ಉಪನ್ಯಾಸ ಮಾಲಿಕೆ – 7: “ಸಂಸದೀಯ ಪದ್ಧತಿಗಳು ಮತ್ತು ವಿಧಾನಗಳು” – ಶ್ರೀ ಬಿ. ಎಲ್. ಶಂಕರ್

ಉಪನ್ಯಾಸಕರು: ಶ್ರೀ ಬಿ. ಎಲ್. ಶಂಕರ್, ಮಾಜಿ ಸಭಾಧ್ಯಕ್ಷರು, ಕರ್ನಾಟಕ ಸರಕಾರ.

ಎನ್.ಎಸ್.ಎಸ್ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ೭೫ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ “ವಿಚಾರ ಕಲರವ” ಉಪನ್ಯಾಸ ಮಾಲಿಕೆ ೭ ರಲ್ಲಿ ಉಪನ್ಯಾಸ ನೀಡಿದ್ದು ಡಾ.ಬಿ.ಎಲ್.ಶಂಕರ್, ಮಾಜಿ ಸಭಾಧ್ಯಕ್ಷರು, ಕನಾ೯ಟಕ ಸರ್ಕಾರ. ಉಪನ್ಯಾಸದ ವಿಷಯ “ಸಂಸದೀಯ ಪದ್ಧತಿಗಳು ಮತ್ತು ವಿಧಾನಗಳು”.

ಸುದೀರ್ಘವಾದ ವಿಷಯ ಇದಾಗಿದೆಯೆಂದು ಉಪನ್ಯಾಸ ಆರಂಭಿಸಿದ ಅವರು ದೇಶದ ಸಂಸದೀಯ ವ್ಯವಸ್ಥೆ ರಚನೆಯಾದ ಸಂದರ್ಭ ಕಾರಣಗಳು, ಅದರ ಕಾರ್ಯ ನಿರ್ವಹಣೆ, ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಮಾತನಾಡುವುದಾಗಿ ತಿಳಿಸಿದರು. ಇಂಗ್ಲೀಷು ಸಾಹಿತ್ಯಕಾರರಾದ ಪರ್ಸಿ ಶೆಲ್ಲಿ ಅವರ ಹೆಚ್ಚು ಅಧ್ಯಯನ ಮಾಡಿದಂತೆ ಹೆಚ್ಚು ಅಜ್ಞಾನ ಬೆಳಕಿಗೆ ಬರುತ್ತದೆ ಎಂಬ ಉಕ್ತಿಯನ್ನು ನೆನೆಸಿಕೊಂಡ ಶಂಕರ್ ಅವರು, ಭಾರತದ ಭೌಗೋಳಿಕ ಚಿತ್ರಣವನ್ನು ವಿವರಿಸಿದರು. 568000 ಹಳ್ಳಿಗಳು, ತೆಲಂಗಾಣ ಹಾಗೂ ಮಣಿಪುರದ ಹೊಸ ಜಿಲ್ಲೆಗಳನ್ನು ಹೊರತುಪಡಿಸಿದರೆ 610 ಜಿಲ್ಲೆಗಳು, 28 ರಾಜ್ಯಗಳು, 1018 ಭಾಷೆಗಳು, 5642 ಜಾತಿಗಳು, 6 ಮತಗಳು, 52 ಬುಡಕಟ್ಟುಗಳು, 29 ರಾಷ್ಟ್ರೀಯ ಹಬ್ಬಗಳು, ಸುಮಾರು 75 ಕೋಟಿ ಮತದಾರರು, ಸುಮಾರು 1100000 ಮತಗಟ್ಟೆಗಳು, ಸುಮಾರು 150 ಸಕ್ರಿಯ ಪಕ್ಷಗಳು ಮತ್ತು 7 ರಾಷ್ಟ್ರೀಯ ಪಕ್ಷಗಳನ್ನು ಹೊಂದಿದ ದೇಶ ನಮ್ಮದು. ಇಷ್ಟು ವೈವಿಧ್ಯವಾದ ದೇಶವನ್ನು ಒಂದೇ ಆಡಳಿತದಲ್ಲಿ ತರುವುದಕ್ಕೆ ನಿರ್ಮಾಣವಾದ ಸಂವಿಧಾನ ರಚನಾ ಸಭೆ ಜೀವ ತಳೆಯಿತು, ಸಂವಿಧಾನದ ರಚನೆಯಾಗುವ ಹೊತ್ತಿಗೆ, ಅದರ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಸಮಾನಾಂತರವಾಗಿ ದೇಶ ವಿಭಜನೆಯೂ ನಡೆದಿದ್ದರಿಂದ, ಅವತ್ತಿನ ನಾಯಕರ ಮೇಲೆ ಇದ್ದ ಅತೀವವಾದ ಒತ್ತಡವನ್ನು ಮರೆಯುವಂತಿಲ್ಲ ಎಂದರು. ಸುಮಾರು ಆರೇಳು ದೇಶಗಳ ಸಂವಿಧಾನವನ್ನು ಪರಿಶೀಲನೆ ಮಾಡಿ ನಮ್ಮ ಸಂವಿಧಾನ ರಚನೆಯನ್ನು ಮಾಡಿದ್ದು, ದೇಶ ಅಂದರೆ ಬರಿಯ ಮನುಷ್ಯರೂ ಅಲ್ಲ, ಅಲ್ಲಿರುವ ಸಕಲ ಜೀವರಾಶಿಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆ ಮಾಡಿದ ಸಂದರ್ಭ ಅದಾಗಿತ್ತು ಎಂದರು. ಅರಿಸ್ಟಾಟಲ್ ಅವರ ಯಾವುದೇ ದೇಶದ ಸಂವಿಧಾನ ಸಂಪೂರ್ಣವಾಗಿ ಒಳ್ಳೆಯದಲ್ಲ ಅಥವಾ ಕೆಟ್ಟದ್ದಾಗಿರುವುದಿಲ್ಲ, ಅದನ್ನು ಬೇರೆ ಸಂವಿಧಾನಕ್ಕೆ ಹೋಲಿಸಿ ಕೆಲವು ಅಂಶಗಳನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನಬಹುದು ಎಂದ ಮಾತನ್ನು ಶ್ರೀಯುತರು ನೆನೆಸಿಕೊಂಡರು. ನಮ್ಮ ದೇಶದ ವೈವಿಧ್ಯತೆಗೆ ಸಂಸದೀಯ ಪದ್ಧತಿಯೇ ಹೆಚ್ಚು ಸೂಕ್ತ ಎಂಬ ಅಂಬೇಡ್ಕರ್ ಅವರ ಮಾತನ್ನು ಅನುಮೋದಿಸಿದ ಅವರು, ಅಮೆರಿಕಾ ಮತ್ತು ಇಂಗ್ಲೆಂಡಿನ ರಾಷ್ಟ್ರಗಳಿಗೆ ಹೋಲಿಸಿದರೆ ಹುಟ್ಟುತ್ತಲೇ ಎಲ್ಲ ಪ್ರೌಢ ವಯಸ್ಕರಿಗೆ ಮತದಾನದ ಹಕ್ಕನ್ನು ಕೊಟ್ಟ ಭಾರತದ ಸಂವಿಧಾನದ ಬಗ್ಗೆ ಹೆಮ್ಮೆಪಡಬೇಕು ಎಂದರು.

ಬಹುಪಕ್ಷೀಯ ವ್ಯವಸ್ಥೆಯಲ್ಲಿ ಕಮ್ಯುನಿಸ್ಟರು ಪ್ರಪಂಚದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಇಲ್ಲಿಯ ಸಂಸದೀಯ ವ್ಯವಸ್ಥೆಯಿಂದ, ಹಾಗೆಯೆ ಪ್ರಪ್ರಥಮ ಬಾರಿಗೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಿದ್ದೂ ಭಾರತದಲ್ಲಿಯೇ, ಅದೂ ಸಾಧ್ಯವಾಗಿದ್ದು ಇಲ್ಲಿಯ ಸಂಸದೀಯ ವ್ಯವಸ್ಥೆಯಿಂದ ಎಂದರು. ಕಳೆದ ಏಳು ದಶಕಗಳಲ್ಲಿ ಚುನಾವಣೆಗಳಲ್ಲಿ ಜನರ ಆದೇಶಕ್ಕೆ ಯಾವತ್ತೂ ಇಲ್ಲಿನ ವ್ಯವಸ್ಥೆ ಬೆಲೆ ಕೊಟ್ಟಿರುವುದು ಇಲ್ಲಿನ ಮತ್ತೊಂದು ವಿಶೇಷ ಎಂದರು ಶ್ರೀಯುತರು. ಸ್ವಾತಂತ್ರ್ಯ ಬಂದ ಸಮಯದಲ್ಲಿ ಆರರಿಂದ ಏಳು ವಿಶ್ವವಿದ್ಯಾಲಯಗಳಿದ್ದವು, ಉದ್ಯಮಗಳೂ ಏನೂ ಇರಲಿಲ್ಲ, ಆಹಾರ – ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಿದ್ದೇವೆ ಮತ್ತು ಎಲ್ಲ ಸರಕಾರಗಳೂ ಈ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. ದೇಶದ ಸಾಮಾಜಿಕ ವ್ಯವಸ್ಥೆಯ ದೊಡ್ಡ ಕಳಂಕವಾದ ಅಸ್ಪೃಶ್ಯತೆಯನ್ನು ನಾವು ತೊಡೆದುಹಾಕುವ ಕಾನೂನು ಮಾಡಿದ್ದು, ಸತಿ ನಿಷೇಧ ಮಾಡಿದ್ದು, ಮಹಿಳೆಯರಿಗೆ ಮತ್ತು ಶೂದ್ರರಿಗೆ ಶಿಕ್ಷಣ ದೊರಕುವಂತೆ ಮಾಡಿದ್ದು ಮುಂತಾದ ಹಲವು ಗಣನೀಯ ಸುಧಾರಣೆಗಳನ್ನು ಈ ವ್ಯವಸ್ಥೆ ಕೊಟ್ಟಿದೆ. ಅಷ್ಟೇ ಅಲ್ಲದೆ, ಪಂಚಾಯತ್ ರಾಜ್ ಕಾನೂನುಗಳ ಮೂಲಕ ಒಂದಿಷ್ಟು ಸುಧಾರಣೆಗಳಾಗಿವೆ ಎಂದೂ ಸೇರಿಸಿದರು.

ಆದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಶಾಂತಿಯುತವಾಗಿ ಯಶಸ್ವಿಯಾಗಿ ಯಾವುದೇ ಗೊಂದಲಗಳಿಲ್ಲದೆ ನಡೆಯುತ್ತಿದೆ ಎಂದು ಹೇಳಲಾಗುವುದಿಲ್ಲ, ರಾಜೀವ್ ಗಾಂಧಿಯವರ ಸರಕಾರವಿದ್ದಾಗ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಹತ್ತನೇ ಶೆಡ್ಯೂಲ್ ನಲ್ಲಿ ಸೇರಿಸುವ ಪ್ರಯತ್ನಗಳಾದವು, ಆ ಕಾನೂನನ್ನೂ ಬೇಸ್ತು ಬೀಳಿಸುವ ಉಪಾಯಗಳನ್ನು ರಾಜಕಾರಣಿಗಳು ಕಂಡುಕೊಂಡದ್ದರಿಂದ, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದರು ಶ್ರೀಯುತರು.

ರಾಜಕಾರಣದಲ್ಲಿ ಧರ್ಮ ಇರಬೇಕು ಎಂದು ಮಹಾತ್ಮ ಹೇಳಿದ್ದನ್ನು ನೆನಸಿಕೊಂಡ ಅವರು, ಈಗ ಧರ್ಮದಲ್ಲೇ ರಾಜಕಾರಣ ನಡೆಯುತ್ತಿದೆ ಎಂದು ಖೇದಪಟ್ಟರು. ಗಾಂಧೀಜಿಯವರ ಸಪ್ತ ಪಾತಕಗಳ ಸೂತ್ರವನ್ನು ಇವತ್ತು ಎಲ್ಲರೂ ಅನುಸರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಎಸ್. ಆರ್. ಬೊಮ್ಮಾಯಿ ಪ್ರಕರಣ ಹೇಗೆ ಸರಕಾರದ ಸ್ಥಿರತೆಯು ಕಾನೂನು ಪ್ರಕಾರ ನಿರ್ಧಾರವಾಗಬೇಕು ಎಂದು ವಿಧಿಸಿದ್ದನ್ನು ತಿಳಿಸಿದರು. ಇಷ್ಟೆಲ್ಲಾ ಆದರೂ ರಾಜಕೀಯ ಪಕ್ಷಗಳಲ್ಲಿ ಭ್ರಷ್ಟಾಚಾರ, ಆಂತರಿಕ ಕಲಹಗಳು, ಅತಿಯಾದ ಕುಟುಂಬ ರಾಜಕಾರಣ, ಅತಿಯಾದ ಹೈಕಮಾಂಡ್ ಸಂಸ್ಕೃತಿ ಮುಂತಾದವುಗಳೂ ಇವೆ ಎಂದರು. ಪ್ಲೇಟೋ ಹೇಳಿದ ರಾಜಕೀಯಕ್ಕೆ ಬರಲಾರದ ಸಭ್ಯನು ಅಸಭ್ಯರಿಂದ ಆಳಿಸಿಕೊಳ್ಳುವ ಕಷ್ಟ ಪಡಬೇಕಾಗುತ್ತದೆ ಎಂದ ಹೇಳಿಕೆಯನ್ನು ಜ್ಞಾಪಿಸಿದ ಅವರು, ಚಾರ್ಲ್ಸ್ ಡಿಗಾಲೆ ಹೇಳಿದ್ದು ರಾಜಕೀಯ ರಾಜಕಾರಣಿಗಳಿಗೆ ಮಾತ್ರ ಬಿಡುವುದಕ್ಕಿಂತ ಹೆಚ್ಚಿನ ಗಂಭೀರ ವಿಚಾರವಾಗಿದೆ ಎಂದಿದ್ದನ್ನೂ ಹೇಳಿದರು. ಇವತ್ತು ರಾಜಕಾರಣದಲ್ಲಿ ವ್ಯವಸ್ಥೆಯಲ್ಲಿ ಲೋಪ – ದೋಷಗಳಿದ್ದರೆ ಅದರಲ್ಲಿ ಪ್ರಜೆಗಳ ಹೊಣೆಯೂ ದೊಡ್ಡ ಪ್ರಮಾಣದಲ್ಲಿಯೇ ಇದೆ ಎಂದು ತಮ್ಮ ಅನಿಸಿಕೆ ಹೇಳಿದರು.

ಇಂದಿನ ರಾಜಾಕಾರಣದ ದುಸ್ಥಿತಿಗೆ ಸಂಸದೀಯ ವ್ಯವಸ್ಥೆಯನ್ನು ದೂರುತ್ತಾ, ಅಧ್ಯಕ್ಷೀಯ ವ್ಯವಸ್ಥೆ ಬರಬೇಕೆಂದು ಪ್ರತಿಪಾದಿಸುವವರಿಗೆ ಶ್ರೀಯುತರು ಅಂಬೇಡ್ಕರ್ ಅವರ ಸಂವಿಧಾನದ ಪರಿಣಾಮ ಅದನ್ನು ನಿರ್ವಹಿಸುವ ಜನರ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತನ್ನು ಹೇಳಿದರು. 2004 ರಲ್ಲಿ ಸಂಸತ್ತಿಗೆ ಆಯ್ಕೆಯಾದವರಲ್ಲಿ 24 ಶತಮಾನದಷ್ಟು ರಷ್ಟು ಜನರ ಮೇಲೆ ಕ್ರಿಮಿನಲ್ ಆರೋಪಗಳಿದ್ದವರಾಗಿದ್ದು, 30 ಶತಮಾನದಷ್ಟು ಸಂಸದರು ಕೋಟ್ಯಾಧೀಶರೂ, ಸುಮಾರು 45 ಶತಮಾನದಷ್ಟು ಸಂಸದರು ಕೌಟುಂಬಿಕ ಹಿನ್ನೆಲೆಯಿಂದ ಬಂದವರೂ. 2009 ರಲ್ಲಿ ಆ ಸಂಖ್ಯೆ ಕ್ರಮವಾಗಿ 30, 55 ಮತ್ತು 50 ಶತಮಾನದಷ್ಟಾಯ್ತು. 2014 ರಲ್ಲಿ ಆ ಸಂಖ್ಯೆ ಕ್ರಮವಾಗಿ 34, 82 ಮತ್ತು 55 ಶತಮಾನದಷ್ಟಾಯ್ತು. 2019 ರಲ್ಲಿ ಆ ಅಂಕಿ ಅಂಶ ಕ್ರಮವಾಗಿ 41, 68 ಮತ್ತು 60 ಆಗಿದೆ. ಅಂದರೆ ಸಂಸತ್ತಿಗೆ ಬರಬೇಕಾದರೆ ಒಂದೋ ಶ್ರೀಮಂತರಾಗಿರಬೇಕು, ಇಲ್ಲದಿದ್ದರೆ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವವರು ಎಂಬ ಸೂಚನೆ ಬರುವುದು ದುರದೃಷ್ಟಕರ ಎಂದು ಹೇಳಿದರು. ಅಷ್ಟೇ ಅಲ್ಲದೆ, ಕ್ರಿಮಿನಲ್ ಹಿನ್ನೆಲೆಯಿರುವವರೂ ಮುಲಾಜಿಲ್ಲದೆ ಬರುವುದೂ ದುರದೃಷ್ಟಕರ ಎಂದು ವಿಷಾದಪಟ್ಟರು.

ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ಶ್ರೀ ಬಿ. ಎಲ್. ಶಂಕರ್ ಅವರು ತಮ್ಮ ಅಭಿಪ್ರಾಯದಲ್ಲಿ ಈ ಕೆಳಗಿನ ಪರಿಹಾರಗಳನ್ನು ಸೂಚಿಸಿದರು:

  1. ಲೋಕಸಭೆಗೆ ಮತ್ತು ವಿಧಾನಸಭೆಗೆ ಒಂದೇ ಚುನಾವಣೆ ನಡೆಯಬೇಕು, ಅವುಗಳಿಗೆ ನಿಗದಿಗೊಳಿಸಿದ ಐದು ವರ್ಷದ ಮೊದಲು ಯಾವುದೇ ಉಪ ಚುನಾವಣೆಗಳು ನಡೆಯಲು ಅವಕಾಶವಿರಬಾರದು. ಅವಿಶ್ವಾಸ ನಿರ್ಣಯ ಮಂಡನೆಯ ಜೊತೆಗೆ ವಿಶ್ವಾಸ ನಿರ್ಣಯ ಮಂಡನೆಯೂ ಕಡ್ಡಾಯವಾಗಿ ಆಗಬೇಕು.
  2. ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ರಾಷ್ಟ್ರಪತಿ ಮತ್ತು ರಾಜ್ಯ ಮತ್ತು ಕೇಂದ್ರ ಸಚಿವರಿಗೆ ಎರಡು ಅವಧಿಯ ಅಂದರೆ ಹತ್ತು ವರ್ಷದ ಸೇವೆಯ ಗರಿಷ್ಟ ಮಿತಿಯನ್ನು ವಿಧಿಸಬೇಕು.
  3. ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬರುವಂತಾಗಬೇಕು. ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಹರಿದುಬರುತ್ತವೆ, ಆದರೆ ಅದರ ಮೂಲ ಯಾರಿಗೂ ತಿಳಿಯುವುದಿಲ್ಲ, ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾನೂನಿನಡಿಯಲ್ಲಿ ಬಂದರೆ ಆಡಳಿತದಲ್ಲಿ ಪಾರದರ್ಶಕತೆ ತರುವುದಕ್ಕೆ ಸಹಾಯವಾಗುತ್ತದೆ.
  4. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪಭುತ್ವವನ್ನು ಕಡ್ಡಾಯಗೊಳಿಸಬೇಕು. ಪಕ್ಷಗಳಲ್ಲಿ ಸದಸ್ಯತ್ವ ಮತ್ತು ಪದಾಧಿಕಾರಿಗಳಲ್ಲಿ ೫೦ ಶತಮಾನದಷ್ಟು ಮಹಿಳೆಯರಿರಲೇಬೇಕು.
  5. ಚುನಾವಣಾ ಪ್ರಚಾರದ ಸಂಪೂರ್ಣವಾದ ಜವಾಬ್ದಾರಿಯನ್ನು ಚುನಾವಣಾ ಆಯೋಗ ವಹಿಸಿಕೊಂಡು, ಒಂದೇ ವೇದಿಕೆಯಲ್ಲಿ ಸಮವೆಚ್ಚದಲ್ಲಿ ಎಲ್ಲ ಪಕ್ಷಗಳಿಗೂ ಸಮವಾದ ಅವಕಾಶ ಕೊಟ್ಟು ನಡೆಸಬೇಕು.
  6. ಪಕ್ಷಾಂತರ ಕಾಯ್ದೆಯನ್ನು ಪುನಃ ಪರಿಶೋಧನೆ ಮಾಡಿ, ಒಂದು ವೇಳೆ ಯಾವುದೇ ಒಬ್ಬ ಚುನಾಯಿತ ಪ್ರತಿನಿಧಿ ರಾಜೀನಾಮೆ ಕೊಟ್ಟರೆ, ಮರಣ ಪಟ್ಟರೆ ಉಪ ಚುನಾವಣೆಯನ್ನು ಮಾಡದೆ, ನಡೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಗೆದ್ದ ಅಭ್ಯರ್ಥಿಯನ್ನು ಉಳಿದ ಸಮಯಕ್ಕೆ ನೇಮಕ ಮಾಡಬೇಕು.
  7. ಯಾವ ರಾಜಕಾರಣಿಯ ಮೇಲೆ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಿರುವ ಗುರುತರ ಆರೋಪವಿರುತ್ತದೆಯೋ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬಾರದು. ಯಾವುದೇ ಒಂದು ಅಭ್ಯರ್ಥಿ ಸುಳ್ಳು ಆರೋಪವನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಲ್ಲಿ , ಅದರ ಸಾಧ್ಯಾಸಾಧ್ಯತೆಯನ್ನು ಒಂದು ನಿಷ್ಪಕ್ಷಪಾತ ಸಮಿತಿಗೆ ನಿರ್ಧಾರ ಮಾಡಲು ಅಧಿಕಾರ ಕೊಟ್ಟು, ಅಂತವರಿಗೆ ಮಾತ್ರ ಟಿಕೆಟ್ ನೀಡಬೇಕು.
  8. ರಾಜಕಾರಣಿಗಳ ಮೇಲೆ ಗುರುತರ ಆರೋಪಗಳು ಬಂದ ಸಂದರ್ಭದಲ್ಲಿ ಅವು ಆರು ತಿಂಗಳೊಳಗೆ ತೀರ್ಪಾಗುವಂತೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
  9. ಮಹಿಳೆಯರಿಗೆ ಸಂಸತ್ತು ಮತ್ತು ಶಾಸನಸಭೆಯಲ್ಲಿ ಶೇಕಡಾ ೫೦ ರಷ್ಟು ಸೀಟುಗಳನ್ನು ಮೀಸಲಿಡಬೇಕು.
  10. ಯಾವುದೇ ಒಬ್ಬ ಅಧಿಕಾರಿ ರಾಜಕೀಯಕ್ಕೆ ಬರುವುದಕ್ಕೆ ಮುಂಚೆ ಐದು ವರ್ಷದ ಅಂತರ ಇರಬೇಕು.
  11. ರಾಜಕಾರಣಿಗಳ ವೈಯಕ್ತಿಕ ಮತ್ತು ರಾಜ್ಯದ ಹಿತಾಸಕ್ತಿಗಳ ಸಂಘರ್ಷ ಬರದೇ ಇರುವಂತೆ ಕಾನೂನನ್ನು ತರಬೇಕು.
  12. ಸ್ಪೀಕರ್ ಆಗುವಂತ ವ್ಯಕ್ತಿ ಮತ್ತು ರಾಜ್ಯಪಾಲರಾಗುವಂತವವರು ಪಕ್ಷಾತೀತರಾಗಿರಬೇಕು.
  13. ವಿಪ್ ವ್ಯವಸ್ಥೆಯನ್ನು ತೆಗೆದುಹಾಕಬೇಕು, ಶಾಸಕಾಂಗದ ಸದಸ್ಯರು ಮುಕ್ತವಾಗಿ ತಮ್ಮ ಆಯ್ಕೆಯನ್ನು ವ್ಯಕ್ತಪಡಿಸುವಂತಿರಬೇಕು.

ಈ ಸಲಹೆ ಸೂಚನೆಗಳನ್ನು ಮುಕ್ತವಾಗಿ ಚರ್ಚೆ ಮಾಡಿ ನಮ್ಮ ಸಂಸದೀಯ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ ಎಂದು ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ಮಾಧ್ಯಮ ವರ್ಗದವರು ಭಾವನಾತ್ಮಕವಾದ ರಾಜಕಾರಣಕ್ಕೆ ಮಾರು ಹೋಗಬಾರದು, ಬದುಕುಗಳ ಮೇಲೆ ಪರಿಣಾಮ ಆಗುವಂತಹ ವಿಚಾರಗಳ ಬಗ್ಗೆ ಗಮನಹರಿಸಬೇಕು ಎಂದರು. ಆರ್ಡಿನೆನ್ಸ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ತುರ್ತು ಪರಿಸ್ಥಿಗಳಿಗೆ ಮಾತ್ರ ಅನ್ವಯವಾಗಬೇಕಿದ್ದ ಈ ಒಂದು ನಿಯಮ ಈಗ ಉಪಯೋಗಕ್ಕಿಂತ ಹೆಚ್ಚಿಗೆ ದುರುಪಯೋಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ಕುಟುಂಬ ರಾಜಕಾರ ಭಾರತದ ಮಟ್ಟಿಗೆ ದೊಡ್ಡ ಸವಾಲು, ರಾಜಪ್ರಭುತ್ವ ಪ್ರಜಾಪ್ರಭುತ್ವದ ಹಿಂಬಾಗಿಲಿನಿಂದ ಬರಬಾರದು ಎಂದು ಸ್ಪಷ್ಟವಾಗಿ ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಆರ್.ವೇಣುಗೋಪಾಲ ಅವರು ವಹಿಸಿದ್ದರು.
ಕಾನೂನು ಸಹ ಪ್ರಾಧ್ಯಾಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾಗಿ ಡಾ.ಸತೀಶ ಗೌಡ ಎನ್ ರವರು ಉಪಸ್ಥಿತರಿದ್ದರು.

ವರದಿ : ಅಂಜುಮ್ .ಎಮ್. ಸನ್ನೂಭಾಯಿ

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ಅಂಜುಮ್ .ಎಮ್. ಸನ್ನೂಭಾಯಿ

ಅವರು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕು ಶಲವಡಿ ಗ್ರಾಮದವರಾಗಿದ್ದು, ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Scroll to Top