ಕೃಷಿ ಕಾಯ್ದೆಗಳು : ಲೇಖನಮಾಲೆ ಭಾಗ 2: ಭರವಸೆ ಬೆಲೆ ಮೇಲಿಡಬಹುದೇ ಭರವಸೆ?

ಇಡೀ ದೆಲ್ಲಿಯೇ ನೇಗಿಲ (ಟ್ರ್ಯಾಕ್ಟರುಗಳ?) ಗುಡುಗಿಗೆ ನಡುಗುತ್ತಿರುವಾಗ, ಮತ್ತೊಮ್ಮೆ ರೈತರು ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಎರಡನೆಯ ಲೇಖನ ಬರೆಯಲು ತಡವಾಗಿದ್ದಕ್ಕೆ ಕ್ಷಮಿಸಿ. ನಿಮ್ಮ ಹಾಗೆಯೇ ನಾನೂ ರೈತರನ್ನು ಅವರು ಪ್ರತಿಭಟನೆ ಮಾಡುವ ತನಕ ಮರೆತುಬಿಟ್ಟಿದ್ದೆ! ಇವತ್ತಿನ ಲೇಖನ ವಿವಾದಕ್ಕೊಳಪಟ್ಟ ಮೂರು ಕಾನೂನುಗಳಲ್ಲಿನ ಎರಡನೇ ಕಾನೂನು ಅಂದರೆ ಕೃಷಿ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020 ರ ಬಗ್ಗೆ.

ಕೃಷಿ ಉತ್ಪಾದನೆಗಳಿಗೆ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತು ನಿರ್ದಿಷ್ಟವಾಗಿ ಈ ವರೆಗೆ ಯಾವುದೇ ಕಾನೂನುಗಳಿರಲಿಲ್ಲ. ಮೊದಲ ಬಾರಿಗೆ ಈ ವಿಷಯಗಳ ಕುರಿತು ಮೇಲೆ ಕೇಂದ್ರ ಸರಕಾರವು ಕಾನೂನನ್ನು ತಂದಿದೆ. ಆ ಮಟ್ಟಿಗೆ ಇದೊಂದು ಒಳ್ಳೆಯ ಹೆಜ್ಜೆ. ಆದರೆ ಕಾನೂನಿನ ರೂಪು – ರೇಷೆ ರೈತರ ಮೇಲಿನ ಪರಿಣಾಮವನ್ನು ನಿರ್ಧರಿಸುತ್ತದೆ. ಹಾಗಾಗಿ ಈ ಕಾನೂನು ಏನು ಎಂಬುದನ್ನು ತಿಳಿದುಕೊಳ್ಳೋಣ.

ಕಾನೂನಿನ ಕಾರಣೋದ್ದೇಶ ಹೇಳಿಕೆ (Statement of Objects and reasons) ಯ ಪ್ರಕಾರ ರಾಷ್ಟ್ರ ಮಟ್ಟದಲ್ಲಿ ರೈತರು ಮತ್ತು ಕೃಷಿ ಉದ್ಯಮ ಸಂಸ್ಥೆಗಳ, ದೊಡ್ಡ ವ್ಯಾಪಾರಿಗಳ, ಸಂಸ್ಕರಣಾ ಘಟಕಗಳ ಮತ್ತು ರಫ್ತುದಾರರ ನಡುವಿನ ಒಪ್ಪಂದಗಳನ್ನು ಸಾಧ್ಯವಾಗಿಸುವುದಕ್ಕೆ ಮತ್ತು ಅಂತಹ ಒಪ್ಪಂದಗಳಲ್ಲಿ ರೈತರ ಹಿತ ರಕ್ಷಿಸುವುದಕ್ಕೆ ಈ ಕಾನೂನನ್ನು ಜಾರಿ ಮಾಡಲಾಗಿದೆ. ಅದರ ಜೊತೆಯಲ್ಲಿಯೇ ಈ ಕರಾರುಗಳು ಪಾರದರ್ಶಕ ಮತ್ತು ನ್ಯಾಯವಾದ ರೀತಿಯಲ್ಲಿ ಎರಡೂ ಪಕ್ಷಗಳಿಗೆ ಆದಾಯ ತರುವಂತಾಗಿದ್ದು, ಸಮ್ಮತವೂ ಆಗಿರಬೇಕೆಂದು ಪ್ರತಿಪಾದಿಸಿದೆ ಸರಕಾರ.

ಕೃಷಿ ಒಪ್ಪಂದ:
ಮೊದಲನೆಯ ಅಧ್ಯಾಯದಲ್ಲಿ ಕೃಷಿ ಒಪ್ಪಂದ ಅಂದರೇನು, ಅವು ಹೇಗಿರಬೇಕು ಎಂಬ ನಿಯಮದ ಚೌಕಟ್ಟನ್ನು ಕಟ್ಟಲಾಗಿದೆ. ಯಾವುದೇ ಒಬ್ಬ ರೈತ ಅಥವಾ ಒಂದು ರೈತ ಸಂಘಟನೆ ತನ್ನ ಕೃಷಿ ಉತ್ಪಾದನೆಗಳ ಮಾರಾಟಕ್ಕಾಗಿ, ಉತ್ಪಾದನೆಯ ಗುಣಮಟ್ಟ, ಕಾಲಾವಧಿ ಮತ್ತು ಬೆಳೆಗಳ ಕುರಿತು ಇನ್ನೊಬ್ಬ ಪ್ರಾಯೋಜಕನೊಂದಿಗೆ ( ದೊಡ್ಡ ವ್ಯಾಪಾರೀ ಸಂಸ್ಥೆಗಳು, ಸಂಸ್ಕರಣಾ ಘಟಕಗಳು, ಕಂಪನಿಗಳು ಇತ್ಯಾದಿ) ಕರಾರು ಮಾಡಿಕೊಳ್ಳಬಹುದು (ಕಲಂ 3) ಉದಾಹರಣೆಗೆ ಬ್ಯಾಡಗಿ ಮೆಣಸಿನಕಾಯಿ ಬೆಳೆಯುವ ರೈತನೊಬ್ಬ ನೇರವಾಗಿ ಮಸಾಲೆ ಪುಡಿಗಳನ್ನು ಮಾಡುವ ಕಂಪನಿಯೊಂದಿಗೆ ಒಂದು ಬೆಳೆಯ ಅವಧಿಯ ಸಲುವಾಗಿ ಒಂದು ಕರಾರು ಮಾಡಿಕೊಂಡು, ಇಷ್ಟು ಸಮಯದಲ್ಲಿ ಅಜಮಾಸು ಇಂತಿಷ್ಟು ಮೆಣಸಿನಕಾಯಿಯನ್ನು ಬೆಳೆದು ಮಾರುತ್ತೇನೆ ಎಂದೂ ಅದಕ್ಕೆ ಇಷ್ಟು ಬೆಲೆ ಆಗಬಹುದು ಎಂದೂ, ಯಾವುದೇ ಕಾರಣಕ್ಕೂ ಆ ಬೆಲೆ ಕೊಟ್ಟು ಮೆಣಸಿನಕಾಯಿಯನ್ನು ಖರೀದಿ ಮಾಡಬೇಕೆಂದೂ ಕರಾರು ಮಾಡಿಕೊಳ್ಳಬಹುದು. ಒಂದು ವೇಳೆ, ಆ ರೈತನ ಹತ್ತಿರ ಫಲವತ್ತಾದ ಭೂಮಿ ಇದ್ದು, ಬೆಳೆಯುವ ತಾಕತ್ತೂ ಇದ್ದು, ಕೃಷಿ ಚಟುವಟಿಕೆಗಳಿಗೆ ಬೇಕಾದ ಹಣವಿಲ್ಲದಿದ್ದರೆ, ಆ ಚಟುವಟಿಕೆಗಳ ಸಲುವಾಗಿಯೂ ಒಪ್ಪಂದ ಮಾಡಿಕೊಂಡು ಮಸಾಲೆ ಕಂಪನಿಯ ಬಂಡವಾಳವನ್ನು ಮೆಣಸಿನಕಾಯಿ ಬೆಳೆಯಲು ಹಾಕಬಹುದು. ಕರಾರು ಯಾವುದರ ಸಲುವಾಗಿ ಮತ್ತು ನಿಬಂಧನೆಗಳೇನು ಎಂಬುದು ಸ್ಪಷ್ಟವಿರಬೇಕಷ್ಟೆ. ಆದರೆ ಕೆಲವು ಮೂಲಭೂತವಾದ ನಿಬಂಧನೆಗಳಿವೆ :
1) ಯಾವ ಒಪ್ಪಂದವೂ ಭೂಮಿಯಲ್ಲಿ ಗೇಣಿದಾರ ಅಥವಾ ಉಳುವವನ ಹೊಟ್ಟೆಗೆ ಚಪ್ಪಡಿ ಎಳೆಯಬಾರದು.
2) ಕರಾರು ಒಂದು ಬೆಳೆ/ ಉತ್ಪಾದನೆಯ ಅವಧಿ ಅಥವಾ ಹೆಚ್ಚೆಂದರೆ ಐದು ವರ್ಷಗಳವರೆಗಿನ ಕಾಲಾವಧಿಗೆ ಮಾಡಿಕೊಳ್ಳಬಹುದು.
3) ಒಂದು ಉತ್ಪಾದನೆ ಐದಕ್ಕೂ ಹೆಚ್ಚುವರ್ಷ ತೆಗೆದುಕೊಳ್ಳುವ ಬೆಳೆಗಳ ವಿಚಾರದಲ್ಲಿ ಗರಿಷ್ಟ ಕಾಲಾವಧಿ ನಿಗದಿಪಡಿಸಿಲ್ಲ. ಅಂತಹ ಸಮಯದಲ್ಲಿ ಎರಡೂ ಪಕ್ಷಗಳಿಗೆ ಒಪ್ಪಿಗೆಯಾದ ಒಂದು ಅವಧಿಯನ್ನು ಒಪ್ಪಂದದಲ್ಲಿಯೇ ನಿಗದಿ ಮಾಡಬೇಕು.

ರೈತರು ಯಾವ ರೀತಿಯಲ್ಲಿ ಈ ಲಿಖಿತ ಒಪ್ಪಂದಗಳನ್ನು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರಕಾರ ಮಾರ್ಗದರ್ಶಿಗಳನ್ನು ಮಾದರಿ ಒಪ್ಪಂದಗಳನ್ನೂ ಹೊರಡಿಸಬಹುದು.

ಉತ್ಪಾದನೆಯ ಗುಣಮಟ್ಟ:
ಉತ್ಪಾದನೆಯ ಗುಣಮಟ್ಟವನ್ನು ಯಾವ ಮಾನದಂಡ ಇಟ್ಟುಕೊಂಡು ಕರಾರುಗಳಲ್ಲಿ ಗೊತ್ತುಮಾಡಬಹುದು ಎಂದು ಕಲಂ 4ರಲ್ಲಿ ಹೇಳಿದೆ. ಕಟ್ಟುಪಾಡುಗಳು ಆಯಾ ಪ್ರದೇಶದ ಹವಾಮಾನ, ಕೃಷಿ – ಉದ್ಯಮದ ರೂಢಿಗಳು ಮತ್ತು ಗುಣಮಟ್ಟ ಹೀಗೆಯೇ ಇರಬೇಕು ಎಂದು ಕೇಂದ್ರ ಅಥವಾ ರಾಜ್ಯ ಸರಕಾರ ಲಕ್ಷ್ಮಣ ರೇಖೆ ಎಳೆದಿದ್ದರೆ, ಅವುಗಳಿಗೆ ಅನುಸಾರವಾಗಿ ಸ್ಫುಟವಾಗಿ ಹೇಳಬೇಕು. ಇಂತಹ ಗೊಬ್ಬರ ಬಳಸಬೇಕು, ಇಂತಹ ಬೇಸಾಯ ಪದ್ಧತಿಗಳನ್ನು ಅನುಸರಿಸಬೇಕು ಎಂಬ ವಿವರಗಳನ್ನು ಒಪ್ಪಂದದಲ್ಲಿ ಸೇರಿಸಬಹುದು. ವ್ಯವಸಾಯದ ನಡೆಯುತ್ತಿರಬೇಕಾದರೆ ಒಪ್ಪಿಕೊಂಡ ರೀತಿಯಿಯಲ್ಲಿಯೇ ಎಲ್ಲ ನಡೆಯುತ್ತಿದೆಯೋ ಎಂದು ಸ್ವತಂತ್ರವಾದ ಪರೀಕ್ಷಕರಿಂದ ಪರೀಕ್ಷೆ ಮಾಡುವಂತೆ ಕರಾರಿನಲ್ಲಿ ಮೊದಲೇ ಅವಕಾಶ ಮಾಡಿಕೊಳ್ಳಬಹುದು.

ಬೆಲೆ ನಿಗದಿ :
ಎರಡೂ ಪಾರ್ಟಿಗಳಿಗೆ ತಕರಾರಿಲ್ಲದ ದರವನ್ನು ಕರಾರಿನಲ್ಲಿಯೇ ಮುಂಚಿತವಾಗಿ ನಮೂದಿಸಬೇಕು (ಕಲಂ 5). ನಿರ್ಧರಿಸಿದ ಬೆಲೆಯಲ್ಲಿ ಒಂದು ಮೊತ್ತವನ್ನು ಭರವಸೆ ಬೆಲೆ ಎಂದೂ ಅದಲ್ಲದೆ ನಿರ್ದಿಷ್ಟವಾದ ಒಂದು ಮೊತ್ತವನ್ನು ಬೆಲೆ ಎಂದೂ ಸೂಚಿಸಬೇಕು. ಅಂದರೆ ನೂರು ಕೆಜಿ ಅಕ್ಕಿಗೆ ೧೦೦೦ ಎಂದು ಗೊತ್ತು ಮಾಡಿದರೆ, ೫೦೦ನ್ನು ಭರವಸೆ ಬೆಲೆ ಎಂದು ಗೊತ್ತು ಮಾಡಬಹುದು. ಈ ಭರವಸೆ ಬೆಲೆ ಗೊತ್ತು ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗಳು (ಎಪಿಎಂಸಿ) ನಿಗದಿಪಡಿಸಿದ ಅಥವಾ ಎಲೆಕ್ಟ್ರಾನಿಕ್ ವ್ಯಾಪಾರಿ ವೇದಿಕೆಗಳ ಬೆಲೆಗಳ ಅಥವಾ ಆ ರೀತಿಯ ಕನಿಷ್ಠ ಬೆಲೆಗಳ ಸಹಾಯ ಪಡೆಯಬಹುದು. ಆದರೆ ಎಪಿಎಂಸಿ ಬೆಲೆ ಅಥವಾ ಇನ್ನಾವುದೇ ಕನಿಷ್ಠ ಬೆಲೆ ಕೇವಲ ಒಂದು ಮಾರ್ಗಸೂಚಿಯಾಗಿದ್ದು ಅದೇ ಬೆಲೆಯನ್ನೇ ನಿಗದಿ ಮಾಡಬೇಕೆಂಬ ಕಡ್ಡಾಯವಿಲ್ಲ. ಆದರೆ ಯಾವ ವಿಧಾನವನ್ನು ಅನುಸರಿಸಿ ಬೆಲೆ ನಿರ್ಧಾರ ಮಾಡಲಾಗಿದೆ ಎಂದು ಒಪ್ಪಂದದ ಜೊತೆ ಪ್ರತ್ಯೇಕವಾಗಿ ಗೊತ್ತು ಮಾಡಬೇಕು.

ಬೆಳೆ ಮಾರಾಟ:
ಕರಾರಿನಲ್ಲಿ ಯಾವ ಸಮಯ ಎಂದು ವಿಧಿಸಲಾಗಿದೆಯೋ, ಸರಿಯಾಗಿ ಅದೇ ಸಮಯಕ್ಕೆ ಉತ್ಪನ್ನವನ್ನು ಪ್ರಾಯೋಜಕರಿಗೆ ತಲುಪಿಸಬೇಕು (ಕಲಂ 6). ಉತ್ಪನ್ನವನ್ನು ತಲುಪಿಸುವ ವೇಳೆಯಲ್ಲೇ ಅದನ್ನು ಪರೀಕ್ಷೆ ಮಾಡಿ ನೋಡಬೇಕಾದದ್ದು ಪ್ರಾಯೋಜಕನ ಕರ್ತವ್ಯ. ಹಾಗೆ ಮಾಡದಿದ್ದಲ್ಲಿಯೂ, ಅದನ್ನು ಸರಿಯಾದ ರೀತಿಯಲ್ಲಿ ಪರೀಕ್ಷೆ ಮಾಡಿದಂತೆಯೇ ಎಂದು ಲೆಕ್ಕಿಸಬೇಕು. ತಲುಪಿಸಿದ ನಂತರ ಬೆಳೆಯ ಗುಣಮಟ್ಟ ಸರಿಯಿಲ್ಲ ಎಂತಲೋ ಅಥವಾ ಇನ್ನ್ಯಾವುದೇ ಸಾಬೂಬು ಹೇಳಿ, ಕ್ಯಾತೆ ತೆಗೆದು ಬೆಳೆ ಹಿಂತುರಿಗಿಸುವಂತಿಲ್ಲ. ಆದರೆ ಬೀಜಗಳು ಮುಂತಾದ ಉತ್ಪನ್ನಗಳ ವಿಚಾರದಲ್ಲಿ ಗರಿಷ್ಟ ಮೂವತ್ತು ದಿನಗಳನ್ನು ಪರೀಕ್ಷೆ ಮಾಡಲಿಕ್ಕೆ ಪ್ರಾಯೋಜಕ ತೆಗೆದುಕೊಳ್ಳಬಹುದು. ಯಾವ ರೀತಿಯಲ್ಲಿ ಹಣ ಪಾವತಿ ಮಾಡಬೇಕು ಎಂದು ರಾಜ್ಯ ಸರಕಾರಗಳು ನಿರ್ಧರಿಸಿ ಆದೇಶಗಳನ್ನು ಹೊರಡಿಸಬಹುದು.

ಇತರ ಭಾಗಗಳು:
ಕಲಂ 8 – ಇದು ಒಂದು ಕುತೂಹಲಕಾರಿಯಾದಂತಹ ಭಾಗ. ಇದರಿಂದಾಗಿ ಒಂದು ಸಾರಿ ಈ ಕಾಯ್ದೆಯಲ್ಲಿ ಹೇಳಿದಂತ ಕರಾರನ್ನು ತಯಾರು ಮಾಡಿಕೊಂಡು, ಎರಡೂ ಭಾಗದವರು ಸಹಿ ಹಾಕಿ, ಕಾಯ್ದೆಯಲ್ಲಿ ಹೇಳಿದ ರೀತಿಯಲ್ಲಿ ಒಪ್ಪಂದವನ್ನು ದಾಖಲು (ರಿಜಿಸ್ಟರ್ ) ಮಾಡಿಕೊಂಡರೆ, ಆ ಉತ್ಪನ್ನಗಳಿಗೆ/ ಬೆಳೆಗಳಿಗೆ ಅಗತ್ಯ ಸರಕುಗಳ ಕಾಯ್ದೆ ಸೇರಿದಂತೆ ಬೇರೆ ಯಾವ ಕಾನೂನೂ ಭಾದಕವಲ್ಲ. ಸಂಪೂರ್ಣವಾಗಿ ಒಪ್ಪಿಕೊಂಡ ಕರಾರಿನ ಪ್ರಕಾರ ನಡೆಯಬೇಕಾಗುತ್ತದೆ. ಇದಕ್ಕಿರುವ ಕೆಲವು ಕಟ್ಟಳೆಗಳು:
1) ಈ ಕಾಯ್ದೆಯಲ್ಲಿ ಹೇಳಿದ ಯಾವ ಕರಾರುಗಳೂ ಭೂಮಿಯ ಮಾರಾಟ ಅಥವಾ ಅಡವಿಡುವ ರೀತಿಯ ನಿರ್ಬಂಧಗಳನ್ನು ಹೊಂದಿರಬಾರದು.
2) ಭೂಮಿಯ ಪ್ರಕೃತಿಯನ್ನು ಬದಲಾಯಿಸುವ ಅಥವಾ ಯಾವುದೇ ತರಹದ ಶಾಶ್ವತವಾದ ನಿರ್ಮಾಣವನ್ನು ಕಟ್ಟುವಂತಿಲ್ಲ, ಕೆತ್ತಿದರೂ ಅದು ಸಹಾನುಮತಿಯಾಗಿರಬೇಕು. ಅನುಮತಿಯಿಲ್ಲದೆ ಏನಾದರೂ ಕಟ್ಟಿದರೆ ಅದರ ಯಜಮಾನಿಕೆ ಭೂಮಿಯ ಒಡೆಯನದ್ದಾಗಿರುತ್ತದೆ.
3) ಇಂತಹ ನಿರ್ಮಾಣವಾದರೂ, ಬದಲಾವಣೆ ಮಾಡಿದರೂ ಒಪ್ಪಂದ ಮುಗಿಯುವಾಗ ಭೂಮಿಯನ್ನು ಮೊದಲಿನಂತೆ ಮಾಡಿಕೊಡಬೇಕು.

ಕಲಂ 9 – ಈ ಕರಾರುಗಳನ್ನು ಕೇಂದ್ರ ಅಥವಾ ರಾಜ್ಯ ಸರಕಾರದ ವಿಮಾ ಯೋಜನೆಗಳಿಗೆ ಜೋಡಿಸಬಹುದು.

ಕಲಂ 10 – ಒಪ್ಪಂದಗಳಲ್ಲಿ ವ್ಯವ್ಯಸಾಯದ ಸೇವೆಯನ್ನು ಒದಗಿಸುವ ಅಥವಾ ಮಧ್ಯವರ್ತಿ ವ್ಯಕ್ತಿ ಅಥವಾ ಸಂಘಟನೆಗಳನ್ನೂ ಭಾಗಿಯಾಗಿಸಬಹುದು. ಹಾಗಿದ್ದಲ್ಲಿ ಮೊದಲೇ ಅವರ ಪಾತ್ರ ಏನು ಎಂದು ಕರಾರಿನಲ್ಲಿಯೇ ನಿಖರವಾಗಿ ಹೇಳಬೇಕಾಗುತ್ತದೆ.

ಕಲಂ 11 – ಯಾವುದೇ ಸಂದರ್ಭದಲ್ಲಿ ಒಪ್ಪಂದದ ಪಾರ್ಟಿಗಳು ನಿಬಂಧನೆಗಳನ್ನು ತಮಗಿಷ್ಟ ಬಂದಂತೆ ಈ ಕಾನೂನಿನ ಪರಿಧಿಯೊಳಗೆ ಈರ್ವರ ಸಮ್ಮತದೊಂದಿಗೆ ಬದಲಾಯಿಸಬಹುದು.

ಕಲಂ 12 – ಈ ಕರಾರುಗಳನ್ನು ಹೇಗೆ ವಿದ್ಯುನ್ಮಾನ ದಾಖಲೆಗಳಾಗಿ ನೊಂದಾಯಿಸಬೇಕು ಎಂದು ರಾಜ್ಯ ಸರಕಾರಗಳು ಒಂದು ಪ್ರಾಧಿಕಾರದ ಮೂಲಕ ಚೌಕಟ್ಟನ್ನು ಒದಗಿಸಬೇಕು. ಆ ಪ್ರಾಧಿಕಾರ ಹೇಗಿರಬೇಕು, ಎಷ್ಟು ಅಧಿಕಾರಿಗಳನ್ನು ಯಾವ ರೀತಿಯ ಕೆಲಸ ಮಾಡಬೇಕು ಎಂದೂ ರಾಜ್ಯ ಸರಕಾರಗಳು ತೀರ್ಮಾನಿಸಬೇಕು.

ಕಲಂ 13 – ಎಲ್ಲ ಒಪ್ಪಂದಗಳೂ ರಾಜಿ ಪ್ರಕ್ರಿಯೆ (Conciliation Proceedings) ಗೆ ಅವಕಾಶವನ್ನು ಕಡ್ಡಾಯವಾಗಿ ಒದಗಿಸಬೇಕು. ಒಂದು ವೇಳೆ ಕರಾರು ರಾಜಿಗೆ ಅವಕಾಶ ನೀಡದಿದ್ದಲ್ಲಿ ಅಥವಾ ರಾಜಿಗೆ ಪ್ರಯತ್ನಪಟ್ಟೂ ವಿಫಲವಾದರೆ ಮೂವತ್ತು ದಿನಗಳೊಳಗಾಗಿ ಉಪ ಜಿಲ್ಲಾಧಿಕಾರಿಗಳನ್ನು (Sub Divisional Magistrate) ಸಮೀಪಿಸಬಹುದು. ಉಪ ಜಿಲ್ಲಾಧಿಕಾರಿಗಳು ಕರಾರಿನಲ್ಲಿ ಹೇಳಿದ ನಿಬಂಧನೆಗಳ ಆಧಾರದಲ್ಲಿ ತಾವೇ ಅಥವಾ ಬೋರ್ಡ್ ಒಂದನ್ನು ರಚಿಸಿ ಅದರ ಸಹಾಯದಿಂದ ವಿವಾದ ಬಗೆಹರಿಸಬಹುದು. ಪ್ರಯೋಜಕನೊಬ್ಬನು ರೈತನಿಗೆ ಕೊಡಬೇಕಾದ ಹಣಕ್ಕೆ ನಾಮ ಹಾಕಿದರೆ, ದಂಡ ಮೊತ್ತವನ್ನು ಕೊಡಬೇಕಾದ ಬಾಕಿಯ ಮೊತ್ತದಿಂದ ಒಂದೂವರೆ ಪಟ್ಟು ಹೆಚ್ಚು ಮಾಡಿ ವಿಧಿಸಬಹುದು. ಆದರೆ ರೈತನ ಭಾಗದಿಂದ ಹಣ ಪಾವತಿಗೆ ಚ್ಯುತಿ ಬಂದರೆ ಎಷ್ಟು ಪಾವತಿಸಬೇಕಿತ್ತೋ ಅಷ್ಟನ್ನೇ ಪಾವತಿಸಲು ಆದೇಶ ಹೊರಡಿಸಬೇಕು. ಅಷ್ಟೇ ಅಲ್ಲದೆ ಪ್ರವಾಹ, ಬರಗಾಲ ಇತ್ಯಾದಿ ದೈವೀಕೃತ್ಯದ ಕಾರಣದಿಂದಾಗಿ ಕೃಷಿಕನ ಭಾಗದಿಂದ ಹಣ ಬರಬೇಕಾದ್ದಲ್ಲಿ, ಯಾವ ಮೊತ್ತವನ್ನೂ ವಾಪಸ್ ಪಡೆಯಲು ಆದೇಶ ಹೊರಡಿಸುವಂತಿಲ್ಲ. ಈ ವಿಚಾರದಲ್ಲಿ ಉಪ ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶಕ್ಕೆ ಒಂದು ಸಿವಿಲ್ ನ್ಯಾಯಾಲಯದ ತೀರ್ಪಿನಷ್ಟೇ ಬೆಲೆ ಇರುತ್ತದೆ. ಉಪ – ಜಿಲ್ಲಾಧಿಕಾರಿಗಳ ಆದೇಶ ಒಮ್ಮೆ ಯಾವುದೇ ಭಾಗಕ್ಕೆ ಒಪ್ಪಿಗೆಯಾಗದಿದ್ದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿಯನ್ನು ಮೂವತ್ತು ದಿನಗಳೊಳಗಾಗಿ ತೀರ್ಮಾನಿಸಬೇಕು.

ಇನ್ನುಳಿದಂತೆ ಕಾಯ್ದೆಯನ್ನು ಹೇಗೆ ಜಾರಿಗೊಳಿಸಬೇಕು ಇತ್ಯಾದಿ ವಿಚಾರಗಳಲ್ಲಿ ಕೆಲವನ್ನು ರಾಜ್ಯ ಸರಕಾರಕ್ಕೆ ಮತ್ತು ಕೆಲವನ್ನು ಕೇಂದ್ರ ಸರಕಾರಕ್ಕೆ ಮೀಸಲು ಮಾಡಲಾಗಿದೆ. ಈ ಕಾನೂನಿನಡಿ ಬರುವ ಯಾವುದೇ ವಿಚಾರದ ಕುರಿತಾಗಿ ಸಿವಿಲ್ ಕೋರ್ಟ್ ಮೆಟ್ಟಿಲೇರುವಂತಿಲ್ಲ, ಉಳಿದೆಲ್ಲ ರಾಜ್ಯ ಕಾನೂನುಗಳ ಮೇಲೆ ಈ ಕಾಯ್ದೆ ಮನ್ನಣೆ ಪಡೆಯುತ್ತದೆ ಮತ್ತು ಷೇರು ಮಾರುಕಟ್ಟೆಯ ಒಪ್ಪಂದಗಳಿಗೆ ಮತ್ತು ಆ ವ್ಯವಹಾರಗಳಿಗೆ ಈ ಕಾನೂನು ಭಾಧಕವಲ್ಲ ಇವೇ ಮೊದಲಾದ ವಿಷಯಗಳು ಕಲಂ 16 ರಿಂದ 25 ರವರೆಗೆ ಇವೆ.

ಕಾನೂನಿನ ಹಲವು ಭಾಗಗಳು ಧನಾತ್ಮಕವಾದ ಬದಲಾವಣೆಗಳನ್ನು ತರಬಹುದಾದರೂ ಕನಿಷ್ಠ ಬೆಳೆಯನ್ನು ಕಡ್ಡಾಯಗೊಳಿಸದಿರುವುದು ಮತ್ತು ವಿವಾದ ಪರಿಹಾರಕ್ಕೆ ಸೂಕ್ತವಾದ ವೇದಿಕೆಯನ್ನೊದಗಿಸದಿರುವದು ರೈತರ ಕೆಂಗಣ್ಣಿಗೆ ಗುರಿಯಾದ ಮುಖ್ಯಅಂಶಗಳು. ಇದೆ ಸರಣಿಯಲ್ಲಿ ಜಾರಿಗೊಳಿಸಲಾದ ಕೃಷಿ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ, 2020 ರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Recent posts

ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.

Scroll to Top