ಡಬ್ಲ್ಯೂಹೆಚ್ಓ ನ ಹೊಸ ಒಪ್ಪಂದದ ತಯಾರಿ : ಆಲೋಚಿಸಬೇಕಾದ ವಿಚಾರಗಳು

ನಿನ್ನೆ ಶುರುವಾದ ವಿಶ್ವ ಆರೋಗ್ಯ ಸಭೆಯ 74ನೇ ಅಧಿವೇಶನ (WHA 74) ದಲ್ಲಿ ಯುರೋಪಿಯನ್ ಒಕ್ಕೂಟ (EUROPEAN UNION- EU) ಹಾಗೂ ಇತರೆ 25 ದೇಶಗಳು ಸಾಂಕ್ರಾಮಿಕ ರೋಗಗಳ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಕರೆ ನೀಡಿವೆ.   ಈ ಪ್ರಸ್ತಾವನೆಯನ್ನು ಬೆಂಬಲಿಸುವ Friends of Treaty (FoT) ಎಂಬ ಅನೇಕ ದೇಶಗಳ ಗುಂಪು ವಿಶ್ವ ಆರೋಗ್ಯ ಸಭೆ 74ರಲ್ಲಿ ವಿಚಾರ ಮಾಡಬೇಕೆಂದಿರುವ ಕರಡು ನಿರ್ಧಾರವನ್ನು  ಪ್ರಚುರಪಡಿಸಿವೆ. ಸಾಂಕ್ರಾಮಿಕ ರೋಗಗಳ ಕುರಿತು ಕಾಳಜಿ ವ್ಯಕ್ತಪಡಿಸುವ ಈ ನಿರ್ಧಾರದ ಕರಡನ್ನು ದಿನಾಂಕ 24 ಮೇ ರಿಂದ 1ನೇ ಜೂನ್ ವರೆಗೂ ಆನ್ಲೈನ್ ನಲ್ಲಿ ಅನೌಪಚಾರಿಕವಾಗಿ ಸಮಾಲೋಚನೆ ಮಾಡಲಾಗುವುದು.

ಈ ಕರಡು, ವಿಶ್ವ ಆರೋಗ್ಯ ಸಂಸ್ಥೆಯ (World Health Organisation, WHO) ಸಂವಿಧಾನದ 19ನೇ ವಿಧಿಯ  (1)ಅಡಿಯಲ್ಲಿ ವಿಶ್ವಸಂಸ್ಥೆ ಚೌಕಟ್ಟಿನೊಳಗೆ ಒಡಂಬಡಿಕೆಗಳನ್ನು ರಚಿಸಲು ಹಾಗೂ ಮಾತುಕತೆ ನಡೆಸಲು ಸರ್ಕಾರಗಳ ಸಭೆಯನ್ನು ಸ್ಥಾಪಿಸಲು ಆಶಿಸುತ್ತದೆ.

ಈ ಕರಡಿನ ಪ್ರಕಾರ ಹೊಸ ಒಪ್ಪಂದವು ಭವಿಷ್ಯದ ಸಾಂಕ್ರಾಮಿಕ ರೋಗಗಳ ಸಂದರ್ಭಗಳಲ್ಲಿ,  ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಸಾಮರ್ಥ್ಯಗಳನ್ನು ಬಲಪಡಿಸಲು, ಬಹುವಲಯ ವಿಧಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಈ ವ್ಯವಸ್ಥೆಗಳ ಯಥಾಸ್ಥಿತಿಗೆ ಮರಳುವ ಶಕ್ತಿ ಹೆಚ್ಚಿಸುವ ದೃಷ್ಟಿಯಿಂದ ಪ್ರಸ್ತಾಪಿಸಲಾಗಿದೆ.

ಈ ನಿರ್ಧಾರ, ಹೆಚ್ಚಿನ ಸದಸ್ಯ ರಾಷ್ಟ್ರಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ತಗ್ಗಿಸಲು ಪ್ರಯಾಸ ಪಡುತ್ತಿರುವಾಗಲೇ, ಅಂತರ್ ಸರ್ಕಾರಗಳ ಮೊದಲನೇ ವಿಶ್ವ ಆರೋಗ್ಯ ಸಭೆಯನ್ನು 2021ರಲ್ಲಿಯೇ ಕರೆಯಬೇಕಂದೂ ಹಾಗೂ ಕರಡು ಅಂತರ್ರಾಷ್ಟ್ರೀಯ ಸಾಂಕ್ರಾಮಿಕ ಒಪ್ಪಂದವನ್ನು 2022ರ ಮೊದಲನೇ ಚಾತುರ್ಮಾಸದಲ್ಲಿಯೇ ಪರಿಗಣಿಸಬೇಕೆಂದೂ ಅಪೇಕ್ಷಿಸಿದೆ..

ಈ ಕರಡು ನಿರ್ಧಾರವು ತನ್ನ ಸದಸ್ಯ ರಾಷ್ಟ್ರಗಳು, ಪ್ರಾದೇಶಿಕ ಗುಂಪುಗಳು, ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿನ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ WHO ದೊಂದಿಗೆ ಒಡನಾಟದಲ್ಲಿರುವ ಇತರ ಸಂಸ್ಥೆಗಳಿಂದ ಮಾಹಿತಿ ಹಾಗೂ ಅಭಿಪ್ರಾಯಗಳನ್ನು ಪಡೆಯಲು ಸೂಚಿಸುತ್ತದೆ. ಇವರೆಲ್ಲರ ಜೊತೆಯಲ್ಲಿಯೂ ಅಂತರ್ ಸರ್ಕಾರ ಸಭೆಯ ಉಪಾಧ್ಯಕ್ಷರ ಆಹ್ವಾನದ ಮೇರೆಗೆ ಸಮಾಲೋಚಿಸಲಾಗುವುದು.

WHO ದ ಬಹುತೇಕ ಸದಸ್ಯ ರಾಷ್ಟ್ರಗಳು ತಮ್ಮ ಗಡಿಗಳ ಒಳಗೆ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸಲಾಗದ ಸಂಕಟ ಸಮಯದಲ್ಲಿ ಮುಂದೆಂದೋ ಬರುವ  ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಅಗತ್ಯವಿರುವ ಜಾಗತಿಕ ಸಂರಚನೆಯನ್ನು ನಿರ್ಧರಿಸಲು ಹೊಸ ಒಪ್ಪಂದವೊಂದನ್ನು ಪ್ರಸ್ತಾಪಿಸಿರುವುದು ಹಾಗೂ ಈ ಒಪ್ಪಂದಕ್ಕೆ ಬರಲು  ಗಡಿಬಿಡಿ ಮಾಡುತ್ತಿರುವುದು ನಾಲ್ಕು ಕಾರಣಗಳಿಗಾಗಿ ವಿಚಾರ ಮಾಡಬೇಕಾದ ಸಂಗತಿ.

ಮೊದಲನೆಯದಾಗಿ, ತರಾತುರಿಯ ಈ ಪ್ರಸ್ತಾವನೆಯು WHA 74ರ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕಿರಿದಾಗಿಸುತ್ತಿದೆ ಹಾಗೂ 73ನೇ WHA ನಡಾವಳಿ 73.1ರ ಅಡಿಯಲ್ಲಿ WHO ದ ಕಾರ್ಯ ನಿರ್ವಹಣೆಯ ಹಾಗೂ 2005ರ ಅಂತರಾಷ್ಟ್ರೀಯ ಆರೋಗ್ಯ ನಿಯಮಗಳ (IHR) ಸುಧಾರಣೆಗಾಗಿ ಮಾಡಲಾದ ಶಿಫಾರಸ್ಸಿನ ಪ್ರಕಾರ ಹೇಳುವ 3 ಪುನರಾವಲೋಕನ ಸಮಿತಿಗಳಿಂದ ನಡೆಸಬೇಕಿದ್ದ ಪರಿಶೀಲನೆಯನ್ನೂ ಕೈ ಬಿಡಲಾಗುತ್ತಿದೆ.

WHA 73ರ ನಡಾವಳಿ ಸಂಖ್ಯೆ 73.1ರ ಪ್ರಕಾರ WHO ಬಳಿ ಇರುವ ಕಾರ್ಯವಿಧಾನಗಳ ಪರಿಣಾಮ, IHR ಕಾರ್ಯನಿರ್ವಹಣೆ, ಹಿಂದಿನ IHRಗಳ ಪುನರಾವಲೋಕನ ಸಮಿತಿಯ  ಶಿಫಾರಸ್ಸುಗಳ ಜಾರಿ ಮಾಡಿದ್ದರ ಸ್ಥಿತಿಗತಿ, ವಿಶ್ವಸಂಸ್ಥೆಯ ವ್ಯಾಪಕ ಪ್ರಯತ್ನಗಳಿಗೆ WHO ದ ಕೊಡುಗೆ, ಕೋವಿಡ್ 19 ಕುರಿತಂತೆ WHO ದ ಕಾರ್ಯಗಳು ಹಾಗೂ ಅವುಗಳ ಸಮಯ ಸೀಮೆ ಮುಂತಾದ ವಿಚಾರಗಳನ್ನು ಅವಗಾಹನೆ ಮಾಡಲು 3 ಸಮಿತಿಗಳನ್ನು ಸ್ಥಾಪಿಸಲಾಯಿತು: 1. ಅಂತರಾಷ್ಟ್ರೀಯ ಆರೋಗ್ಯ ನಿಯಮಗಳ ಪುನರಾಲೋಕನ ಸಮಿತಿ (IHR Review Committee, IRC) 2. ಸ್ವತಂತ್ರ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿ (Independent Oversight and Advisory Committee, IOAC) ಹಾಗೂ 3. ಸಾಂಕ್ರಾಮಿಕ ರೋಗದ ಸನ್ನದ್ಧತೆ ಹಾಗೂ ಪ್ರತಿಕ್ರಿಯೆ ಕುರಿತಾದ ತಜ್ಞರ ಸ್ವತಂತ್ರ ಸಮಿತಿ (Independent Panel for Pandemic Preparedness and Response, IPPPR).

IRC ಹಾಗೂ IOACರ ವರದಿಗಳು ದಿನಾಂಕ 5ನೇ 2021ರಿಂದ ಸಾರ್ವಜನಿಕ ಜಾಲತಾಣಗಳಲ್ಲಿ ಲಭ್ಯವಿದೆ. IPPPR ಪ್ರಕ್ರಿಯೆಯ ವರದಿ ಶೀಘ್ರದಲ್ಲೇ ಬರಲಿದೆ. ಈ ಹೊಸ ಅಂತರ್ರಾಷ್ಟ್ರೀಯ ಒಪ್ಪಂದ ರಚನೆಯ ಕುರಿತ WHO ದ ಸಲಹೆಯು, ಈ ಪುನರಾವಲೋಕನ ಸಮಿತಿಗಳ ಹೊಳಹುಗಳು ಹಾಗೂ ಶಿಫಾರಸುಗಳ ಮೇಲೆ ಗಣನೀಯವಾಗಿ ಪ್ರಭಾವ ಬೀರಿದಂತೆ ಕಾಣುತ್ತದೆ. ಆದ್ದರಿಂದ, ಯಾವುದೇ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೊದಲು ಪುನರಾವಲೋಕನ ಸಮಿತಿಗಳ ಶಿಫಾರಸುಗಳ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗಳು ಸವಿವರವಾಗಿ ಚರ್ಚಿಸುವುದು ಬಹುಮುಖ್ಯ.

ಪ್ರಸ್ತುತ ವಿಚಾರ ಮಾಡಲಾಗುತ್ತಿರುವ, ಯುರೋಪಿಯನ್ ಒಕ್ಕೂಟ ಪ್ರಾಯೋಜಿತ WHO ದ ತುರ್ತುಪರಿಸ್ಥಿತಿ ಸಿದ್ಧತೆಗಳ ಕುರಿತಾದ ನಡಾವಳಿಗಳು ಈ ಕೆಳಕಂಡ ಕಂಡಿಕೆಯನ್ನು ಹೊಂದಿರುವುದು ಆಸಕ್ತಿದಾಯಕವಾಗಿದೆ: ”WHO ದ ಆರೋಗ್ಯ ತುರ್ತುಪರಿಸ್ಥಿತಿ ಸನ್ನದ್ಧತೆ ಹಾಗೂ ಪ್ರತಿಕ್ರಿಯೆಯನ್ನು ಬಲಪಡಿಸಲು, ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಮುಕ್ತವಾಗಿರುವ ಸದಸ್ಯ ರಾಷ್ಟ್ರಗಳ ಕಾರ್ಯಕಾರಿ ಸಮೂಹವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.” ಈ ರೀತಿಯ ಕಾರ್ಯಕಾರಿ ಸಮೂಹವನ್ನು ಸ್ಥಾಪಿಸುವುದರಿಂದ ವಿವಿಧ ಪುನರಾವಲೋಕನ ಸಮಿತಿಗಳು ನೀಡಿದ ವರದಿಗಳನ್ನು ಚರ್ಚಿಸಲು, ಅವುಗಳ ಶಿಫಾರಸ್ಸುಗಳನ್ನು ಪರಿಶೀಲಿಸಲು ಹಾಗೂ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ಅವಕಾಶ ಒದಗುತ್ತದೆ. ದುರದೃಷ್ಟವಶಾತ್, FoT ಪ್ರಚುರ ಪಡಿಸಿದ ಕರಡು ನಿರ್ಧಾರ ಈ ಸಾಧ್ಯತೆಯನ್ನು ತೆಗೆದುಹಾಕಿದೆ.

ಎರಡನೆಯದಾಗಿ, ಕರಡು ನಿರ್ಧಾರ ಹೊಸ ಅಂತರಾಷ್ಟ್ರೀಯ ಒಪ್ಪಂದಕ್ಕೆ ಅಗತ್ಯ ಕಾರಣ ನೀಡುವುದರಲ್ಲಿ ಸೋತಿದೆ. ಯಾವುದೇ ಒಪ್ಪಂದಕ್ಕೆ ಬರುವ ಮೊದಲು ಈ ಒಪ್ಪಂದ ಪ್ರಸ್ತುತ ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ದಾರಿಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಕೋವಿಡ್ ಒಂದು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಆಗಿದ್ದರಿಂದ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲು WHO ಗೆ ಕಾನೂನಿನ ಒಪ್ಪಿಗೆಯ ಕೊರತೆ ಇಲ್ಲ. WHO ದ ವಿಧಿ 2(ಜಿ) ಸಾಂಕ್ರಾಮಿಕ, ಸ್ಥಳೀಯ ಮತ್ತು ಇತರ ರೋಗಗಳನ್ನು ನಿರ್ಮೂಲನೆ ಮಾಡುವ ಕೆಲಸವನ್ನು ಉತ್ತೇಜಿಸಲು ಹಾಗೂ ಮುನ್ನಡೆಸಲು ಅವಕಾಶ ಕಲ್ಪಿಸುತ್ತದೆ. ಈ ಹಿನ್ನಲೆಯಲ್ಲಿ, WHO ಈಗಾಗಲೇ ತನ್ನ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ರೋಗಗಳ ಅಂತರರಾಷ್ಟ್ರೀಯ ಹಬ್ಬುವಿಕೆ ಯನ್ನು ತಡೆಯಲು IHR, 2005 ನ್ನು ಅಳವಡಿಸಿಕೊಂಡಿದೆ.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ WHO ದ 19 ನೇ ವಿಧಿಯ ಅಡಿಯಲ್ಲಿ ಬೇರೆ ಒಂದು ಒಡಂಬಡಿಕೆಯನ್ನು ಅಳವಡಿಸಿಕೊಳ್ಳುವುದು, ಇತರೆ ಉಪ-ಒಪ್ಪಂದಗಳು, ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದು, IHR ಅಡಿಯಲ್ಲಿ ಚದುರಿದ ಕಾನೂನು ಆಡಳಿತಕ್ಕೆ ಎಡೆಮಾಡಿಕೊಡುತ್ತದೆ. ನಿಜವಾಗಿ ಬೇಕಾಗಿದ್ದು ಏನೆಂದರೆ IHR ಅಡಿಯಲ್ಲಿ ಜಾಗತಿಕ ಸಮನ್ವಯ ಹಾಗೂ ಸನ್ನದ್ಧತೆಯನ್ನು ಬಲಪಡಿಸಲು, ನಿಯಮಗಳು, ಸ್ಪಷ್ಟೀಕರಣಗಳು ಹಾಗೂ ಅನುಷ್ಠಾನ ಕುರಿತಾದ ಸಾಮಾನ್ಯ ವ್ಯಾಖ್ಯೆಗಳು ಇವೇ ಮೊದಲಾದ ಕಾನೂನು ದಾಖಲೆಗಳು.

ಸಾಂಕ್ರಾಮಿಕ ರೋಗ ಅಥವಾ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಸಂದರ್ಭಗಳಲ್ಲಿ IHR 2005ರ 57 ನೇ ವಿಧಿಯು WHO ಹಾಗೂ ಸದಸ್ಯ ರಾಷ್ಟ್ರಗಳಿಗೆ ವಿಶೇಷ ಕಾನೂನನ್ನು ಜಾರಿಗೆ ತರುವ ಅಧಿಕಾರವನ್ನು ನೀಡುತ್ತದೆ. ಹಾಗೂ, ಇತರ ಎಲ್ಲ ಕಾನೂನು ದಾಖಲೆಗಳು ಹಾಗೂ ಒಪ್ಪಂದಗಳನ್ನು IHR, 2005ಗಳಿಗೆ ಅನುಗುಣವಾಗಿಯೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. FoT ವತಿಯಿಂದ ಪ್ರಚುರಪಡಿಸಲು ಕೊಟ್ಟ ಆಗಾಗ್ಗೆ ಕೇಳುವ ಪ್ರಶ್ನೆಗಳಲ್ಲಿ (FAQ) ಉಲ್ಲೇಖಿಸಿದಂತೆ,  ಹೆಚ್ಚಿನ ರಾಜಕೀಯ ಪ್ರಚಾರ ಸಿಕ್ಕಿದ ಈ ಒಡಂಬಡಿಕೆಯು IHR ಮೇಲಿನ ಗಮನವನ್ನು ಕಡಿಮೆಗೊಳಿಸುತ್ತದೆ.

IRHಗಳ ಅನುಷ್ಠಾನ ಹಾಗೂ ಅವುಗಳಲ್ಲಿ ಹೇಳಿದಂತೆ ವ್ಯವಸ್ಥೆಯನ್ನು ಕಟ್ಟುವುದರ ನಡುವೆ ಈಗಾಗಲೇ ದೊಡ್ಡ ಕಂದರ ನಿರ್ಮಾಣವಾಗಿದೆ. ರಾಷ್ಟ್ರಗಳು ಆರೋಗ್ಯ ತುರ್ತುಪರಿಸ್ಥಿತಿಯ ಸ್ಪೋಟವನ್ನು ಕಂಡುಹಿಡಿಯುವುದನ್ನು ಚೆನ್ನಾಗಿ ಮಾಡಿದ್ದರೂ ಸಹ ಆ ಘಟನೆಗಳಿಗೆ ಸ್ಪಂದಿಸುವುದರಲ್ಲಿ ಅಷ್ಟೇನೂ ಸಮಾಧಾನ ತಂದಿಲ್ಲ. ಇದು ಈವರೆಗೂ WHO ದಿಂದ ನೀಡಲಾದ ಅನುದಾನ ಹಾಗೂ ತಾಂತ್ರಿಕ ಸಹಾಯ ಸದಸ್ಯ ರಾಷ್ಟ್ರಗಳಲ್ಲಿ ಕೇವಲ ತುರ್ತುಪರಿಸ್ಥಿತಿಯ ಪತ್ತೆ ಕಾರ್ಯಕ್ಕೆ ಮಾತ್ರ ಸಹಾಯಕಾರಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸಿ ಸದಸ್ಯ ರಾಷ್ಟ್ರಗಳು ಸನ್ನದ್ಧತೆ ಹಾಗೂ ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕು.

ಆದ್ದರಿಂದ, IHR ಗಳನ್ನು ಅನುಷ್ಠಾನಗೊಳಿಸಿ ಸದಸ್ಯ ರಾಷ್ಟ್ರಗಳಲ್ಲಿ ಗಟ್ಟಿಯಾಯಾಗಿ ವ್ಯವಸ್ಥೆಗಳನ್ನು ಕಟ್ಟುವ ಶಕ್ತಿಯನ್ನು ಹೊಂದುವ ಸಲುವಾಗಿ ನಿಯಮಗಳನ್ನು ಅರ್ಥೈಸಲು ಹಾಗೂ ಸ್ಪಷ್ಟೀಕರಿಸಲು ಪೂರಕ ಕಾನೂನು ದಾಖಲೆಗಳ ಅವಶ್ಯಕತೆ ಇದೆ. ಇದಕ್ಕೆ ವತಿಯಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸರಿಯಾದ ಹಣಕಾಸು, ಜ್ಞಾನ ಹಾಗೂ ತಂತ್ರಜ್ಞಾನ ವರ್ಗಾವಣೆ  ಮುಂತಾದವುಗಳನ್ನು ಒದಗಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೆಚ್ಚಿನದಾಗಿ  ಕೈ ಜೋಡಿಸುವ ಅಗತ್ಯವಿದೆ. ಹೊಸ ಒಡಂಬಡಿಕೆ ಈ ನಿಟ್ಟಿನಲ್ಲಿ ಅಂತಹದ್ದೇನನ್ನೂ ಒದಗಿಸದಿರುವುದನ್ನು ಕಡೆಗಣಿಸಲಾಗುವುದಿಲ್ಲ.

ಮೂರನೆಯದಾಗಿ, ಹೊಸ ಒಪ್ಪಂದದಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಸಮಾನ ಅವಕಾಶ, ಹಂಚಿಕೊಂಡ ಭಾದ್ಯತೆ ಮತ್ತು ಸಾಮರ್ಥ್ಯ ವೃದ್ಧಿ ಕುರಿತು ಪ್ರಾಯೋಗಿಕ ಅಥವಾ ಹೊಸ ಕಾನೂನಿನ ಪರಿಹಾರವನ್ನು ಖಾತ್ರಿಗೊಳಿಸುವ ಯಾವುದೇ ಭರವಸೆ ಅಥವಾ ಪ್ರಸ್ತಾಪ ಅಥವಾ ಯೋಜನೆ ಇಲ್ಲ. ಆದರೆ, ಈಗ ಕೈಬಿಡಲಾದಂತಹ ಯುರೋಪಿಯನ್ ಪರಿಷತ್ತಿನ ನೀತಿ ಹೇಳಿಕೆಯು ಸದಸ್ಯ ರಾಷ್ಟ್ರಗಳಲ್ಲಿ ಜಾರಿಗೆ ತರಬೇಕಾದರೆ ಬೇಕಾಗುವ ಕಣ್ಗಾವಲು, ಎಚ್ಚರಿಕಾ ಕಾರ್ಯವಿಧಾನ ಹಾಗೂ ಅಂತರಾಷ್ಟ್ರೀಯ ವೈದ್ಯಕೀಯ ನೆರವಿನ ಕುರಿತು ಸ್ಪಷ್ಟ ನೋಟವನ್ನು ನೀಡುತ್ತದೆ.

ಆದ್ದರಿಂದ IHRನ ಸರಿಯಾದ ಜಾರಿಗೆ ಬೇಕಾದ ಕೆಲಸ ಮಾಡದೆ ಹೊಸ ಒಪ್ಪಂದಕ್ಕೆ ಸದಸ್ಯ ರಾಷ್ಟ್ರಗಳು ಬರುವುದು ಮತ್ತಷ್ಟು ಕಾನೂನು ಸಮಸ್ಯೆಗಳಿಗೆ ಎಡೆಮಾಡಿ ಕೊಡುವ ಹಾಗೂ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದದ ದೇಶಗಳ ನಡುವಣ ಇರುವ ಅಸಮಾನ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಮೂಡಿಸುವ ಸಾಧ್ಯತೆಗಳು ಸ್ಪಷ್ಟವಾಗಿವೆ.

ನಾಲ್ಕನೆಯ ಹಾಗೂ ಬಹುಮುಖ್ಯವಾದ ಕಾರಣ ಎಂದರೆ ಈ ಹೊಸ ಕರಡು ನಿರ್ಧಾರವು ಮಾನವನ ಇತಿಹಾಸದಲ್ಲಿ ಅತ್ಯಂತ ಕಠಿಣ ಸಮಯದಲ್ಲಿ ಹೊರಬಂದೂ ವಿಶ್ವದ ಅಭಿವೃದ್ಧಿಶೀಲ ಭಾಗ ಹಾಗೂ ಅದರ ಜನರ ಯಾವುದೇ ನೈಜ ಕಾಳಜಿಗಳನ್ನು ಪರಿಗಣಿಸದೆ ಜಾಗತಿಕ ಆತ್ಮಸಾಕ್ಷಿ ನಡುಗಿಸಿದ್ದೇ ಆಗಿದೆ ಎಂದರೆ ತಪ್ಪಲ್ಲ. ಅದಲ್ಲದೆ, ಈ ಅಂತರರಾಷ್ಟ್ರೀಯ ಒಪ್ಪಂದದ ನಿಬಂಧನೆಗಳ ಕುರಿತು ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಈ ಜನರ ಅಥವಾ ಅವರ ಪ್ರತಿನಿಧಿ ಸರ್ಕಾರಗಳ ಕ್ಷಮತೆಯ ಬಗ್ಗೆಯೂ ಸಹ ಪರಿಗಣಿಸಿಲ್ಲ. ಈ ವಿಷಯದಲ್ಲಿ ಪ್ರಮುಖ ಆಸಕ್ತಿ ಹೊಂದಿರುವ ರಾಷ್ಟ್ರಗಳ ಅಂದರೆ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕಡಿಮೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಕಡೆಗಣಿಸಿ, ಮುಕ್ತ ಸಮ್ಮತಿ ಮತ್ತು ಉತ್ತಮ ನಂಬಿಕೆಯಂತಹ ಅಂತರರಾಷ್ಟ್ರೀಯ ಕಾನೂನನ್ನು ಬರೆಯಬೇಕಾದರೆ ಪಾಲಿಸಬೇಕಾಗುವ ಮೂಲತತ್ವಗಳನ್ನು ನಿರ್ಲಕ್ಷಿಸಲಾಗಿದೆ.

IHRಗಳ ಪುನರಾವಲೋಕನ ಸಮಿತಿ 2021, ರಾಷ್ಟ್ರಗಳು, ಸರ್ಕಾರಗಳು ಹಾಗೂ WHO ಈಗಾಗಲೇ ಹೆಚ್ಚಾಗಿ ಬಾಕಿ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಹಾಗೂ ಈ ಸಂಸ್ಥೆಗಳಲ್ಲಿ ತನ್ನ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಂಪನ್ಮೂಲಗಳು ಇಲ್ಲವೆಂಬ ಕಾರಣದಿಂದ, ಹಿಂದಿನ ಪುನರಾವಲೋಕನ ಸಮಿತಿಯ ಶಿಫಾರಸುಗಳ ಜಾರಿಯಾದ ಬಗೆಯನ್ನು ಅವಲೋಕನ ಮಾಡುವ ಕೆಲಸವನ್ನೂ ಸಹ ಮುಂದೂಡಿದೆ.

ಅಂತರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾದ ಮೈಕಲ್ ವುಡ್ ಯಾವುದೇ ಅಂತರಾಷ್ಟ್ರೀಯ ಒಪ್ಪಂದ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ಎರಡು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ಹೇಳುತ್ತಾರೆ: 1. ಸದ್ಯಕ್ಕೆ ನಮ್ಮ ಮುಂದೆ ಇರುವ ಸಮಸ್ಯೆಗೆ ಈ ಒಪ್ಪಂದವು ಅಗತ್ಯವೇ? 2. ಅಗತ್ಯವಾಗಿದ್ದೇ ಆದರೆ ಮಾತುಕತೆಗಳನ್ನು ಆರಂಭಿಸಲು ಸರಿಯಾದ ಸಮಯ ಯಾವುದು?

ಈ ಪ್ರಶ್ನೆಗಳಲ್ಲಿ ಹೊಸ ಒಪ್ಪಂದದ ಪ್ರಸ್ತಾವನೆ ಹಾಗೂ ಕರಡು ನಿರ್ಧಾರಗಳೆರಡೂ ಹಿಂದೆ ಬೀಳುತ್ತವೆ. ಸಾಂಕ್ರಾಮಿಕ ರೋಗ ಅಥವಾ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಸಂದರ್ಭಗಳಲ್ಲಿ ಕೆಲಸ ಮಾಡಲು ಈ ಒಪ್ಪಂದದ ಅಗತ್ಯತೆಯ ಬಗ್ಗೆ ಒಂದು ಸಮಾಧಾನಕರ ಕಾರಣ ನೀಡಲು ಸಹ ಇದು ವಿಫಲವಾಗಿದೆ. ಈ ಪ್ರಸ್ತಾವನೆಯನ್ನು ಯಾವುದೇ ಸಮಂಜಸ ಪರಿಗಣನೆಯಿಲ್ಲದೆ ಸಮಯವಲ್ಲದ ಸಮಯದಲ್ಲಿ ಪ್ರಸ್ತಾಪಿಸಲಾಗಿದೆ.

ಈ ಲೇಖನ ಮೂಲ ಥರ್ಡ್ ವರ್ಲ್ಡ್ ನೆಟ್ವರ್ಕ್ ನ ನಿಯಕಾಲಿಕೆಯಲ್ಲಿ 12.05.2021ರಂದು ಪ್ರಕಟವಾಗಿದ್ದು ಕನ್ನಡಕ್ಕೆ ಲೋಕೇಶ್ ಕೆಂಪಣ್ಣ ಅವರು ಭಾವಾನುವಾದಿಸಿದ್ದಾರೆ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ನಿತಿನ್ ರಾಮಕೃಷ್ಣನ್, ಕೆ. ಎಂ. ಗೋಪಕುಮಾರ್ ಮತ್ತು ಸಂಗೀತಾ ಶಶಿಕಾಂತ್

ನಿತಿನ್ ರಾಮಕೃಷ್ಣನ್ ರವರು ಚಿನ್ಮಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಕೆ ಎಂ ಗೋಪಕುಮಾರ್ ಮತ್ತು ಸಂಗೀತಾ ಶಶಿಕಾಂತ್ ಅವರು ಥರ್ಡ್ ವರ್ಲ್ಡ್ ನೆಟ್ವರ್ಕ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Scroll to Top