ಒಂಟಿ ತಾಯ್ತನ, ಕಾನೂನುಗಳು ಮತ್ತು ನ್ಯಾಯಾಲಯಗಳು

ಇಂದು ಮಕ್ಕಳ ಪಡೆಯುವ ಹಕ್ಕು ಕೇವಲ ಕಾನೂನಿನ ಪ್ರಕಾರ ಮದುವೆಯಾದ ಗಂಡು – ಹೆಣ್ಣುಗಳಿಗೆ ಸಿಗುವ ಸವಲತ್ತು ಅಥವಾ ಹಕ್ಕಾಗಿ ಉಳಿದಿಲ್ಲ, ಬದಲಾಗಿ ಒಂದು ವ್ಯಕ್ತಿಯ ಮೂಲಭೂತ ಮಾನವ ಹಕ್ಕುಗಳಲ್ಲೊಂದಾಗಿ ಕಾನೂನಿನ ಕಣ್ಣುಗಳಲ್ಲಿ ಮನ್ನಣೆ ಪಡೆದಿವೆ. ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ, ಮಗುವಿಗೆ ಜನ್ಮ ನೀಡುವುದು ಒಂದು ಮದುವೆಯ ಅತ್ಯಂತ ಮುಖ್ಯ ಭಾಗವೆಂದು ಪರಿಗಣಿಸಲಾಗಿದೆ. ವಿವಾಹಿತ ಮಹಿಳೆಯ ತಾಯ್ತನವನ್ನು ಜಗತ್ತಿನ ಮೂಲೆ – ಮೂಲೆಯ ನಾಗರಿಕತೆ ಮತ್ತು ಸಂಸ್ಕೃತಿಗಳಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ ಎಂದರೂ ತಪ್ಪಾಗಲಾರದು. ಆದರೆ, ಮದುವೆಯ ಕಟ್ಟಳೆಗಳ ಆಚೆ ಮಗುವಿಗೆ ಜನ್ಮ ನೀಡಲು ಇಚ್ಛಿಸುವ ಮಹಿಳೆಯ ಆಯ್ಕೆಯನ್ನು ಸುಲಭಕ್ಕೆ ಒಪ್ಪಿಕೊಳ್ಳದಿರುವುದು ಮಾತ್ರವಲ್ಲ, ಕೀಳೆಂದು ಕಾಣುವವರೇ ಜಾಸ್ತಿ. ಇಂತಹ ತದ್ವಿರುದ್ಧ ಮತ್ತು ತಾರತಮ್ಯದ ಮನೋಭಾವವು ಒಂದೋ ಜಾಗೃತಿಯ ಕೊರತೆಯಿಂದಾಗಿ ಅಥವಾ ಒಬ್ಬ ವ್ಯಕ್ತಿಯ ಸಂತಾನೋತ್ಪತ್ತಿಯ ಹಕ್ಕುಗಳ ಕುರಿತಾಗಿ ಜನರಿಗಿರುವ ಗೌರವದ ಕೊರತೆಯಿಂದಾಗಿ ಬರುವಂತಹುದು. ಅದಕ್ಕೆ ನಾವು ಒಗ್ಗಿಕೊಂಡಿರುವಂತಹ ನಮ್ಮ ಸಾಮಾಜಿಕ ಚೌಕಟ್ಟು, ಮದುವೆ ಮತ್ತು ಅದರಿಂದ ಚಿಗುರೊಡೆಯುವ ಕುಟುಂಬದ ಪರಿಕಲ್ಪನೆಯೂ ಕಾರಣ ಎನ್ನಬಹುದು. ನಮ್ಮ ದೇಶದ ಕಾನೂನಿನ ಚೌಕಟ್ಟು ಸಹ ಈ ಸಾಮಾಜಿಕ ಚೌಕಟ್ಟಿನ ಅಡಿಪಾಯದ ಮೇಲೆ ಬೆಳೆದಿದ್ದರಿಂದ ಒಂಟಿ ತಾಯಿಯ ಹಕ್ಕುಗಳ ಕುರಿತಾಗಿ ಕಾನೂನಿನಲ್ಲಿಯೇ ಇನ್ನೂ ಅಷ್ಟು ಸ್ಪಷ್ಟತೆ ಇಲ್ಲ. ಇದೂ  ಈ ಕುರಿತಾಗಿ ಸಮಾಜದಲ್ಲಿ ಜಾಗೃತಿ ಮತ್ತು ಗೌರವದ ಕೊರತೆ ಇಲ್ಲದೆ ಇರುವುದಕ್ಕೆ ಒಂದು ಕಾರಣ ಎನ್ನಬಹುದು.

ಮೂಲಭೂತ ಹಕ್ಕಾಗಿ ಸಂತಾನೋತ್ಪತ್ತಿಯ ಹಕ್ಕುಗಳು:

2009ರಲ್ಲಿ, ಸುಚಿತಾ ಶ್ರೀವಾತ್ಸವ  ಮೊಕದ್ದಮೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಲಯವು, ಒಂದು ಮಹಿಳೆಯ ಸಂತಾನೋತ್ಪತ್ತಿಯ ಆಯ್ಕೆಗಳು  ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಆಯಾಮವೇ ಆಗಿದೆ ಎಂದು ಗುರುತಿಸಿದೆ. 2017ರ ಪುಟ್ಟಸ್ವಾಮಿ & ನವತೇಜ್‌ ಸಿಂಗ್‌ ಜೊಹರ್(‌2018) ಮೊಕದ್ದಮೆಗಳಲ್ಲಿ ಖಾಸಗಿತನದ ಮತ್ತು ಆಯ್ಕೆಯ ಹಕ್ಕುಗಳ ಅಗ್ಗಳಿಕೆಯನ್ನು ಸರ್ವೋಚ್ಛ ನ್ಯಾಯಲಯವು ಒತ್ತಿ ಹೇಳಿದೆ. ಖಾಸಗಿತನ ಮತ್ತು ಆಯ್ಕೆಯ ಸ್ವಾತಂತ್ರ್ಯ ಎನ್ನುವದು ಓರ್ವಳ ಘನತೆಯ ಜೊತೆಗೆ ಹೆಣೆದುಕೊಂಡಿದ್ದಾಗಿದೆ. ಈ ಘನತೆಯ ಹಕ್ಕುಗಳನ್ನೂ ಅನುಚ್ಛೇದ 14 (ಸಮಾನತೆಯ ಹಕ್ಕು), 19 (ಅಭಿವ್ಯಕ್ತಿಯ ಹಕ್ಕು) ಮತ್ತು 21 (ಬಾಳುವ ಹಕ್ಕು) ರ ಪಡಿನೆಳಲಾಗಿ ಕಾಣಬಹುದು ಎಂದೇ ಪುಟ್ಟಸ್ವಾಮಿಯ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದ್ದರಿಂದ, ಒಬ್ಬ ವಯಸ್ಕ ಮಹಿಳೆಯು ಮಕ್ಕಳನ್ನು ಹೆರಬೇಕಾ? ಯಾವಾಗ ಹೆರಬೇಕು? ಯಾರ ಜೊತೆ ಮಕ್ಕಳನ್ನ ಹೊಂದಬೇಕು? ಮತ್ತು ಮದುವೆಯ ಕಟ್ಟಳೆಯ ಒಳಗೆ ತಾಯಿಯಾಗಬೇಕಾ ಎಂಬಿತರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಭೂತ ಹಕ್ಕು ಆಕೆಗಿದೆ. ಒಬ್ಬ ಮಹಿಳೆ ಮದುವೆಯ ಕಟ್ಟಳೆಯ ಒಳಗೆ ತಾಯಿಯಾಗಬೇಕೆಂದು ತೀರ್ಮಾನಿಸಿದಾಗ, ಅದಕ್ಕೆ ಸಂಬಂಧಪಟ್ಟ ಎಲ್ಲ ಅಂಶಗಳ, ಕಾಳಜಿವಹಿಸುವ ಸುಸಜ್ಜಿತ ಕಾನೂನು ವ್ಯವ್ಯಸ್ಥೆ ನಮ್ಮಲ್ಲಿ ಇದೆ. ಅದರಲ್ಲಿ, ಹುಟ್ಟಿನ ನೋಂದಾವಣೆ, ಪಾಲಕತ್ವ (Guardianship) ಹಾಗೂ ಮಗುವಿನ ಪಾಲನೆ (Custody) ಇತ್ಯಾದಿ ಅಂಶಗಳು ಒಳಗೊಂಡಿವೆ. ಮಗುವಿನ ಪಾಲಕತ್ವದಂತಹ ವಿಷಯಗಳಲ್ಲಿ ಕಾನೂನುಗಳು ದೊಡ್ಡ ಪ್ರಮಾಣದಲ್ಲಿ ತಂದೆಗೆ ಮಹತ್ವ ಕೊಟ್ಟರೂ, ಒಂದು ವ್ಯವಸ್ಥೆ ಎಂಬ ನೆಲೆಯಲ್ಲಿ ವಿವಾಹಿತರ ಮಕ್ಕಳ ಪಡೆಯುವ ಹಕ್ಕುಗಳು ಕೂಲಂಕುಷವಾಗಿ ಗುರುತಿಸಲ್ಪಟ್ಟಿದೆ. ಆದರೆ, ಮದುವೆಯಾಗದ ಒಂಟಿ ಮಹಿಳೆಯ ತಾಯ್ತನದ ಆಯ್ಕೆಯ ಹಕ್ಕುಗಳನ್ನು ಗುರುತಿಸಲು ಮತ್ತು ಕಾನೂನಿನಡಿಯಲ್ಲಿ ಸರಿಯಾದ ಜಾಗ ಕಲ್ಪಿಸಲು ನಮ್ಮ ಕಾನೂನುಗಳು ಇನ್ನೂ ವಿಕಾಸಗೊಳ್ಳಬೇಕಷ್ಟೆ.

ನೆರವಿನ ಸಂತಾನೋತ್ಪತ್ತಿಯ ತಂತ್ರಜ್ಞಾನಗಳು (Assisted Reproductive Technologies) ಮತ್ತು ಒಂಟಿ ತಾಯಿ:

ನೆರವಿನ ಸಂತಾನೋತ್ಪತ್ತಿಯ ತಂತ್ರಜ್ಞಾನಗಳು(ART) ಮತ್ತು ಪ್ರಣಾಳೀಯ ಫಲೀಕರಣ(In vitro fertilization-IVF)ನಂತಹ ಸಂತಾನೋತ್ಪತ್ತಿಯ ತಂತ್ರಜ್ಞಾನಗಳ ಸಹಾಯದಿಂದ ಒಬ್ಬ ಮಹಿಳೆ ತಾಯ್ತನವನ್ನು ಅನುಭವಿಸಲು ಸಾಧ್ಯವಾಗಿಸುವ ಮಟ್ಟಿಗೆ ತಂತ್ರಜ್ಞಾನಗಳು ಬೆಳೆದಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2005ರಲ್ಲಿ ಜಾರಿಗೆ ತಂದ “ಭಾರತದಲ್ಲಿನ ʼARTʼ ಕ್ಲೀನಿಕ್‌ಗಳ ಮಾನ್ಯತೆ, ಮೇಲ್ವೀಚಾರಣೆ ಮತ್ತು ನಿಯಂತ್ರಣದ ರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ ಮಾನದಂಡಗಳನ್ನು ಪೂರೈಸಿದರೆ ಒಬ್ಬ ಒಂಟಿ ಮಹಿಳೆಯು ART ತಂತ್ರಜ್ಞಾನ ಬಳಸಿ ತಾಯಿಯಾಗಬಹುದು. ಅದಕ್ಕೆ ಯಾವುದೇ ತೆರನಾದ ಕಟ್ಟುಪಾಡು ಇರಕೂಡದು ಮತ್ತು ಯಾವುದೇ ART ಕ್ಲೀನಿಕ್‌ ಇಂತಹ ಸೇವೆಯನ್ನು ನಿರಾಕರಿಸಬಾರದುʼ. ಹೀಗೆ ಹುಟ್ಟಿದ ಮಗುವಿಗೆ ಒಬ್ಬ ವ್ಯಕ್ತಿಗೆ ಕಾನೂನಿನ ಅಡಿಯಲ್ಲಿ ಇರಬೇಕಾದ ಎಲ್ಲ ಹಕ್ಕುಗಳು ಇರುತ್ತವೆ. ಲೋಕಸಭೆಯಲ್ಲಿ ಪ್ರಸ್ತುತ ಪಡಿಸಿದ “The Assisted Reproductive Technology (Regulation) Bill, 2020” ಕೂಡ ಕಾನೂನಿನ ಪ್ರಕಾರ ಮದುವೆ ವಯಸ್ಸಿಗೆ ಬಂದ ಮಹಿಳೆಯು ART ಮೂಲಕ ಒಂಟಿ ತಾಯ್ತನ ಆರಿಸಿಕೊಳ್ಳಬಹುದಾದ ಹಕ್ಕುಗಳನ್ನು ಗುರುತಿಸುತ್ತದೆ. ಆದ್ದರಿಂದ, ಜನ್ಮ, ಪಾಲಕತ್ವ, ಉತ್ತರಾಧಿಕಾರಿ, ಸಾವು ಇನ್ನಿತರ ವಿಷಯಗಳಿಗೆ ಸಂಬಂಧ ಪಟ್ಟ ಕಾನೂನುಗಳೂ ಒಂಟಿ ತಾಯಿ ಮತ್ತು ಅವಳ ಮಗುವಿನ ಹಕ್ಕುಗಳನ್ನು ಗುರುತಿಸಿ ಮನ್ನಣೆ ನೀಡುವ ಸಮಯ ಬಂದಿದೆ.

ಒಂಟಿ ತಾಯಿಯ ಹಕ್ಕುಗಳು ಮತ್ತು ನ್ಯಾಯಲಯಗಳು:

ಒಂಟಿ ಮಹಿಳೆಗೆ ಹುಟ್ಟಿದ ಮಗುವಿನ ಜನ್ಮ ನೋಂದಾವಣೆಯನ್ನು ಅಧಿಕಾರಿಗಳು ತಡ ಮಾಡಿದಾಗ ಅಥವಾ ನಿರಾಕರಿಸಿದ ಹಲವು ಸಂದರ್ಭಗಳಲ್ಲಿ ಮಹಿಳೆಯರು ಕಳೆದ ದಶಕದಲ್ಲಿ ತಮ್ಮ ಹಕ್ಕುಗಳನ್ನು ಗುರುತಿಸಲು ಅರ್ಜಿ ಹಾಕಿ ಉಚ್ಛ ನ್ಯಾಯಾಲಯಗಳ ಮತ್ತು ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2015ರ ABC ಎಂಬ ಮೊಕದ್ದಮೆಯಲ್ಲಿ, ಸರ್ವೋಚ್ಛ ನ್ಯಾಯಾಲಯವು ಒಂಟಿ ತಾಯಿಯ ಅರ್ಜಿಯನ್ನು ಪರಿಗಣಿಸುತ್ತಾ ಸಂಬಂಧ ಪಟ್ಟ ಅಧಿಕಾರಿಗಳಿಗೆ, ʼಮಹಿಳೆಯು ಪ್ರಮಾಣ ಪತ್ರ ಸಲ್ಲಿಸಿದ ನಂತರ ಆಕೆಗೆ ಒಂಟಿ ತಾಯಿ ಎಂಬ ಕಾರಣಕ್ಕೆ ಜನ್ಮ ಪ್ರಮಾಣ ಪತ್ರ ನೀಡಬೇಕುʼ ಎಂದು ಆದೇಶಿಸಿತ್ತು. 2018ರ ಮಥುಮಿತಾ ರಮೇಶ ಕೇಸಿನಲ್ಲಿ ಮದ್ರಾಸ್‌ ಉಚ್ಛ ನ್ಯಾಯಾಲಯವು ABC ತೀರ್ಪನ್ನು ಉಲ್ಲೇಖಿಸುತ್ತಾ ಅದೇ ತರಹದ ನಿರ್ದೇಶನಗಳನ್ನು ನೀಡಿತ್ತು. ಇತ್ತೀಚೆಗೆ, ARTನಿಂದ ಗರ್ಭಿಣಿಯಾದ ಮಹಿಳೆಯೊಬ್ಬರು, ಕೇರಳ ಜನ್ಮ ಮತ್ತು ಮರಣ ನೋಂದಾವಣೆ ನಿಯಮಗಳು, 1970ರಡಿಯಲ್ಲಿ ಅರ್ಜಿಯ ನಮೂನೆಗಳಲ್ಲಿ ಕೇವಲ ಗಂಡ/ತಂದೆಯ ವಿವರಗಳನ್ನು ನೀಡಲು ಅವಕಾಶವಿದೆ ಮತ್ತು ಇದು ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿ/ಹೆಂಡತಿಯ ಪಾತ್ರವನ್ನು ನಿರ್ಲಕ್ಷಿಸುತ್ತದೆ, ಆದ್ದರಿಂದ ಇದು ತಾರತ್ಯಮವಾಗಿದ್ದು ಒಂಟಿ ತಾಯಿಯ ಮತ್ತು ಅವಳ ಮಗುವಿನ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದರು. ಮಹಿಳೆಯ ಅರ್ಜಿಯನ್ನು ಮತ್ತು ವಾದಗಳನ್ನು ಒಪ್ಪಿಕೊಂಡ ಕೋರ್ಟ್ ಕೇರಳ ರಾಜ್ಯ ಸರ್ಕಾರಕ್ಕೆ ತಂದೆ/ಗಂಡನ ಹೆಸರನ್ನು ಕೇಳುವ ಅಂಕಣದಲ್ಲಿ ತಾಯಿಯ ಹೆಸರನ್ನು ಸೇರ್ಪಡೆ ಮಾಡಿ ಹೊಸ ಅರ್ಜಿಯ ನಮೂನೆಗಳನ್ನು ತರಲು ಆದೇಶಿಸಿತು.

ನಮ್ಮ ಸಮಾಜವು ನಿರಂತರವಾಗಿ ಬೆಳೆಯುತ್ತಲೇ ಇದೆ. ಕೆಲವೇ ದಶಕಗಳ ಹಿಂದೆ, ಮಂಗಳಮುಖಿಯರ ಲಿಂಗ ಸ್ವಾತಂತ್ರ್ಯವನ್ನು ದೇಶಗಳು ಗುರುತಿಸಲು ಪ್ರಾರಂಭಿಸುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿರಲಿಲ್ಲ. ಪ್ರಣಾಳಿಕೆಯಿಂದ ಮಕ್ಕಳು ಹುಟ್ಟುತ್ತವೆ ಎಂದು ಹೇಳುವ ಜನರನ್ನು ನಂಬುವುದು ಕಷ್ಟಸಾಧ್ಯವಾಗಿತ್ತು. ವ್ಯಕ್ತಿ ಸ್ವಾತಂತ್ರ್ಯದ ಕಡೆಗೆ ಯಾವಾಗ ಒಂದು ಸಮಾಜವು ಸಹಿಷ್ಣು ಮತ್ತು ಗೌರವ ಬೆಳೆಸಿಕೊಳ್ಳುತ್ತದೋ ಅಂದು ಆ ಸಮಾಜ ಅಭಿವೃದ್ಧಿ ಹೊಂದುತ್ತದೆ. ಕೆಲವೊಂದು ಸಲ ಸಮಾಜಕ್ಕೆ ದಾರಿ ತೋರುವುದು ಆಮೂಲಾಗ್ರವಾಗಿ ವ್ಯಕ್ತಿಸ್ವಾತಂತ್ರ್ಯವನ್ನು ಒಪ್ಪುವ ವಿಚಾರಗಳಾಗಿರಬಹುದು. ಈ ನಿಟ್ಟಿನಲ್ಲಿ ಒಂಟಿ ತಾಯಿ ಮತ್ತು ಅವಳ ಮಗುವಿನ ಹಕ್ಕುಗಳನ್ನು ಗುರುತಿಸುವ ಕಾನೂನುಗಳು ಮತ್ತು ಪೂರ್ವನಿರ್ದೇಶನಗಳು (ತೀರ್ಪುಗಳು) ಒಂದು ದೊಡ್ಡ ಹೆಜ್ಜೆಯೇ ಸರಿ.

ಕನ್ನಡಕ್ಕೆ: ನೇತ್ರಾ ಕೊಪ್ಪದ

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಅರುಣಾ ಎ.

ಅರಣಾ ಎ. ಯವರು ಕೇರಳ ಉಚ್ಛ ನ್ಯಾಯಲಯ ಮತ್ತು ಸರ್ವೋಚ್ಛ ನ್ಯಾಯಲಯದಲ್ಲಿ ವಕೀಲರಾಗಿದ್ದು, ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದಾರೆ. ಅರುಣಾರವರು ಹವ್ಯಾಸಿ ಬ್ಲಾಗ್ ಬರಹಗಾರರೂ ಹೌದು.

Scroll to Top