ಸೆಕ್ಷನ್ 124A ಹೇಳುವ ದೇಶದ್ರೋಹ ಸುತ್ತ

1885 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆ ಆಗಿ, 1900ನೇ ಇಸವಿಯ ನಂತರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ದೊಡ್ಡ ಪಾತ್ರ ವಹಿಸಿತು, ಅವತ್ತಿನ ಹೋರಾಟಗಾರರು, ಸಾಮಾನ್ಯ ಜನಗಳು ತನು ಮನ ಅರ್ಪಿಸಿ ಹೋರಾಟಕ್ಕೆ ಶಕ್ತಿ ತುಂಬಿದ್ರು, ಅದರ ಫಲವಾಗಿ 1947ರಲ್ಲಿ ಸ್ವಾತಂತ್ರ್ಯ ಸಿಕ್ತು. ನಂತರದ ಚುನಾವಣೆಯಲ್ಲಿ INC ಒಕ್ಕೂಟ ಸರ್ಕಾರ ರಚನೆ ಮಾಡಿತು, ಅವತ್ತು ಜನಗಳ ಮನದಲ್ಲಿದ್ದಿದ್ದು ಈ ಒಕ್ಕೂಟ ಸರ್ಕಾರದಿಂದ ಅಭಿವೃದ್ಧಿ ಆಗುತ್ತೆ, ಬಡತನ ನಿರ್ಮೂಲನೆ ಆಗುತ್ತೆ, ನಮ್ಮ ಬದುಕು ಹಸನಾಗುತ್ತೆ ಮತ್ತು ಈ ಒಕ್ಕೂಟ ಸರ್ಕಾರಗಳು ನಮಗಾಗಿ ಸ್ವರ್ಗವನ್ನೇ ತಂದು ಭೂಮಿಗಿಳಿಸ್ತಾರೆ ಅನ್ನೋದಷ್ಟೇ!

ಆದ್ರೆ 1947ರಲ್ಲಿ ಕೇವಲ ಅಭಿವೃದ್ಧಿಯ ಸಂಕೇತ ಆಗಿದ್ದ ಸರ್ಕಾರಗಳು, 2014 ರ ಹೊತ್ತಿಗೆ ಧರ್ಮದ ಸಂಕೇತ ಆಗ್ತಾವೆ ಮತ್ತು 2019ರ ನಂತರ ದೇಶನೇ ಆಗೋಗ್ತಾವೆ, ಅಂದ್ರೆ ಒಕ್ಕೂಟ / ರಾಜ್ಯ ಸರ್ಕಾರಗಳ ವಿರುದ್ಧ ಯಾರೇ ಏನೇ ಮಾತಾಡುದ್ರು ಅವ್ರು ದೇಶದ್ರೋಹಿಗಳು! ಅವರ ಮೇಲೆ ದೇಶದ್ರೋಹ ಕೇಸ್ (SEDITION CASE- IPC section 124-A) ಹಾಕೋದು ಇತ್ತೀಚಿಗೆ ಸಾಮಾನ್ಯ ಆಗೋಗ್ಬಿಟ್ಟಿದೆ.

ಹಾಗಾದ್ರೆ ಸೆಕ್ಷನ್ 124A ಏನ್ಹೇಳತ್ತೇ?

ಯಾವುದೇ ವ್ಯಕ್ತಿಯ ಮಾತಿನಿಂದ, ಬರವಣಿಗೆ ಇಂದ, ಚಿತ್ರಗಳಿಂದ, ಹಾಡಿನಿಂದ, ಕೃತಿಗಳಿಂದ ತಕ್ಷಣಕ್ಕೆ ಸಮಾಜದಲ್ಲಿ ಗಲಭೆಗಳು ಸೃಷ್ಟಿಯಾದರೆ ಮತ್ತು ಕಾನೂನಿನಿOದ ಸ್ಥಾಪಿತವಾಗಿರುವ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಆದರೆ, ಆ ವ್ಯಕ್ತಿಗೆ 3 ವರ್ಷದಿಂದ ಹಿಡಿದು ಜೀವಾವಧಿಯವರೆಗೂ ಶಿಕ್ಷೆ ವಿಧಿಸಿ ಜೊತೆಗೆ ದಂಡ ಕೂಡ ಹಾಕಬಹುದು ಎನ್ನತ್ತೆ ‘ಭಾರತೀಯ ದಂಡ ಸಂಹಿತೆ’ (IPC-INDIAN PENAL CODE)ಯ ಸೆಕ್ಷನ್ 124A.

ಸೆಕ್ಷನ್ ಹುಟ್ಟಿದ್ದು ಹೇಗೆ ಅಂತ ಕೇಳ್ತೀರಾ?

1857 ರ ಸಿಪಾಯಿ ದಂಗೆ ಇಂದ ಎಚ್ಚತ್ತ ಬ್ರಿಟಿಷ್ ಸರ್ಕಾರ 1860ರಲ್ಲಿ IPC ಜಾರಿಗೆ ತಂದ್ರು ಆದ್ರೆ ಆ ಸಮಯದಲ್ಲಿ ದೇಶದ್ರೋಹ ಕಾನೂನಿನ ಬಗ್ಗೆ ಅದರಲ್ಲಿ ಉಲ್ಲೇಖ ಇರಲಿಲ್ಲ. ಆಮೇಲೆ ಕೆಲವು ಮುಸ್ಲಿಂ ಕ್ರಾಂತಿಕಾರಿಗಳು ಬ್ರಿಟಿಷರಿಂದ ಅವರಿಗೆ ಮತ್ತು ಅವರ ಸಂಪ್ರದಾಯಗಳಿಗೆ ಆಗ್ತಿದ್ದ ತೊಂದ್ರೆ ಗಳ ಬಗ್ಗೆ ಹಾಡುಗಳ ಮೂಲಕ ಜನಗಳನ್ನ ಬ್ರಿಟಿಷ್ ಸರ್ಕಾರದ ವಿರುದ್ಧ ಎಚ್ಚರಿಸೋ ಕೆಲಸ ಮಾಡ್ತಿದ್ರು, ಇದು ವ್ಹಾಬಿ ಚಳುವಳಿ (Wahabi movement) ಅಂತ ಹೆಸರು ಪಡೆದಿತ್ತು. ಬ್ರಿಟಿಷರು ಈ ಜನಗಳ ಧ್ವನಿ ಅಡಗಿಸೋಕೆ, ಅಭಿಪ್ರಾಯ ವ್ಯಕ್ತ ಪಡಿಸೋ ಹಕ್ಕನ್ನ ಹತ್ತಿಕ್ಕೋಕೆ 1870 ರಲ್ಲಿ ಈ IPC ಗೆ ತಿದ್ದುಪಡಿ ತಂದು ಅದರಲ್ಲಿ ದೇಶದ್ರೋಹ ಕಾನೂನನ್ನ (ಸೆಕ್ಷನ್ 124A) ಸೇರ್ಸಿದ್ರು.

ಆಮೇಲೆ ತಮ್ಮ ವಿರುದ್ಧ ಧ್ವನಿ ಎತ್ತಿದ ಮಹಾತ್ಮಾ ಗಾಂಧಿ, ಬಾಲ ಗಂಗಾಧರ ತಿಲಕ್ ರಂತ ಹಲವಾರು ಸ್ವತಂತ್ರ ಹೋರಾಟಗಾರರಿಗೆ ಸೆರೆಮನೆ ವಾಸ ತೋರಿಸೋಕೆ ಇದೇ ಸೆಕ್ಷನ್ ಉಪಯೋಗ್ಸುದ್ರು ಬ್ರಿಟಿಷರು.

ವಿವರವಾಗಿ ಹೇಳ್ಬೇಕೆಂದ್ರೆ ಒಂದು ಉದಾಹರಣೆ :

1870 ರಿಂದ ದೇಶ ಬರಗಾಲ ಬಂದು ತತ್ತರಿಸಿತ್ತು. ಮತ್ತೆ 1896 ರಲ್ಲಿ ಪ್ಲೇಗ್ ಕೂಡ ಬಂದು ಪರಿಸ್ಥಿತಿ ಹದಗೆಟ್ಟಿತ್ತು. ಆದ್ರೂ ಕೂಡ ಈ ಬ್ರಿಟಿಷ್ ಸರ್ಕಾರ ಭೂ ಕಂದಾಯ ಕೊಡ್ಲೇಬೇಕು ಅಂತ ಜನಗಳನ್ನ ಪೀಡಿಸ್ತಿತ್ತು, ಇದನ್ನ ಬಾಲ ಗಂಗಾಧರ್ ತಿಲಕ್, ಅವರ ಕೇಸರಿ ಅನ್ನೋ ಪತ್ರಿಕೆ ಯಲ್ಲಿ ಸರ್ಕಾರನ ಟೀಕೆ ಮಾಡಿ ಬರದ್ರು. ಇನ್ನೊಮ್ಮೆ ಶಿವಾಜಿ, ಆಫ್ಜಲ್ ಖಾನ್ ನ ಕೊಂದಿದ್ದನ್ನ ಭಾಷಣ ಮಾಡಿದ್ದನ್ನು ವರದಿಯಾಗಿ ಕೇಸರಿಯಲ್ಲಿ ಪ್ರಕಟಿಸಿದರು. ಇದೇ ಸಮಯದಲ್ಲಿ ಅದೇ ಪ್ರಾಂತ್ಯದಲ್ಲಿ ಪ್ಲೇಗ್ ನಿರ್ವಹಣೆಗೆ ಅಂತ ನೇಮಿಸಿದ್ದ ಇಬ್ಬರು ಪ್ಲೇಗ್ ಇನ್ಸ್ಪೆಕ್ಟರುಗಳ ಕೊಲೆ ಆಯ್ತು, ಈ ಘಟನೆಗಳನ್ನ ತಾಳೆ ಹಾಕಿದ ಬ್ರಿಟಿಷರು, ತಿಲಕರಿಂದ ಪ್ರಚೋದನೆ ಪಡೆದು ಈ ಕೊಲೆ ಆಗಿದೆ ಅಂತ ತಿಲಕರನ್ನ ದೇಶದ್ರೋಹ ಕೇಸ್ (ಸೆಕ್ಷನ್ 124A) ಮೇಲೆ 1897 ರಲ್ಲಿ 18ತಿಂಗಳು ಜೈಲಿಗೆ ಹಾಕಿದ್ರು. 1906 ರಲ್ಲಿ ಇನ್ನೊಂದು ಪ್ರಕರಣದಲ್ಲಿ ದೇಶದ್ರೋಹ ಕೇಸ್ ಹಾಕಿ 6 ವರ್ಷ ಜೈಲ್ ನಲ್ಲಿ ಇಟ್ಟಿದ್ರು.

ನಮ್ಮ ಸರ್ಕಾರಗಳು ಮತ್ತು ಸೆಕ್ಷನ್ 124A:

ಬ್ರಿಟಿಷರಿಗಿಂತ ನಮ್ಮ ಸರ್ಕಾರ ಯಾವುದರಲ್ಲಿ ಕಡಿಮೆ ಇದೆ ಹೇಳಿ? 2020 ಮಾರ್ಚ್ 23 ಪ್ರಧಾನ ಮಂತ್ರಿ ಗಳು ಲಾಕ್ಡೌನ್ ಅನೌನ್ಸ್ ಮಾಡಿದ್ರು, ಸಾವಿರಾರು ಜನ ವಲಸೆ ಕಾರ್ಮಿಕರು ಜೇಬಲ್ಲಿ ದುಡ್ಡಿಲ್ದೆ, ಸಾರಿಗೆ ವ್ಯವಸ್ಥೆ ಇಲ್ಲದೆ, ತಿನ್ನೋಕೆ ಊಟ ಕೂಡ ಇಲ್ಲದೆ ನಡೆದುಕೊಂಡೇ ಅವರವರ ಊರುಗಳಿಗೆ ಹೋಗುತ್ತಿರೋದನ್ನ ವಿನೋದ್ ದುವಾ ಅನ್ನೋ ಪತ್ರಕರ್ತ, ಒಕ್ಕೂಟ ಸರ್ಕಾರದ ನಿರ್ಲಕ್ಷ್ಯ ವನ್ನ ಟೀಕೆ ಮಾಡಿ ತನ್ನ ಯುಟ್ಯೂಬ್ ಚಾನ್ನಲ್ ನಲ್ಲಿ ಹಾಕಿದ್ರು, ಸರ್ಕಾರ ಈ ವಿಡಿಯೋ ಹಿಂಸೆಗೆ ಪ್ರಚೋದನೆ ನೀಡುತ್ತೆ ಅಂತ ಅವರ ಮೇಲೆ ದೇಶದ್ರೋಹ ಕೇಸ್ ಹಾಕಿ ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿ ಇಟ್ಟಿದ್ದರು. ಈ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅವರ ಮೇಲೆ ಹಾಕಿದ ಕೇಸನ್ನು ರದ್ದು ಮಾಡಿ ತೀರ್ಪು ನೀಡಿತ್ತು.

ಲಕ್ಷದ್ವೀಪಕ್ಕೆ ಆಡಳಿತ ಪಕ್ಷದ ವ್ಯಕ್ತಿಯನ್ನು ಹೊಸ ಅಧಿಕಾರಿಯನ್ನ ನೇಮಿಸಿ ಒಕ್ಕೂಟ ಸರ್ಕಾರ ಆದೇಶ ಮಾಡಿತು, ಆ ಅಧಿಕಾರಿ ಹೊಸ ಹೊಸ ಕಾನೂನುಗಳನ್ನ ಮಾಡಿದ್ರು.

ಉದಾ :

  • 2 ಮಕ್ಕಳ ಕಾನೂನು (ಅಲ್ಲಿನ ಹಲವು ರಾಜಕೀಯ ಪಕ್ಷಗಳ ನಾಯಕರಿಗೆ ಎರಡುಕ್ಕಿಂತ ಹೆಚ್ಚು ಮಕ್ಕಳಿವೆ)
  • ಗೊಮಾಂಸ ನಿಷೇಧ (ಒಕ್ಕೂಟ ಸರ್ಕಾರದ ಪಕ್ಷವೇ ಆಡಳಿತ ಮಾಡುತ್ತಿರೋ ಗೋವಾದಲ್ಲಿ ಆ ನಿಷೇಧ ಇಲ್ಲ)
  • ಇಲ್ಲಿಯವರೆಗೂ ಒಂದೆರಡು ಕಡೆ ಸಿಗುತ್ತಿದ್ದ ಲಿಕ್ಕರ್ ಅನ್ನು ಪ್ರವಾಸೋಧ್ಯಮ ದೃಷ್ಟಿ ಇಂದ ಪೂರ್ತಿ ಲಕ್ಷದ್ವೀಪ ದಲ್ಲಿ ಸಿಗುವಂತೆ ಕಾನೂನು.
  • ಕೋವಿಡ್ ಮಾರ್ಗಸೂಚಿಗಳ ಬದಲಾವಣೆ.

ಇದರಿಂದ ಜನ ಪ್ರತಿಭಟನೆ ಮಾಡುದ್ರು, ಕೋವಿಡ್ ಕೇಸ್ಗಳು ಜಾಸ್ತಿ ಆದವು, ಇದನ್ನ ಟಿವಿ ನ್ಯೂಸ್ ನಲ್ಲಿ ಹೇಳಿದಕ್ಕೆ, ಅಲ್ಲಿನ ಫಿಲಂ ಮೇಕರ್ ಆಯೇಷಾ ಸುಲ್ತಾನ ಅನ್ನುವವರ ಮೇಲೆ ದೇಶದ್ರೋಹ ಕೇಸ್ ಹಾಕಿ ಕೋರ್ಟ್ /ಸ್ಟೇಷನ್ ಅಲೆಯೋ ಹಾಗೆ ಮಾಡಿದ್ದಾರೆ.

2019, NRC-CAA ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಅಸ್ಸಾಂ ರಾಜ್ಯದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, 80 ವರ್ಷ ವಯಸ್ಸಿನ ಹಿರೇನ್ ಗೋಹಾನ್ ಅನ್ನುವವರ ಮೇಲೂ ದೇಶದ್ರೋಹದ ಕೇಸಿದೆ.

2020 ರಲ್ಲಿ ಮಾನವ ಹಕ್ಕುಗಳ ಹೋರಾಟಗಾರ, ಬುಡಕಟ್ಟು ಜನಗಳ ಹಕ್ಕುಗಳ ಹೋರಾಟಗಾರ 84 ವರ್ಷದ ಫಾದರ್ ಸ್ಟಾನ್ ಸ್ವಾಮಿ ಅವರ ಮೇಲೆ ಭೀಮ -ಕೊರೆಗಾವ್/ಎಲ್ಗರ್ ಪರಿಷತ್ ಪ್ರಕರಣದಲ್ಲಿ ದೇಶದ್ರೋಹ ಮತ್ತು UAPA ಕೇಸ್ ಹಾಕಿದ್ರು, ಜಾಮೀನು ಕೂಡ ಸಿಗಲಿಲ್ಲ. ಇತ್ತೀಚಿಗೆ ಜುಲೈ 5ರಂದು ಆಸ್ಪತ್ರೆಯಲ್ಲಿಯೇ ತೀರಿಹೋದರು.

ಕರ್ನಾಟಕದಲ್ಲಿ 2019ರಲ್ಲಿ NRC – CAA ಪ್ರತಿಭಟನೆ ಸಮಯ, ಬೀದರ್ ನ ಒಂದು ಶಾಲೆ ಯಲ್ಲಿ ನಡೆದ ಮಕ್ಕಳ ಕಾರ್ಯಕ್ರಮದಲ್ಲಿ ಸಾಮಾನ್ಯ ನಾಗರೀಕನ ಪಾತ್ರದಲ್ಲಿದ್ದ ಮಗು, ಪ್ರಧಾನಿಯವರನ್ನ ಹೋಲುವ ಒಂದು ಪಾತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯುವ ಒಂದು ದೃಶ್ಯ ಇತ್ತು, 5G speed ನಲ್ಲಿ ಕೆಲಸ ಮಾಡಿದ ನಮ್ಮ ಕರ್ನಾಟಕ ಸರ್ಕಾರ ಆ ಮಗುವಿನ ತಾಯಿ ಮತ್ತು ಟೀಚರ್ (ನಸಬ್ ಉನ್ನಿಸ ಮತ್ತು ಫಾರೀದ ಬಾನು) ಮೇಲೆ ದೇಶದ್ರೋಹ ಕೇಸ್ ಹಾಕಿ ಜೈಲಿಗೆ ತಳ್ಳಿದ್ರು. ಜಿಲ್ಲಾ ನ್ಯಾಯಾಲಯ ಕಾನೂನುಗಳನ್ನು ಪ್ರಶ್ನೆ ಮಾಡೋದು ದೇಶದ್ರೋಹವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅವರಿಗೆ ಜಾಮೀನು ಕೊಟ್ಟು ಪೊಲೀಸರಿಗೆ ಬಿಸಿ ಮುಟ್ಟಿಸಿತು!

ಏನ್ ಕೇವಲ ಇಂದಿನ ಆಡಳಿತ ಪಕ್ಷ ಮಾತ್ರನ ದೇಶದ್ರೋಹ ಕೇಸ್ ಹಾಕಿರೋದಾ, ಬೇರೆ ಸರ್ಕಾರ ಗಳು ಹಾಕಿಲ್ವ ಅಂತ ಕೇಳುದ್ರೆ, ಇವತ್ತು ವಿರೋಧ ಪಕ್ಷದಲ್ಲಿ ಇರುವ ಎಲ್ಲಾ ಪಕ್ಷಗಳೂ ಇದರ ದುರುಪಯೋಗ ಮಾಡಿದ್ದಾರೆ! ಒಂದೆರಡು ಉದಾಹರಣೆ ನೋಡೋದಾದ್ರೆ….

1984, ಆಗಿನ ಪ್ರಧಾನಿಗಳ ಹತ್ಯೆ ಆಗಿತ್ತು, ಸಂಜೆ ಬಲವಂತ ಸಿಂಗ್ ಮತ್ತು ಅವರ ಫ್ರೆಂಡ್ ಪಬ್ಲಿಕ್ ನಲ್ಲಿ “ಖಾಲಿಸ್ತಾನ್ ಜಿಂದಾಬಾದ್” ಮತ್ತು ಇನ್ನಿತರ ಘೋಷಣೆ ಗಳನ್ನ ಕೂಗಿದ್ರು, ಜನ ಯಾವುದೇ ರೀತಿ ರಿಯಾಕ್ಟ್ ಮಾಡ್ಲಿಲ್ಲ, ಗಲಭೆಗಳು ಸೃಷ್ಟಿ ಆಗ್ಲಿಲ್ಲ, ಆದ್ರೆ ಅವತ್ತಿನ ಸರ್ಕಾರ ಅವರ ಮೇಲೆ ದೇಶದ್ರೋಹ ಕೇಸ್ ಹಾಕ್ತು ಮತ್ತು 1995 ರಲ್ಲಿ ಈ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಘೋಷಣೆಗಳನ್ನ ಕೂಗಿ ಅಭಿಪ್ರಾಯ ವ್ಯಕ್ತಪಡಿಸೋದು ದೇಶದ್ರೋಹ ಅಲ್ಲ ಅಂತ ಅವರನ್ನ ನಿರ್ದೋಷಿ ಅಂತ ಘೋಷಿಸಿತು.

2015 ರಲ್ಲಿ ತಮಿಳುನಾಡಿನ ಒಬ್ಬ ಜಾನಪದ ಗಾಯಕ ಮತ್ತು ಮಧ್ಯಾಪಾನ ವಿರೋಧಿ, ಜಯಲಲಿತ ಅವರ ಭ್ರಷ್ಟಾಚಾರ ಮತ್ತು ದುರಾಡಳಿತದ ಬಗ್ಗೆ ಹಾಡು ಬರೆದು ಟೀಕೆ ಮಾಡಿದ್ರು. ಅವರ ಮೇಲೆ ದೇಶದ್ರೋಹ ಕೇಸ್ ಜೊತೆಗೆ ಇನ್ನು ಹಲವಾರು ಕೇಸ್ಗಳು ರಿಜಿಸ್ಟರ್ ಆಯ್ತು!

ಶಾಲೆಯಲ್ಲಿ ಕೊಡುವ ಕಳಪೆ ಬಿಸಿಯೂಟವನ್ನ ವರದಿ ಮಾಡಿದ ಪತ್ರಕರ್ತರ ಮೇಲೆ ಕೇಸ್, ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಸರಿಯಿಲ್ಲ ಅಂತ ಹೇಳಿರೋ ಡಾಕ್ಟರ್ ಮೇಲೆ ಕೇಸ್, ಅತ್ಯಾಚಾರ ಕೇಸ್ ನಲ್ಲಿ ಸರ್ಕಾರದ ನಿರ್ಲಕ್ಷವನ್ನ ವರದಿ ಮಾಡಿದ್ರು ಕೇಸ್, ಹೀಗೆ ಹೇಳ್ತಾ ಹೋದ್ರೆ ಇನ್ನು ಹತ್ತಾರು ಉದಾಹರಣೆ ಕೊಡಬಹುದು ಸೆಕ್ಷನ್ 124A ರ ದುರುಪಯೋಗದ ಬಗ್ಗೆ. ರಾಜಕೀಯ ಪಕ್ಷಗಳು ತಾವು ವಿರೋಧಪಕ್ಷದಲ್ಲಿ ಇರೋವರೆಗೂ ಜನವಿರೋಧಿ ಕಾನೂನುಗಳನ್ನ ವಿರೋಧಿಸಿಕೊಂಡು ಬಂದು, ಒಂದು ಸರ್ತಿ ಅಧಿಕಾರ ಹಿಡುದ್ರೆ ಅದನ್ನ ಉಳಿಸಿಕೊಳ್ಳೋಕೆ ತಮ್ಮ ಪ್ರಜೆಗಳ ಮೇಲೆ ಎಂಥ ಕ್ರೂರವಾದ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ.

ನಿಜ ಹೇಳ್ಬೇಕಂದ್ರೆ ಯಾರೇ ಭಾರತದಲ್ಲಿನ ಬ್ರಿಟಿಷ್ ಸರ್ಕಾರದ ನೀತಿಗಳನ್ನ ಟೀಕೆ ಮಾಡುದ್ರೆ ಅದು ನೇರವಾಗಿ ಬ್ರಿಟನ್ ರಾಣಿಗೆ ಮಾಡಿದ ಅವಮಾನ ಅಂತ ಹೇಳಿ, ಇದೇ ನೆಪದಲ್ಲಿ ತಮ್ಮ ವಿರುದ್ಧ ಧ್ವನಿ ಎತ್ತಿದವರ ಸೊಲ್ಲಡಗಿಸಲು ಬ್ರಿಟಿಷರು ಉಪಯೋಗಿಸಿಕೊಂಡ ಕಾನೂನೇ ಈ ಸೆಕ್ಷನ್ -124A. ಆದ್ರೆ ಸ್ವಾತಂತ್ರ್ಯ ಬಂದು 74 ವರ್ಷಗಳಲ್ಲಿ ಈ ಜನವಿರೋಧಿ /ಪ್ರಜಾಪ್ರಭುತ್ವ ವಿರೋಧಿ ಕಾನೂನನ್ನ ತಮ್ಮ ನಾಗರೀಕರ ಮೇಲೆ, ಪಕ್ಷಬೇಧ ಮರೆತು, ಎಲ್ಲ ರಾಜಕೀಯ ಪಕ್ಷಗಳು ಬ್ರಿಟಿಷರಿಗಿಂತ ಒಂದು ಕೈ ಹೆಚ್ಚಾಗೆ ದುರುಪಯೋಗ ಮಾಡ್ಕೊಂಡು ಬಂದಿದಾವೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು “ಸ್ವತಂತ್ರ ಬಂದು 73 ವರ್ಷ ಆದ್ರೂ ಕೂಡ ಬ್ರಿಟಿಷರ ಕಾಲದ ಈ ಕಾನೂನು ಇನ್ನು ಯಾಕೆ ಬೇಕು” ಅಂತ ಸರ್ಕಾರನ ಪ್ರಶ್ನೆ ಕೂಡ ಮಾಡಿದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ದಳ ಅಂದ್ರೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ (NCRB) ಬಿಡುಗಡೆ ಮಾಡುವ ಭಾರತದಲ್ಲಿನ ಕ್ರೈಂಗಳ ಡೇಟಾದ ಪ್ರಕಾರ 2014 ರಿಂದ 2019 ರ ವರೆಗೆ ದಾಖಲಾದ ದೇಶದ್ರೋಹ ಕೇಸ್ ಗಳು 326. ಅದರಲ್ಲಿ ದೇಶದ್ರೋಹಿಗಳು ಅಂತ ಸಾಬೀತು ಆಗಿ ಶಿಕ್ಷೆಯಾದವರು ಕೇವಲ 6 ಜನ ಮಾತ್ರ! ಆಳುವ ಸರ್ಕಾರಗಳಿಗೆ ಯಾವ ಪ್ರಕರಣಕ್ಕೆ 124A ಸೂಕ್ತ ಅಂತ ಗೊತ್ತಿಲ್ಲದೇ ಏನಿಲ್ಲ ಆದರೆ ಸೆರೆಯಾದಾಗಿಂದ ಜಾಮೀನು ಸಿಗೋವರೆಗೆ ಆರೋಪಿಗೆ/ ಅವರ ಮನೆಯವರಿಗೆ ಈ ಕೋರ್ಟ್- ಕಚೇರಿ ಓಡಾಟ ಸಾಕು ಅನ್ನಿಸಬೇಕು ಮತ್ತು ಮುಂದೆಂದೂ ಆಳುವವರ ವಿರುದ್ಧ ಮಾತಾಡೋ ಧೈರ್ಯ ಮಾಡ್ಬಾರ್ದು ಎಂದು ಅನ್ನಿಸುವಂತೆ ಮಾಡುವುದೇ ಉದ್ದೇಶವಾಗಿರತ್ತೆ. 2019 ರಲ್ಲೇ ಬರೋಬ್ಬರಿ 93 ಕೇಸ್ ಗಳು, ದುರಂತ ಅಂದ್ರೆ ಇದರಲ್ಲಿ 22 ಕೇಸ್ ಗಳು ಅಂದ್ರೆ ದೇಶದಲ್ಲಿಯೇ ಅತೀ ಹೆಚ್ಚು ರಿಜಿಸ್ಟರ್ ಆಗಿರುವುದು ಕರ್ನಾಟಕದಲ್ಲಿಯೇ!

ಇಲ್ಲಿನ ಎಲ್ಲಾ ಉದಾಹರಣೆಗಳಲ್ಲೂ ಅನ್ಯಾಯವಾಗಿ ತಮ್ಮ ಮೇಲೆ ಕೇಸ್ ಹಾಕಿಸ್ಕೊಂಡು ಕಷ್ಟಪಡುತ್ತಿರುವವರು ಮಾಜಿ ಮತ್ತು ಹಾಲಿ ಕೇಂದ್ರ/ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಎದುರು ಧ್ವನಿ ಎತ್ತಿದ ಸಾಮಾನ್ಯ ಜನರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಸಾಹಿತಿಗಳು. ಭಾರತದಲ್ಲಿರೋದು ಪ್ರಜಾಪ್ರಭುತ್ವ, ದೇಶ ಸಂವಿಧಾನದ ಪ್ರಕಾರ ನಡೆಯಬೇಕು. ಸಂವಿಧಾನದಲ್ಲಿ ಎಲ್ಲಾ ಅಂಗಗಳೂ ಸಮಾನ, ಯಾವುದೇ ರೀತಿ ಹೆಚ್ಚಿನ ಸ್ಥಾನಮಾನ ಆಳುವ ಸರಕಾರಗಳಿಗಿಲ್ಲ.

ಇತ್ತೀಚೆಗೆ ದಾಖಲಾದ ಕೇಸ್ ಗಳಲ್ಲಿ ಹೆಚ್ಚಿನವು ದೇಶದ ಪ್ರಧಾನಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳನ್ನ ಟೀಕೆ ಮಾಡಿದವರ ಮೇಲೆ. ಹಾಗಾದ್ರೆ ವ್ಯಕ್ತಿಗಳನ್ನ ಮತ್ತು ಸರ್ಕಾರನ ಟೀಕೆ ಮಾಡುದ್ರೆ ದೇಶದ್ರೋಹನಾ? ಪ್ರಧಾನಿಯವರನ್ನ ಬೈದ್ರೆ ದೇಶಕ್ಕೆ ಬೈದಂಗಾ? ಮುಖ್ಯಮಂತ್ರಿಗಳನ್ನ ಟೀಕೆ ಮಾಡುದ್ರೆ ಧರ್ಮಕ್ಕೆ ಟೀಕೆ ಮಾಡಿದಂಗಾ? ನೂರಾರು ವರ್ಷಗಳ ಹಿಂದಿನಿಂದಲೂ ಇರುವ ದೇಶ 5 ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಸಮನಾ? ಸಾವಿರಾರು ವರ್ಷಗಳಿಂದ ಇರುವ ಧರ್ಮ ಒಬ್ಬ ರಾಜಕೀಯ ಪಕ್ಷದ ನಾಯಕನಿಗೆ ಸಮನಾ? ಸ್ವತಂತ್ರ ಭಾರತದಲ್ಲಿ ಸರ್ಕಾರದ ತಪ್ಪುಗಳನ್ನ ಜನಗಳಿಗೆ ತಿಳಿಸೋದೇ ಕ್ರೈಂ ಆದ್ರೆ, ನಮ್ಮನ್ನ ಆಳುತ್ತಿರುವವರು ಕ್ರಿಮಿನಲ್ಗಳೇ ಹೊರತು ನಾಯಕರಲ್ಲ. ಇಂಥ ಪರಿಸ್ಥಿತಿಯನ್ನ ನೋಡಿಯೇ ಕವಿ ಸಿದ್ದಲಿಂಗಯ್ಯ ನವರು ಹೇಳಿರಬೇಕು:

ಯಾರಿಗೆ ಬಂತು..?? ಎಲ್ಲಿಗೆ ಬಂತು..? ನಲವತ್ತೇಳರ ಸ್ವಾತಂತ್ರ್ಯ
ಕೋಟ್ಯಾಧೀಶನ ಕೋಣೆಗೆ ಬಂತು
ಪೊಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ..!
ಹಣವಂತರು ಕೈ ಸನ್ನೆ ಮಾಡಿದರೆ ಕತ್ತಲೆಯಲ್ಲೂ ಬೆತ್ತಲೆ ಆಯ್ತು, ಯಾರೂ ಕಾಣದ ಸ್ವಾತಂತ್ರ್ಯ, ನಲವತ್ತೇಳರ ಸ್ವಾತಂತ್ರ್ಯ

ಈ ಸೆಕ್ಷನ್ 124A ಅನ್ನೋದು ನಮ್ಮ ಮಾತಾಡೋ, ಅನಿಸಿಕೆ ಹೊರ ಹಾಕೋ ಹಕ್ಕುಗಳನ್ನೇ ಮಟ್ಟ ಹಾಕೋ ಮಟ್ಟಕ್ಕೆ ಅಪಾಯಕಾರಿ ಆಗ್ಬೋದು. ನಮ್ಮ ಸಂವಿಧಾನ ಕಾಪಾಡೋ ಈ ಹಕ್ಕುಗಳನ್ನ ಹೀಗೆ ಹತ್ತಿಕ್ಕಲು ಸರಕಾರಗಳಿಗೆ ಅವಕಾಶವಿರಬಾರದು. ಈ ರೀತಿ ದುರ್ಬಳಕೆ ಆಗುತ್ತಿರುವ ಈ ದೇಶದ್ರೋಹ ಕಾನೂನು (ಸೆಕ್ಷನ್ 124-A) ಮತ್ತು ಇನ್ನಿತರ ಜನವಿರೋಧಿ ಕಾನೂನುಗಳು ಹೀಗೆ ಮುಂದುವರೀಬೇಕಾ? ನಮ್ಮ ನಾಗರೀಕರ ವಾಕ್ ಸ್ವತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ ನೆಲಸಮ ಆಗಬೇಕಾ? ಆಲೋಚಿಸಿ.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ದರ್ಶನ್ ಬಿ ಪಿ

ದರ್ಶನ್ ಬಿ.ಪಿ.ಯವರು ಭದ್ರಾವತಿಯವರಾಗಿದ್ದು ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ ಇಂಜಿನಿಯರ್ ಪದವೀಧರರಾಗಿದ್ದಾರೆ.

Scroll to Top