ಕೃಷಿ ಕಾಯ್ದೆಗಳು: ಲೇಖನಮಾಲೆ ಭಾಗ 1: ಅಗತ್ಯ ಸರಕುಗಳ ಅಗತ್ಯತೆ

ಸುತ್ತಲೂ ಇದ್ದ ಹಸಿರು ಇತ್ತೀಚಿಗೆ ಢಾಳಾಗಿ ಕಾಣುತ್ತಿದೆ. ಹಸಿರು ಶಾಲು, ರೈತ, ನೇಗಿಲು, ಮತ್ತು ರೈತರ ಮಾರುಕಟ್ಟೆ ಹಠಾತ್ತಾಗಿ ಜನರ ಚರ್ಚೆಯ ವಿಚಾರವಾಗಿದೆ. ಕೇಂದ್ರ ಸರಕಾರ ಇತ್ತೀಚಿಗೆ ತಂದ ಕೃಷಿ ಕಾಯ್ದೆಗಳು ಮತ್ತು ಕರ್ನಾಟಕ ಸರಕಾರ ತಂದ ಕಾಯ್ದೆಗಳು ಕೃಷಿ ಕ್ಷೇತ್ರದಲ್ಲಿ ಕೋಲಾಹಲವನ್ನೇ ಸೃಷಿಸಲಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಲೇಖನ ಸರಣಿಯಲ್ಲಿ ಮೊದಲು ಕೇಂದ್ರ ಸರಕಾರ ಜಾರಿಗೆ ತಂದ (1) ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 (2) ಕೃಷಿ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020 ಮತ್ತು (3) ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020 ಮತ್ತು, ಆಮೇಲೆ ಕರ್ನಾಟಕ ಸರಕಾರ ಇತ್ತೀಚಿಗೆ ಕೊಂಡು ಬಂದ ಕೃಷಿ ಮಾರುಕಟ್ಟೆಗಳ ಕಾನೂನು ಬದಲಾವಣೆ ಮತ್ತು ಭೂ ಸುಧಾರಣೆ ಕಾಯ್ದೆಯ ಒಟ್ಟೂ ಪರಿಣಾಮವನ್ನು ಒಂದೊಂದಾಗಿ ಪರಿಶೀಲಿಸೋಣ.

ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020:

ಏನಿದು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020?

ಜನರ ಹಿತಾಸಕ್ತಿಗಾಗಿ ಕೆಲವು ಅಗತ್ಯ ಸರಕುಗಳ ಉತ್ಪಾದನೆ, ಪೂರೈಕೆ ಮತ್ತು ಹಂಚುವಿಕೆಗಳನ್ನು ತನ್ನ ತಹಬಂದಿಯಲ್ಲಿ ಇಟ್ಟುಕೊಳ್ಳಲು ೧೯೫೫ ರಲ್ಲಿ ಭಾರತ ಸರಕಾರ ಈ ಕಾಯ್ದೆ ಜಾರಿಗೆ ತಂದಿತು. ಅಗತ್ಯ ಸರಕುಗಳು ನಮ್ಮ ನಿಮ್ಮ ಇಷ್ಟದ ಅಥವಾ ವೈಯಕ್ತಿಕ ನೆಲೆಯಲ್ಲಿ ಅಗತ್ಯವಾದ ವಸ್ತುಗಳಲ್ಲ. ಸರಕಾರವು ಜನಸಾಮಾನ್ಯರಿಗೆ ನಿತ್ಯವೂ ಅನಿವಾರ್ಯವಾದ ವಸ್ತುಗಳನ್ನು ಅಗತ್ಯ ಸರಕುಗಳೆಂದು, ಕಾಯ್ದೆಯ ಅನುಸೂಚಿಯಲ್ಲಿ ಪಟ್ಟಿ ಮಾಡುತ್ತದೆ. ಈ ಅನುಸೂಚಿಯಲ್ಲಿ ಯಾವುದೇ ಪದಾರ್ಥವನ್ನು ಸೇರಿಸಲು ಅಥವಾ ತೆಗೆದು ಹಾಕಲು ಕೇಂದ್ರ ಸರಕಾರಕ್ಕೆ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ. ಆದರೆ ಆಹಾರ ಪದಾರ್ಥ ಮೊದಲಾದ, ಸಂವಿಧಾನದ ಅನುಸೂಚಿ ೭ ರಲ್ಲಿ, ಮೂರನೇ ಪಟ್ಟಿಯಲ್ಲಿ, ೩೩ ನೇ ಅಂಶದಲ್ಲಿ ಸೂಚಿಸಿದ ಸರಕುಗಳ ಕುರಿತು ಕೇಂದ್ರ ಸರಕಾರವೇ ತೀರ್ಮಾನ ತೆಗೆದುಕೊಳ್ಳಬಹುದು. ಮೊನ್ನೆಯ ತಿದ್ದುಪಡಿ ಬರುವವರೆಗೆ ಔಷಧಿಗಳು, ಗೊಬ್ಬರಗಳು, ಆಹಾರ ಪದಾರ್ಥಗಳು ಮತ್ತು ಖಾದ್ಯ ತೈಲಗಳು, ಪೆಟ್ರೋಲಿಯಂ ಪದಾರ್ಥಗಳು, ಸೆಣಬು ಮತ್ತು ಸೆಣಬಿನ ವಸ್ತ್ರೋತ್ಪಾದನೆಗಳು, ಬೆಳೆಗಳ ಮತ್ತು ತರಕಾರಿ – ಹಣ್ಣುಗಳ ಬೀಜಗಳು, ಹತ್ತಿಯ ಬೀಜ ಇವೇ ಮೊದಲಾದವುಗಳು ಈ ಪಟ್ಟಿಯಲ್ಲಿತ್ತು.

ಬೆಳೆಯುವ ಬೆಳೆಗಳನ್ನು ಯಾರು ಎಷ್ಟರ ಮಟ್ಟಿಗೆ ಕೂಡಿಡಬಹುದು, ಯಾವ ಬೆಲೆಗೆ ಮಾರಬಹುದು ಮತ್ತು ಯಾವ ಬೆಲೆಗೆ ಅದನ್ನು ಗ್ರಾಹಕರಿಗೆ ತಲುಪಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಈ ಸರಕುಗಳ ವಿಚಾರದಲ್ಲೂ ಸರಕಾರ ನಿರ್ಧರಿಸುತ್ತದೆ. ಅಷ್ಟೇ ಅಲ್ಲದೆ, ಈ ಸಾಮಾಗ್ರಿಗಳ ಗರಿಷ್ಠ ಮಾರಾಟ ಬೆಲೆ (Maximum Retail Price) ಯನ್ನು ಸರಕಾರಕ್ಕೆ ನಿರ್ಧರಿಸುವ ಅಧಿಕಾರ ಕೊಡುವುದು ಈ ಕಾನೂನು. ಹಾಗೆಯೇ ಈ ಕಾನೂನಿನಲ್ಲಿ ಸೂಚಿಸಿದ ಇತಿ- ಮಿತಿಗಳನ್ನು ಉಲ್ಲಂಘಿಸಿದ್ದಲ್ಲಿ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸಲು ಅವಕಾಶವಿದೆ.

ಬರ ಅಥವಾ ನೆರೆಯಂತಹ ಪರಿಸ್ಥಿತಿಯಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ತಾಕತ್ತಿರುವ ಖೂಳ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಶೇಖರಿಸಿ, ಮಾರುಕಟ್ಟೆಯಲ್ಲಿ ಕೃತಕ ದರ ಏರಿಕೆ ಸೃಷ್ಠಿಸಿ ಲಾಭ ತೆಗೆದುಕೊಳ್ಳುವಂತಹ ರೂಢಿಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾನೂನು ಜಾರಿಯಾಯಿತು. ಅಷ್ಟೇ ಅಲ್ಲದೆ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಸಾಮಾನ್ಯರಿಗೆ ತೀರಾ ಅಗತ್ಯವಾದ ದೈನಂದಿನ ಸರಕುಗಳನ್ನು ಹೊರೆಯಾಗದ ರೀತಿಯಲ್ಲಿ ತಲುಪಿಸಬೇಕು ಎಂಬುದು ಈ ಕಾಯ್ದೆಯ ಹಿಂದಿನ ಸದುದ್ದೇಶ. ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ದೇಶ ಭೀಕರ ಬರಗಾಲ ಮತ್ತು ಆರ್ಥಿಕ ಸಂಕಷ್ಟವನ್ನೆದುರಿಸಿದಾಗ ಈ ಕಾನೂನು ಬಹುಮಟ್ಟಿಗೆ ಸಹಾಯ ಮಾಡಿದ್ದರೂ, ಉದಾರೀಕರಣದ ನಂತರ ಕಾಲಕ್ರಮೇಣ ತನ್ನ ಪ್ರಭಾವವನ್ನು ಕಳೆದುಕೊಂಡಿತು ಎಂದೇ ತಜ್ಞರು ಅಭಿಪ್ರಾಯಪಡುತ್ತಾರೆ. ಇತ್ತೀಚಿಗೆ ಈರುಳ್ಳಿಯ ಬೆಲೆಯಲ್ಲಾದ ಹಠಾತ್ ಏರಿಕೆ ಮತ್ತು ಆ ಬೆಲೆ ಏರುಪೇರನ್ನು ಸರಕಾರ ಕ್ರಮೀಕರಣಗೊಳಿಸಲು ವಿಫಲವಾದದ್ದು, ಬೆಲೆ ನಿಯಂತ್ರಣದಲ್ಲಿ ಕಾನೂನು ಅಸಹಾಯಕವಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ. ಹಾಗಿದ್ದಾಗ, ಬದಲಾದ ಸಮಯದಲ್ಲಿ ಈ ಕಾನೂನಿನಲ್ಲಿ ಬದಲಾವಣೆ ತರುವುದು ಅವಶ್ಯಕವಾಗಿತ್ತು ಎಂದೇ ಹೇಳಬಹುದು.

ಅಗತ್ಯ ಸರಕುಗಳ ಕಾಯ್ದೆಗೆ ಸರಕಾರ ತಂದಿರುವ ತಿದ್ದುಪಡಿ ಏನು?

  1. ಸಿರಿಧಾನ್ಯಗಳು, ಬೇಳೆ- ಕಾಳುಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ತೈಲಗಳು ಮತ್ತು ತೈಲಬೀಜಗಳು ಇವುಗಳ ಪೂರೈಕೆಯ ಮೇಲೆ ಕೇಂದ್ರ ಸರಕಾರ ಯುದ್ಧ, ಬರ, ಅಸಾಮಾನ್ಯ ಬೆಲೆ ಏರಿಕೆ, ನೈಸರ್ಗಿಕ ವಿಕೋಪ ಮುಂತಾದ ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ನಿರ್ದಿಷ್ಟವಾದ ನಿಯಂತ್ರಣಗಳನ್ನು ಹೇರಬಹುದು.
  2. (a) ಯಾವುದೇ ತೋಟಗಾರಿಕೆ ಬೆಳೆಯ ಕಳೆದ ಹನ್ನೆರಡು ತಿಂಗಳ ಬೆಲೆ ಅಥವಾ ಕಳೆದೈದು ವರ್ಷದ ಸರಾಸರಿ ಮಾರಾಟ ಬೆಲೆ ಈ ಎರಡರಲ್ಲಿ ಯಾವುದು ಕಡಿಮೆಯದೋ, ಆ ಬೆಲೆಗಿಂತ ನೂರು ಶತಮಾನ ಬೆಲೆ ಏರಿಕೆ ಆದಲ್ಲಿ, ಅಥವಾ
    (b) ಬೇಗ ನಾಶವಾಗದ ಆಹಾರ/ ಕೃಷಿ ಪದಾರ್ಥದ ಕಳೆದ ಹನ್ನೆರಡು ತಿಂಗಳ ಬೆಲೆ ಅಥವಾ ಕಳೆದೈದು ವರ್ಷದ ಸರಾಸರಿ ಮಾರಾಟ ಬೆಲೆ ಈ ಎರಡರಲ್ಲಿ ಯಾವುದು ಕಡಿಮೆಯದೋ, ಆ ಬೆಲೆಗಿಂತ ಐವತ್ತು ಶತಮಾನ ಬೆಲೆ ಏರಿಕೆಯಾದಲ್ಲಿ ಮಾತ್ರ ಅಂತಹ ಸನ್ನಿವೇಶವನ್ನು ‘ಅಸಾಮಾನ್ಯ ಬೆಲೆ ಏರಿಕೆ’ ಎಂದು ಪರಿಗಣಿಸುತ್ತಾರೆ. ಅಂತಹ ಸನ್ನಿವೇಶದಲ್ಲಿ ಮಾತ್ರ ಕೇಂದ್ರ ಸರಕಾರ ಸರಕುಗಳ ಶೇಖರಣೆ ಮತ್ತು ಮಾರಾಟದ ಮೇಲೆ ನಿರ್ಬಂಧಗಳನ್ನು ಹೇರಬಹುದು.
  3. ಹೀಗೆ ಹೇರಲ್ಪಡುವ ನಿರ್ಬಂಧನೆಗಳು ಆಹಾರ ಪದಾರ್ಥಗಳನ್ನು ಸಂಸ್ಕರಿಸಿ ಗ್ರಾಹಕರಿಗೆ ಒದಗಿಸುವ ಉದ್ದಿಮೆಗಳು ಶೇಖರಿಸುವ ಸರಕುಗಳಿಗೆ ಅನ್ವಯವಾಗುವುದಿಲ್ಲ. ಉದಾಹರಣೆಗೆ: ಮಸಾಲೆ ಪುಡಿಗಳು, ಮುರುಕು ತಿಂಡಿಗಳು ಅಥವಾ ಪೇಯ – ಪಾನೀಯಗಳು ಇಂತಹವುಗಳನ್ನು ತಯಾರಿಸುವ ಉದ್ದಿಮೆಗಳು.
  4. ಈ ನಿಯಮಗಳು ಸರಕಾರೀ ಯೋಜನೆಗಳಿಗೆ ಅಥವಾ ಸಾರ್ವಜನಿಕರ ಸಲುವಾಗಿ ರೂಪಿಸಲಾದ ಸರಕಾರ ಭಾಗಿಯಾಗಿರುವ ಯೋಜನೆಗಳಿಗೂ ಅನ್ವಯಿಸುವುದಿಲ್ಲ.

ಬದಲಾವಣೆಗಳು ಅಗತ್ಯವಾಗಿದ್ದರೂ ತಂದ ಬದಲಾವಣೆಗಳು ಕೃಷಿಕರಿಗೆ ಅಥವಾ ಸಾಮಾನ್ಯರಿಗೆ ಉಪಯೋಗಕ್ಕೆ ಬರುವುದೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ನೇರವಲ್ಲ. ಬೆಲೆಯ ವಿಚಾರದಲ್ಲಿ ಸರಕಾರದ ನಿಯಂತ್ರಣವನ್ನು ಸಂಪೂರ್ಣವಾಗಿ ತೆಗೆದು ಹಾಕಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣಕ್ಕೆ ಇದು ಅವಕಾಶವಾಗುತ್ತದೆ. ಮೇಲ್ನೋಟಕ್ಕೆ ಈ ತಿದ್ದುಪಡಿಯಿಂದ ಅಪಾಯಕ್ಕೆ ಸಿಲುಕಿರುವುದು ಸಾಮಾನ್ಯ ಪ್ರಜೆಗಳು ಎಂದು ತೋರುತ್ತದೆ. ಗರಿಷ್ಠ ಮಾರಾಟ ಬೆಲೆಯನ್ನು ಸರಕಾರ ವಿಧಿಸಲು ಸಾಧ್ಯವಾಗದೇ ಇದ್ದಲ್ಲಿ, ಅವಶ್ಯಕ ಸರಕುಗಳಾಗಿದ್ದರೂ ಬೆಲೆ ಗಗನಕ್ಕೇರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.

ಆದರೆ ಸಂಪೂರ್ಣವಾಗಿ ಮಾರುಕಟ್ಟೆ ಇನ್ನು ವ್ಯಾಪಾರಿಗಳ ತಂತ್ರಗಳಿಗೆ ಬಲಿ ಬೀಳದಂತೆ ನಾವು ಪೈಪೋಟಿ ಕಾಯ್ದೆ, 2002 ನ್ನು ಉಪಯೋಗಿಸಿಕೊಳ್ಳಬೇಕಾದೀತು. ಪೈಪೋಟಿಯ ಕಾಯ್ದೆಯು ಮಾರುಕಟ್ಟೆಯಲ್ಲಿ ಕೃತಕ ದರ ಏರಿಕೆ ಮತ್ತು ಇಳಿಕೆಯನ್ನು ಮತ್ತು ಗ್ರಾಹಕರ ಶೋಷಣೆಯನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ರೂಪಿಸಿವೆ. ಉದಾಹರಣೆಗೆ, ವ್ಯಾಪಾರಿಗಳೆಲ್ಲರೂ ಒಟ್ಟಾಗಿ ಮಾತನಾಡಿಕೊಂಡು ಹೆಚ್ಚಿನ ದರವನ್ನೇ ನಿಗದಿಗೊಳಿಸುವುದು, ಕಾನೂನು ಬಾಹಿರವಾಗಿ ಪದಾರ್ಥಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವುದು ಮುಂತಾದ ಪ್ರಬಲವಾದ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವಂತಹ ರೂಢಿಗಳನ್ನು ನಿಷೇಧಿಸುತ್ತದೆ. ಉಲ್ಲಂಘನೆಗೆ ದಂಡವೋ ಅಥವಾ ಜೈಲು ಶಿಕ್ಷೆಗೋ ಒಳಗಾಗಬಹುದು.

ಈ ತಿದ್ದುಪಡಿಯ ಸಾಧಕ ಭಾದಕಗಳನ್ನು ನಮಗೆ ಇನ್ನೂ ಸಂಪೂರ್ಣವಾಗಿ ಅಥವಾ ಸ್ಪಷ್ಟವಾಗಿ ಚರ್ಚಿಸಲು, ಈ ತಿದ್ದುಪಡಿಯ ಜೊತೆಗೆ ತಂದ ಇತರ ಕಾಯ್ದೆಗಳನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮುಂದಿನ ಲೇಖನದಲ್ಲಿ ಆ ಕಾನೂನುಗಳನ್ನು ತಿಳಿದುಕೊಳ್ಳೋಣ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.

Scroll to Top