ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಸ್ಲಿಂ ವಿವಾಹ ವಿಚ್ಛೇದನ – ಜೀವನಾಂಶ: ಒಂದು ಮೆಲುಕು
130 ಕೋಟಿ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಭಾರತ; ಅನೇಕ ಧರ್ಮ, ಜಾತಿ, ಜನಾಂಗದಿಂದ ಕೂಡಿದ ಜಾತ್ಯತೀತ ದೇಶವಾಗಿದೆ. ಪ್ರತಿಯೊಂದು ಧರ್ಮವು ತನ್ನದೆ ಆದ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಳಗೊಂಡಿದೆ.
ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಶೆ.೧೫ರಷ್ಟು ಇದ್ದರೂ ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು, ವಸತಿ, ಶಿಕ್ಷಣಕ್ಕಾಗಿ ಅವರಲ್ಲಿ ಗಣನೀಯ ಸಂಖ್ಯೆಯ ಜನರು ಹಾತೊರೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ದಿನಮಾನಗಳಲ್ಲಿ ಅತೀ ಕನಿಷ್ಟ ಕಾನೂನಿನ ಅರಿವಿಲ್ಲದೇ ಬದುಕುತ್ತಿರುವುದು ನೋಡಿದರೆ ಅವರ ಶೋಚನೀಯ ಸ್ಥಿತಿಗೆ ಕೈಗನ್ನಡಿಯಾಗಿ ಎದ್ದು ಕಾಣುತ್ತಿದೆ.
ಇಂದಿನ ಆಧುನೀಕರಣ ಯಗದಲ್ಲಿ ಕರ್ಮಠ ಸಿದ್ಧಾಂತ, ತತ್ವಗಳಿಗೆ ಜೋತುಬಿದ್ದು ಸಮಾಜದಲ್ಲಿ ಅಸಹಾಯಕರಾಗಿ, ಬಡತನದಲ್ಲಿ ಬೆಂದು; ಅನಕ್ಷರಸ್ಥರಾಗಿ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಬದುಕುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹಣೆಯೆಂದರೆ ಎಂದೋ ಆಗಬೇಕಾಗಿದ್ದ ಮುಸ್ಲಿಂ ವಿವಾಹ ವಿಚ್ಛೇದನ ಜೀವನಾಂಶ ಪ್ರಕ್ರಿಯೆ ಅಥವಾ ನೀತಿ- ನಿಯಮಗಳ ಮಾರ್ಪಾಡು, ಸುಮಾರು ದಶಕಗಳ ಹೋರಾಟದ ಫಲವಾಗಿ, ನ್ಯಾಯಾಲಯಗಳ ಹಸ್ತಕ್ಷೇಪದಿಂದ ಮಾತ್ರ ಸರಿಯಾದ ಚೌಕಟ್ಟಿನಲ್ಲಿ ಸಿಕ್ಕಿರುವುದು.
ನಮ್ಮೆಲ್ಲರಿಗೂ ತಿಳಿದಿರುವಂತೆ ಒಬ್ಬ ಮುಸ್ಲಿಂ ಪತಿಯು ತನ್ನ ಪತ್ನಿಗೆ ತಲಾಖ್ – ತಲಾಖ್ – ತಲಾಖ್ ಎಂಬ ಮೂರು ಪದಗಳ readymade ಉಚ್ಚಾರಣೆಯ ಮೂಲಕ ವಿಚ್ಛೇದನ ನೀಡಿ ಕೋರ್ಟ್ ಗೊತ್ತುಪಡಿಸಿದ ಜೀವನಾಂಶ ಕೊಟ್ಟು ಕೈ ತೊಳೆದುಕೊಳ್ಳಬಹುದಾಗಿತ್ತು. ಆದರೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಕಾಲಕ್ಕೆ ತಕ್ಕಂತೆ ಅನೇಕ ಅಂಶಗಳನ್ನು ಮಾರ್ಪಾಟು ಮಾಡಿ ತೀರ್ಪುಗಳನ್ನು ನೀಡುತ್ತಾ ಬಂದಿದೆ. ಹಾಗಾದರೆ, ಮುಸ್ಲಿಂ ಕಾನೂನಿನ ಪ್ರಕಾರ ವಿಚ್ಛೇದನವನ್ನು ಯಾರು ನೀಡಬಹುದು? ಜೀವನಾಂಶ ಯಾರಿಂದ ಪಡೆಯಬಹುದು? ನ್ಯಾಯಾಂಗ ವ್ಯವಸ್ಥೆಯಲ್ಲಿ ಮಾರ್ಪಾಡದ ಬಗೆ ಹೇಗೆ? ಇದರ ಹಿನ್ನಲೆ ಏನು? ಎಂಬುದನ್ನು ಸವಿವರವಾಗಿ ತಿಳಿಯೋಣ..
ಮುಸ್ಲಿಂ ಕಾನೂನಿನ ಪ್ರಕಾರ ಮದುವೆ/ನಿಖಾ ಎನ್ನುವಂತಹದು ಇಬ್ಬರ (ವಿರುದ್ಧ ಲಿಂಗಗಳ) ನಡುವೆ ನಡೆಯುವ ಒಪ್ಪಂದವಾಗಿದೆ. ಮದುವೆಯ ಸಂದರ್ಭದಲ್ಲಿ ವಿವಾಹನಾಗುವ ವರನು ತನಗೆ ವಿವಾಹಳಾಗುವ ಹೆಣ್ಣಿಗೆ ಆಶ್ವಾಸನೆಗಳನ್ನು ನೀಡಿರುತ್ತಾನೆ. ಆ ಆಶ್ವಾಸನೆ ಪ್ರಕಾರವೇ ಅವನು ಜೀವನ ನಿರ್ವಹಣೆ ಮಾಡಬೇಕಾಗುತ್ತದೆ, ತಪ್ಪಿದಲ್ಲಿ ಮಡದಿಯು ಅವನ ವಿರುದ್ಧ ಕೋರ್ಟಿ ನಲ್ಲಿ ದಾವೆಹೂಡಿ ವಿಚ್ಛೇದನ ಪಡೆಯಬಹುದು ಅಥವಾ ‘Judicial Divorce under ( Dissolution of Muslim Marriage Act, 1939) ರ ಪ್ರಕಾರ ಒಬ್ಬ ಪತ್ನಿಯು ತನ್ನ ಪತಿಯಿಂದ ಕೆಳಗಿನ ಅಂಶಗಳಿಂದ ವಿಚ್ಛೇದನ ಪಡೆಯಬಹುದು.
- ಒಂದು ವೇಳೆ ಪತಿಯು ೪ ವರ್ಷ ಗಳಿಂದ ಕಾಣೆಯಾಗಿದ್ದ ರೆ
- ಸತತವಾಗಿ ೨ ವರ್ಷ ಗಳಿಂದ ಪತ್ನಿಯನ್ನು ಸಾಕಲು ಅಸಮರ್ಥ ನಾಗಿದ್ದರೆ
- ಪತಿಯು ಕುಷ್ಠ ರೋಗಿಯಾಗಿದ್ದರೆ
- ಕ್ರೂರಿಯಾಗಿದ್ದರೆ
ಮೇಲಿನ ಯಾವುದಾದರೂ ಒಂದು ಅಂಶದಿಂದ ಪತ್ನಿಯು ಪತಿಯಿಂದ ವಿಚ್ಛೇದನ ಪಡೆಯಬಹುದು. ಆದರೆ ವಿಚ್ಛೇದನದ ನಂತರ ಹೆಂಡತಿಗೆ ಕೊಡಬೇಕಾದ ಜೀವನಾಂಶವು ನ್ಯಾಯಾಲಯಗಳ ಹಲವು ತೀರ್ಪುಗಳಿಗೆ ಎಡೆಯಾಗಿ, ಸುಧಾರಣೆಗಳನ್ನು ಕಾಣುತ್ತಾ ಬಂದಿವೆ. ಈ ಲೇಖನದಲ್ಲಿ ಅಂತಹ ಅತಿ ಮುಖ್ಯ ತೀರ್ಪುಗಳು ಮತ್ತು ಅವುಗಳಿಂದಾದ ಮಾರ್ಪಾಡುಗಳನ್ನು ನೋಡೋಣ:
ಅಲೀ ಅಕ್ಬರ್ vs. ಫಾತಿಮಾ (1929)
ಹಿಂದೂ ಕಾನೂನಿನ ಪ್ರಕಾರ ವಿಚ್ಛೇದಿತ ಪತಿ ಅಥವಾ ಪತ್ನಿ ಇವರಿರ್ವರಲ್ಲಿ ಯಾರಾದರೊಬ್ಬರು ಕೋರ್ಟಿನ ತೀರ್ಪಿನನ್ವಯ ಯಾರಿಂದಲಾದರೂ ಜೀವನಾಂಶ ಪಡೆಯಬಹುದು. ಆದರೆ, ಇಸ್ಲಾಂ ಕಾನೂನಿನ ಪ್ರಕಾರ ಪತಿ ಒಬ್ಬನೇ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಜವಾಬ್ದಾರನು(ಅಂದರೆ ಹೆಂಡತಿಯು ಗಂಡನಿಗೆ ಜೀವನಾಂಶ ನೀಡಲು ಜವಾಬ್ದಾರಳಲ್ಲ). ಈ ಕೇಸಿನಲ್ಲಿ ಅಲಿ ಅಕ್ಬರ ಮತ್ತು ಫಾತಿಮಾ ಎನ್ನುವವರಿಬ್ಬರು ವಿಚ್ಛೇದನಕ್ಕಾಗಿ ಕೋರ್ಟಿನಲ್ಲಿ ದಾವೆ ಹೂಡಿದರು. ನ್ಯಾಯಾಲಯವು ಪತಿ (ಅಲೀ ಅಕ್ಬರ) ಪತ್ನಿ(ಫಾತಿಮಾ) ಗೆ ಪ್ರತಿ ತಿಂಗಳು 25₹ (ಖಾರ್ಚ ಇ ಪಂದನ್) ಯನ್ನು ಇದ್ದತ್ ಅವಧಿಯವರೆಗೆ ನೀಡಬೇಕೆಂದು 1929 ರಲ್ಲಿ ನಿರ್ದೇಶಿಸಿತು.
ಇದ್ದತ್ ಒಂದು ಅರೇಬಿಕ್ ಪದವಾಗಿದ್ದು, ‘ಕಾಯುವ ಅವಧಿ’ ಎನ್ನುವ ಅರ್ಥವನ್ನು ಕೊಡುತ್ತದೆ. ಮುಸ್ಲಿಂ ವೈಯುಕ್ತಿಕ ಕಾನೂನಿನ ಪ್ರಕಾರ,ಇಸ್ಲಾಂ ಧರ್ಮದ ಮಹಿಳೆ ತನ್ನ ಗಂಡನ ಮರಣದ ನಂತರ ಅಥವಾ ವಿವಾಹ ವಿಚ್ಛೇದನದ ನಂತರ ಮುಂದೆ ಆ ಮಹಿಳೆ ಕಾನೂನು ಬದ್ಧವಾಗಿ ಬೇರೊಬ್ಬರನ್ನು ವಿವಾಹ ಆಗಬೇಕಾದರೆಗುವ ಮುಂಚೆ ಅವಳ ಗರ್ಭದ ಪರಿಶುದ್ಧತೆಯನ್ನು ಪರೀಕ್ಷಿಸುವ ಅಥವಾ ಪತಿಯ ಮರಣದ ಶೋಕಾಚರಣೆಯ ಕಾಲ ಘಟ್ಟವಾಗಿದೆ (90 ದಿವಸ ಬೇರ್ಪಡಿಕೆಯ ಕಾರಣದ ಮೇರೆಗೆ ಇದರ ಅವಧಿ ನಿರ್ಧಾರವಾಗುತ್ತದೆ.)
ಆದರೆ ಈ ತೀರ್ಪು ಇಬ್ಬಂದಿಗೆ ಎಡೆಮಾಡಿಕೊಟ್ಟಿತು. ಏಕೆಂದರೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 125 (Section 125 of Criminal Procedure Code,1973)ರ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯು ತನ್ನ ಕುಟುಂಬಸ್ಥರನ್ನು ನೋಡಿಕೊಳ್ಳುವುದು ಕಾನೂನು ವಿಧಿಸುವ ಜವಾಬ್ದಾರಿ. ಇದನ್ನು ನಿರ್ವಹಿಸದಿದ್ದಲ್ಲಿ ಅವನಿಗೆ CrPC 125(3) ರಂತೆ ಒಂದು ತಿಂಗಳು ಶಿಕ್ಷೆ ನೀಡಬಹುದೆಂದು ತಿಳಿಸುತ್ತದೆ.
ಒಬ್ಬ ವ್ಯಕ್ತಿಯಿಂದ ಜೀವನಾಂಶ ಪಡೆಯಲು ಹಕ್ಕುಳ್ಳವರಾಗಿರುವವರು:
- ಹೆಂಡತಿ
- ತಂದೆ – ತಾಯಿ
- ಅವಿವಾಹಿತ ಮಕ್ಕಳು
ಇವರೆಲ್ಲರೂ ಹಕ್ಕುಭಾದ್ಯಸ್ತರಾಗಿದ್ದು, ಒಂದು ವೇಳೆ ಜೀವನಾಂಶ ದೊರೆಯದೆ ಪಕ್ಷದಲ್ಲಿ ಕೋರ್ಟಿನಲ್ಲಿ ಅರ್ಜಿ ಹಾಕಿದ 60 ದಿವಸದೊಳಗೆ ಜೀವನಾಂಶ ಪಡೆಯಲು ಅರ್ಹಾಗಿರುತ್ತಾರೆ.
ಈ ಕಾನೂನು ಮತ್ತು ಅಲಿ ಅಕ್ಬರ್ ತೀರ್ಪಿನಲ್ಲಿರುವ ವೈರುದ್ಧ್ಯವನ್ನು ತಿಳಿಯಾಗಿಸಿದ್ದು ಮತ್ತು ತದನಂತರದಲ್ಲಿ ರಾಜಕೀಯವಾಗಿ ಹೆಚ್ಚು ಅಲ್ಲೋಲ ಕಲ್ಲೋಲ ಮಾಡಿದ ತೀರ್ಪು:
ಮಹಮ್ಮದ್ ಅಹಮದ್ ಖಾನ್ vs. ಶಾ ಬಾನು ಬೇಗಂ(1985)
ಈ ತಿರ್ಪಿನನ್ವಯ ವಿಚ್ಛೇದಿತ ಪತ್ನಿಯು (ಶಾ ಬಾನು ಬೇಗಂ) ಇದ್ದತ್ ಅವಧಿಯ ನಂತರವೂ ಒಬ್ಬ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹಳು ಎಂದು ಸ್ಪಷ್ಟವಾಗಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿತು. ತಪ್ಪಿದಲ್ಲಿ ಈಗಲೇ ಹೇಳಿದಂತೆ Sec 125(3) Criminal Procedure Code,1973 ರ ಪ್ರಕಾರ ಒಂದು ತಿಂಗಳು ಶಿಕ್ಷೆ ಜಾರಿಯಾಗಬೇಕು ಎಂದು ಎಚ್ಚರಿಸುತ್ತದೆ.
ಈ ತೀರ್ಪು ಕಟ್ಟಾರ್ ಇಸ್ಲಾಂವಾದಿಗಳನ್ನು ಕೆರಳಿಸಿದ್ದಲ್ಲದೆ, ಅಂದಿನ ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ದೇಶದೆಲ್ಲೆಡೆ ಅನೇಕ ಪ್ರತಿಭಟನೆಗಳು ಜರುಗಿದವು. ಈ ಪ್ರತಿಭಟನೆಗಳಿಗೆ ಮಣಿದ ಸರ್ಕಾರವು ಸಂಸತ್ತಿನಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕುಗಳ ರಕ್ಷಣೆ) ಕಾಯ್ದೆ, 1986 (The Muslim Women (Protection of Rights on Divorce) Act, 1986) ನ್ನು ಜಾರಿಗೆ ತಂದಿತು. ಇದರಂತೆ ಒಬ್ಬ ವಿಚ್ಛೇದಿತ ಪತ್ನಿಯು ಗಂಡನಿದ ಇದ್ದತ್ ಅವಧಿಯವರೆಗೆ ಮಾತ್ರ ಜೀವನಾಂಶ ಪಡೆಯಲು ಆರ್ಹಳು. ಒಂದು ವೇಳೆ ಇದ್ದತ್ ಅವಧಿ ಮುಗಿದ ನಂತರ ಅವಳು ಜೀವನ ಮುನ್ನಡೆಸಿಕೊಂಡು ಹೋಗಲು ಅಸಮರ್ಥಳಾದರೆ, ಅವಳಿಗೆ ಸಂಬಂಧ ಪಟ್ಟ ಸಂಬಂಧಿಕರು; ಸಂಬಂಧಿಕರು ಪೂರೈಸಲು ಅಸಮರ್ಥರಾದರೆ, ವಕ್ಫ್ ಬೋರ್ಡ್ ಜೀವನಾಂಶ ನೀಡಬೇಕೆಂದು ತಿದ್ದುಪಡಿಮಾಡಿತು.
ಇದು ಅಸಂಬದ್ಧ ಹಾಗೂ ಅವಿಶ್ವಾಸನೀಯ ಕಾನೂನಾಗಿತ್ತು. ಆದರೂ ಬಹು ಕಾಲದವರೆಗೆ ಈ ಕಾನೂನು ಮುಂದುವರೆದುಕೊಂಡು ಬಂದಿತು. ಈ ವಿವಾದಕ್ಕೆ ತಿಲಾಜಲಿ ಇಟ್ಟ ಮುಸ್ಲಿಂ ಮಹಿಳೆಯರ ಜೀವನದಲ್ಲಿ ಬದಲಾವಣೆ ತಂದ ಬಹುಮುಖ್ಯ ತೀರ್ಪು:
ಡೇನಿಯಲ್ ಲತೀಫ್ vs. ಯೂನಿಯನ್ ಆಫ್ ಇಂಡಿಯಾ (2001)
ಇಲ್ಲಿ ವಿಚ್ಛೇದಿತ ಪತ್ನಿಗೆ ಭವಿಷ್ಯದ ಜೀವನ ನಿರ್ಮಾಣ ಮಾಡಿಕೊಂಡು ಹೋಗಲು ಎಷ್ಟು ಹಣದ ಅವಶ್ಯಕತೆ ಇದೆಯೋ ಅಷ್ಟನ್ನು ಸಹ ಸಂಬಂಧಪಟ್ಟ ವಿಚ್ಛೇದಿತ ಪತಿಯು ಇದ್ದತ್ ಅವಧಿಯೊಳಗೆ ಪೂರೈಸಬೇಕೆಂದು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿತು. ಈ ಪ್ರಕರಣದಲ್ಲಿ 1986ರ ಕಾನೂನಿನ ಮಾನ್ಯತೆಯನ್ನು ಪ್ರಶ್ನೆ ಮಾಡಲಾಗಿತ್ತು. ಕಾನೂನನ್ನು ನ್ಯಾಯಾಲಯ ಅಮಾನ್ಯ ಮಾಡದಿದ್ದರೂ, ಶಾ ಬಾನೋ ಪ್ರಕರಣದಲ್ಲಿ ನ್ಯಾಯಾಲಯ ಹಾಕಿದ ಬುನಾದಿಯ ಮೇಲೆಯೇ 1986ರ ಕಾನೂನ್ನು ವಿಶ್ಲೇಷಿಸಬೇಕೆಂದೂ ಆ ಮೂಲಕ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಆಗುತ್ತದೆ ಎಂದು ಸ್ಪಷ್ಟಪಡಿಸಿತು.
ಹೀಗೆ ಮುಸ್ಲಿಂ ವೈಯುಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನವು ಅನೇಕ ರೂಪುರೇಷೆಗಳನ್ನು ಕಂಡು ಹಲವು ರೀತಿಯ ತಿರುವುಗಳನ್ನು ನೋಡಿದೆ. ಆದರೆ ಇಂತಹ ದಶಕಗಳ ಹೋರಾಟದ ನಂತರವೂ ಮಹಿಳೆಯರಿಗೆ ಇನ್ನೂ ಹಲವು ರೀತಿಯ ಅನ್ಯಾಯಗಳು ನಡೆಯುತ್ತಲೇ ಇವೆ ಮತ್ತು ನಮ್ಮ ನಾಯಕರು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸೋಜಿಗವೇ ಸರಿ. ನೀವೇನಂತೀರಾ?
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
ಇತ್ತೀಚಿನ ಬ್ಲಾಗ್‌ಗಳು
ಲೇಖಕರ ಪರಿಚಯ
ಉಮಾಶಂಕರ ಹಿರೇಮಠ
ಯು.ಎ.ಡಿ. ಇರ್ಫಾನ್
ಯು.ಎ.ಡಿ. ಇರ್ಫಾನ್ ರವರು ಹೊಸಪೇಟೆ ತಾಲ್ಲೂಕು ಬಳ್ಳಾರಿ ಜಿಲ್ಲೆಯವರಾಗಿದ್ದು, ಗಣಿತ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, B.ed ವೃತ್ತಿ ಶಿಕ್ಷಣವನ್ನು ಪೂರೈಸಿದ್ದಾರೆ. ಪ್ರಸ್ತುತವಾಗಿ ಖಾಸಗಿ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಾ, ಜೊತೆಯಲ್ಲಿಯೇ, ಕಾನೂನು ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.