ಕಾನೂನಿನ ಕಣ್ಣಿನಲ್ಲಿ ಕಳುವು ಮತ್ತು ಸಂಬಂಧಿತ ಇತರ ಅಪರಾಧಗಳು
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡ ಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮ ದೆವರನೊಲಿಸುವ ಪರಿ – ಬಸವಣ್ಣ
ಮನುಷ್ಯ ತರ್ಕಜೀವಿ. ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಯಾವುದು ಸರಿ ಯಾವುದು ತಪ್ಪು ಎಂಬ ವಿಶ್ಲೇಷಣೆ ಮಾಡುವ ವಿವೇಚನಾ ಶಕ್ತಿ ಉಳ್ಳ ಸಾಮಾಜಿಕ ಪ್ರಾಣಿ ಮಾನವ. ದಿನನಿತ್ಯದ ಪ್ರತಿಯೊಂದು ಕೆಲಸದಲ್ಲೂ ಯಾಂತ್ರಿಕತೆಯ ಹೊರತಾಗಿ ಒಂದು ಶಿಷ್ಟಾಚಾರವನ್ನು ನೀತಿ ನಿಯಮಗಳನ್ನು ಹಾಕಿಕೊಂಡು ಅದನ್ನು ರೂಢಿಸಿಕೊಳ್ಳುವುದು ಸಜ್ಜನರು ಬದುಕುವ ರೀತಿ. ವಚನ ಸಾಹಿತ್ಯದ ಗುರು ಬಸವಣ್ಣ ಮೇಲಿನ ತನ್ನ ವಚನದಲ್ಲಿ ಹೇಳುವಂತೆ ‘ಕಳುವು’ ಎನ್ನುವುದು ಮನುಷ್ಯನ ನೀತಿ ತಪ್ಪಿದ ವರ್ತನೆ. ಅದನ್ನು ಮಾಡಬೇಡಿ ಎನ್ನುವುದು ವಚನಕಾರನ ಭೋಧನೆ.
ಮನುಷ್ಯ ಸಮಾಜದಲ್ಲಿ ಬದುಕುವಾಗ ತನ್ನ ಬದುಕಿನ ಕುರಿತು ಒಂದು ‘ಅರಿವು’ ಅವಶ್ಯ. ಈ ಅರಿವಿನ ವಿಚಾರ ಮಾನವನ ಸರಿ ತಪ್ಪುಗಳಲ್ಲಿಯೂ ಅತ್ಯಂತ ಪ್ರಸ್ತುತ. ಮನುಷ್ಯ ಮಾಡುವ ಅಪರಾಧಗಳ ನಿರ್ಧಾರದಲ್ಲೂ ಈ ‘ಅರಿವು’ ಅಥವಾ ‘ಉದ್ದೇಶ’ ಮಹತ್ವದ ಪಾತ್ರ ವಹಿಸುತ್ತದೆ. ಕಾನೂನಿನ ಭಾಷೆಯಲ್ಲಿ ಇದನ್ನು ‘Mens Rea’ ಎನ್ನುವರು. ಮನುಷ್ಯ ಮಾಡುವ ಅಪರಾಧಿಕ ಕೃತ್ಯಗಳನ್ನು ‘Actus Reus’ ಎನ್ನುತ್ತಾರೆ. ಈ ದೃಷ್ಟಿಯಲ್ಲಿ ನೋಡಿದಾಗ ಕಳ್ಳತನ ಮಾಡುವುದು ತಪ್ಪು. ಕಾನೂನಿನ ಕಣ್ಣಿನಲ್ಲಿ ಒಂದು ಅಪರಾಧಿಕ ಕೃತ್ಯ. ಹಾಗಾದರೆ ಯಾವುದು ‘ಕಳ್ಳತನ’? ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ನಮ್ಮದಲ್ಲದ ಇತರರಿಗೆ ಸೇರಿದ ವಸ್ತುವನ್ನು ನಾವು ಯಾವುದೇ ರೀತಿಯಲ್ಲಾಗಿರಲಿ ಪಡೆದುಕೊಂಡರೆ ಅದು ‘ಕಳ್ಳತನ’ ಎಂದಾಗುತ್ತದೆ. ವಂಚನೆಯ ಮೂಲಕ ಗಳಿಸುವ ಅಕ್ರಮದ ಲಾಭಗಳು ‘ಕಳ್ಳತನ’ವೇ. ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯವು ಭಗವತಿ ಪ್ರಸಾದ್ ತಿವಾರಿ ವಿರುದ್ಧ ಪ್ರಾದೇಶಿಕ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ ಪ್ರಕರಣದಲ್ಲಿ ವ್ಯಾಖ್ಯಾನಿಸಿದಂತೆ ‘ಕಳ್ಳತನ’ ದ ಕೃತ್ಯವು ಮನುಷ್ಯನ ನೀತಿಗೆಟ್ಟ ನೀಚತನದ ಕೆಲಸವಾಗಿದೆ ಎಂದು ಉಲ್ಲೇಖ ಮಾಡಿದೆ.
ಭಾರತೀಯ ದಂಡಸಂಹಿತೆ ಕಲಂ 378ರಲ್ಲಿ ಕಳುವಿನ ಅಪರಾಧದ ಕುರಿತು ಹೇಳಲಾಗಿದೆ.
ಕಲಂ ೩೭೮. ಕಳವು (Theft):
ಯಾವನೇ ವ್ಯಕ್ತಿಯ ಸ್ವಾಧೀನದಿಂದ ಆ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ಯಾವುದೇ ಚರಸ್ವತ್ತನ್ನು ಅಪ್ರಾಮಾಣಿಕವಾಗಿ ತೆಗೆದುಕೊಳ್ಳಲು ಉದ್ದೇಶಿಸಿ ಹಾಗೆ ತೆಗೆದು ಕೊಳ್ಳುವುದಕ್ಕಾಗಿ ಸ್ವತ್ತನ್ನು ಕದಲಿಸುವ ವ್ಯಕ್ತಿಯು ಕಳವು ಮಾಡಿರುವನೆಂದು ಹೇಳಲಾಗುತ್ತದೆ.
ಭಾರತೀಯ ಕಾನೂನುಗಳು ಮತ್ತು ನ್ಯಾಯವ್ಯವಸ್ಥೆ ಇಂದಿಗೂ ಬ್ರಿಟಿಷ್ ಪದ್ದತಿಯನ್ನು ಅನುಸರಿಸುತ್ತಿವೆ.
ಈ ನಿಟ್ಟಿನಲ್ಲಿ ‘ಕಳ್ಳತನ’ ಅಪರಾಧದ ವಿಚಾರದಲ್ಲಿ ಬ್ರಿಟಿಷ್ ನ್ಯಾಯವ್ಯವಸ್ಥೆಯ ಪದ್ದತಿಯನ್ನು ಅವಲೋಕಿಸುವುದಾದರೆ ಮೇಲೆ ತಿಳಿಸಿದಂತೆ ‘Actus Reus’ ಮತ್ತು ‘Mens Rea’ ವನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ.
ಇಂಗ್ಲಿಷ್ ಕಾನೂನಿನ ಪ್ರಕಾರ ‘ಕಳ್ಳತನ’ ಅಪರಾಧದಲ್ಲಿ ‘Actus Reus’ ನ ಅಂಶಗಳು:
೧. ವಿನಿಯೋಗಿಸುವಿಕೆ
೨. ಕಳುವಿನ ವಸ್ತು ಅಥವಾ ಸ್ವತ್ತು
೩. ಬೇರೆಯವರ ಸ್ವಾಧೀನ
ಹಾಗೆಯೇ ‘Mens Rea’ ಅಂದರೆ ಅಪರಾಧಿಕ ಉದ್ಧೇಶದಲ್ಲಿ ಪರಿಗಣಿಸುವ ಅಂಶಗಳು:
೧. ಅಪ್ರಾಮಾಣಿಕತೆ
೨. ಮೋಸಗೊಳಿಸುವ ಉದ್ದೇಶ.
ಇನ್ನೂ ಕಳ್ಳತನ ಅಪರಾಧದ ಕುರಿತು ಭಾರತೀಯ ಕಾನೂನಿನ ವ್ಯಾಖ್ಯಾನಗಳನ್ನು ನೋಡುವುದಾದರೆ
ಸರ್ವೋಚ್ಛ ನ್ಯಾಯಾಲಯವು ಪ್ಯಾರೇಲಾಲ್ ಭಾರ್ಗವ ವಿರುದ್ಧ ರಾಜಸ್ತಾನ ರಾಜ್ಯ (AIR 1963 SC 1094) ಪ್ರಕರಣದಲ್ಲಿ ದಂಡ ಸಂಹಿತೆ ಕಲಂ ೩೭೮ ನ್ನು ವ್ಯಾಖ್ಯಾನಿಸಿ ಕಳ್ಳತನ ಅಪರಾಧ ಕೃತ್ಯದ ಮೂಲಭೂತ ಅಂಶಗಳನ್ನು ತಿಳಿಸಿದೆ.
ನ್ಯಾಯಾಲಯದ ಪ್ರಕಾರ ಯಾವುದೇ ವ್ಯಕ್ತಿಯ ಕಳ್ಳತನದ ಅಪರಾಧದಲ್ಲಿ ಭಾಗೀದಾರಿಕೆ ಕುರಿತು ನಿರ್ಧರಿಸುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು:
೧. ಆ ವ್ಯಕ್ತಿಯು ಕಾನೂನುಬಾಹಿರವಾಗಿ ಬೇರೆಯವರ ಸ್ವತ್ತನ್ನು ಗಳಿಸಿ ಅಕ್ರಮ ಲಾಭ ಹೊಂದುವ ಉದ್ದೇಶ ಹೊಂದಿರಬೇಕು.
೨. ನಿಜ ಮಾಲೀಕನ ಚರಸ್ವತ್ತನ್ನು ಹೊಂದುವ ಸಲುವಾಗಿ ಅಪ್ರಾಮಾಣಿಕನಾಗಿ ಮೋಸಗೊಳಿಸಲು
ಆರೋಪಿ ಉದ್ದೇಶಿಸಿರಬೇಕು.
೩. ನಿಜಮಾಲಿಕನ ತಿಳುವಳಿಕೆಗೆ ತರದೇ ಚರಸ್ವತ್ತನ್ನು ಅಕ್ರಮವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿರಬೇಕು.
೪. ಆ ಚರಸ್ವತ್ತನ್ನು ಅಕ್ರಮ ಉದ್ದೇಶದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಿರಬೇಕು.
ಸರ್ವೋಚ್ಛ ನ್ಯಾಯಾಲಯವು 2010 ರ ಇನ್ನೊಂದು ಪ್ರಕರಣ ರಾಕೇಶ್ ವಿರುದ್ಧ ದೆಹಲಿ ರಾಜ್ಯ ದಲ್ಲಿ ವ್ಯಾಖ್ಯಾನಿಸಿದಂತೆ ಭಾರತೀಯ ದಂಡಸಂಹಿತೆ ಕಲಂ ೩೭೮ ರ ಪ್ರಕಾರ ಕಳ್ಳತನ ಅಪರಾಧ ಎನಿಸಿಕೊಳ್ಳಬೇಕಾದರೆ ಅಪರಾಧಿಯು ಚರಸ್ವತ್ತನ್ನು ನಿಜಮಾಲಿಕನ ತಿಳುವಳಿಕೆಗೆ ತರದೇ ಮೋಸದಿಂದ ಸ್ವಾಧೀನ ಹೊಂದಿರಬೇಕಾಗುತ್ತದೆ ಎಂದಿದೆ. ಚರಸ್ವತ್ತಿನ ಸ್ಥಾನಪಲ್ಲಟ ಮತ್ತು ಹಿಂದಿರುವ ಅಪರಾಧಿಕ ಉದ್ದೇಶ ಎರಡು ಈ ಅಪರಾಧದಲ್ಲಿ ಮುಖ್ಯವಾಗಿವೆ.
ಭಾರತೀಯ ದಂಡಸಂಹಿತೆ ಕಲಂ 379ರಲ್ಲಿ ಕಳುವಿಗೆ ದಂಡನೆ ನಿಗದಿಪಡಿಸಲಾಗಿದೆ.
ಕಲಂ ೩೭೯. ಕಳವಿಗೆ ದಂಡನೆ (Punishment of theft):
ಕಳವು ಮಾಡುವ ಯಾವನೇ ವ್ಯಕ್ತಿಯು ಮೂರು ವರ್ಷಗಳವರೆಗಿನ ಎರಡರಲ್ಲೊಂದು ಬಗೆಯ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.
ಕಲಂ ೩೮೩. ಬಲಾದ್ಗ್ರಹಣ (Extortion) :
ಭಾರತೀಯ ದಂಡ ಸಂಹಿತೆ ಕಲಂ 383 ‘ಬಲಾದ್ಗ್ರಹಣ’ ಕುರಿತಾಗಿದೆ.
ಒಬ್ಬ ವ್ಯಕ್ತಿಗೆ, ಅವನಿಗೆ ಅಥವಾ ಇತರ ಯಾವನೇ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ಯಾವುದೇ ಹಾನಿಯುಂಟು ಮಾಡುವೆನೆಂದು ಭಯವನ್ನು ಉಂಟು ಮಾಡಿ, ಆ ಮೂಲಕ ಹಾಗೆ ಭಯಕ್ಕೊಳಗಾದ ವ್ಯಕ್ತಿಯು, ಯಾವನೇ ವ್ಯಕ್ತಿಗೆ ಯಾವುದೇ ಸ್ವತ್ತನ್ನು ಅಥವಾ ಬೆಲೆಯುಳ್ಳ ಭದ್ರತಾ ಪತ್ರವನ್ನು ಅಥವಾ ಬೆಲೆಯುಳ್ಳ ಭದ್ರತಾಪತ್ರವನ್ನಾಗಿ ಪರಿವರ್ತಿಸಬಹುದಾದ ರುಜು ಮಾಡಿದ ಅಥವಾ ಮೊಹರು ಮಾಡಿದ ಯಾವುದೇ ವಸ್ತುವನ್ನು ಕೊಡಲು ಅಪ್ರಾಮಾಣಿಕವಾಗಿ ಪ್ರೇರೇಪಿಸುವ ಯಾವನೇ ವ್ಯಕ್ತಿಯು ಬಲಾದ್ಗ್ರಹಣ ಮಾಡಿದನೆಂದಾಗುತ್ತದೆ.
ಆರ್.ಎಸ್.ನಾಯಕ್ ವಿರುದ್ಧ ಎ.ಆರ್.ಅಂತುಳೆ (AIR 1986 SC 2045) ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ತಿಳಿಸಿದಂತೆ ಒಂದು ಅಪರಾಧಿಕ ಕೃತ್ಯವು ಬಲಾದ್ಗ್ರಹಣ ಎನ್ನಿಸಿಕೊಳ್ಳಲು ಕೆಳಗಿನ ಅಂಶಗಳು ಮುಖ್ಯವೆನಿಸುತ್ತವೆ.
೧. ಅಪರಾಧಿಯು ಯಾವುದೇ ವ್ಯಕ್ತಿಗೆ ಹಾನಿಯುಂಟು ಮಾಡುತ್ತೇನೆಂದು ಭೀತಿ ಹುಟ್ಟಿಸಿರಬೇಕು.
೨. ಅಪರಾಧಿಯು ಆ ವ್ಯಕ್ತಿಗೆ ಹುಟ್ಟಿಸಿದ ಭೀತಿಯು ಅವನಿಂದ ಸ್ವತ್ತನ್ನು ಕಿತ್ತುಕೊಳ್ಳುವ ಅಥವಾ ರುಜುವಿನ ಮೂಲಕ ಬೆಲೆಯುಳ್ಳ ಭದ್ರತಾ ಪತ್ರ ವಶಪಡಿಸಿಕೊಳ್ಳುವ ದುರುದ್ದೇಶ ಹೊಂದಿರಬೇಕು.
ಸುಲಿಗೆ ಮತ್ತು ದರೋಡೆಗಳನ್ನು ಕುರಿತು (Of Robbery and Dacoity):
ಭಾರತೀಯ ದಂಡ ಸಂಹಿತೆ ಕಲಂ 390 ‘ಸುಲಿಗೆ’ಯನ್ನು ವ್ಯಾಖ್ಯಾನಿಸುತ್ತದೆ.
ಕಲಂ ೩೯೦. ಸುಲಿಗೆ (Robbery): ಎಲ್ಲಾ ಸುಲಿಗೆಯಲ್ಲೂ ಕಳವಾಗಲಿ, ಬಲಾದ್ಗ್ರಹಣವಾಗಲಿ ಇರುತ್ತದೆ.
ಕಳವು ಯಾವಾಗ ಸುಲಿಗೆಯೆನಿಸುತ್ತದೆ? (When theft is Robbery?): ಕಳವು ಮಾಡುವುದಕ್ಕಾಗಿ ಅಥವಾ ಕಳವು ಮಾಡುವಾಗ ಕಳವಿನ ಮೂಲಕ ಪಡೆಯಲಾದ ಸ್ವತ್ತನ್ನು ಒಯ್ಯುವಾಗ ಅಥವಾ ಒಯ್ಯಲು ಪ್ರಯತ್ನಿಸುವಾಗ, ಅಪರಾಧಿಯು ಆ ಉದ್ದೇಶಕ್ಕಾಗಿ ಯಾವನೇ ವ್ಯಕ್ತಿಯ ಮರಣ ಅಥವಾ ಗಾಯ ಅಥವಾ ಅಕ್ರಮ ಪ್ರತಿಬಂಧವನ್ನು ಅಥವಾ ತತ್ಕ್ಷಣ ಮರಣದ ಅಥವಾ ತತ್ಕ್ಷಣ ಗಾಯದ ಅಥವಾ ತತ್ಕ್ಷಣ ಅಕ್ರಮ ಪ್ರತಿಬಂಧದ ಭಯವನ್ನು ಸ್ವ ಇಚ್ಛೆಯಿಂದ ಉಂಟುಮಾಡಿದರೆ ಅಥವಾ ಮಾಡಲು ಪ್ರಯತ್ನಿಸಿದರೆ, ಆ ಕಳವು ಸುಲಿಗೆಯೆನಿಸುತ್ತದೆ.
ಬಲಾದ್ಗ್ರಹಣವು ಯಾವಾಗ ಸುಲಿಗೆಯೆನಿಸುತ್ತದೆ? (When extortion is Robbery?): ಬಲಾದ್ಗ್ರಹಣ ಮಾಡುವ ಸಮಯದಲ್ಲಿ ಅಪರಾಧಿಯು ಭಯಕ್ಕೊಳಗಾದ ವ್ಯಕ್ತಿಯ ಸಮ್ಮುಖದಲ್ಲಿದ್ದು, ಆ ವ್ಯಕ್ತಿಗೆ ಅಥವಾ ಇತರ ಯಾವನೇ ವ್ಯಕ್ತಿಗೆ ತತ್ಕ್ಷಣ ಮರಣದ ಅಥವಾ ತತ್ಕ್ಷಣ ಗಾಯದ ಅಥವಾ ತತ್ಕ್ಷಣ ಅಕ್ರಮ ಪ್ರತಿಬಂಧದ ಭಯವನ್ನು ಉಂಟುಮಾಡಿ ಬಲಾದ್ಗ್ರಹಣ ಮಾಡಿದರೆ ಮತ್ತು ಹಾಗೆ ಭಯಪಡಿಸಿ, ಅಂಥ ಭಯಕ್ಕೊಳಗಾದ ವ್ಯಕ್ತಿಯು ಆಗಲೇ ಮತ್ತು ಅಲ್ಲಿಯೇ ಬಲಾದ್ಗ್ರಹಣವು ಮಾಡಿದ ವಸ್ತುವನ್ನು ಕೊಟ್ಟುಬಿಡುವಂತೆ ಅವನನ್ನು ಪ್ರೇರೇಪಿಸಿದರೆ ಆ ಬಲಾದ್ಗ್ರಹಣವು ಸುಲಿಗೆಯೆನಿಸುತ್ತದೆ.
ಭಾರತೀಯ ದಂಡಸಂಹಿತೆ ಕಲಂ 392ರ ಪ್ರಕಾರ ಸುಲಿಗೆ ಮಾಡಿದವರನ್ನು ದಂಡಿಸಲಾಗುವುದು.
ಕಲಂ ೩೯೨. ಸುಲಿಗೆಗಾಗಿ ದಂಡನೆ (Punishment for robbery):
ಸುಲಿಗೆಯನ್ನು ಮಾಡುವ ಯಾವನೇ ವ್ಯಕ್ತಿಯು ಹತ್ತು ವರ್ಷಗಳವರೆಗಿನ ಅವಧಿಯ ಕಠಿಣ ಕಾರಾವಾಸದಿಂದ ದಂಡಿತನಾಗತಕ್ಕುದು ಮತ್ತು ಜುಲ್ಮಾಗೆಗೂ ಗುರಿಯಾಗತಕ್ಕುದು; ಮತ್ತು ಸೂರ್ಯಾಸ್ತ ಮತ್ತು ಸೂರ್ಯೋದಯದ ಮಧ್ಯೆ ಹೆದ್ದಾರಿಯಲ್ಲಿ ಸುಲಿಗೆ ನಡೆದಿದ್ದರೆ ಆ ಕಾರಾಗೃಹವಾಸವನ್ನು ಹದಿನಾಲ್ಕು ವರುಷಗಳವರೆಗೆ ವಿಸ್ತರಿಸಬಹುದು.
ಭಾರತೀಯ ದಂಡ ಸಂಹಿತೆ ಕಲಂ 390 ‘ದರೋಡೆ‘ ಕುರಿತಾಗಿದೆ.
ಕಲಂ ೩೯೧. ದರೋಡೆ (Dacoity):
ಐದು ಅಥವಾ ಹೆಚ್ಚು ಜನರು ಸುಲಿಗೆ ಮಾಡಿದಾಗ ಅಥವಾ ಮಾಡಲು ಪ್ರಯತ್ನಿಸಿದಾಗ ಅಥವಾ ಸುಲಿಗೆಯನ್ನು ಮಾಡುವ ಅಥವಾ ಮಾಡಲು ಪ್ರಯತ್ನಿಸುವ ವ್ಯಕ್ತಿಗಳ ಮತ್ತು ಅಂಥ ಸುಲಿಗೆಯನ್ನು ಮಾಡುವಲ್ಲಿ ಅಥವಾ ಮಾಡಲು ಪ್ರಯತ್ನಿಸುವಲ್ಲಿ ಹಾಜರಿದ್ದು ಅದಕ್ಕೆ ಸಹಾಯ ಮಾಡುವ ವ್ಯಕ್ತಿಗಳ ಒಟ್ಟು ಸಂಖ್ಯೆಯು ಐದಾಗಿದ್ದರೆ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಹಾಗೆ ಮಾಡುವ, ಮಾಡಲು ಪ್ರಯತ್ನಿಸುವ ಅಥವಾ ಸಹಾಯ ಮಾಡುವ ಪ್ರತಿಯೊಬ್ಬ ವ್ಯಕ್ತಿಯು “ದರೋಡೆ” ಮಾಡಿದನೆಂದು ಹೇಳಲಾಗುವುದು.
ಕಲಂ ೩೯೫. ದರೋಡೆಗಾಗಿ ದಂಡನೆ (Punishment for dacoity):
ದರೋಡೆಯನ್ನು ಮಾಡುವ ಯಾವನೇ ವ್ಯಕ್ತಿಯು ಆಜೀವ ಕಾರಾವಾಸದಿಂದ ಅಥವಾ ಹತ್ತು ವರ್ಷಗಳವರೆಗಿನ ಅವಧಿಯ ಕಠಿಣ ಕಾರಾವಾಸದಿಂಡ ದಂಡಿತನಾಗತಕ್ಕುದು ಮತ್ತು ಜುಲ್ಮನೆಗೂ ಗುರಿಯಾಗತಕ್ಕುದು.
ನಂಬಿಕೆಗೆ ಅರ್ಹವಲ್ಲದ ವರ್ತನೆ, ಕಪಟತನ, ಸೋಗಲಾಡಿತನ ಅಪ್ರಾಮಾಣಿಕತೆ ಹೀಗೆ ಮೊದಲಾದ ಕೆಟ್ಟ ಗುಣಗಳೇ ಇಂದು ಸಮಾಜದಲ್ಲಿ ಅಪರಾಧಿ ಕೃತ್ಯಗಳು ಹೆಚ್ಚಲು ಮೂಲಕಾರಣ. ಕಳ್ಳತನ ಮೊದಲಾದ ಇತರೆ ಅಪರಾಧಗಳ ಕಾರಣವು ಮೇಲೆ ತಿಳಿಸಿದ ಮನುಷ್ಯನ ವರ್ತನೆಗಳಿಂದ ಉಧ್ಭವಿಸಿವೆ. ಜನರಿಗೆ ಕಾನೂನಿನ ಅರಿವು ಇದ್ದರೆ ಇಂತಹ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆ ನಿಶ್ಚಿತಂತೆಯ ಜೀವನ ನಡೆಸಬೇಕಾದರೆ ಅಪರಾಧಿಕ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅವಶ್ಯಕತೆ.
ಕಾನೂನಿನ ಅರಿವು ಮತ್ತು ಅದರ ಸರಿಯಾದ ಪಾಲನೆ ಮತ್ತು ಉಪಯೋಗ ಇಲ್ಲದಿದ್ದರೆ ನಾಗರಿಕ ಸಮಾಜ ಮುಂದೆ ಸಂಭವಿಸುವ ಅನಾಹುತಗಳಿಗೆ ದಂಡ ತೇರಬೇಕಾಗುತ್ತದೆ. ಸಣ್ಣ ಪುಟ್ಟ ಕಾನೂನುಗಳನ್ನಾದರೂ ಜನರು ತಿಳಿದುಕೊಂಡರೆ ದಿನನಿತ್ಯದಲ್ಲಿ ಆಗುವಂತಹ ಅವಘಡಗಳಿಂದ ದೂರ ಇರಬಹುದು. ಪ್ರಸ್ತುತ ವಾತಾವರಣದ ವಾಸ್ತವ ಕಾನೂನುಗಳ ಆಧಾರದ ಮೇಲಿನ ನ್ಯಾಯದಾನ ವ್ಯವಸ್ಥೆ ಇದೆ. ನೈಜ ನ್ಯಾಯ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲೂ ಸಹಿತ ಸರ್ಕಾರದ ಮಟ್ಟದಲ್ಲಿ ಕಾಲಕಾಲಕ್ಕೆ ಸಮಾಜದ ಬದಲಾವಣೆಗೆ ಅನುಗುಣವಾಗಿ ಅಪರಾಧಿಕ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತಂದು ಮೇಲೆ ತಿಳಿಸಿದ ಅಪರಾಧಗಳಿಗೆ ಕಠಿಣ ಕ್ರಮ ಕೈಗೊಳ್ಳುವತ್ತ ಗಮನ ಹರಿಸಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ

ಗುರುರಾಜ್ ಆರ್
ಮೂಲತಃ ಕುಮಟಾದವರಾದ ಗುರುರಾಜ್ ಆರ್ ರವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಗುರುರಾಜ್ ರವರು ಬೆಂಗಳೂರಿನಲ್ಲಿ ಉಚ್ಛನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇವರು ‘ನ್ಯಾಯನಿಷ್ಠ’ ಪುಟ್ಟ ಬಳಗದ ಸದಸ್ಯರೂ ಸಹ ಆಗಿದ್ದಾರೆ.