೆ. ಅವರ ಪ್ರತಿಪಾದನೆಯ ಹಿಂದಿರುವ ಕಳಕಳಿ ಅರ್ಥವಾಗುವಂತಹುದೇ ಆಗಿದೆ. ಆದರೆ ಈ ವಿಷಯಕ್ಕೆ ಹಲವು ಆಯಾಮಗಳಿವೆ. ಅವನ್ನು ಪರಿಶೀಲಿಸದಿದ್ದರೆ ಪರಿಪೂರ್ಣ ಪರಿಹಾರ ಸಿಗಲಾರದು ಎಂಬುದು ಸಹ ಅಷ್ಟೇ ಸತ್ಯ.
ಹಾಸನದ ಖ್ಯಾತ ವಕೀಲರೂ, ರಾಜ್ಯದ ಕಾನೂನು ಮಂತ್ರಿಗಳೂ ಆಗಿದ್ದ ದಿವಂಗತ ಹಾರ್ನಹಳ್ಳಿ ರಾಮಸ್ವಾಮಿಯವರು ರಾಜ್ಯ ಆಡಳಿತದ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಶಿರಸಿಗೆ ಒಮ್ಮೆ ಭೇಟಿ ನೀಡಿದ್ದರು. ಅವರು ಪತ್ರಿಕಾ ಗೋಷ್ಠಿಯಲ್ಲಿ ಮಂಡಿಸಿದ ವಿಚಾರಗಳು ಇಲ್ಲಿ ಸ್ಮರಣಾರ್ಹ. ಈಗ ಭಾರತದಲ್ಲಿ ಆಂಗ್ಲೋ ಸ್ಯಾಕ್ಸನ್ ನ್ಯಾಯನಿರ್ಣಯ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದರ ಪ್ರಕಾರ ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ, ಆದರೆ ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಕೂಡದು. ಈ ತತ್ವದ ಅನುಸರಣೆಯೇ ಇಂದು ಕಾನೂನಿನ ಆಡಳಿತ ಸಡಿಲಗೊಳ್ಳಲು ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಹಾಗಾದರೆ ಇದಕ್ಕೆ ಪರ್ಯಾಯವೇನು? ಈ ಪ್ರಶ್ನೆಗೆ ಅವರು ಉತ್ತರಿಸಿದ್ದು “ಭಾರತೀಯ ಪರಂಪರೆಯಲ್ಲಿ ಬಂದ ನ್ಯಾಯದಾನ ಪದ್ಧತಿ” ಎಂಬುದಾಗಿ. ಅದನ್ನವರು ವಿವರಿಸಿದ್ದು ಹೀಗೆ: ಮಹಾಭಾರತದಲ್ಲಿ ವಿದುರನೀತಿ ಎಂದೇ ಪ್ರಸಿದ್ಧವಾಗಿರುವ ಆಡಳಿತ ಸೂತ್ರಗಳ ವಿಷಯ ವಿವೇಚನೆಯಿದೆ.ಇದರ ಜೊತೆಗೆ ಮಹಾಭಾರತ ಯುದ್ಧದ ಬಳಿಕ ರಾಜಪಟ್ಟವೇರಲು ತಯಾರಾಗಿದ್ದ ಯುಧಿಷ್ಠಿರನಿಗೆ, ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹನು ಉಪದೇಶಿಸಿದ “ರಾಜಧರ್ಮ” ಎಂಬುದು ಸಹ ಅಷ್ಟೇ ಮಹತ್ವದ್ದು.
ಆ ಪ್ರಕಾರ, ಒಂದು ಕುಟುಂಬದ ಹಿತಕ್ಕಾಗಿ ಒಬ್ಬ (ಆ ಕುಟುಂಬದ) ವ್ಯಕ್ತಿಯೊಬ್ಬ ಬಲಿಯಾಗುವುದು ಅಗತ್ಯವಾದರೆ, ಆಗಲಿ. ಒಂದು ಗ್ರಾಮದ ಹಿತಕ್ಕೋಸ್ಕರ ಒಂದು ಕುಟುಂಬದ ತ್ಯಾಗದ ಸಂದರ್ಭ ಬಂದರೆ ಅದನ್ನು ಮಾಡಬೇಕು. ಇಡೀ ದೇಶದ ಹಿತಕ್ಕಾಗಿ ಒಂದು ಗ್ರಾಮವನ್ನೇ ಬಲಿ ಕೊಡುವುದು ಅನಿವಾರ್ಯವಾದರೆ ಆಗ ಹಿಂದೆ-ಮುಂದೆ ನೋಡಬಾರದು. ಇಲ್ಲಿ ಬಲಿಯಾಗಬೇಕಾದ ವ್ಯಕ್ತಿ, ಕುಟುಂಬ ಅಥವಾ ಗ್ರಾಮ ಅಪರಾಧಿಯೇ ಯಾ ನಿರಪರಾಧಿಯೇ ಎಂಬ ಪ್ರಶ್ನೆ ಅಪ್ರಸ್ತುತ. ಬಹುಜನ ಹಿತಾಯ, ಬಹುಜನ ಸುಖಾಯ ಎಂಬ ತತ್ವದ ಸಾಕ್ಷಾತ್ಕಾರ ಈ ಪರಿಕಲ್ಪನೆ.
ಈ ತತ್ವವನ್ನು ಆರಕ್ಷಕ ಠಾಣೆಯ ಸಂದರ್ಭಕ್ಕೆ ಅನ್ವಯಿಸಿದರೆ, ಅಪರಾಧಿಗಳ ಬಾಯಿ ಬಿಡಿಸುವ ಮತ್ತು ಆ ಮೂಲಕ ಸತ್ಯ ಕಂಡುಹಿಡಿಯುವ ಅನಿವಾರ್ಯತೆಯಲ್ಲಿ ಕೆಲವು ಅಮಾಯಕರಿಗೂ ಕೆಲವು ಪ್ರಮಾಣದ ತೊಂದರೆಗಳುಂಟಾಗಬಹುದು. ಆರಕ್ಷಕರು ಉದ್ದೇಶಪೂರ್ವಕವಾಗಿ ಯಾರಿಗಾದರೂ ಹಿಂಸೆ ನೀಡಿದರೆ ಅದು ಕಡುಖಂಡನಾರ್ಹ; ಅಷ್ಟೇ ಅಲ್ಲ, ಅದು ಶಿಕ್ಷಾರ್ಹ ಅಪರಾಧ ಕೂಡ. ಅದನ್ನು ಯಾರೂ ಸಮರ್ಥಿಸಲಾರರು.
ಆರಕ್ಷಕ ಠಾಣೆಗಳಲ್ಲಿ ಹಿಂಸೆಗೊಳಗಾಗುವ ವ್ಯಕ್ತಿಗಳಲ್ಲಿ ಎಷ್ಟು ಜನ ನಿಜವಾವಾಗಿಯೂ ಅಮಾಯಕರು ಮತ್ತು ಎಷ್ಟು ಜನರು ಅಸಲೀ ಅಪರಾಧಿಗಳು ಎಂಬುದು ಬಿಡಿಸಲಾಗದ ಕಗ್ಗಂಟು. ಇದನ್ನು ಬಿಡಿಸುವುದಾದರೂ ಹೇಗೆ? ಹೀಗಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಬಾಯಿ ಬಿಡಿಸುವುದು ಪ್ರಾಚೀನ ಕಾಲದಿಂದಲೂ ನಡೆದುಬಂದ ಪದ್ಧತಿ. (ಲಂಚದ ಅಥವಾ ಇನ್ನಾವುದೇ ಪ್ರಭಾವಕ್ಕೆ ಆರಕ್ಷಕರು ಒಳಗಾಗಿ ಠಾಣೆಗಳಲ್ಲಿ ಹಿಂಸಾಚಾರಕ್ಕೆಳೆಸುವುದನ್ನು ಯಾವ ಕಾರಣಕ್ಕಾಗಿಯೂ ಸಮರ್ಥಿಸಲಾಗದು. ಅಂಥ ಆರಕ್ಷಕರು ಸ್ವತಃ ಶಿಕ್ಷಾರ್ಹ ಅಪರಾಧಿಗಳು) ಆಪಾದಿತರ ಬಾಯಿಯಿಂದ ಸತ್ಯ ಹೊರಡಿಸುವ, ಹಿಂಸಾರಹಿತ ಪರಿಪೂರ್ಣ ಪದ್ಧತಿ ಆವಿಷ್ಕಾರವಾಗಿದೆಯೇ? ಈ ಪ್ರಶ್ನೆಗೆ ಖಚಿತ ಉತ್ತರ ಕಠಿಣ. ಮಂಪರು ಪರೀಕ್ಷೆ ಅಥವಾ ಬ್ರೇನ್ ಮ್ಯಾಪಿಂಗ್ ಗೆ ಒಳಗಾಗದಿರುವ ಹಕ್ಕನ್ನು ಕಾನೂನು ಆಪಾದಿತರಿಗೆ ಒದಗಿಸಿದೆ. ಹಾಗಾದರೆ ಪರಿಹಾರ? ಉತ್ತರ ಗೊತ್ತಿಲ್ಲ
ಅಪರಾಧಿಗಳನ್ನು ದಂಡಿಸುವ ಕುರಿತು ಆರಕ್ಷಕರ ಮೇಲೆ ಇರುವ ಸಾಮಾಜಿಕ ಒತ್ತಡಗಳನ್ನು ನಾವು ಗಮನಿಸಲೇಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರವೃತ್ತಿಯ ಕುರಿತು ಬಹಳಷ್ಟು ಸಲ ಆರಕ್ಷಕರನ್ನೇ ನೇರ ಹೊಣೆ ಮಾಡುವ ಪರಿಪಾಠ ಸಮಾಜದಲ್ಲಿದೆ. ಇದು ಆರಕ್ಷಕರ ಮೇಲೆ ದಿನದ ಪ್ರತಿನಿಮಿಶ ಇರುವ ಒತ್ತಡ. ಸಾಮಾಜಿಕ ಜಾಲತಾಣಗಳು, ವಿದ್ಯುನ್ಮಾನ ಯಾ ಮುದ್ರಣ ಮಾಧ್ಯಮಗಳು, ದೂರದೃಶ್ಯವಾಹಿನಿಗಳ ಧಾರಾವಾಹಿಗಳು ಮತ್ತು ಚಲನಚಿತ್ರಗಳು ಆರಕ್ಷಕರನ್ನು ಲೇವಡಿ ಮಾಡುವ, ಹೀಯಾಳಿಸುವ, ಖಂಡಿಸುವ ಚಟವು ಆರಕ್ಷಕ ಇಲಾಖೆಯ ಮೇಲೆ ಅದೆಷ್ಟು ನಕಾರಾತ್ಮಕ ಒತ್ತಡ ನಿರ್ಮಿಸುತ್ತದೆ ಎನ್ನುವುದು ಒಂದು ದೊಡ್ಡ ಚರ್ಚಾಸ್ಪದ ವಿಷಯ. ಇಂತಹ ಒತ್ತಡಗಳೆಲ್ಲ ಹಿಂಸಾಮಾರ್ಗ ಪ್ರಯೋಗಕ್ಕೆ ಮುಂದಾಗುವ ಆತುರ ನಿರ್ಮಿಸುತ್ತವೆ. ಹಿಂಸಾರಹಿತ ಅಥವಾ ಮನಃಶಾಸ್ತ್ರೀಯ ಮಾರ್ಗಗಳ ಹುಡುಕಾಟಕ್ಕೆ ಅಲ್ಲಿ ವ್ಯವಧಾನ ಕಡಿಮೆ. ಇಲ್ಲಿ ಇನ್ನೂ ಒಂದು ಅಂಶ ಗಮನಾರ್ಹ. ಹಲವಾರು ಜನರು ಇಂಗ್ಲೀಶಿನಲ್ಲಿ hardcore ಎನ್ನಬಹುದಾದಷ್ಟು ಕಠಿಣ ಮನೋದೈಹಿಕ ಸಾಮರ್ಥ್ಯ ಹೊಂದಿರುತ್ತಾರೆ. ಅಂಥವರು ಮೃದು ಮಾತುಗಳಿಗೆ ಜಗ್ಗುವವರಲ್ಲ, ಬಗ್ಗುವವರಲ್ಲ. ಅಂಥವರ ಬಾಯಿ ಬಿಡಿಸಲು ಅತ್ಯಂತ ಕಠೋರವಾದ ಹಿಂಸಾಮಾರ್ಗ ಅನಿವಾರ್ಯ. ಕಠಿಣ ಸೈನಿಕ ತರಬೇತಿ ಹೊಂದಿದ ಭಯೋತ್ಪಾದಕರ ಮಟ್ಟಿಗಂತೂ ಇದು ಅತ್ಯಗತ್ಯ. ಅಷ್ಟು ಕಠಿಣವಾದ ಹಿಂಸಾಮಾರ್ಗ ಅನುಸರಿಸಿದಾಗ ಸಾವು ಸಂಭವಿಸುವುದೂ ಉಂಟು. ಆದರೆ ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಈ ಅನಿವಾರ್ಯತೆಯನ್ನು ತಪ್ಪಿಸುವುದಾದರೂ ಹೇಗೆ? ಸಾಮಾನ್ಯ ಕಳ್ಳರಿಗೇ ‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು’ ಎಂಬ ಗಾದೆಯು ಅನ್ವಯವಾಗುವಾಗ hardcore ಖಡ್ಡರ ಜೊತೆ ಆರಕ್ಷಕರು ಇನ್ನೆಷ್ಟು ಕಠೋರವಾಗಿ ವರ್ತಿಸಬೇಕಾದೀತು!!
ಇಂದು ಜನಮಾನಸದಲ್ಲಿ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲ. ಜನಸಾಮಾನ್ಯರ ಮಟ್ಟದಲ್ಲಿ ಕಾನೂನಿನ ಪಾಲನೆ ಆಗಬೇಕು ಎಂದಾದರೆ ಕೆಲ ಮಟ್ಟಿಗಾದರೂ ಭಯ ಬೇಕೇಬೇಕು. ಅದರಲ್ಲೂ ಸುಶಿಕ್ಷಿತ ಜನರಲ್ಲಿ ಕಾನೂನಿನ ಭಯ ಇಲ್ಲದಿದ್ದರೆ ಅದರ ಪಾಲನೆ ಬಹು ಕಡಿಮೆ. ಒಮ್ಮುಖ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿಕೊಂಡು ಬರುವ ವಿದ್ಯಾವಂತರು ಖಂಡಿತವಾಗಿ ಅಮಾಯಕರಲ್ಲ. ದುಡ್ಡಿರುವ ಜನ ದಂಡ ಕಟ್ಟಿ ಮತ್ತೆ ಅದೇ ತಪ್ಪು ಮಾಡಿದ ನಿದರ್ಶನಗಳೂ ಇವೆಯಲ್ಲವೇ! ಅಂತಹವರು ಹೆದರುವುದು ದೈಹಿಕ ದಂಡನೆಗಳಿಗೆ ಮಾತ್ರ. ಕಾನೂನಿನ ಭಯ ಸಹಜವಾಗಿ ಮನುಷ್ಯನ ಅಪರಾಧ ಪ್ರವೃತ್ತಿಯನ್ನು ನಿಯಂತ್ರಿಸುತ್ತದೆ. ಕಾನೂನಿನ ಭಯವೆಂದರೆ ದೈಹಿಕ ದಂಡನೆ ಇಲ್ಲವೇ ಕಠೋರ ಶಿಕ್ಷೆ.
ಮತ್ತೆ ಹಾರ್ನಹಳ್ಳಿ ರಾಮಸ್ವಾಮಿ ಅವರ ಪ್ರತಿಪಾದನೆಯತ್ತ ಹೊರಳೋಣ. ಆಂಗ್ಲೋ ಸ್ಯಾಕ್ಸನ್ ಪದ್ಧತಿಯಲ್ಲಿ ಅಪರಾಧವನ್ನು ಸಾಬೀತು ಮಾಡುವ ಹೊಣೆಗಾರಿಕೆ ಆರಕ್ಷಕರ ಮೇಲಿರುತ್ತದೆ. ಇದು ಕಾನೂನಿನ ಕುಣಿಕೆಯಿಂದ ಪಾರಾಗಲು ಅಪರಾಧಿಗಳಿಗಿರುವ ಬಹುದೊಡ್ಡ ಅವಕಾಶ. ಆದರೆ ಭಾರತೀಯ ನ್ಯಾಯನಿರ್ಣಯ ಪದ್ಧತಿಯಲ್ಲಿ ತಾನು ನಿರಪರಾಧಿ ಎಂದು ನಿರೂಪಿಸಿಕೊಳ್ಳಬೇಕಾದ ಹೊಣೆಗಾರಿಕೆ ಆಪಾದಿತನದ್ದೇ ಆಗಿರುತ್ತದೆ. ಇದು ಕಾನೂನಿನ ಭಯ ನಿರ್ಮಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತದೆ.
ಈ ಎಲ್ಲ ಅಂಶಗಳನ್ನು ಪರಿಶೀಲಿಸುವುದು ಅತ್ಯಗತ್ಯ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ
ಉಮಾಶಂಕರ ಹಿರೇಮಠ
ಸಚ್ಚಿದಾನಂದ ಹೆಗಡೆ
ಸಚ್ಚಿದಾನಂದ ಹೆಗಡೆಯವರು ಅನುಭವಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ. ‘ಧ್ಯೇಯನಿಷ್ಠ ಪತ್ರಕರ್ತ’ ಎಂಬ ಉತ್ತರ ಕನ್ನಡ ಜಿಲ್ಲೆಯ ಹೆಸರುವಾಸಿಯಾದ ಪತ್ರಿಕೆಯನ್ನು ಸುಮಾರು ಎರಡೂವರೆ ದಶಕಗಳ ಕಾಲ ನಡೆಸಿದ ಇವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಶಿರಸಿಯ ಕಲಾ ವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಅತಿಥಿ ಪ್ರಾಧ್ಯಾಪಕರೂ ಆಗಿದ್ದ ಹೆಗಡೆಯವರ ಗರಡಿಯಲ್ಲಿ ಪಳಗಿದ ಪತ್ರಕರ್ತರು ಹಲವರು. ಹೆಗಡೆಯವರು ಪ್ರಸ್ತುತ ಶಿರಸಿಯಲ್ಲಿ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದು, ಕೃಷಿಕರೂ ಆಗಿದ್ದಾರೆ.