ಸಾಂವಿಧಾನಿಕ ಸಿಂಧುತ್ವದ ಪರೀಕ್ಷೆಯಲ್ಲಿ ಹೊಸ ಕೃಷಿ ಕಾಯ್ದೆಗಳು
ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿರುವ ರೈತ ಸಮುದಾಯ ಮತ್ತು ವಿವಿಧ ರೈತ ಸಂಘಟನೆಗಳ ಕೂಗು ದೇಶದ ಗಡಿಯನ್ನು ಭೇದಿಸಿ ಮುನ್ನುಗಿದೆ. ರೈತ ಸಮುದಾಯವನ್ನು ಪೋಷಿಸುವಂತಹ ಕಾನೂನನ್ನು ಬದಲಾಯಿಸಿ ರೈತರ ಹಿತಾಸಕ್ತಿಗೆ ಮಾರಕವಾದ ನೀತಿಯನ್ನು ಹೊಸ ಕಾಯ್ದೆಗಳಲ್ಲಿ ಹೆಣೆಯಲಾಗಿದೆ ಎಂಬುದು ರೈತ ಸಂಘಟನೆಗಳ ಆರೋಪ. ರೈತರ ನಿಲುವುಗಳಿಗೆ ಸಂಪೂರ್ಣವಾಗಿ ಭಿನ್ನವಾದ ನಿಲುವನ್ನು ಹೊಂದಿರುವ ಒಕ್ಕೂಟ ಸರ್ಕಾರ, ಹೊಸ ಕಾಯ್ದೆಗಳು ರೈತರನ್ನು ಕೃಷಿ ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ವ್ಯವಸಾಯ ಕ್ಷೇತ್ರವನ್ನು ಲಾಭದಾಯವನ್ನಾಗಿಸುವುದು ನಮ್ಮ ಗುರಿ ಎನ್ನುತ್ತಿದೆ.
ಈ ಎರಡೂ ಭಿನ್ನ ನಿಲುವುಗಳ ಮಧ್ಯೆ ಅಡಗಿ ಕುಳಿತಿರುವ ಅಪಾಯಕಾರಿ ಅಂಶಗಳ ಕುರಿತು ಯಾವುದೇ ಬಗೆಯ ರಚನಾತ್ಮಕ ಮತ್ತು ವಸ್ತುನಿಷ್ಠ ಚರ್ಚೆಗಳು ಏರ್ಪಡದೇ ಹೋದದ್ದು ಸಂಸದೀಯ ಪ್ರಜಾಪ್ರಭುತ್ವದ ವಿಪರ್ಯಾಸ! ಹೊಸ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಹಲವು ವ್ಯಕ್ತಿಗಳು ಮತ್ತು ರೈತರ ಸಂಘಟನೆಗಳು ರಿಟ್ ಅರ್ಜಿಗಳನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಹೂಡಿದ್ದಾರೆ. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿ ಸದ್ಯಕ್ಕೆ ಈ ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.
ಕಾಯ್ದೆಗಳ ಸಿಂಧುತ್ವ ಅರಿಯಬೇಕಾದರೆ, ಈ ಕಾಯ್ದೆಗಳನ್ನು ಮಾಡುವ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಏನು ಹೇಳಿದೆ ಎಂದು ನೋಡಬೇಕಾಗುತ್ತದೆ. ಸಂವಿಧಾನದ ಏಳನೇ ಅನುಸೂಚಿಯಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿವಿಧ ವಿಷಯಗಳ ಕುರಿತು ಶಾಸನಗಳನ್ನು ರಚಿಸುವ ಅಧಿಕಾರ ವ್ಯಾಪ್ತಿಯನ್ನು ಹಂಚಲಾಗಿದೆ. ಇದರ ತಳಹದಿಯ ಮೇಲೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಕಾನೂನು ಮಾಡಲು ಅವಕಾಶವಿದೆ. ಸಂಸತ್ತು ಮತ್ತು ವಿಧಾನಸಭೆಗಳು ತಮ್ಮದಲ್ಲದ ವಿಚಾರದಲ್ಲಿ ಶಾಸನಗಳನ್ನು ರಚಿಸಿದಾಗ ಅಂತಹ ಕಾಯ್ದೆಗಳು ಅಸಂವಿಧಾನಿಕವಾಗುತ್ತವೆ. ಶಾಸನ ರಚನೆಯ ಸಾರ್ವಭೌಮ ಅಧಿಕಾರ ಹೊಂದಿರುವ ಸಂಸತ್ತು ಮತ್ತು ವಿಧಾನ ಮಂಡಲಗಳು ಜಾರಿಗೆ ತರುವ ಎಲ್ಲಾ ಕಾನೂನುಗಳೂ ಸಾಂವಿಧಾನಿಕ ಎಂಬ ನ್ಯಾಯಶಾಸ್ತ್ರದ ಪೂರ್ವಭಾವನೆಯನ್ನು ಇಟ್ಟುಕೊಂಡೇ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ. ಯಾವುದೇ ಕಾಯ್ದೆ, ನಿಯಮಗಳು ಮತ್ತು ಆದೇಶಗಳು ಸಂವಿಧಾನದ ಮೂಲ ವಿಚಾರಧಾರೆಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಅಂತಹ ಕಾಯ್ದೆ, ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸುವವರ ಹೆಗಲ ಮೇಲೆ ನಿಂತಿರುತ್ತದೆ.
“ಕೃಷಿ” ಮತ್ತು ಕೃಷಿ ಸಂಬಂಧಿತ ಅಂಶಗಳ ಕುರಿತು ಶಾಸನಗಳನ್ನು ರಚಿಸುವ ಅಧಿಕಾರವನ್ನು ಸಂವಿಧಾನದ ಏಳನೇ ಅನುಸೂಚಿಯಲ್ಲಿನ ಎರಡನೇ ಪಟ್ಟಿಯ ಕ್ರಮಸಂಖ್ಯೆ ಹದಿನಾಲ್ಕರಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಹೂಡಲಾಗಿರುವ ರಿಟ್ ಅರ್ಜಿಗಳಲ್ಲಿ ಕೂಡಾ ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಕೃಷಿಯ ವಿಚಾರದಲ್ಲಿ ಶಾಸನಗಳನ್ನು ರಚಿಸುವ ಸಾಂವಿಧಾನಿಕ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮಾತ್ರ ಇದೆ ಎಂಬ ವಾದವನ್ನು ಮುಂದಿಡಲಾಗಿದೆ. ಒಕ್ಕೂಟ ಸರ್ಕಾರ ತನ್ನ ವ್ಯಾಪ್ತಿಯನ್ನು ಮೀರಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ ಹೊಸ ಕಾನೂನನ್ನು ಹೊಸೆದಿದೆ ಎಂಬ ಆರೋಪವಿದೆ. ಈ ಸರಳ ವಾದ ಸರಣಿಯು ಮೇಲ್ನೋಟಕ್ಕೆ ಸರಿಯಂತೆ ಕಾಣುತ್ತದೆ. ಈ ವಾದವನ್ನು ಸರಿಗಟ್ಟಲು ಒಕ್ಕೂಟ ಸರ್ಕಾರವು ಆಯ್ದು ಕೊಂಡ ಹಾದಿಯೇನು ಅಷ್ಟು ಸರಳವಾದದ್ದಲ್ಲ. ಏಳನೇ ಅನುಸೂಚಿಯಲ್ಲಿನ ಮೊದಲ ಪಟ್ಟಿಯಲ್ಲಿ(ಒಕ್ಕೂಟ ಪಟ್ಟಿ) ನಮೂದಿಸಿರುವ “ಅಂತರ ರಾಜ್ಯ ಪ್ಯಾಪಾರ ಮತ್ತು ವಾಣಿಜ್ಯ” ವಿಷಯದ ಅಡಿಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಅಂಶಗಳನ್ನು ಎಳೆದು ತಂದು ಸಾಂಪ್ರದಾಯಿಕ ಕಸುಬಿಗೆ ವ್ಯಾಪಾರ – ಉದ್ಯಮದ ಧಿರಿಸನ್ನು ತೊಡಿಸಲು ಮುಂದಾಗಿದೆ.
ಪರ ವಿರೋಧದ ದನಿಗಳು ಪ್ರಜಾಪ್ರಭುತ್ವದಲ್ಲಿ ಸಹಜ ಮತ್ತು ಅದನ್ನು ಎಂದಿಗೂ ತೊಡೆದು ಹಾಕಲಾಗದು. ಹಾಗಾಗಿ ಕೃಷಿ ಕಾಯ್ದೆಗಳ ಕುರಿತು ಹಲವು ಬಗೆಯ ವ್ಯಾಖ್ಯಾನಗಳು, ರಾಜಕೀಯ ಲಾಭ ನಷ್ಟದ ಕುರಿತು ಚರ್ಚೆಯೂ ಒಂದು ವರ್ಷದಿಂದ ಪ್ರತಿಭಟನೆಯ ಜೊತೆಯೇ ನಡೆಯುತ್ತಲೇ ಬಂದಿರುವುದು ತಿಳಿದಿರುವ ಸಂಗತಿ.
ಭಾರತವು ಸಾಂಪ್ರದಾಯಿಕವಾಗಿ ಕೃಷಿ ಪ್ರಧಾನ ದೇಶ. ಪ್ರತಿಶತ 60ಕ್ಕಿಂತಲೂ ಹೆಚ್ಚು ಜನರು ಕೃಷಿಯನ್ನು ನೇರವಾಗಿ ಮತ್ತು ಅದಕ್ಕೆ ಪೂರಕವಾದ ಕಸುಬುಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ನೆಲದ ಮಕ್ಕಳ ಕಸುಬಿನ ಮೇಲೆ ಅಗಾಧವಾದ ಪರಿಣಾಮಗಳನ್ನು ಉಂಟು ಮಾಡುವ ಶಾಸನಗಳ ಕುರಿತು ನಾಗರಿಕರು ಚರ್ಚಿಸುವುದು ಒಳ್ಳೆಯ ಬೆಳವಣಿಗೆ. ಅಲ್ಲದೇ ಈ ಕಾಯ್ದೆಗಳ ಕುರಿತು ಜನಮನದಲ್ಲಿ ಮೂಡಿರುವ ತಪ್ಪು ಗ್ರಹಿಕೆಗಳನ್ನು ಎತ್ತಿತೋರಬೇಕಾದ ಅನಿವಾರ್ಯತೆಯೂ ಕೂಡ ಇದೆ.
ಸದ್ಯ ಸುದ್ದಿಯಲ್ಲಿರುವ ಕೃಷಿ ಕಾಯ್ದೆಯೊಳಗಿನ ಕೆಲವು ಅಪಾಯಕಾರಿ ಅಂಶಗಳನ್ನು ನೋಡೋಣ. ಅನಿರ್ಭಂದಿತ/ ಮುಕ್ತ ಮಾರುಕಟ್ಟೆಯ ಸೋಗಿನಲ್ಲಿ ಕಾಲಿಡಲಿರುವ ಹೊಸ ಕಾಯ್ದೆಯ ಅಡಿಯಲ್ಲಿ ಖಾಸಗಿ ಉದ್ಯಮಗಳು ನೇರವಾಗಿ ರೈತರ ಜೊತೆಗೆ ಒಪ್ಪಂದವನ್ನು ಮಾಡಿಕೊಳ್ಳಬಹುದು. ಈ ಒಪ್ಪಂದದ ಕಾರಣಕ್ಕೆ ರೈತ ಮತ್ತು ಉದ್ಯಮಗಳ ನಡುವೆ ಮೂಡುವ ಬಿಕ್ಕಟ್ಟು ಅಥವಾ ವಿವಾದಗಳಿಗೆ ರೈತನು ಸಾಂಪ್ರದಾಯಿಕ ನ್ಯಾಯಾಲಯದ ಮೊರೆ ಹೋಗಿ ನ್ಯಾಯವನ್ನು ಬಯಸಲು ಸಾಧ್ಯವಿಲ್ಲ!
ಬೆಳೆಗಾರ ಮತ್ತು ಉದ್ಯಮಗಳ ನಡುವಿನ ವ್ಯಾಜ್ಯಗಳಿಗೆ ನ್ಯಾಯಾಂಗೇತರ ಅಧಿಕಾರಿಗಳ ಮುಂದೆ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ಹಾದಿಯನ್ನು ಹೊಸ ಕಾನೂನಿನಲ್ಲಿ ತೋರಲಾಗಿದೆ. ಅಪಾರ ಭ್ರಷ್ಟಾಚಾರದ ಕೂಪ, ಅಪಾರದರ್ಶಕ ಆಡಳಿತ ವೈಖರಿ ಮತ್ತು ಉತ್ತರದಾಯಿತ್ವವಿಲ್ಲದ ಕಾರ್ಯಾಂಗಕ್ಕೆ ನ್ಯಾಯ ವಿತರಣೆಯ ಅಧಿಕಾರವನ್ನು ನೀಡಲು ಉದ್ದೇಶಿಸಿರುವುದು ಕಾಯ್ದೆಯ ಹಿಂದೆ ಅಡಗಿರುವ ಕರಾಳ ಮನಸ್ಥಿತಿಯನ್ನು ಎತ್ತಿ ತೋರುತ್ತದೆ. ಬಲಾಢ್ಯರ ಕೈವಾಡವು ಹೊಸ ಕಾಯ್ದೆಯ ಹಿಂದೆ ಇದೆ ಎಂಬ ಬಲವಾದ ಸಂದೇಹವನ್ನು ಇದು ಪುಷ್ಟೀಕರಿಸುತ್ತದೆ.
ಕೃಷಿಕ ಮತ್ತು ಉದ್ಯಮದ ನಡುವೆ ಏರ್ಪಡುವ ಒಪ್ಪಂದದ ಅನುಗುಣವಾಗಿ ರೈತನು ಸಹಕರಿಸದೇ ಹೋದರೆ ಒಪ್ಪಂದವನ್ನೇ ಆಧಾರವಾಗಿಟ್ಟು ಕೊಂಡು ಒಕ್ಕಲನ್ನು ಕಾನೂನು ಚೌಕಟ್ಟಿನಲ್ಲಿ ನಿಯಂತ್ರಿಸಲು ಉದ್ಯಮಿಗಳಿಗೆ ಸುಲಭ. ರೈತನ ಕಸುಬು ಮತ್ತು ಬೆಳೆಗಳು ಆ ಪ್ರದೇಶದ ಪರಿಸರಕ್ಕೆ ಪೂರಕವಾಗಿ ಇರುತ್ತದೆ. ಆಗ ಉದ್ಯಮ ಬಯಸಿದಂತಹ ಬೆಳೆಯ ಗಾತ್ರ, ಗುಣಮಟ್ಟ, ಬಣ್ಣ, ರುಚಿ ಲಭಿಸದೇ ಹೋದರೆ ಬೆಳೆಗಾರನು ಚೆಲ್ಲಿದ ಬಂಡವಾಳವನ್ನು ಮರಳಿ ಪಡೆಯಲು ಸಾಧ್ಯವಾಗದು! ಈ ಅನಿರ್ದಿಷ್ಟತೆಯೇ ಉದ್ಯಮಿಗಳ ಪಾಲಿಗೆ ಬಲವಾದ ಹತಾರವಾಗಿ ಪರಿಣಮಿಸುತ್ತದೆ ಮತ್ತು ಬೆಳೆಗಾರರನ್ನು ಕಾಡುತ್ತದೆ.
ಕೇವಲ ರೈತರು, ರೈತ ಕಾರ್ಮಿಕರಷ್ಟೇ ಅಲ್ಲ ವೃತ್ತಿಪರ ವಕೀಲರ ಸಮುದಾಯದಲ್ಲೂ ಹೊಸ ಕಾಯ್ದೆಗಳ ಕುರಿತು ಅಸಮಧಾನವಿದೆ. ಫಾರ್ಮರ್ಸ್ ಪ್ರಡ್ಯೂಸ್ ಟ್ರೇಡ್ ಅಂಡ್ ಕಾಮರ್ಸ್ (ಪ್ರಮೋಶನ್ ಅಂಡ್ ಫ಼ೆಸಿಲಿಟೇಶನ್) ಆಕ್ಟ್, 2020, ಅಡಿಯಲ್ಲಿ ಬೆಳೆಗಾರ ಮತ್ತು ಉದ್ಯಮಗಳ ನಡುವಿನ ಎಲ್ಲಾ ಬಗೆಯ ವಿವಾದಗಳು ಸಿವಿಲ್ ನ್ಯಾಯಾಲಯದ ಬದಲಿಗೆ ಉಪ-ವಿಭಾಗಾಧಿಕಾರಿ (SDM) ಅಥವಾ ಜಿಲ್ಲಾಧಿಕಾರಿಯ ಮುಂದೆಯೇ ಬಗೆಹರಿಯಬೇಕು.
ಹೊಸ ಕಾಯ್ದೆಯ ಅಡಿಯಲ್ಲಿ ಬೆಳೆಗಾರ ಮತ್ತು ಉದ್ಯಮಗಳ ನಡುವಿನ ವಿವಾದ ಹುಟ್ಟಿದರೆ ನೇರವಾಗಿ ಉಪ-ವಿಭಾಗಾಧಿಕಾರಿಯ ಮುಂದೆ ಅರ್ಜಿಯನ್ನು ಸಲ್ಲಿಸಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಭಾದಿತರ ಮನವಿಯನ್ನು ಆಧರಿಸಿ ಉಪ-ವಿಭಾಗಾಧಿಕಾರಿ ಎರಡು ಅಥವಾ ನಾಲ್ಕು ಸದಸ್ಯರ ಸಂಧಾನ ಸಮಿತಿಗೆ ದೂರನ್ನು ಕಳುಹಿಸುತ್ತಾರೆ. ಸಂಧಾನವು ಯಶಸ್ವಿಯಾಗದೇ ಹೋದರೆ ಉಪ-ವಿಭಾಗಾಧಿಕಾರಿಯು ತನ್ನ ಅಧಿಕಾರವನ್ನು ಬಳಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬಹುದು. ಉಪ-ವಿಭಾಗಾಧಿಕಾರಿಯ ತೀರ್ಪಿನಿಂದ ಭಾದಿತರಾದವರು ಜಿಲ್ಲಾಧಿಕಾರಿಯ ಮುಂದೆ ಮೇಲ್ಮನವಿಯನ್ನು ಸಲ್ಲಿಸಬಹುದು. ಉಪ-ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನೀಡುವ ತೀರ್ಪುಗಳು ಸಿವಿಲ್ ನ್ಯಾಯಾಲಯಗಳು ನೀಡುವ ತೀರ್ಪಿಗೆ ಸಮಾನವೆಂಬ ಅಂಶವನ್ನು ಹೊಸ ಕಾಯ್ದೆಯಲ್ಲಿ ಹೇಳಲಾಗಿದೆ.
ಅದೇ ಬಗೆಯಲ್ಲಿ ಫ಼ಾರ್ ಮರ್ಸ್ (ಎಂಪವರ್ ಮೆಂಟ್ ಅಂಡ್ ಪ್ರೊಟೆಕ್ಶನ್) ಅಗ್ರಿಮೆಂಟ್ ಆಫ್ ಪ್ರೈಸ್ ಅಶ್ಯೂರೆನ್ಸ್ ಅಂಡ್ ಫಾರ್ಮ್ ಸರ್ವೀಸ್ ಆಕ್ಟ್, 2020, ನಲ್ಲಿಯೂ ಮೇಲೆ ತಿಳಿಸಿದಂತಹ ಅಂಶಗಳೇ ಇವೆ. ಅಲ್ಲಿಯೂ ಕೂಡ ಯಾವುದೇ ಬಗೆಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಉಪ-ವಿಭಾಗಾಧಿಕಾರಿಯ ಮುಂದೆಯೇ ಹೋಗಬೇಕು. ಅಂದಂದಿನ ಕೆಲಸಗಳನ್ನು ಮಾಡಲೂ ಕೊಡ ಆಳ್ಮೆಗಾರರ ಅನುಮತಿಯನ್ನು ಬಯಸುವ ಕಾರ್ಯಾಂಗವು ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ಮಟ್ಟದಲ್ಲಿ ನ್ಯಾಯವನ್ನು ಭಾದಿತರಿಗೆ ವಿತರಿಸಬಲ್ಲದು ಎಂಬುದು ಅಂಗೈ ಮೇಲಿನ ಹುಣ್ಣಿನಷ್ಟೇ ಸ್ಪಷ್ಟವಾಗಿ ಕಾಣುತ್ತದೆ. ಇನ್ನು ಬಲಾಢ್ಯ ಉದ್ಯಮಿಗಳ ಮತ್ತು ಆಳ್ಮೆಗಾರರ(ಶಾಸಕಾಂಗ) ನಡುವಿನ ಅಪವಿತ್ರ ಮೈತ್ರಿಗೆ ಕಾರ್ಯಾಂಗವು ಕೈ ಜೋಡಿಸಿದರೆ ಮುಂದೊದಗುವ ಸನ್ನಿವೇಶಗಳನ್ನು ಊಹಿಸಿಕೊಳ್ಳಬಹುದು. ಸ್ವಾಭಾವಿಕವಾಗಿ ಇಂತಹ ಬದಲಾವಣೆಗಳು ವಕೀಲರ ಪಾತ್ರವನ್ನು ಕೂಡ ಕಿರಿದಾಗಿಸುತ್ತದೆ. ಇದೇ ಹಿನ್ನೆಲೆಯಲ್ಲಿ ದೆಹಲಿ ವಕೀಲರ ಪರಿಷತ್ತು, ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್ತು, ಮತ್ತಿತರ ವಕೀಲರ ಸಂಸ್ಥೆಗಳು ಹೊಸ ಕಾಯ್ದೆಯನ್ನು ವಿರೋಧಿಸಿ ರೈತರ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದವು. ಅಲ್ಲದೇ ಈ ಕಾಯ್ದೆಗಳು ಉದ್ಯಮಿಗಳಿಗೆ ಮಾತ್ರ ಲಾಭದಾಯಕವೆಂದು ಅಭಿಪ್ರಾಯಪಟ್ಟಿದ್ದವು. ದೆಹಲಿ ವಕೀಲರ ಪರಿಷತ್ತು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ “ಈ ಕಾಯ್ದೆಗಳು ಜಿಲ್ಲಾ ನ್ಯಾಯಾಲಯಗಳಲ್ಲಿನ ವಕೀಲರ ಕಸುಬನ್ನು ಅತಂತ್ರಗೊಳಿಸಲಿದೆ, ಕಾಲಕ್ರಮೇಣ ಇದು ಸಾರ್ವಜನಿಕರ ಹಿತಾಸಕ್ತಿಯನ್ನು ಬುಡಮೇಲು ಮಾಡಲಿದೆ “ಎಂಬ ಅಂಶವನ್ನು ಒತ್ತಿ ಹೇಳಿದೆ.
ಬೇರೆ ಕಸುಬುಗಳಂತೆ ಕೃಷಿ ಕ್ಷೇತ್ರವೂ ಕೂಡ ಸುಧಾರಣೆಯನ್ನು ಬಯಸುತ್ತದೆ. ಸುಧಾರಣೆಯೇ ಬೇಡವೆಂದು ಯಾರೂ ಹೇಳಲಾಗದು. ಆದರೆ ಯಾವುದೇ ನಿರ್ದಿಷ್ಟ ವಿಷಯದ ಕುರಿತು ದೊಡ್ಡ ಬದಲಾವಣೆಗಳನ್ನು ಜಾರಿಗೆ ತರುವ ಮೊದಲು ಅಂತಹ ವಿಷಯಗಳಲ್ಲಿ ಹಿತಾಸಕ್ತಿಯನ್ನು ಹೊಂದಿರುವ ಜನ ಸಮುದಾಯಗಳು ಮತ್ತು ಸಂಘಟನೆಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಜನತಂತ್ರದ ಆಶಯಗಳು ಮಣ್ಣು ಪಾಲಾಗಲಿದೆ. ಹೊಸ ಕಾಯ್ದೆ ನೆಲದ ಮಕ್ಕಳ ಹಿತವನ್ನು ಕಾಪಾಡಬಲ್ಲದೋ ಇಲ್ಲವೋ ಕಾಡಬಲ್ಲದೋ ಎಂಬುದನ್ನು ಮೇಲಿನ ಉದಾಹರಣೆಗಳು ಎತ್ತಿ ತೋರುತ್ತದೆ. ಕಾನೂನು ಸಾಮಾಜಿಕ ಸುಧಾರಣೆಯ ಒಂದು ಪ್ರಬಲವಾದ ಸಾಧನ. ಅದು ಜನಪರವಾಗಿರದೇ ಹೋದರೆ ಅದು ಕಾಲಾಂತರದಲ್ಲಿ ಕುಣಿಕೆಯಾಗಿಯೂ ಪರಿಣಮಿಸಬಲ್ಲದು.
ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ
ಉಮಾಶಂಕರ ಹಿರೇಮಠ
ಕೆ. ಬಿ. ಕೆ. ಸ್ವಾಮಿ
ಕೆ. ಬಿ. ಕೆ. ಸ್ವಾಮಿಯವರು ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ. ಅವರು ಕನ್ನಡ ಮತ್ತು ಇಂಗ್ಲೀಷಿನ ಹೆಸರಾಂತ ದಿನಪತ್ರಿಕೆಗಳಲ್ಲಿ ಅಂಕಣ ಬರಹಗಾರರೂ ಆಗಿದ್ದಾರೆ.