ಊರ್ಜಾ ನ್ಯಾಯ: ಒಂದು ಚಿಕ್ಕ ಪರಿಚಯ

ಊರ್ಜಾ ನ್ಯಾಯ (Energy Justice) ಎಂದರೇನು? ಈ ಬಗ್ಗೆ ಈಗ ಏಕೆ ನಾವು ತಿಳಿದುಕೊಳ್ಳಬೇಕಾಗಿದೆ? ಭಾರತ ಸರ್ಕಾರವು ಊರ್ಜಾ ನ್ಯಾಯದ ಸಲವಾಗಿ ಏನು ಮಾಡುತ್ತಿದೆ? ಇದು ನಮ್ಮ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ? ಈ ಎಲ್ಲ ಪ್ರಶ್ನೆಗಳ ಸುತ್ತ ಚರ್ಚೆಯನ್ನು ಶುರು ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡುತ್ತೇನೆ.

ನಾವು ಊರ್ಜಾ ನ್ಯಾಯವನ್ನು ತಿಳಿದುಕೊಳ್ಳುವ ಮುನ್ನ ” ಊರ್ಜಾ ರೂಪಾಂತರ” (Energy Transition) ಎಂಬುದರ ಅರ್ಥ ತಿಳಿದುಕೊಳ್ಳಬೇಕಾಗುತ್ತದೆ. ಊರ್ಜೆ ನಮ್ಮ ದಿನನಿತ್ಯದ ಹಲವಾರು ಕೆಲಸ ಕಾರ್ಯಗಳಿಗೆ ಬೇಕಾಗುತ್ತದೆ ಎಂಬುದು ನಮ್ಮೆಲರಿಗೂ ತಿಳಿದಿದೆ. ಅಡುಗೆ ಮಾಡುವುದರಿಂದ ಹಿಡಿದು, ಆನ್ಲೈನ್ ಓದು/ಕೆಲಸ ಮಾಡುವುದರವರೆಗೆ, ನಮ್ಮ ಲ್ಯಾಪ್ಟಾಪ್/ಫೋನ್ ಗಳನ್ನು ರಿಚಾರ್ಜ್ ಮಾಡಿ ಬಳಸುವುದರಿಂದ ಹಿಡಿದು, ಪ್ರಯಾಣ ಮಾಡುವುದರವರೆಗೆ, ನಮ್ಮ ಮನೆಗಳಲ್ಲಿ ಟೀವೀ ನೋಡುವುದಾಗಲಿ, ಟಾಕೀಸ್ ಗಳಲ್ಲಿ ಸಿನಿಮಾ ನೋಡುವುದಾಗಲಿ, ಮತ್ತು ಬಿಸಿಲ ಬೇಗೆಯಿಂದ ಹೊರಬರಲು ಫ್ಯಾನ್ ಅಥವಾ ಏಸೀ ಉಪಯೋಗಿಸುವುದರವರೆಗೆ, ನಮ್ಮ ಜೀವನ ಊರ್ಜೆಯಿಂದಲೇ ನಡೆಯುತ್ತಿದೆ ಎಂದರೆ ಅತಿಶಯೋಕ್ತಿ ಆಗದು. ಈ ಸಂದರ್ಭದಲ್ಲಿ ” ಊರ್ಜಾ ರೂಪಾಂತರ”  ಎಂಬ ಪದ ಸಮುಚ್ಚಯದ ಅರ್ಥ ತಿಳಿದುಕೊಳ್ಳುವುದು ನಮ್ಮೆಲ್ಲರಿಗೂ ಮುಖ್ಯವಾಗುತ್ತದೆ.

ಪಳೆಯುಳಿಕೆಯ ಇಂಧನಗಳು:

ಮೇಲೆ ನಾನು ವಿಸ್ತರಿಸಿರುವ ಎಲ್ಲ ಕೆಲಸ ಕಾರ್ಯಗಳಿಗೆ, ನಮಗೆ ಊರ್ಜೆ ಸಿಗುತ್ತಿರುವುದು ಪಳೆಯುಳಿಕೆಗಳ ಇಂಧನಗಳಿಂದ. ಉದಾಹರಣೆಗೆ, ಅಡುಗೆ ಮಾಡುವುದಕ್ಕೆ, ನಾವು ಎಲ್.ಪಿ.ಜಿ.  ಇಂಧನವನ್ನು  ಬಳಸುತ್ತೇವೆ. ಇದು ಪೆಟ್ರೋಲಿಯಂ ಇಂದ ತಯಾರು ಮಾಡುವ ಇಂಧನವಾಗಿದೆ. ಹಾಗೆಯೇ, ನಮ್ಮ ಬಸ್ಸು, ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ಗಳಿಂದ ಚಲಿಸುತ್ತವೆ. ನಮಗೆ ಸಿಗುವ ಬಹುತೇಕ ವಿದ್ಯುತ್ ಶಕ್ತಿಯು ಕಲ್ಲಿದ್ದಲಿನಿಂದ ದೊರಕುತ್ತದೆ.

ಈ ಎಲ್ಲ ಊರ್ಜಾ ಮೂಲಗಳನ್ನು ನಾವು ಸುಟ್ಟು, ಅವುಗಳಿಂದ ಒದಗಿದ ಶಕ್ತಿಯಿಂದ ನಮ್ಮ ಜೀವನವನ್ನೇನೋ ಸರಳಗೊಳಿಸುತ್ತಿದ್ದೇವೆ. ಆದರೆ, ಪರಿಸರ ಮಾಲಿನ್ಯವನ್ನು ಮಿತಿ ಮೀರಿ ಹೆಚ್ಚಿಸುತ್ತಿದ್ದೇವೆ. ಪಳೆಯುಳಿಕೆಗಳಿಂದ ದೊರಕುವ ಈ ಇಂಧನಗಳನ್ನು ಸುಟ್ಟಾಗ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಇತ್ಯಾದಿ ಹಾನಿಕಾರಕ “ಹಸಿರು ಮನೆ” ಅನಿಲಗಳು  ಬಿಡುಗಡೆ ಆಗುತ್ತವೆ. ಈ ಅನಿಲಗಳು ನಮ್ಮ ಹಾಗು ಇತರೆ ಪ್ರಾಣಿಗಳ ಜೀವಕ್ಕೆ ಅಲ್ಲದೆ, ಪರಿಸರದ ಸ್ವಾಸ್ಥ್ಯಕ್ಕೂ ಕೆಟ್ಟದ್ದು. ಈ ಅನಿಲಗಳಿಂದ “ವಾತಾವರಣ ಬದಲಾವಣೆ”, ಹಾಗು “ಜಾಗತಿಕ ತಾಪಮಾನ ಏರಿಕೆ” ಆಗುತ್ತಿವೆ ಎಂದು ವೈಜ್ಞಾನಿಕ ಸಾಕ್ಷಿಗಳು ಸ್ಪಷ್ಟಪಡಿಸಿವೆ.

ಹೀಗಿರುವಾಗ, 2015 ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ವಿಶ್ವದ ಬಹುತೇಕ ದೇಶಗಳು, ತಮ್ಮಿಂದಾಗುವ ” ಹಸಿರು ಮನೆ ” ಅನಿಲಗಳ ಬಿಡುಗಡೆಯನ್ನು ಹದ್ದುಬಸ್ತಿಗೆ ತರುತ್ತೇವೆ ಎಂದು ಮಾತು ಕೊಟ್ಟುಕೊಂಡಿವೆ.

ಊರ್ಜೆಯ ಅಗತ್ಯತೆ ಆರ್ಥಿಕ ಅಭಿವೃದ್ಧಿಯ ಸಲುವಾಗಿ ದಿನೇ – ದಿನೇ ಹೆಚ್ಚುತ್ತಲೇ ಇದ್ದು, ಪಳೆಯುಳಿಕೆಗಳ ಇಂಧನಗಳ ಬದಲು, ಮತ್ತ್ಯಾವುದಾದರೋ, ಸುಸ್ಥಿರ (Sustainable) ಇಂಧನಗಳನ್ನು ಉಪಯೋಗಿಸುವ ಅನಿವಾರ್ಯತೆ ನಮ್ಮ ಮುಂದೆ ಬಂದು ನಿಂತಿದೆ. ಈ ಬದಲಾವಣೆಯು ಕೇವಲ ತಾಂತ್ರಿಕವಲ್ಲದೆ, ಸಾಮಾಜಿಕ, ಹಾಗು ರಾಜಕೀಯವೂ ಆಗಿದೆ. ಹೇಗೆ?

“ಊರ್ಜಾ ರೂಪಾಂತರ ಅಥವಾ ಎನರ್ಜಿ ಟ್ರಾನ್ಸಿಷನ್” :ಎಂದರೇನು?

ಮೇಲೆ ಹೇಳಿದಂತೆ, ಪಳಿಯುಳಿಕೆಯ ಇಂಧನಗಳ ಬದಲು ನಾವು ಇನ್ನಿತರೇ ಇಂಧನಗಳನ್ನವಲಂಬಿಸಿ, ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಮುಂದುವರಿಸಬೇಕಾದರೆ, ನಮ್ಮ ಸಾಮಾಜಿಕ ಪರಿಕಲ್ಪನೆಯನ್ನೇ ಬದಲಾಯಿಸಬೇಕಾಗುತ್ತದೆ. ಉದಾಹರಣೆಗೆ:

  • ಈಗಿನ ಪೆಟ್ರೋಲಿಯಂ ಕಂಪೆನಿಗಳಲ್ಲಿ ಹಾಗು ಕಲ್ಲಿದ್ದಲಿನ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರವು ಬೇರೆ ಕಡೆ ಕೆಲಸ ಒದಗಿಸಿಕೊಡುವುದೇ?
  • ಈ ಕಾರ್ಮಿಕರಿಗೆ, ಬೇರೆ ಕಡೆ ಕೆಲಸ ಸಿಗಲು ಸಹಾಯವಾಗುವಂತೆ, ಸರ್ಕಾರ ಅವರಿಗೆ ತರಬೇತಿ ನೀಡುವುದೇ?
  • ಈ ಪೆಟ್ರೋಲಿಯಂ ಹಾಗು ಕಲ್ಲಿದ್ದಲಿನ ಕಂಪನಿಗಳು ಮುಚ್ಚಿದ ಮೇಲೆ, ಈ ಕಾರ್ಮಿಕರ ಗತಿ ಏನು?
  • ಇನ್ನೊಂದೆಡೆ, ನವೀಕರಿಸಬಹುದಾದ ಊರ್ಜಾ ಮೂಲಗಳು ಎಂದೆನಿಸಿಕೊಂಡ ಸೌರ್ಯ ಶಕ್ತಿ, ಪವನ ಶಕ್ತಿ, ಅಣು ಶಕ್ತಿ, ಜಲ ಶಕ್ತಿ, ಹಾಗು ಜೈವಿಕ ಶಕ್ತಿಗಳಿಂದ ಊರ್ಜೆಯನ್ನು ತಯಾರು ಮಾಡಲು, ಸರ್ಕಾರ ಮೂಲಸೌಕರ್ಯಗಳನ್ನು ಕಟ್ಟುತ್ತಿವೆ. ಇದಕ್ಕೋಸ್ಕರ, ಸಾವಿರಾರು ಎಕರೆ ಖಾಸಗಿ ಜಮೀನನ್ನು, ಭೂ ಸ್ವಾಧೀನ ಕಾನೂನುಗಳಡಿ, ಜಪ್ತು ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ, ರೈತರು, ಅಲೆಮಾರಿ ಬುಡಕಟ್ಟು ಜನಾಂಗಗಳು, ಹಾಗು ಇತರೆ ಸಾಮಾಜಿಕವಾಗಿ ಹಾಗು ಆರ್ಥಿಕವಾಗಿ ಹಿಂದುಳಿದ ಜನರ ಜಮೀನುಗಳು ಹೆಚ್ಚೆಚ್ಚು ಸರ್ಕಾರದ ನಿಯಂತ್ರಣದಲ್ಲಿ ಬರುತ್ತಿವೆ. ಹೀಗೆ ಜಮೀನನ್ನು ಕಳೆದುಕೊಂಡ ಎಲ್ಲ ಜನರಿಗೆ ಸೂಕ್ತ ಪರಿಹಾರ ದೊರಕುತ್ತಿದೆಯೇ? ಇವರುಗಳಿಗೆ ಬೇರೆಡೆ ಕೆಲಸ ಸಿಗುತ್ತಿವೆಯೇ? ಸರ್ಕಾರ ಅವರುಗಳಿಗೆ  ನೌಕರಿ ಸಿಗಲು ಕೌಶಲ್ಯ ತರಬೇತಿ ನೀಡುತ್ತಿದೆಯೇ?

ಹೀಗೆ “ಊರ್ಜಾ ರೂಪಾಂತರ” ಎಂಬ ಪದಪುಂಜಕ್ಕೆ ಸಾಮಾಜಿಕವೂ, ರಾಜಕೀಯವೂ ಆದ ಆಯಾಮಗಳು ಇವೆ.

ಊರ್ಜಾ ನ್ಯಾಯ: ಒಂದು ಮೇಲ್ನೋಟ

ಊರ್ಜಾ ನ್ಯಾಯವನ್ನು ಬಲ್ಲವರು ಬೇರೆ ಬೇರೆ ರೀತಿಗಳಲ್ಲಿ ಅರ್ಥೈಸಿದ್ದಾರೆ. Sovacool et al. (2017) ಅವರು ಎಲ್ಲರೂ (ಮೇಲು ಕೀಳೆನ್ನದೆ) ಭಾಗವಹಿಸಿ ಊರ್ಜಾ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು, ಹಾಗು ನ್ಯಾಯಯುತವಾದ ಊರ್ಜಾ ವಿತರಣೆ, ಬಳಕೆ, ಹಾಗು ಉತ್ಪಾದನೆ ಎಂದು “ಊರ್ಜಾ ನ್ಯಾಯ”ವನ್ನು ವರ್ಣಿಸಿದ್ದಾರೆ. ಇನ್ನು Jenkins et al. (2018) ಅವರು ಅನ್ಯಾಯಗಳನ್ನು ಪರಿಹರಿಸುವುದು ಎಂದು ಊರ್ಜಾ ನ್ಯಾಯವನ್ನು ಅರ್ಥೈಸಿದ್ದಾರೆ. Williams & Doyon (2019) ಅವರು, ಮಾನವ ಜಾತಿಯನ್ನು, ಪ್ರಾಣಿ-ಪಕ್ಷಿ-ಮರ-ಗಿಡಗಳನ್ನು, ಹಾಗು ಸಂಪೂರ್ಣ ಪರಿಸರವನ್ನು ಉತ್ತಮವಾಗಿ, ನಾಶವಾಗದಂತೆ, ಪೋಷಿಸಿಕೊಂಡು ಹೋಗುವುದನ್ನು “ಊರ್ಜಾ ನ್ಯಾಯ” ಎಂದು ಕರೆದಿದ್ದಾರೆ.

ಮತ್ತೆ, Fuller & McCauley (2016) ಅವರು, ಊರ್ಜಾ ನ್ಯಾಯವನ್ನು ದುಬಾರಿಯಲ್ಲದ, ಕೈಗೆಟುಕುವ ದರಗಳಲ್ಲೇ, ಸಮಾಜದ ಎಲ್ಲ ವರ್ಗಗಳಿಗೆ ವಿದ್ಯುತ್ ಶಕ್ತಿ ಸಿಗುವಂತೆ ಮಾಡುವುದು ಎಂದು ಹೇಳಿದ್ದಾರೆ. “ಯಾರು ಯಾರಿಗೋಸ್ಕರ ಈ ಪದಗಳ ಅರ್ಥ ತೀರ್ಮಾನಿಸುತ್ತಿದ್ದಾರೆ ಎಂಬುದೇ ಈ ಪದಗಳ ಅರ್ಥ” ಎಂದು, ಸೊಗಸಾಗಿ Newell & Mulvaney (2013) ಅವರು, ಊರ್ಜಾ ನ್ಯಾಯದಡಿ, “ಊರ್ಜಾ ರಾಜಕೀಯ”ದ ಪ್ರಾಮುಖ್ಯತೆಯನ್ನು ಮುಂದಿಟ್ಟಿದ್ದಾರೆ.

ಈ ಎಲ್ಲ ವ್ಯಾಖ್ಯಾನಗಳ ಸಾರಾಂಶವೆಂಬಂತೆ Heffron & McCauley (2018) ಅವರು ಊರ್ಜಾ ನ್ಯಾಯವೆಂದರೆ: ಊರ್ಜೆಯ ನ್ಯಾಯಿಕ ವಿತರಣೆ, ಊರ್ಜಾ ನಿರ್ಧಾರಗಳಲ್ಲಿ ಎಲ್ಲರ ಭಾಗವಹಿಸುವಿಕೆ, ಅನ್ಯಾಯಗಳನ್ನು ಗುರುತಿಸಿ, ಅವುಗಳ ಸರಿಯಾಗಿ ಬಗೆಹರಿಸುವುದು, ಮತ್ತು ಈ ಎಲ್ಲ ನಿರ್ಧಾರಗಳು ಯಾರು, ಎಲ್ಲಿ, ಹೇಗೆ, ಮತ್ತು ಯಾವಾಗ ಮಾಡುತ್ತಿದ್ದಾರೆ ಎಂಬ ಅರಿವು ಇರುವಿಕೆ – ಎಂದು ಸಮಗ್ರವಾಗಿ ಬಣ್ಣಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಾವು ವಿಚಾರ ಮಾಡಬೇಕಾದ ಸಂಗತಿ: ಊರ್ಜೆ ನಮ್ಮ ಆರ್ಥಿಕ, ಸಾಮಾಜಿಕ, ಹಾಗು ರಾಜಕೀಯ ಅಭಿವೃದ್ಧಿಯ ಅಡಿಪಾಯವಾಗಿದೆ. ವಿದ್ಯುತ್ ಶಕ್ತಿಯಿಂದ ನಮ್ಮ ವಿದ್ಯಾಭ್ಯಾಸ, ಉದ್ಯಮ, ಉದ್ಯೋಗ, ಹಾಗು ಕಾರ್ಖಾನೆಗಳಲ್ಲಿ ಸರಕುಗಳ ಉತ್ಪಾದನೆಗಳೂ ಸಂಭವಿಸುತ್ತವೆ. ಆದರೆ, ಇವೆಲ್ಲವೂ ನ್ಯಾಯಯುತವಾಗಿವೆಯೇ? ಊರ್ಜಾ ವಿತರಣೆ ಭಾರತದ ಎಲ್ಲ ನಾಗರಿಕರಿಗೆ ಸಮನಾಗಿ ಆಗುತ್ತಿದೆಯೇ? ಊರ್ಜೆಯ ಉತ್ಪನ್ನದ ಕಾರ್ಯದಲ್ಲಿ ಯಾರಿಗಾದರೂ ಹಾನಿ ಉಂಟಾಗುತ್ತಿದೆಯೇ?

ಊರ್ಜಾ ಅನ್ಯಾಯಗಳ ಕೆಲವು ಉದಾಹರಣೆಗಳು:

ವಿದ್ಯುತ್ ಶಕ್ತಿ ಇಲ್ಲದೇ ಹಲವಾರು ಹಳ್ಳಿಗಳಲ್ಲಿ ಓದು, ಬರಹ, ಕೃಷಿಯ ಯಾಂತ್ರೀಕರಣ, ಕಾರ್ಖಾನೆಗಳ ಉತ್ಪನ್ನತೆ, ಮತ್ತಿನ್ನಿತರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿರುವ ಸುದ್ದಿಗಳು ನಮ್ಮ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಲಾಕ್ ಡೌನ್ ದಿನಗಳಲ್ಲಿ ಹೇಗೆ, ವಿದ್ಯುತ್ ಇಲ್ಲದೇ, ಹಲವಾರು ಮಕ್ಕಳ ಶಿಕ್ಷಣ ಆನ್ಲೈನ್ ತರಬೇತಿಯಿದ್ದರೂ ನಿಂತಿತು ಎಂಬುದರ ಮಾಹಿತಿ ನಮ್ಮೆಲ್ಲರಿಗಿದೆ.

ಇನ್ನು, ತುಮಕೂರಿನ ಪಾವಗಡದಲ್ಲಿರುವ “ಶಕ್ತಿ ಸ್ಥಳ” ಎಂಬ ಹೆಸರಿನ ಒಂದು ದೊಡ್ಡ ಸೋಲಾರ್ ಪಾರ್ಕ್ ಟೀಕೆಗೆ ಒಳಪಟ್ಟಿದೆ. “ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ”ದ ಅಡಿಯಲ್ಲಿ ಅಲ್ಲಿಯ ರೈತರು ಕರ್ನಾಟಕ ಸರ್ಕಾರಕ್ಕೆ, ಸೋಲಾರ್ ಪಾನೆಲ್ಸ್ ಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಮನವಿ ಸಲ್ಲಿಸಿದ್ದಾರೆ. ಹದಿಮೂರು ಸಾವಿರ ಎಕರೆಗಳ ದೈತ್ಯಾಕಾರವಾದ ಈ “ಶಕ್ತಿ ಸ್ಥಳ” ಕಟ್ಟುವಾಗ ರೈತರ ಜಮೀನಿಗೆ ಸರಿಯಾದ ಪರಿಹಾರ ಸರ್ಕಾರ ಕೊಟ್ಟಿಲ್ಲ ಎಂದೂ ಟೀಕೆಗೆ ಗುರಿಯಾಗಿದೆ. ಸುತ್ತಮುತ್ತಲಿನ ಹಳ್ಳಿಗಳ ತಾಪಮಾನ, ಸೋಲಾರ್ ಪಾನೆಲ್ಸ್ ಗಳಿಂದಾಗಿ ಹೆಚ್ಚಿದೆ ಎಂದೂ ಅಲ್ಲಿಯ ಜನರು ದೂರು ನೀಡಿದ್ದಾರೆ. ಕಲ್ಲಿಪಾಳ್ಯ ಮತ್ತು ಹೊಸಪಾಳ್ಯ ಹಳ್ಳಿಗಳ ರೈತರು, ಸಿಕ್ಕ ಪರಿಹಾರವೂ ಸಮನಾಗಿಲ್ಲ, ಅನ್ಯಾಯದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವ್ಯಂಗ್ಯವೆಂದರೆ, ಇತ್ತೀಚೆಗಷ್ಟೇ, ಕರ್ನಾಟಕ ಸರ್ಕಾರವು, ಕರ್ನಾಟಕದ ದಿನ ನಿತ್ಯದ ಊರ್ಜಾ ಅಗತ್ಯತೆಯ ಶೇಕಡಾ 20%ವನ್ನು ಸೌರ್ಯ ಶಕ್ತಿಯಿಂದ ಪೂರೈಸಲಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ. ಆದರೆ, ಈ ವಿದ್ಯುತ್ ಸರಬರಾಜಿನ ಹಿಂದಿರುವ ಊರ್ಜಾ ಅನ್ಯಾಯಗಳ ಬಗ್ಗೆ ಯಾರು ಮಾತಾಡುತ್ತಾರೆ?

ಇನ್ನು ಕರ್ನಾಟಕದಲ್ಲಿ ಅಲ್ಲದೆ, ಭಾರತ ಹಲವಾರು ರಾಜ್ಯಗಳಲ್ಲಿ, “ನವೀಕರಿಸಬಹುದಾದ” ಊರ್ಜಾ ಶಕ್ತಿಗಳ ಯೋಜನೆಗಳಿಂದ ಆಗುತ್ತಿರುವ ಅನ್ಯಾಯದ ಒಂದು ದೊಡ್ಡ ಪಟ್ಟಿಯೇ ಇದೆ. “ಲ್ಯಾಂಡ್ ಕಾನ್ಫ್ಲಿಕ್ಟ್ ವಾಚ್” ಎಂಬ ವೆಬ್ಸೈಟ್ ನಲ್ಲಿ ಅವುಗಳ ಬಗ್ಗೆ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಕೊನೆಯಲ್ಲೊಂದಿಷ್ಟು ವಿಚಾರಗಳು:

ಇಂತಹ ಊರ್ಜಾ ಅನ್ಯಾಯಗಳ ದುಷ್ಪರಿಣಾಮ ಆಗುವುದು, ಜನರ ಸ್ವಾತಂತ್ರ್ಯ ಮತ್ತು ಸಮಗ್ರ ಅಭಿವೃದ್ಧಿಯ ಮೇಲೆ. ಹೇಗೆ ಎಂಬ ಪ್ರಶ್ನೆಗೆ ಖ್ಯಾತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೆನ್ ಅವರ “ಡೆವಲಪ್ಮೆಂಟ್ ಆಸ್ ಫ್ರೀಡಂ” ಎಂಬ ಪುಸ್ತಕ ಓದಬೇಕು. ಆ ಪುಸ್ತಕದ ಮುಖ್ಯ ವಾದ ಎಂದರೆ ಜನರ ಸಮಗ್ರ ವ್ಯಕ್ತಿತ್ವ ವಿಕಸನಗೊಂಡರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ ಮತ್ತು ಯಾವುದೇ ಸಮಾಜದಲ್ಲಿ ಆರ್ಥಿಕ ಅಭಿವೃದ್ಧಿ ಆಗಬೇಕಾದರೆ, ಜನರ ಸ್ವಾತಂತ್ರ್ಯ ಬಹು ಮುಖ್ಯ, ಎಂಬುದು.

ಹೀಗಿರುವಾಗ, ನಾವು ಕೇಳಬೇಕಾದ ಪ್ರಶ್ನೆಗಳು:

  • ಭಾರತದ ಎಲ್ಲ ಜನರಿಗೆ ಊರ್ಜಾ ನ್ಯಾಯ ದೊರಕುತ್ತಿದೆಯೇ?
  • ನಮ್ಮ ಮನೆಗಳಲ್ಲಿ ಕರೆಂಟ್ ಹೋದಾಗ, ನಮಗಾಗುವ ಆರ್ಥಿಕ ಹಾಗು ಸಾಮಾಜಿಕ ನಷ್ಟಗಳಿಗೆ ನಾವು ಸರ್ಕಾರಕ್ಕೆ ಪರಿಹಾರ ಕೇಳಬಹುದೇ? ಕೇಳಿದರೆ ಸಿಗುತ್ತದೆಯೇ? ಇಂತಹ ಪ್ರಕರಣಗಳಿಂದ ನಮ್ಮ ನ್ಯಾಯಾಲಯಗಳ ಮೇಲೆ ಇನ್ನೂ ಹೆಚ್ಚು ಒತ್ತಡ ಬೀಳುತ್ತದೆಯೇ? ಇಂತಹ ನೀತಿಯನ್ನು ಹೇಗೆ ಸಮರ್ಥವಾಗಿ ಜಾರಿಗೊಳಿಸಬಹುದು?
  • “ಶಕ್ತಿ ಸ್ಥಳ”ಗಳಂತಹ “ನವೀಕರಿಸಬಹುದಾದ” ಇಂಧನಗಳ ಮೂಲಭೂತ ಸೌಕರ್ಯಗಳು, ಎಷ್ಟರ ಮಟ್ಟಿಗೆ ನ್ಯಾಯಿಕವಾಗಿವೆ?
  • ನಮ್ಮ ಪಟ್ಟಣಗಳಲ್ಲಿ “ಪವರ್ ಕಟ್” ಎಂಬುದು ಅಪರೂಪ. ಆದರೆ, ಹಳ್ಳಿಗಳಲ್ಲಿ, ಇದು ದಿನ ನಿತ್ಯ ಜೀವನದ ಒಂದು ಬಹು ದೊಡ್ಡ ಭಾಗ. ಇದು “ಊರ್ಜಾ ನ್ಯಾಯ”ವೇ?

ಈ ಪ್ರಶ್ನೆಗಳೊಂದಿಗೆ ನನ್ನ ಈ ಬರಹ ಮುಕ್ತಾಯಗೊಳಿಸುತ್ತೇನೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಪ್ರನೂಷಾ ಕುಲಕರ್ಣಿ

ಪ್ರನೂಷಾ ಕುಲಕರ್ಣಿಯವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಕಾನೂನು ಪದವಿ ಪಡೆದ ಬಳಿಕ, ಸಾಮಾಜಿಕ ಕಾನೂನು ಕಲಿಕೆಯನ್ನು ಮುಂದುವರಿಸಲು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ, ಮುಂಬೈಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದರ ಬಳಿಕ, ಒಂದು ವರ್ಷ ತಮಿಳು ನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿಸಿದರು. ಟಾಟಾ ಸಂಸ್ಥೆಯ ಅತ್ಯುನ್ನತ ಶೈಕ್ಷಣಿಕ ಅನುಭವದ ಪ್ರಭಾವದಿಂದಾಗಿ, ಅಂತಶ್ಯಾಸ್ತ್ರೀಯ ಶಿಕ್ಷಣವೇ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ನೀಡಬಲ್ಲದು ಎಂದು ಮನಗಂಡರು. ಇದರಿಂದಾಗಿ ಅವರು ಪ್ರಸ್ತುತ, ಐ.ಐ.ಎಂ. ಅಹಮದಾಬಾದ್ನಲ್ಲಿ ಸಾರ್ವಜನಿಕ ನೀತಿ ವಿಷಯದಲ್ಲಿ, ಪಿ.ಎಚ್.ಡಿ. ಓದುತ್ತಿದ್ದಾರೆ. ಕುಲಕರ್ಣಿಯವರು ಬರಹಗಾರರೂ ಆಗಿದ್ದು, ಸಂಶೋಧನೆ ಮತ್ತು ಶಿಕ್ಷಣವನ್ನು ಸಾಮಾಜಿಕ ಹಾಗು ನೀತಿ ಬದಲಾವಣೆಗೆ ಉಪಯೋಗಿಸುವುದನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ.

Scroll to Top