ವಿಶ್ವ ಓಜೋನ್ ದಿನಾಚರಣೆ : ಸಂಕ್ಷಿಪ್ತ ವಿವರಣೆ

ಇವತ್ತು ಸೆಪ್ಟೆಂಬರ್ 16, ವಿಶ್ವ ಓಝೋನ್ ದಿನಾಚರಣೆ. ಓಝೋನ್ ಪದರಿನ ರಕ್ಷಣೆಯತ್ತ ಜನರ ಗಮನ ಸೆಳೆಯುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ. 1994ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಓಜೋನ್ ಪದರಿನ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವನ್ನಾಗಿ ಸೆಪ್ಟಂಬರ 16ನ್ನು ನಿಗದಿಪಡಿಸಿತು. ಓಝೋನ್ ಪದರಿನ ಸವಕಳಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ಪರಿಹಾರಗಳನ್ನು ಹುಡುಕಲು ಈ ದಿನವನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. ಓಝೋನ್ ಪದರಿನ ಜಾಗೃತಿ ಮೂಡಿಸಲು ಅನೇಕ ಶಾಲೆ-ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ಆದ್ದರಿಂದ ಈ ದಿನದ ಪ್ರಾಮುಖ್ಯತೆ ಹಾಗೂ ಅವಶ್ಯಕತೆಯ ಕುರಿತು ನಮ್ಮ ನ್ಯಾಯನಿಷ್ಠದ ಮೂಲಕ ಓದುಗರಿಗೆ ಜಾಗೃತಿ ಮೂಡಿಸುವುದು ಲೇಖಕರ ಆಶಯವಾಗಿದೆ.

ಓಝೋನ್ ಪದರಿನ ರಕ್ಷಣೆಗಾಗಿ ವಿಯನ್ನಾ ಸಮಾವೇಶವನ್ನು 1985 ರಲ್ಲಿ ನಡೆಸಲಾಯಿತು. 1997 ರಲ್ಲಿ ಮಾಂಟ್ರಿಯಲ್  ಶಿಷ್ಟಾಚಾರವನ್ನು(Montreal Protocol) ಅಂಗೀಕರಿಸಲಾಯಿತು. ಜಗತ್ತಿನ ಸುಮಾರು 197 ರಾಷ್ಟ್ರಗಳು ಈ ಶಿಷ್ಟಾಚಾರಕ್ಕೆ ಸಹಿ ಹಾಕಿವೆ‌. ಹಾಗೂ ತಮ್ಮ ರಾಷ್ಟ್ರಗಳಲ್ಲಿ ಈ ಶಿಷ್ಟಾಚಾರದ ಪರಿಪಾಲನೆಗಾಗಿ ಕಾನೂನು ಕ್ರಮಗಳನ್ನು ಸಹ ಕೈಗೊಂಡಿವೆ. 

ಸೂರ್ಯನ ಬೆಳಕು ಇಲ್ಲದೆ ಭೂಮಿಯ ಮೇಲೆ ಜೀವನವನ್ನು ಊಹಿಸಲೂ ಸಹ ಸಾಧ್ಯವಿಲ್ಲ. ಸೂರ್ಯನಿಂದ ಹೊರಹೊಮ್ಮುವ ಶಕ್ತಿಯು ಭೂಮಿಯ ಮೇಲಿರುವ ಜೀವರಾಶಿಗಳು ಅಭಿವೃದ್ಧಿಯಾಗಲು ಅತ್ಯವಶ್ಯಕವಾಗಿದೆ. ಇದು ಭೂಮಿಯ ಮೇಲ್ಮೈಯಿಂದ 15- 30 ಕಿಲೋಮೀಟರ್ ದೂರದಲ್ಲಿರುವ ವಾಯುಮಂಡಲದಲ್ಲಿದೆ‌.  ಓಝೋನ್ ಆಮ್ಲಜನಕದ ಮೂರು ಪರಮಾಣುಗಳಿಂದ (O3) ಕೂಡಿದೆ. ಇದು ಇಡೀ ಗ್ರಹವನ್ನು ಆವರಿಸುತ್ತದೆ ಮತ್ತು ಸೂರ್ಯನಿಂದ ಹೊರ ಬರುವ ಹಾನಿಕಾರಕ ನೆರಳಾತೀತ ಬಿ  (Ultra Violet)  ಹೀರಿಕೊಳ್ಳುವುದರ ಮೂಲಕ ನಮ್ಮನ್ನು ರಕ್ಷಿಸುತ್ತದೆ. ಇದು ಹೆಚ್ಚು ಪ್ರತಿಕ್ರಿಯಾತ್ಮಕ ಅನಿಲವಾಗಿದೆ. ಅತಿಯಾದ ವಿಕಿರಣದಿಂದಾಗಿ ಮನುಷ್ಯರಿಗೆ ಚರ್ಮದ ಕ್ಯಾನ್ಸರ್,  ದೃಷ್ಟಿ ದೋಷ, ರೋಗನಿರೋಧಕ ಶಕ್ತಿ ಕುಗ್ಗುವಿಕೆ ಹಾಗೂ ಸಸ್ಯರಾಶಿಗಳು ಆಹಾರ ಉತ್ಪಾದನೆ ಕುಗ್ಗುವಿಕೆ,  ಬೆಳೆಗಳ ಬೆಳವಣಿಗೆ ಕುಂಠಿತ, ಜಲ ಜೀವರಾಶಿಗಳ ಮೇಲೂ ಅಡ್ಡ ಪರಿಣಾಮ ಬೀರುತ್ತದೆ ಹಾಗೂ ಹವಾಮಾನ ಬದಲಾವಣೆಗೆ ಮತ್ತು ಜಾಗತಿಕ ತಾಪಮಾನ ಏರುವಿಕೆಯಾಗುತ್ತದೆ. ಹಾಗಾಗಿ, ಜೀವಜಾಲಗಳ ಉಳಿವು – ಅಭಿವೃದ್ಧಿಗಳಿಗೆ ಓಜೋನ್ ಪದರ ಅತ್ಯಾವಶ್ಯಕ.

ಓಜೋನ್ ಪದರನ್ನು ಸವಕಳಿ  ಮಾಡುವ ವಸ್ತುಗಳೆಂದರೆ ಕ್ಲೋರೋ ಪ್ಲೋರೋ ಕಾರ್ಬನ್ ಗಳು , (CFCs)ಹೈಡ್ರೋಕ್ಲೋರೈಡ್ ಫ್ಲೋರೋ ಕಾರ್ಬನ್ ಗಳು, ಹಾ ಲೋನ್ಸ್, ಮಿಥೈಲ್ ಬ್ರೋಮೈಡ್, ಕಾರ್ಬನ್ ಪೆಟ್ರಾ ಕ್ಲೋರೈಡ್, ಮಿಥೈಲ್ ಕ್ಲೋರೋಫಾರ್ಮ್. ಇಂಗಾಲದ ಹಲವು ರಾಸಾಯನಿಕ ರೂಪಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ. ಇಂಗಾಲದ ಈ ರಾಸಾಯನಿಕಗಳು ಬಿಡುಗಡೆ ಮಾಡುವ ಚಟುವಟಿಕೆಗಳಿಂದ ಪದರಿನ ಸವಕಳಿಯಾಗುತ್ತದೆ. ಬೆಂಕಿ ಆರಿಸುವ ಯಂತ್ರಗಳು, ಸ್ವಚ್ಛ ಮಾಡಲು ಬಳಸುವ ಉಪಕರಣಗಳು, ಹವಾನಿಯಂತ್ರಣ ಉಪಕರಣಗಳು ಹಾಗೂ ದಿನನಿತ್ಯ ನಾವು ಬಳಸುವ ಅನೇಕ ವಸ್ತುಗಳ ತಯಾರಿಕೆಯಲ್ಲಿ ಮತ್ತು ಬಳಕೆಯಲ್ಲಿ ಈ ಅನಿಲಗಳು ಬಿಡುಗಡೆಯಾಗಿ, ವಾತಾವರಣ ಸೇರಿ ಪದರಿನ ಸವಕಳಿಗೆ ಕಾರಣವಾಗುತ್ತವೆ.

ನಮ್ಮ ಭವಿಷ್ಯದ ಪೀಳಿಗೆಗಳಿಗಾಗಿ ಓಜೋನ್ ಪದರವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಅಂತಹ ಒಂದು ಆಶಯದೊಂದಿಗೆ ದೇಶಗಳು ಮಾಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿವೆ. ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿದ ಸದಸ್ಯ ರಾಷ್ಟ್ರಗಳು ಓಝೋನ್ ಪದರಿನ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಹಾಗೂ ಬಳಕೆಯನ್ನು ಕಡಿಮೆ ಮಾಡಬೇಕು. (ಅನುಚ್ಛೇದ 2 ಹಾಗೂ 3). ಸದಸ್ಯರಲ್ಲದ ರಾಷ್ಟ್ರಗಳೊಡನೆ ಅಂತಹ ವಸ್ತುಗಳ ವ್ಯಾಪಾರ,ಆಮದು-ರಫ್ತುಗಳ ಮೇಲೆ ನಿಯಂತ್ರಣ ಮಾಡಬೇಕು. (ಅನುಚ್ಛೇದ 4). ಓಝೋನ್ ಪದರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಮಾಂಟ್ರಿಯಲ್ ಶಿಷ್ಟಾಚಾರ ಯಶಸ್ಸಿನ ದಾರಿಗೆ ನಾಂದಿಯಾಗಿದೆ ಏಕೆಂದರೆ ಸಾಕ್ಷ್ಯಾಧಾರಗಳ ಪ್ರಕಾರ ಓಜೋನ್ ಪದರಿನ ಸವಕಳಿಗೆ ಕಾರಣವಾಗುವ ವಸ್ತುಗಳ ಬಳಕೆ ಕಡಿಮೆಯಾಗುತ್ತಿರುವುದರಿಂದ ಓಝೋನ್ ಪದರು ಮೊದಲಿನ ಸ್ಥಿತಿಗೆ ಬರುವಂತೆ ಕಾಣುತ್ತಿದೆ. 2030ರೊಳಗೆ ಓಝೋನ್ ಮೊದಲಿನ ತರ ಆಗುವಂತಹ ಸಾಧ್ಯತೆಗಳಿವೆ. ಮಾಂಟ್ರಿಯಲ್ ಶಿಷ್ಟಾಚಾರ ಕೇವಲ ಓಝೋನ್ ಪದರಿನ ರಕ್ಷಣೆಗೆ ಸೀಮಿತವಾಗಿರದೆ 2030ರ  ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೂ (UN Sustainable Development Goals- 2030) ಮಹತ್ವದ ಕೊಡುಗೆಯನ್ನು ನೀಡುತ್ತದೆ. 

ಓಝೋನ್ ದಿನದ ಈ ವರ್ಷದ ಥೀಮ್ “ಜೀವನಕ್ಕಾಗಿ ಓಝೋನ್”. ಇಂದು ನಾವು ವಿಯೆನ್ನಾ ಸಮಾವೇಶದ 35 ವರ್ಷಗಳನ್ನು ಹಾಗೂ 35 ವರ್ಷಗಳ ಜಾಗತಿಕ ರಕ್ಷಣೆಯನ್ನು ಆಚರಿಸುತ್ತಿದ್ದೇವೆ. ಮಾಲಿನ್ಯರಹಿತ ಶುದ್ಧ ವಾತಾವರಣದಲ್ಲಿ ವಾಸಿಸುವುದು ಮಾನವ ಹಕ್ಕು ಮತ್ತು ಮೂಲಭೂತ ಹಕ್ಕಾಗಿದೆ. ಶುದ್ಧ ವಾತಾವರಣವನ್ನು ಕಲ್ಪಿಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಅದರಂತೆ ನಮ್ಮ ಪರಿಮಿತಿಯಲ್ಲಿ ನಮ್ಮ ಸುತ್ತಲಿರುವ ಪರಿಸರ ರಕ್ಷಣೆ ಮಾಡುವುದು ನಾಗರಿಕರ ಆದ್ಯ ಕರ್ತವ್ಯವಾಗಿದೆ ‌.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಸ್ಮಿತಾ ಅಂಗಡಿ

ಸ್ಮಿತಾ ಅಂಗಡಿ ಅವರು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಮತ್ತು ದೆಹಲಿಯ ಭಾರತೀಯ ಕಾನೂನು ಮತ್ತು ಮ್ಯಾನೇಜ್ಮೆಂಟ್ ಅಕಾಡೆಮಿಯ ಆನ್ಲೈನ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಮಿತಾ ಅವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ, ಕಾನೂನಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪಿಎಚ್ ಡಿ ಅಧ್ಯಯನವನ್ನು ನಡೆಸಿದ್ದಾರೆ. ‘ನ್ಯಾಯನಿಷ್ಠ’ದ ಕನಸುಗಳನ್ನು ಹಂಚಿಕೊಂಡವರಲ್ಲಿ ಸ್ಮಿತಾ ಕೂಡಾ ಒಬ್ಬರು

Scroll to Top