ಉದ್ದಿಮೆಗಳಿಗೆ ಹಾಯ್ ಹಾಯ್ ಪರಿಸರಕ್ಕೆ ಬಾಯ್ ಬಾಯ್ E.I.A. 2020 ಕರಡು ಅಧಿಸೂಚನೆ

ಕೋವಿಡ್-19 ಮಹಾಮಾರಿ ನಿಯಂತ್ರಣಕ್ಕೆ ಹೇರಿದ ದೇಶವ್ಯಾಪಿ ಲಾಕ್‍ಡೌನ್ ಪರಿಣಾಮವಾಗಿ ಭಾರತದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ಇಂಥ ಆರ್ಥಿಕತೆಯನ್ನು ಬಾಲ ತಿರುಚಿ ಮೇಲಕ್ಕೆ ಎಬ್ಬಿಸಬೇಕಾದ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಇದೆ. ಇದರೊಂದಿಗೆ ಚೀನಾದಿಂದ ನಿರ್ಗಮಿಸುತ್ತಿರುವ ಅಮೆರಿಕಾ, ಜರ್ಮನಿ, ಜಪಾನ್, ದಕ್ಷಿಣ ಕೋರಿಯಾ ಮುಂತಾದ ರಾಷ್ಟ್ರಗಳ ಬೃಹತ್ ಉದ್ದಿಮೆಗಳನ್ನು ಭಾರತದ ಕಡೆಗೆ ಆಕರ್ಷಿಸಬೇಕಾಗಿದೆ. ಅಲ್ಲದೆ ಆರ್ಥಿಕ ಅಭಿವೃದ್ಧಿಗೆ, ಪರಿಸರ ಒಂದು ಅಡ್ಡಿ ಎಂಬ ತಪ್ಪು ಕಲ್ಪನೆ ಆಳುವ ವರ್ಗಗಳಲ್ಲಿ, ಅವರ ಮರ್ಜಿ ಹಿಡಿಯುವ ಅಧಿಕಾರಿ ವರ್ಗದಲ್ಲಿ ಹಾಗೂ ಉದ್ದಿಮೆ ಕ್ಷೇತ್ರದ ಜನಗಳಲ್ಲಿ ಆಳವಾಗಿ ಬೇರೂರಿದೆ. ಈ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಪರಿಸರ ಸಚಿವಾಲಯವು ಒಂದು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದೆ. ಅದೇ ಇ.I.ಂ. 2020 ಕರಡು ಅಧಿಸೂಚನೆ. ಅದರ ಸಾಧಕ ಬಾಧಕಗಳ ಬಗ್ಗೆ ಈ ಲೇಖನ.

ಏನಿದು Environmental Impact Assessment – EIA?

1984 ರಲ್ಲಿ ಭೋಪಾಲ್ ಅನಿಲ ದುರಂತ ನಡೆಯಿತು. ಜಗತ್ತಿನ ಅತಿಘೋರ ಅನಿಲ ದುರಂತ ಎಂದು ಅದು ಪರಿಗಣಿತವಾಗಿದೆ. ಅದರ ಪರಿಣಾಮವಾಗಿ ಭಾರತ ಸರ್ಕಾರ ಪರಿಸರ ಸಂರಕ್ಷಣಾ ಕಾಯ್ದೆ – 1986 (Environmental Protection Act- E.P.A.) ನ್ನು ಜಾರಿಗೆ ತಂದಿತು. ಅದೊಂದು ಸಮಗ್ರವಾದ ಕಾಯ್ದೆ. ಪರಿಸರದ ಸಂರಕ್ಷಣೆ ಹಾಗೂ ಸಂವರ್ಧನೆ ಅದರ ಮೂಲ ಉದ್ದೇಶ. E.P.A.- 1986 ರ ಒಂದು ಮುಖ್ಯ ಭಾಗ ಪರಿಸರ ಪರಿಣಾಮ ಅಧ್ಯಯನ (Environmental Impact Assessment) ಯಾವುದೇ ಕೈಗಾರಿಕೆ, ಗಣಿಗಾರಿಕೆ, ಅಣೆಕಟ್ಟು ಮುಂತಾದ ಯೋಜನೆಗಳ ಪ್ರಸ್ತಾಪ ಬಂದಾಗ, ಅದರಿಂದ ಸ್ಥಳೀಯ ಪರಿಸರದ ಮೇಲೆ – ಅಂದರೆ ಅರಣ್ಯನಾಶ, ವನ್ಯಜೀವಿ ನಾಶ, ವಾಯು, ಜಲ, ಶಬ್ದ ಮಾಲಿನ್ಯ ಮುಂತಾಗಿ – ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಸ್ಥಳೀಯ ಜನಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದರ ಮೇಲೆ ವೈಜ್ಞಾನಿಕ ಅಧ್ಯಯನ ನಡೆಸುವುದು E.I.A.ನ ಒಂದು ಭಾಗವಾದರೆ ಸ್ಥಳೀಯ ಜನಗಳ ಜೊತೆ ಸಂವಾದ ನಡೆಸುವುದು ಹಾಗೂ ಯೋಜನೆಯ ಬಗ್ಗೆ ಅವರ ತಕರಾರುಗಳನ್ನು ಆಲಿಸುವುದು, ಇನ್ನೊಂದು ಭಾಗ. ಹೀಗೆ E.I.A.ಗೆ ಎರಡು ಭಾಗ. 1) ವೈಜ್ಞಾನಿಕ ಅಧ್ಯಯನ 2) ಸಾರ್ವಜನಿಕ ಸಮಾಲೋಚನೆ.

E.I.A. ವರದಿಯ ಆಧಾರದ ಮೇಲೆ ಪರಿಸರ ಸಚಿವಾಲಯವು ಪ್ರಸ್ತಾವಿತ ಯೋಜನೆಗೆ ಅನುಮತಿ ನೀಡಬಹುದು ಅಥವಾ ನಿರಾಕರಿಸಬಹುದು. ಯಾವುದೇ ಯೋಜನೆಯನ್ನು ಪ್ರಾರಂಭಿಸುವ ಮೊದಲು ಪರಿಸರ ಇಲಾಖೆಯ ಅನುಮತಿಯನ್ನು ಪಡೆಯುವುದು ಕಡ್ಡಾಯ ಎಂದು E.P.A. ಹೇಳುತ್ತದೆ.

1994 ರಲ್ಲಿ ಮೊದಲನೆ ಪರಿಸರ ಪರಿಣಾಮ ಅಧ್ಯಯನ (E.I.A.) ಅಧಿಸೂಚನೆ ಜಾರಿಗೆ ಬಂತು. 1994 ರ ಅಧಿಸೂಚನೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ E.I.A. ಎರಡನೆ ಅಧಿಸೂಚನೆಯನ್ನು 2006 ರಲ್ಲಿ ಜಾರಿಗೆ ತರಲಾಯಿತು. 2006 ರ ಅಧಿಸೂಚನೆಗೆ ಮತ್ತಷ್ಟು ತಿದ್ದುಪಡಿ ಮಾಡಿ ಕೇಂದ್ರ ಪರಿಸರ ಸಚಿವಾಲಯ 2020 ರ ಮಾರ್ಚ್ 23 ರಂದು ಅಂದರೆ ದೇಶವ್ಯಾಪಿ ಲಾಕ್‍ಡೌನ್ ಘೋಷಿಸುವ ಒಂದು ದಿನ ಮೊದಲು ಕರಡು ಅಧಿಸೂಚನೆ ಪ್ರಕಟಿಸಿತು. ಇದೇ E.I.A. ಅಧಿಸೂಚನೆ 2020. ಸಾರ್ವಜನಿಕರು 2020 ರ ಅಧಿಸೂಚನೆಗೆ ತಮ್ಮ ತಕರಾರುಗಳು, ಸಲಹೆ ಸೂಚನೆಗಳನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಲು ಕೋರಲಾಯಿತು. ಕಡೇ ದಿನಾಂಕ ಮೇ 22 ಎಂದು ತಿಳಿಸಲಾಯಿತು. ಸಾರ್ವಜನಿಕರ ಒತ್ತಡದ ಮೇರೆಗೆ ಜೂನ್ 30 ಕ್ಕೆ ವಿಸ್ತರಿಸಲಾಯಿತು. ದೆಹಲಿ ಹೈಕೋರ್ಟ್‍ನ ಮಧ್ಯ ಪ್ರವೇಶದಿಂದ ಅಹವಾಲು ಸಲ್ಲಿಕೆಗೆ ಕಡೆ ದಿನಾಂಕವನ್ನು ಅಂತಿಮವಾಗಿ ಆಗಸ್ಟ್ 11 ಎಂದು ನಿಗದಿಪಡಿಸಲಾಯಿತು.

ಕೇಂದ್ರ ಪರಿಸರ ಸಚಿವಾಲಯದ ಹೇಳಿಕೆಯ ಪ್ರಕಾರ ಆಗಸ್ಟ್ 11 ರ ಹೊತ್ತಿಗೆ 17 ಲಕ್ಷ ಅಹವಾಲುಗಳು ಸಚಿವಾಲಯಕ್ಕೆ ಬಂದಿವೆ. E.I.A.-2020 ರ ಕರಡು ಅಧಿಸೂಚನೆ ಎಷ್ಟು ವಿವಾದಾಸ್ಪದವಾಗಿದೆ ಎಂಬುದಕ್ಕೆ ಈ ಅಪಾರ ಸಂಖ್ಯೆಯೇ ಸಾಕ್ಷಿ. ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅಧಿಸೂಚನೆ ಹೊರಡಿಸಿದಾಗಲೆ 17 ಲಕ್ಷ ಅಹವಾಲುಗಳು ಸಲ್ಲಿಕೆಯಾಗಿವೆ. ಇನ್ನು ಎಲ್ಲಾ 22 ಭಾಷೆಗಳಲ್ಲಿ ಪ್ರಕಟವಾಗಿದ್ದರೆ ಬಹುಶ: 18 ಕೋಟಿ ಅಹವಾಲುಗಳು ಸಲ್ಲಿಕೆಯಾಗುತ್ತಿದ್ದವೋ ಏನೋ !

E.I.A.-2020 ರ ಕರಡು ಅಧಿಸೂಚನೆಯಲ್ಲಿರುವ ವಿವಾದಾತ್ಮಕ ಅಂಶಗಳು:

E.I.A.-2020 ರ ಕರಡು ಅಧಿಸೂಚನೆಯು ಜನವಿರೋಧಿ, ಪರಿಸರ ವಿರೋಧಿ ಹಾಗೂ ಉದ್ದಿಮೆದಾರರ ಪರವಾಗಿದೆ ಎಂದು ಲಕ್ಷಾಂತರ ಜನ ಹೇಳುತ್ತಾರೆ. ಇದಕ್ಕೆ ವಿರುದ್ಧವಾಗಿ ಪರಿಸರ ಸಚಿವಾಲಯವು ಹೊಸ ಅಧಿಸೂಚನೆಯಿಂದ ಪರಿಸರ ಪರಿಣಾಮ ಅಧ್ಯಯನವು ಹೆಚ್ಚು ಪಾರದರ್ಶಕವೂ ಹಾಗೂ ಅನುಕೂಲಕರವೂ (ಯಾರಿಗೆ ?) ಆಗುತ್ತದೆ ಎಂದು ಹೇಳಿಕೊಂಡಿದೆ. ನೋಡೋಣ.

  1. ಜೇಡಿಮಣ್ಣು ತೆಗೆಯುವುದು, ಮರಳು ಗಣಿಗಾರಿಕೆ. ಭಾವಿ ತೋಡುವುದು, ದೊಡ್ಡ ಕಟ್ಟಡಗಳಿಗಾಗಿ ಪಾಯ ತೆಗೆಯುವುದು, ಸೌರ ವಿದ್ಯುತ್ ಸ್ಥಾವರಗಳ ಸ್ಥಾಪನೆ, ಸಾಮೂಹಿಕ ತ್ಯಾಜ್ಯ ಸಂಸ್ಕರಣಾ ಸ್ಥಾವರ ಸ್ಥಾಪನೆ, ಇವೇ ಮುಂತಾದ ಸುಮಾರು 40 ಯೋಜನೆಗಳಿಗೆ ಪರಿಸರ ಅನುಮತಿ ಪಡೆಯಬೇಕು ಎಂಬುದರಿಂದ ವಿನಾಯತಿ ನೀಡಲಾಗಿದೆ.
  2. 2 ವರ್ಗದಲ್ಲಿ ಬರುವ ಯೋಜನೆಗಳಿಗೆ ಸಾರ್ವಜನಿಕ ಸಮಾಲೋಚನೆಯ ಅಗತ್ಯವಿಲ್ಲ. ಅವು ಮುಖ್ಯವಾಗಿ, ನೀರಾವರಿ ಯೋಜನೆಗಳು, ಹ್ಯಾಲೋಜೆನ್‍ಗಳು ಹಾಗೂ ರಾಸಾಯನಿಕ ಗೊಬ್ಬರಗಳ ಉತ್ಪಾದನೆ, ಆ್ಯಸಿಡ್‍ಗಳ ಉತ್ಪಾದನೆ, ಆಸ್ಪತ್ರೆ ತ್ಯಾಜ್ಯಗಳ ಸಂಸ್ಕರಣೆ ಸ್ಥಾವರಗಳು 1,50,000 ಚದರ ಮೀಟರ್ ವಿಸ್ತಾರದವರೆಗಿನ (ವಿಮಾನ ನಿಲ್ದಾಣದಷ್ಟು) ಕಟ್ಟಡಗಳ ನಿರ್ಮಾಣ, ಎತ್ತರಿಸಿದ ರಸ್ತೆಗಳು ಮತ್ತು ಫ್ಲೈಒವರ್‍ಗಳು, ಒಳನಾಡಿನ ಜಲಸಾರಿಗೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಹಾಗೂ ಅಗಲೀಕರಣ ಯೋಜನೆಗಳು. 25 ಮೆಗಾವ್ಯಾಟ್‍ವರೆಗಿನ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಗಳು, 2000 ದಿಂದ 10,000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿರುವ ನೀರಾವರಿ ಯೋಜನೆಗಳು.
  3. ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಹಾಗೂ ಪೈಪ್‍ಲೈನ್ ಹಾಕುವುದಕ್ಕೆ ಸಾರ್ವಜನಿಕ ಸಮಾಲೋಚನೆಯ ಅಗತ್ಯವಿಲ್ಲ. ಗಡಿ ಪ್ರದೇಶ ಎಂಬುದಕ್ಕೆ E.I.A.-2020 ಈ ರೀತಿಯ ವ್ಯಾಖ್ಯೆ ನೀಡಿದೆ. ಯಾವುದೇ ಅಂತರರಾಷ್ಟ್ರೀಯ ವಾಸ್ತವ ಗಡಿರೇಖೆಯಿಂದ ವಾಯು ಮಾರ್ಗದಲ್ಲಿ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರದೇಶಗಳು ಗಡಿ ಪ್ರದೇಶಗಳು ಎನಿಸುತ್ತವೆ. ಇಲ್ಲಿ ಸ್ಥಾಪನೆಯಾಗುವ ಯೋಜನೆಗಳಿಗೆ ಸಾರ್ವಜನಿಕ ಸಮಾಲೋಚನೆಯ ಅಗತ್ಯವಿರುವುದಿಲ್ಲ. ಈ ವಿಧಿಯಿಂದ ಅತ್ಯಂತ ಹೆಚ್ಚು ಹಾನಿಗೆ ಒಳಗಾಗುವುದು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳನ್ನು ಒಳಗೊಂಡ ಈಶಾನ್ಯ ಭಾರತ. ಈ ರಾಜ್ಯಗಳು, ಚೀನಾ, ಮಯನ್ಮಾರ್ ಹಾಗೂ ಬಾಂಗ್ಲ ದೇಶಗಳೊಂದಿಗೆ ಗಡಿ ಹಂಚಿಕೊಂಡಿವೆ. ಭಾರತದ ಒಟ್ಟು ವಿಸ್ತಾರದಲ್ಲಿ ಶೇ. 8 ರಷ್ಟಿರುವ ಈಶಾನ್ಯ ಭಾರತ, ದೇಶದ ಅರಣ್ಯಗಳಲ್ಲಿ ಶೇ. 25 ಪಾಲು ಹೊಂದಿದೆ. ಗಡಿ ಪ್ರದೇಶಗಳಲ್ಲಿ ಯಾವುದೇ ಯೋಜನೆಗಳಿಗೆ ಸಾರ್ವಜನಿಕ ಸಮಾಲೋಚನೆಗೆ ಅವಕಾಶವಿಲ್ಲ ಎಂಬ ಕಾನೂನಿನಿಂದ ಈ ಭಾಗದ ಜನಗಳಿಗೆ ತಮ್ಮ ಪರಿಸರ ರಕ್ಷಣೆಯಲ್ಲಿ ಯಾವುದೇ ಪಾತ್ರವಿಲ್ಲದಂತಾಗಿದೆ. ಸಮೃದ್ಧ ಸಂಪನ್ಮೂಲಗಳ ಲೂಟಿಗೆ ಉದ್ದಿಮೆದಾರರಿಗೆ ಮುಕ್ತ ಅವಕಾಶ ನೀಡಲಾಗಿದೆ.
  4. E.I.A.-2020 ಕರಡು ಅಧಿಸೂಚನೆಯಲ್ಲಿರುವ ಅತ್ಯಂತ ಅಪಾಯಕಾರಿ ವಿಷಯವೆಂದರೆ, ಯಾವುದೇ ಯೋಜನೆಗೆ ಪರಿಸರ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಯೋಜನೆ ಸ್ಥಾಪಿಸಿ ಹಲವು ವರ್ಷ ಕೆಲಸ ಮಾಡಿದ ನಂತರವೂ ಪೂರ್ವಾನ್ವಯವಾಗಿ (Retrospective) ಅನುಮತಿ ಪಡೆಯಬಹುದು. ಇದಕ್ಕೆ ಘಟನೋತ್ತರ ಅನುಮತಿ (Ex Post Facto Approval) ಎನ್ನಲಾಗಿದೆ. ಈ ಅವಧಿಯಲ್ಲಿ ಆಗಿರಬಹುದಾದ ಪರಿಸರ ನಾಶವನ್ನು ಸರಿಪಡಿಸುವ ಒಂದು ಯೋಜನೆಯನ್ನು ಸಿದ್ಧಮಾಡಬೇಕು ಹಾಗೂ ವಿಳಂಬದ ಪ್ರತಿದಿನಕ್ಕೆ 2,000 ರೂ. ನಿಂದ 10,000 ರೂ. ವರೆಗೆ ದಂಡ ಕಟ್ಟಬೇಕು. ಘಟನೋತ್ತರ (Post Facto) ಪರಿಸರ ಅನುಮತಿ ಎಂಬುದು ಸಂವಿಧಾನ ವಿರೋಧಿ ಹಾಗೂ ಕಾಯ್ದೆಯ ಉಲ್ಲಂಘನೆ ಎಂದು ಹಸಿರು ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿವೆ.
  5. ಯಾವುದೇ ಯೋಜನೆ ಪರಿಸರ ಕಾಯ್ದೆಯ ಉಲ್ಲಂಘನೆ ಮಾಡಿದರೆ, ಸರ್ಕಾರಿ ನಿಯಂತ್ರಣ ಸಂಸ್ಥೆಗಳು ಅಥವಾ ಯೋಜನೆಯ ಮಾಲೀಕ ಮಾತ್ರ ದೂರು ನೀಡಬಹುದು. ಸಾರ್ವಜನಿಕರು ದೂರು ನೀಡುವಂತಿಲ್ಲ. ನೀಡಿದರೂ ಪರಿಗಣಿಸಲಾಗುವುದಿಲ್ಲ.
  6. ಸಾರ್ವಜನಿಕ ಸಮಾಲೋಚನೆಗೆ 30 ದಿನಗಳ ಮೊದಲು ನೋಟೀಸ್ ನೀಡಬೇಕೆಂಬ ನಿಯಮವನ್ನು ಬದಲಿಸಿ 20 ದಿನಗಳಿಗೆ ಇಳಿಸಲಾಗಿದೆ.
  7. ಒಂದು ಯೋಜನೆ, ಶೇ. 25 ಕ್ಕಿಂತ ಹೆಚ್ಚು ವಿಸ್ತರಣೆಯಾದಾಗ ಮಾತ್ರ ಇ.I.o. ಅಗತ್ಯವಾಗುತ್ತದೆ. ಹಾಗೂ ಶೇ. 50 ಕ್ಕಿಂತ ಹೆಚ್ಚು ವಿಸ್ತರಣೆಯಾದಾಗ ಮಾತ್ರ ಸಾರ್ವಜನಿಕ ಸಮಾಲೋಚನೆ ಅಗತ್ಯ ಎಂದು ಇ.I.o. 2020 ಕರಡು ಅಧಿಸೂಚನೆ ತಿಳಿಸುತ್ತದೆ.

ಹೀಗೆ E.I.A-2020 ಕರಡು ಅಧಿಸೂಚನೆಯು ಸ್ವದೇಶಿ ಹಾಗೂ ವಿದೇಶಿ ಉದ್ದಿಮೆದಾರರಿಗೆ ಪರಿಸರ ನಾಶ ಮಾಡಲು ಮುಕ್ತ ಅವಕಾಶ ಕೊಡುತ್ತದೆ, ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ. ಇದು ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ. ಈಶಾನ್ಯ ಭಾರತದಂತೆ, ಪಶ್ಚಿಮ ಘಟ್ಟಗಳೂ ಈ ಅಧಿಸೂಚನೆಯಿಂದ ಅಪಾಯಕ್ಕೆ ಈಡಾಗುತ್ತವೆ. E.I.A.-2020 ಕರಡು ಅಧಿಸೂಚನೆ ವಿರುದ್ಧ ಜನಜಾಗೃತಿ ಹಾಗೂ ಹೋರಾಟ ಅತ್ಯಂತ ಅಗತ್ಯ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ಪ್ರೊ. ಬಿ ಎಂ ಕುಮಾರಸ್ವಾಮಿ

ಪ್ರೊ. ಬಿ ಎಂ ಕುಮಾರಸ್ವಾಮಿಯವರು ಹೆಸರಾಂತ ಪರಿಸರ ತಜ್ಞರು ಮತ್ತು ಅರ್ಥಶಾಸ್ತ್ರಜ್ಞರು. ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಇವರು ಕರ್ನಾಟಕದ ಪಶಿಮ ಘಟ್ಟ ಕಾರ್ಯಪಡೆಯ ಮಾಜಿ ಸದಸ್ಯರೂ ಆಗಿದ್ದರು. ೨೦೦೯ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ‘ಸ್ವದೇಶ್ ಜಾಗರಣ ಮಂಚ್’ ಪ್ರತಿನಿಧಿಸಿ ಭಾಗವಹಿಸಿದ್ದರು. ಪ್ರೊಫೆಸರರು ಕಳೆದ ನಾಲ್ಕು ದಶಕಗಳಿಂದ ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Scroll to Top