ಕೃಷಿ ಕಾಯ್ದೆಗಳು : ಲೇಖನಮಾಲೆ ಭಾಗ 3: ವಾಣಿಜ್ಯ ಮತ್ತು ವ್ಯಾಪಾರ ಉತ್ತೇಜನ – ಕೃಷಿ ಹಿಂದುಳಿಯಿತೇ ?!
ಸುಮಾರು ನಾಲ್ಕು ತಿಂಗಳಿನಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ಬಿಸಿ ಇನ್ನೂ ತಗ್ಗಿಲ್ಲ. ದಿನವೂ ಹೊಸ ರೂಪದಲ್ಲಿ ರೈತರ ಕಾಯ್ದೆಗಳು ನಮ್ಮ ಸಾಮಾಜಿಕ-ರಾಜಕೀಯ ಚರ್ಚೆಗಳ ಭಾಗವಾಗಿವೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ತತ್ಕಾಲಕ್ಕೆ ಕಾಯ್ದೆಗಳ ಜಾರಿಯನ್ನು ತಡೆಹಿಡಿದಿದೆ. ತಾರೆಯರು, ರಾಜಕಾರಣಿಗಳು ಮತ್ತು ನಾನಾ ಕ್ಷೇತ್ರದ ದಿಗ್ಗಜರು ಸಮಸ್ಯೆಗಳಿಗೆ ದಿನಕ್ಕೊಂದು ಬಣ್ಣ ಬಳಿಯುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಕಾಯ್ದೆಗಳ ಭಾಗವಾದ ಕೃಷಿ ಉತ್ಪಾದನೆಗಳ ವ್ಯಾಪಾರ ಮತ್ತು ವಾಣಿಜ್ಯ ಉತ್ತೇಜನ ಮತ್ತು ಸೌಲಭ್ಯ ಕಾನೂನಿನ ಬಗ್ಗೆ ಇವತ್ತು ತಿಳಿದುಕೊಳ್ಳೊಣ.
ಕಾನೂನಿನ ಕಾರಣೋದ್ದೇಶ ಹೇಳಿಕೆಯ ಪ್ರಕಾರ, ಈ ಕಾಯ್ದೆಯನ್ನು ರೈತರ ಮತ್ತು ವ್ಯಾಪಾರಿಗಳ ನಡುವೆ ಉತ್ಪತ್ತಿಗಳ ಮಾರಾಟ ಮತ್ತು ಖರೀದಿಗಳ ವಿಚಾರದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹುಟ್ಟು ಹಾಕುವ, ಆ ಮೂಲಕ ಸ್ಪರ್ಧೆಯುಂಟು ಮಾಡಿ ಆದಾಯ ತರುವಂತಹ ದಾರಿಗಳನ್ನು ತೋರಿಸುವ, ರಾಜ್ಯಗಳ ನಡುವೆ ಸಮರ್ಥ-ಪಾರದರ್ಶಕ-ತಡೆಯಿಲ್ಲದ, ಕೃಷಿ ಉತ್ಪನ್ನಗಳ ಸಾಂಪ್ರದಾಯಿಕ ಮಾರುಕಟ್ಟೆಗಳ ಹೊರಗಿನ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಮತ್ತು ಕೃಷಿ ಉತ್ಪನ್ನಗಳ ಇ-ಮಾರುಕಟ್ಟೆಗೆ ಬೇಕಾಗುವ ಚೌಕಟ್ಟು ಒದಗಿಸುವ ವಾತಾವರಣವನ್ನು ಕಟ್ಟಿಕೊಡಲು ಜಾರಿಗೊಳಿಸಲಾಗಿದೆ.
ಈ ಕಾನೂನಿನ ಪ್ರಮುಖ ಅಂಶಗಳು:
ಕಲಂ 3-
ಈ ಕಾನೂನಿನಲ್ಲಿ ಹೇಳಿದ ಕಟ್ಟಳೆಗಳನ್ನು ಅನುಸರಿಸಿ ಯಾವ ರೈತನಿಗೂ, ವ್ಯಾಪಾರಿಗೂ ಅಥವಾ ಇ-ವಾಣಿಜ್ಯ ವೇದಿಕೆಗೂ ಯಾವುದೇ ರಾಜ್ಯದ ಹೊರಗೂ ಮತ್ತು ಒಳಗೂ ಒಂದು ವ್ಯಾಪಾರ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಸ್ವಾತಂತ್ರ್ಯವಿದೆ. ಅಂದರೆ, ಶಿರಸಿಯಲ್ಲಿ ನಾನು ವೆನಿಲ್ಲಾ ಬೆಳೆದು, ಕೇರಳದಲ್ಲಿ ವೇನಿಲ್ಲಾ ಎಸೆನ್ಸ್ ತಯಾರಿಸುವ ಕಾರ್ಖಾನೆಯೊಂದಕ್ಕೆ ಇ-ಮಾರುಕಟ್ಟೆಯಲ್ಲಿ ಆ ವೆನಿಲ್ಲಾವನ್ನು ನೇರವಾಗಿ ಯಾವುದೇ ಅಡೆ-ತಡೆಯಿಲ್ಲದೆ ಮಾರಬಹುದು.
‘ವ್ಯಾಪಾರ ಪ್ರದೇಶ’ ಎಂಬುದನ್ನು ಕಲಂ 2(m) ನಲ್ಲಿ ಯಾವುದೇ ರೀತಿಯ ಉತ್ಪಾದನೆ, ಶೇಖರಣೆ ಮತ್ತು ಸಂಸ್ಕರಣೆ ಮಾಡುವ ಸ್ಥಳಗಳು, ಅಂದರೆ, ತೋಟದ ದ್ವಾರ, ಕಾರ್ಖಾನೆ ಪ್ರದೇಶ, ದಾಸ್ತಾನುಗಳು, ಹಗೇವು ಅಥವಾ ಗೋಪುರಗಳು, ಶೈತ್ಯಾಗಾರ, ಇಂತಹ ಯಾವುದೇ ಪ್ರದೇಶ ಆಗಿರಬಹುದು ಎಂದು ವ್ಯಾಖ್ಯಾನಿಸಿದ್ದಾರೆ.
ಆದರೆ ಎಪಿಎಂಸಿ ಮೊದಲಾದ ಸರಕಾರಿ ಮಾರುಕಟ್ಟೆಗಳು ಅಥವಾ ಖಾಸಗಿ ಮಾರುಕಟ್ಟೆಗಳು ಈ ‘ವ್ಯಾಪಾರ ಪ್ರದೇಶ’ ಎಂಬ ಅರ್ಥದಲ್ಲಿ ಬರುವುದಿಲ್ಲ.
ಕಲಂ 4-
ಇದರ ಪ್ರಕಾರ ಯಾವುದೇ ವ್ಯಾಪಾರಿ ಯಾವುದೇ ವ್ಯಾಪಾರ ಪ್ರದೇಶದಲ್ಲಿ ಅಂತರ-ರಾಜ್ಯ ಮತ್ತು ಒಳ ರಾಜ್ಯದಲ್ಲಿ ಪಟ್ಟಿ ಮಾಡಿದ ಕೃಷಿ ಉತ್ಪತ್ತಿಗಳ ವ್ಯಾಪಾರವನ್ನು ಒಬ್ಬ ರೈತನೊಂದಿಗೆ ಅಥವಾ ಇನ್ನೊಬ್ಬ ವ್ಯಾಪಾರಿಯೊಂದಿಗೆ ಮಾಡಬಹುದು. (ಎಪಿಎಂಸಿ ಕಾಯ್ದೆ ಪ್ರಕಾರ ಅಥವಾ ಆ ರಾಜ್ಯದ ಕಾನೂನಿನ ಪ್ರಕಾರ ನಿಗದಿ ಮಾಡಿದ ಬೆಳೆ ಅಥವಾ ಉತ್ಪತ್ತಿಯನ್ನು ‘ಪಟ್ಟಿ ಮಾಡಿದ ಉತ್ಪತ್ತಿ’ ಎನ್ನುತ್ತಾರೆ). ಆದರೆ ಎಪಿಎಂಸಿ ಪ್ರದೇಶದಲ್ಲಿ ಅಥವಾ ಇನ್ನಾವುದೇ ಖಾಸಗೀ ವಾಣಿಜ್ಯ ಕೇಂದ್ರ ಅಥವಾ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು PAN ನಂಬರ್ ಮತ್ತು ಕೇಂದ್ರ ಸರಕಾರ ನಿಗದಿ ಮಾಡುವ ಇನ್ನಾವುದೇ ದಾಖಲೆಯನ್ನು ಹೊಂದಿರಬೇಕು. ವ್ಯಾಪಾರ ಮಾಡಿದ ಯಾವುದೇ ಬೆಳೆಗೆ ಅವತ್ತೇ ಅಥವಾ ಹೆಚ್ಚೆಂದರೆ 3 ದಿನಗಳೊಳಗೆ ಹಣ ಪಾವತಿಸಬೇಕು. ಸಹಕಾರಿ ಸಂಘಗಳಿಗೆ ಅಥವಾ ರೈತ ಸಂಘಟನೆಗಳಿಗೆ ಹಣ ಪಾವತಿಸಲು ಬೇರೆ ವಿಧಾನವನ್ನು ಕೇಂದ್ರ ಸರಕಾರ ನಿರ್ಧರಿಸಬಹುದು.
ಕಲಂ 5-
PAN ಕಾರ್ಡ ಮತ್ತು ಸರಕಾರ ಹೇಳುವ ಯಾವುದೇ ಇತರ ದಾಖಲೆಗಳನ್ನು ಹೊಂದಿರುವ ರೈತ ಸಂಘಟನೆ, ಕಂಪನಿ ಅಥವಾ ವ್ಯಾಪಾರಿ ಸಂಸ್ಥೆ , ಕೃಷಿ ಸಂಸ್ಥೆ ರಾಜ್ಯಗಳೊಳಗೆ ಮತ್ತು ಹೊರಗೆ ಕೃಷಿ ಉತ್ಪನ್ನಗಳ ಸಲುವಾಗಿ ಇ-ಮಾರುಕಟ್ಟೆಯನ್ನು ಶುರು ಮಾಡಬಹುದು. (ಪ್ರಸ್ತುತ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇರುವಂತೆಯೇ ಕೃಷಿ ಉತ್ಪನ್ನಗಳಿಗೆ ಮಾತ್ರ ಮೀಸಲಾಗಿರುವ ಇ- ಮಾರುಕಟ್ಟೆ.) ಅಂತಹ ಇ-ಮಾರುಕಟ್ಟೆ ವೇದಿಕೆಯು ವ್ಯಾಪಾರದ ಮಾಧ್ಯಮ ಶುಲ್ಕ, ತಾಂತ್ರಿಕ ಮಾಪನಗಳು, ಗುಣಮಟ್ಟದ ಪರೀಕ್ಷೆ, ಹಣ ಪಾವತಿ, ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ವಿನಿಮಯ ಮುಂತಾದ ವಿಚಾರಗಳ ಕುರಿತು ವಿವರವಾದ ಮಾರ್ಗದರ್ಶಿಗಳನ್ನು ಹೊಂದಿರಬೇಕು ಮತ್ತು ಅವುಗಳನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರಕ್ಕೆ ಅವಶ್ಯವೆನಿಸಿದರೆ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಅವಶ್ಯಕವೆನಿಸಿದರೆ ಅಂತಹ ಇ-ವ್ಯಾಪಾರ ತಾಣಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿಯಮಗಳನ್ನು ಜಾರಿಗೆ ತರಬಹುದು.
ಕಲಂ 6-
ಯಾವುದೇ ರೀತಿಯ ಮಾರುಕಟ್ಟೆ ಶುಲ್ಕ ಅಥವಾ ತೆರಿಗೆಯನ್ನು ರೈತನ ಅಥವಾ ವ್ಯಾಪಾರಿಯ ಮೇಲೆ ಇ-ಮಾರುಕಟ್ಟೆಯಲ್ಲಿ ವಿಧಿಸುವಂತಿಲ್ಲ.
ಕಲಂ 7-
ಕೇಂದ್ರ ಸರ್ಕಾರ, ಅದರ ಯಾವುದೇ ಸಂಘ ಸಂಸ್ಥೆಯ ಸಹಾಯದಿಂದ ಬೆಳೆಗಳ ಬಗ್ಗೆ ಮಾರುಕಟ್ಟೆಗಳ ಏಳು-ಬೀಳುಗಳ ಕುರಿತು ಮಾಹಿತಿ ಕೊಡುವಂತಹ ಒಂದು ವೇದಿಕೆಯನ್ನು ಕಟ್ಟಬಹುದು. ಇ-ಮಾರುಕಟ್ಟೆಯ ಮಾಲೀಕರು ಅಥವಾ ನಿರ್ವಾಹಕರಿಂದ ಯಾವ ರೀತಿಯ ಮಾಹಿತಿಯನ್ನಾದರೂ ಈ ಉದ್ದೇಶದ ಸಲುವಾಗಿ ಕೇಂದ್ರ ಸರ್ಕಾರ ಪಡೆಯಬಹುದು.
ಕಲಂ 8-
ರೈತ ಮತ್ತು ವ್ಯಾಪಾರಿಯ ನಡುವಿನ ವ್ಯವಹಾರದಲ್ಲಿ ಯಾವುದೇ ವಿವಾದವಾದಲ್ಲಿ ಉಪ-ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿ ಎರಡೂ ಪಕ್ಷಗಳ ಸಮ್ಮತಿಯೊಂದಿಗೆ ಅಹವಾಲು ಸಲ್ಲಿಸಬಹುದು. ಉಪ-ಜಿಲ್ಲಾಧಿಕಾರಿಗಳು ಆ ಅಹವಾಲನ್ನು ಅವರು ನೇಮಿಸಿದ ಸಮಿತಿಗೆ ವಹಿಸಿಕೊಡಬೇಕು. ಆ ಸಮಿತಿಯ ನಿರ್ಧಾರಕ್ಕೆ ಎರಡೂ ಪಕ್ಷಗಳು ಬದ್ಧವಾಗಬೇಕು. ಈ ಸಮಿತಿಗೆ ಒಬ್ಬ ಅಧ್ಯಕ್ಷ, ಎರಡರಿಂದ ನಾಲ್ಕು ಜನ ಸದಸ್ಯರು ಇರಬೇಕು.
ಆದಾಗ್ಯೂ ವಿವಾದ ಬಗೆಹರಿಯದಿದ್ದಲ್ಲಿ ಉಪ-ಜಿಲ್ಲಾಧಿಕಾರಿಗಳು ಮೂವತ್ತು ದಿನಗಳೊಳಗಾಗಿ ವಿವಾದಲ್ಲಿ ಆದೇಶ ಹೊರಡಿಸಬೇಕು. ಆ ಆದೇಶ ಒಂದೋ ಹಣ ವಾಪಾಸ್ ಪಾವತಿ ಮಾಡಲು ಅಥವಾ ನಿಯಮಗಳನ್ನು ಮೀರಿದ್ದು ವ್ಯಾಪಾರಿಯಾಗಿದ್ದರೆ, ಆ ವ್ಯಾಪಾರಿಯ ಮೇಲೆ ನಿರ್ಧಿಷ್ಟ ಅವಧಿಯವರೆಗೆ ವ್ಯಾಪಾರ ಮಾಡದಿರಲು ನಿರ್ಬಂಧ ಹೇರುವಂತದ್ದಾಗಿರಬಹುದು. ಈ ನಿರ್ಧಾರ ಸಮ್ಮತವಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ಮೂವತ್ತು ದಿನಗಳೊಳಗೆ ಮೇಲ್ಮನವಿ ಕೊಡಬಹುದು. ಈ ಕಲಂನಲ್ಲಿ ಹೊರಡಿಸಿದ ಪ್ರತಿ ಆದೇಶಕ್ಕೆ ಸಿವಿಲ್ ನ್ಯಾಯಾಲದ ಆದೇಶದಷ್ಟೆ ಬೆಲೆಯಿರುತ್ತದೆ.
ಕಲಂ 9-
ಯಾವುದೇ ಇ-ಮಾರುಕಟ್ಟೆ, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತಹ ಪ್ರಕರಣಗಳನ್ನು ತನಿಖೆ ಮಾಡಿ ದಂಡ ವಿಧಿಸಬಹುದು. ರೈತರಿಗೆ ಹಣ ವಾಪಸ್ ಮಾಡಲು ಆದೇಶಿಸಬಹುದು ಅಥವಾ ಇ-ಮಾರುಕಟ್ಟೆ ವೇದಿಕೆ ನಡೆಸಲು ನೀಡಿದ ಪರವಾನಗಿ ರದ್ದು ಮಾಡಬಹುದು. ಆದರೆ ಅಂತಹ ಯಾವುದೇ ಆದೇಶವನ್ನು ವ್ಯಾಪಾರಿ ವೇದಿಕೆಯ ವಾದವನ್ನು ಕೇಳದೆ ಹೊರಡಿಸುವಂತಿಲ್ಲ.
ಕಲಂ 10-
ಕಲಂ 9ರ ಅಡಿಯಲ್ಲಿ ಹೊರಡಿಸಿದ ಆದೇಶದ ವಿರುದ್ಧ 60 ದಿನಗಳೊಳಗಾಗಿ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿಯ ಪದವಿಯಲ್ಲಿ ಇರುವ ಅಧಿಕಾರಿಯವರ ಮುಂದೆ ಅಥವಾ ಯವುದೇ ನಿಯಮಿತ ಅಧಿಕಾರಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು. ಕಾರಣಗಳು ಸಮರ್ಥನೀಯವಾಗಿದ್ದರೆ 90 ದಿನಗಳವರೆಗೂ ಮೆಲ್ಮನವಿಯನ್ನು ಸ್ವೀಕರಿಸಬಹುದು.
ಕಲಂ 11-
ಕಲಂ 4ರ ಪ್ರಕಾರ ರೂಪಿಸಿದ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದಲ್ಲಿ 25,000/- ರೂಪಾಯಿಯಿಂದ 5,00,000/- ರೂಪಾಯಿವರೆಗೆ ದಂಡ ವಿಧಿಸಬಹುದು. ಉಲ್ಲಂಘನೆ ಸತತವಾಗಿ ನಡೆದರೆ ದಿನಕ್ಕೆ 5,000/- ರೂಪಾಯಿಯಂತೆ ಎಷ್ಟು ದಿನ ಅದು ನಡೆಯುತ್ತದೆಯೋ ಅಷ್ಟು ದಿನಗಳಿಗೆ ಲೆಕ್ಕ ಮಾಡಿ ದಂಡ ವಿಧಿಸಬಹುದು. ಕಲಂ 5 ಮತ್ತು 7ರ ಅಡಿಯಲ್ಲಿ ರೂಪಿಸಿದ ನಿಯಮಗಳ ವಿರುದ್ಧ ಯಾವುದಾದರೂ ಇ-ಮಾರುಕಟ್ಟೆ ವೇದಿಕಗಳು ಹೋದರೆ ಅವುಗಳ ಮೇಲೆ 50,000/- ರೂಪಾಯಿಯಿಂದ 10,00,000/- ರೂಪಾಯಿವರೆಗೆ ದಂಡ ವಿಧಿಸಬಹುದು. ನಿಯಮ ವಿರುದ್ಧವಾದ ಚಟುವಟಿಕೆಗಳು ಸತತವಾಗಿ ನಡೆದರೆ ದಿನವೊಂದಕ್ಕೆ 10,000/- ರೂಪಾಯಿಯಂತೆ ದಂಡ ವಿಧಿಸಬಹುದು. ಇನ್ನುಳಿದಂತೆ ಈ ವಿಚಾರದಲ್ಲಿ ಯಾವ ಸಿವಿಲ್ ನ್ಯಾಯಾಲಕ್ಕೂ ವ್ಯಾಪ್ತಿ ಇರುವುದಿಲ್ಲ.
ಈ ಕಾನೂನಿನ ನಿಯಮಗಳು ಬಾಕಿ ಎಲ್ಲ ಕಾನೂನುಗಳಿಗೆ ಹೊರತಾಗಿಯೂ ಅನ್ವಯಿಸುತ್ತವೆ. ಆದರೆ ಕಾನೂನಿನ ಯಾವ ಭಾಗವೂ ಷೇರು ಮಾರುಕಟ್ಟೆ ವ್ಯಾಪರಿಗಳಿಗೆ ಅಥವಾ ವ್ಯಾಪಾರಕ್ಕೆ ಅನ್ವಯಿಸುವುದಿಲ್ಲ.
ಈ ಮೂರು ಕಾನೂನುಗಳು ಏನು ಎಂಬುದನ್ನು ನಿಮ್ಮ ಮುಂದೆ ಸ್ಥೂಲವಾಗಿ ಪರಿಚಯಿಸಿದ್ದೇನೆ. ಇವುಗಳ ಮೇಲೆ ಅಭಿಪ್ರಾಯ ರೂಪಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ಮೂರೂ ಕಾನೂನುಗಳ ಪರಿಣಾಮ ಕರ್ನಾಟಕದಲ್ಲಿ ಸ್ವಲ್ಪ ವ್ಯತ್ಯಾಸವಾಗುವುದು ಕರ್ನಾಟಕ ಸರಕಾರ ಈ ಮೊದಲು ಜಾರಿಗೆ ತಂದ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ. ಮೊದಲ ಮೂರು ಲೇಖನಗಳಲ್ಲಿ ಯಾವ ಅಭಿಪ್ರಾಯವನ್ನೂ ಹೇರದೆ ಕಾನೂನುಗಳು ಏನು ಎಂಬುದನ್ನು ಮಾತ್ರ ವಿವರಿಸಿದ್ದೇನೆ. ಮುಂಬರುವ ಲೇಖನದಲ್ಲಿ ಈ ಕಾನೂನುಗಳನ್ನು ಒಟ್ಟಾರೆಯಾಗಿ ಓದಿದ ಮತ್ತು ಅರ್ಥಮಾಡಿಕೊಂಡ ಆಧಾರದಲ್ಲಿ ಈ ಇವುಗಳ ಬಗೆಗಿನ ನನ್ನ ಅಭಿಪ್ರಾಯವನ್ನು ನಿಮ್ಮ ಮುಂದಿಡಲಿದ್ದೇನೆ.
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ
ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.