ಹೆಂಗೆಳೆಯರ ಜೀವ ತೆಗೆಯುವ ರೋಗಗಳು, ಕೈಗೆಟುಕದ ಚಿಕಿತ್ಸೆ : ಕಾನೂನಿನಲ್ಲಿದೆಯೇ ಪರಿಹಾರ?
ಮಾರ್ಚ್ 8 ಬಂತೆಂದರೆ ಅವರವರ ಜೀವನದಲ್ಲಿ ಹೆಣ್ಣು ಹೇಗೆ ಮುಖ್ಯ ಪಾತ್ರ ಹೊಂದಿದ್ದಾರೆ ಎಂದು ಗಂಡಸರೂ, ಹೇಗೆ ಅಸಮಾನತೆಯನ್ನು ಎದುರಿಸುವಲ್ಲಿ ಒಂದಾಗಬೇಕೆಂದು ಸಹಾಯ – ಸಹಕಾರವನ್ನು ವ್ಯಕ್ತಪಡಿಸುತ್ತಾ ಮಹಿಳೆಯರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಸಭೆ – ಸಮಾರಂಭಗಳಲ್ಲಿ, ಟಿವಿ – ರೇಡಿಯೋಗಳಲ್ಲಿ ಹೇಳಿಕೊಳ್ಳುತ್ತಾರೆ. ಇದರೊಟ್ಟಿಗೇ, ಸಮಾನತೆ ಒಂದು ದಿನದ ಸಂಭ್ರಮವಲ್ಲ, ದಿನನಿತ್ಯವೂ ಮನವೊಲಿಕೆ, ಚೌಕಾಶಿ, ಒತ್ತಾಯ, ಪ್ರತಿಭಟನೆ, ಹೋರಾಟ ಮತ್ತು ಯುದ್ಧ ಮಾಡಿ ದಕ್ಕಿಸಿಕೊಳ್ಳಬೇಕಾದ ಹಕ್ಕೆಂದು ಅರಿವಿರುವವರು, ಬಿಸಿಲಿಗೆ ಬಿದ್ದು ಆ ನಿಟ್ಟಿನಲ್ಲಿ ಕೆಲಸಗಳನ್ನೂ ಮಾಡುತ್ತಾರೆ. ಅಕ್ಷರ ಎಲ್ಲರ ಕದ ತಟ್ಟಿ, ಬುದ್ಧಿಶಕ್ತಿ ಬೆಳಕಿಗೆ ತೆರೆದುಕೊಳ್ಳುತ್ತಿರುವ ಈ ಸಮಯದಲ್ಲಿ ಹೆಚ್ಚು ಹೆಚ್ಚು ಕಾನೂನುಗಳ ಅರಿವು ಮೂಡಿದಂತೆ, ನಿಧಾನವಾಗಿಯಾದರೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆದರೆ ಲಿಂಗಭೇದವಿಲ್ಲದ ಸಮಾನತೆ ಎಂದರೆ ಶಿಕ್ಷಣ – ಉದ್ಯೋಗದಲ್ಲಿ ಅವಕಾಶ, ಅತ್ಯಾಚಾರಕ್ಕೆ ಕಠಿಣ ಶಿಕ್ಷೆ, ವೈಯಕ್ತಿಕ ಸ್ವಾತಂತ್ರ್ಯಗಳು ಮಾತ್ರವಲ್ಲ, ಹೆಂಗೆಳೆಯರ ಬದುಕುಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಕ್ಷೇತ್ರದಲ್ಲಿ ಸುಧಾರಣೆಗಳಾಗಬೇಕು, ಅದರಲ್ಲಿಯೂ ಬಿಡಲೇಬಾರದಂತದ್ದು ಅರೋಗ್ಯ ಕ್ಷೇತ್ರ. ಹೆಂಗೆಳೆಯರ ಆರೋಗ್ಯವೆಂದರೆ ಶೌಚಾಲಯ, ಹೆರಿಗೆ ಆಸ್ಪತ್ರೆಗಳು, ಸ್ಯಾನಿಟರಿ ಪ್ಯಾಡ್ ಗಳು ಇಂತಹ ವಿಚಾರಗಳು ಮಾತ್ರವಲ್ಲ, ಮಹಿಳೆಯರನ್ನೇ ಹೆಚ್ಚಾಗಿ ಬಾಧಿಸುವ ಜೀವಕ್ಕೆ ಕುತ್ತು ತರುವ ರೋಗಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ. ಈ ಮಾರಕ ರೋಗಗಳಿಗೆ ಎಷ್ಟರ ಮಟ್ಟಿಗೆ ನಮ್ಮ ವ್ಯವಸ್ಥೆ ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿ ಚಿಕಿತ್ಸೆ ಕೊಡುತ್ತಿದೆ? ಔಷಧಿಗಳು ದೊರಕುತ್ತವೆ? ಅವುಗಳ ಬೆಲೆ ಸಾಮಾನ್ಯರಿಗೆ ಭರಿಸಲಾಗುವಂತದ್ದೇ? ಅದರಲ್ಲೂ ಆರ್ಥಿಕ ಸ್ವಾತಂತ್ರ್ಯವಿಲ್ಲದ ಮನೆಯ ಹೆಣ್ಣುಮಗಳೊಬ್ಬಳು ಹೇಗೆ ದುಬಾರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬಲ್ಲಳು? ಇವತ್ತಿನ ಅಂಕಣ, ಮಹಿಳೆಯರ ಆರೋಗ್ಯದ ಹಕ್ಕು, ದುಬಾರಿಯಾದ ಚಿಕಿತ್ಸೆ ಮತ್ತು ಮದ್ದುಗಳ ಕಾನೂನಿನ ಚೌಕಟ್ಟಿನ ಕುರಿತು.
ಮಹಿಳೆಯರನ್ನು ಬಾಧಿಸುವ ಮಾರಕ ರೋಗಗಳಲ್ಲಿ ಮುಖ್ಯವಾದವು ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ (ಸರ್ವಿಕಲ್) ಕ್ಯಾನ್ಸರ್ ಅಥವಾ ಅರ್ಬುದ. 2022 ರ ರಾಷ್ಟ್ರೀಯ ಕ್ಯಾನ್ಸರ್ ರೆಜಿಸ್ಟರ್ ಕಲೆ ಹಾಕಿದ ಮಾಹಿತಿ ಪ್ರಕಾರ 14,61,427 ಕ್ಯಾನ್ಸರ್ ರೋಗಿಗಳಲ್ಲಿ ಅರ್ಧಕ್ಕಿಂತ ಜಾಸ್ತಿ ಅಂದರೆ 7,49,251 ಮಹಿಳೆಯರು.[i] ಅದರಲ್ಲಿ ಸುಮಾರು 28% ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ, 10% ರಷ್ಟು ಮಹಿಳೆಯರು ಸರ್ವಿಕಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. 2022 ರಲ್ಲಿ 2,21,757 ಮಹಿಳೆಯರು ಹೊಸತಾಗಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗಿ ಕಂಡು ಬಂದಿದೆ. 2020 ರಿಂದ ಕನಿಷ್ಠ ಎರಡು ಲಕ್ಷ ಹೆಂಗಸರು ಹೊಸತಾಗಿ ಈ ಗುಂಪಿಗೆ ಸೇರುತ್ತಲೇ ಇದ್ದಾರೆ. ಗಾಬರಿ ಪಡುವ ವಿಚಾರವೆಂದರೆ, ಭಾರತದ ಶೇಕಡಾ 16 ರಷ್ಟು ಜನಸಂಖ್ಯೆಯನ್ನು ಮಾತ್ರ ಈ ನೋಂದಣಿಗೆ ಈವರೆಗೆ ತಲುಪಲು ಸಾಧ್ಯವಾಗಿದೆ. ಅಂದರೆ, ನಿಜವಾಗಿ ಕ್ಯಾನ್ಸರ್ ನಿಂದ ಬಳಲುವ ಮಹಿಳೆಯರ ಸಂಖ್ಯೆ ಈ ಅಂಕದ ನಾಲ್ಕು ಪಟ್ಟು ಅಥವಾ ಐದು ಪಟ್ಟು ಇರಬಹುದು. ಇನ್ನು ಈ ಕ್ಯಾನ್ಸರ್ಗಳ ಬಗ್ಗೆ ಅರಿವು, ಜಾಗೃತಿ ಕಡಿಮೆ ಇರುವುದರಿಂದ ಮತ್ತು ಈ ರೋಗಗಳ ಸುತ್ತ ಹಬ್ಬಿರುವ ಪೂರ್ವಾಗ್ರಹಗಳಿಂದಾಗಿ ತಾವಾಗಿ ತಾವೇ ಮಹಿಳೆಯರು ಪರೀಕ್ಷೆಗಳನ್ನೇನೂ ಮಾಡಿಸಿಕೊಳ್ಳದ ಕಾರಣ, ಹೆಚ್ಚಾಗಿ ರೋಗ ಹರಡಿ ಪರಿಸ್ಥಿತಿ ಹತೋಟಿ ತಪ್ಪಿದ ಮೇಲೆಯೇ ರೋಗವಿದೆಯೆಂಬ ವಿಚಾರ ಬೆಳಕಿಗೆ ಬರುತ್ತದೆ.[ii] ಇದರಿಂದಾಗಿಯೇ, ಚಿಕಿತ್ಸೆ ಫಲಕಾರಿಯಾಗದೆ ಅಥವಾ ಚಿಕಿತ್ಸೆ ಕೈಗೆಟುಕದೆ ರೋಗಿಗಳು ಸಾವನ್ನಪ್ಪುತ್ತಾರೆ.
ಮುಂದುವರಿದ ದೇಶಗಳಲ್ಲಿ ಕ್ಯಾನ್ಸರ್ ಗಡ್ಡೆಗಳು ದೇಹದ ಭಾಗಗಳಿಗೆ ಹರಡುವ ಮುನ್ನವೇ ಗೊತ್ತು ಮಾಡಿಕೊಳ್ಳುವುದರಿಂದ, ಅಲ್ಲಿ ಕ್ಯಾನ್ಸರ್ ಬಂದರೂ ಬದುಕಿಕೊಳ್ಳುವವರು ಜಾಸ್ತಿ. ಅಮೇರಿಕಾದಲ್ಲಿ ಈ ಕ್ಯಾನ್ಸರುಗಳು ಬಂದರೂ ಸುಮಾರು 90 ಪ್ರತಿಶತ ಹೆಣ್ಣುಮಕ್ಕಳು ಬದುಕುಳಿಯುತ್ತಾರೆ ಅದೇ ಭಾರತದಲ್ಲಿ ಬದುಕುಳಿಯುವವರ ಸಂಖ್ಯೆ ಸುಮಾರು 60 ಪ್ರತಿಶತದ ಆಸುಪಾಸಿನಲ್ಲಿ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ಸ್ತನ ಕ್ಯಾನ್ಸರಿನ ಚಿಕಿತ್ಸೆಗೆ ತಗಲುವ ವೆಚ್ಚ ಭಾರತ ಮತ್ತು ಆಫ್ರಿಕಾದಲ್ಲಿ ಒಬ್ಬ ಸರಾಸರಿ ಪ್ರಜೆಯ ಸುಮಾರು 10 ವರ್ಷದ ವೇತನದ ಮೊತ್ತವಾಗಿದ್ದರೆ ಅಮೆರಿಕಾದಲ್ಲಿ ಆ ಹಣವನ್ನು 3 ವರ್ಷದಲ್ಲಿ ಸಂಪಾದಿಸಬಹುದು.[iii] ಇದಷ್ಟೇ ಅಲ್ಲದೆ, ಕುಟುಂಬದಲ್ಲಿ ಒಬ್ಬರಿಗೆ ರೋಗ ಬಂದರೆ, ಇಡೀ ಕುಟುಂಬದ ಮೇಲೆ ಪರೋಕ್ಷವಾಗಿ ಹಲವು ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಮತ್ತು ಇದರಿಂದ ಕುಟುಂಬದ ಆದಾಯದ ಮೇಲೆ ದೊಟ್ಟ ಪೆಟ್ಟೇ ಬೀಳುತ್ತದೆ. ಸೆಪ್ಟೆಂಬರ್ 2022 ರಲ್ಲಿ ರಾಜ್ಯಸಭೆಯ ವರದಿಯೊಂದರಲ್ಲಿ ಭಾರತದಲ್ಲಿ ಸುಮಾರು 40 % ರಷ್ಟು ಕ್ಯಾನ್ಸರ್ ಚಿಕಿತ್ಸೆಯ ಹಣವನ್ನು ಆಸ್ತಿ ಒತ್ತೆಯಿಟ್ಟೋ, ಸಾಲ- ಸೋಲ ಮಾಡಿಯೋ, ಸಂಬಂಧಿಕರಿಂದ ಸಹಾಯ ಪಡೆದೋ ಒಟ್ಟು ಮಾಡಲಾಗುತ್ತದೆ ಎಂದು ಹೇಳಿದೆ.[iv]
ಹಾಗಿದ್ದರೆ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ವೆಚ್ಚ ರೋಗಿಗೆ ಯಾವ ರೀತಿಯ ಕ್ಯಾನ್ಸರ್ ಬಂದಿದೆ ಮತ್ತು ಯಾವ ಹಂತದಲ್ಲಿ ರೋಗ ಇದೆ ಎಂಬುದನ್ನು ಅನುಸರಿಸಿರುತ್ತದೆ. ಸಾಧಾರಣವಾಗಿ ಮೊದಲ ಹಂತದಲ್ಲಿ ಗಡ್ಡೆಗಳು ದೇಹದ ಬೇರೆ ಭಾಗಕ್ಕೆ ಹರಡಿರದ ಕಾರಣ ರೇಡಿಯೋಥೆರಪಿ ಅಥವಾ ಶಸ್ತ್ರಚಿಕಿತ್ಸೆ ಮುಂತಾದವುಗಳ ಮೂಲಕ ಕ್ಯಾನ್ಸರ್ ನಿವಾರಿಸಿಕೊಳ್ಳಬಹುದು. ಆದರೆ ಹಂತ ಮುಂದುವರಿದು ಹೋದಂತೆ, ಕಿಮೋಥೆರಪಿ, ಹಾರ್ಮೋನ್ ಥೆರಪಿ ಮುಂತಾದ ವಿಧಾನಗಳ ಮೊರೆ ಹೋಗಬೇಕಾಗುತ್ತದೆ. ಚಿಕಿತ್ಸೆ ಕೆಲವೊಮ್ಮೆ ಯಾವುದೇ ಎರಡು ಅಥವಾ ಮೂರು ವಿಧಾನಗಳ ಮಿಶ್ರಣ ಕೂಡಾ ಆಗಿರಬಹುದು. ರಿಬೋಸಿಕ್ಲಿಬ್, ಅಬೆಮಾಸಿಕ್ಲಿಬ್ ಎನ್ನುವವು ಒಂದು ರೀತಿಯ ಸ್ತನ ಕ್ಯಾನ್ಸರ್ ನ ಚಿಕಿತ್ಸೆಗೆ ಬಳಸುವ ಒಂದು ಔಷಧಿ. ಒಂದು ತಿಂಗಳ ರಿಬೋಸಿಕ್ಲಿಬ್ ಬೆಲೆ ಅರವತ್ತು ಸಾವಿರಕ್ಕೂ ಮೇಲೆ. ಇನ್ನು ಅಬೆಮಾಸಿಕ್ಲಿಬ್ ಬೆಲೆ ಎಪ್ಪತ್ತೈದು ಸಾವಿರದಿಂದ ಒಂದೂಕಾಲು ಲಕ್ಷದವರೆಗೆ ಇದೆ. ಈ ಬೆಲೆ ಕೇವಲ ಒಂದು ಔಷಧಿಗೆ; ಇದರ ಜೊತೆಯಲ್ಲಿ ತೆಗೆದುಕೊಳ್ಳುವ ಔಷಧಿಗಳ ಖರ್ಚು, ಆಸ್ಪತ್ರೆಯ ಖರ್ಚು ಮತ್ತು ಪರೋಕ್ಷವಾಗಿ ವ್ಯಕ್ತಿ ಭರಿಸಬೇಕಾದ ನೋವು, ಖಿನ್ನತೆ ಮತ್ತು ಅದನ್ನು ಗುಣಪಡಿಸಲು ಭರಿಸಬೇಕಾದ ಖರ್ಚು ಬೇರೆ. ಇನ್ನು ಸರ್ವಿಕಲ್ ಕ್ಯಾನ್ಸರ್ ಇದೆಯೇ ಎಂದು ಪರೀಕ್ಷೆ ಮಾಡಲೇ ಸಾವಿರಗಳನ್ನು ತೆರಬೇಕಾದ ಸ್ಥಿತಿ. ಔಷಧಿಗಳು ಇಷ್ಟು ದುಬಾರಿಯಾಗಲು ಕಾರಣವೆಂದರೆ, ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು, ನಮ್ಮಲ್ಲಿ ತಯಾರಿಕೆ ಇಲ್ಲ. ಮಾರಕ ರೋಗಗಳ ಔಷಧಿಗಳು ಹಲವು ಭಾರತದಲ್ಲಿ ಉತ್ಪಾದನೆ ಆಗುತ್ತಿಲ್ಲ, ಯಾಕೆಂದರೆ ಈ ಔಷಧಿಗಳು ಮತ್ತು ಅದನ್ನು ಕಂಡುಹಿಡಿಯುವ ವಿಧಾನಗಳು ಖಾಸಗಿ ವಿದೇಶಿ ಕಂಪನಿಗಳ ಒಡೆತನದಲ್ಲಿದೆ. ಹಕ್ಕುಸ್ವಾಮ್ಯ ಕಾಯ್ದೆ, 1970 ಹೊಸ ಕಂಡುಹಿಡಿತಗಳಿಗೆ ಹಕ್ಕುಸ್ವಾಮ್ಯ ಅಂದರೆ ಪೇಟೆಂಟ್ ಕೊಡುವ ವಿಚಾರ ತಿಳಿದಿದೆಯಷ್ಟೆ? ಆದ್ದರಿಂದ ಭಾರತದ ಕಂಪನಿಗಳು ಈ ವಿಧಾನಗಳನ್ನು ನಕಲು ಮಾಡಿ ಪರ್ಯಾಯ ಔಷಧಿಗಳನ್ನು ತಯಾರಿಸುವಂತಿಲ್ಲ. (ರಿಬೋಸಿಕ್ಲಿಬ್ ಮತ್ತು ಅಬೆಮಾಸಿಕ್ಲಿಬ್ ಗೆ ಈಗ ಕಳೆದ ತಿಂಗಳು ಪರ್ಯಾಯ ಔಷಧಿಗಳು ಬಂದಿದ್ದರೂ, ಆ ಔಷಧಿ ಅಷ್ಟು ಪರಿಣಾಮಕಾರಿ ಅಲ್ಲದ್ದರಿಂದ ಇವುಗಳ ಬೆಲೆಯಿನ್ನೂ ಇಳಿದಿಲ್ಲ) ಹಾಗಾಗಿಯೇ, ಈ ಔಷಧಿಗಳಿಗೆ ಮಾರುಕಟ್ಟೆಯಲ್ಲಿ ಈ ಬೆಲೆ.
ಇದು ಮಾರುಕಟ್ಟೆಯ ಬೆಲೆಯಲ್ಲವೇ? ಇದರಲ್ಲಿ ಯಾರಿಗಾದರೂ ಏನು ಮಾಡಲು ಸಾಧ್ಯ ಎಂದು ಆಲೋಚಿಸುತ್ತಿದ್ದೀರಾ? ಇದು ಪ್ರಜೆಗಳ ಜೀವದ ವಿಷಯ, ಮಾರುಕಟ್ಟೆಗೆ ಮಾತ್ರ ಬಿಟ್ಟುಕೊಡಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ಪ್ರತಿಯೊಬ್ಬರ ಜೀವಿಸುವ ಹಕ್ಕನ್ನೂ ಅನುಚ್ಛೇದ 21 ರ ಅಡಿಯಲ್ಲಿ ಕಾಪಾಡುವ ಹೊಣೆ ಹೊತ್ತಿದೆ. ಹಾಗೆಯೇ, ಎಲ್ಲರಿಗೂ ಸಮಾನತೆಯ ಮಾತನ್ನೂ ಅನುಚ್ಛೇದ 14 ರ ಅಡಿಯಲ್ಲಿ ಕೊಡುತ್ತದೆ. ಹಾಗಿರುವಾಗ, ದುಬಾರಿಯಾದ ಔಷಧಿಯನ್ನು ಕೊಳ್ಳಲು ಶಕ್ತಿಯಿದ್ದವರಿಗೆ ಮಾತ್ರ ಆರೋಗ್ಯದ ಹಕ್ಕು ಎಂಬ ಪರಿಸ್ಥಿತಿಗೆ ಬಂದರೆ ಈ ಅನುಚ್ಛೇದಕ್ಕೆ, ಸಂವಿಧಾನದ ಕನಸು- ಭರವಸೆಗಳಿಗೆ ಅರ್ಥ ಎಲ್ಲಿ? ಎಷ್ಟೋ ಕೇಸುಗಳಲ್ಲಿ ಆರೋಗ್ಯದ ಹಕ್ಕು ಜೀವಿಸುವ ಹಕ್ಕಿನಡಿಯಲ್ಲಿ ಮೂಲಭೂತವಾದ ಹಕ್ಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.[v] ತನ್ನ ನಡೆಗಳಿಂದ ಹಕ್ಕುಗಳ ಉಲ್ಲಂಘನೆಯಾಗದದಂತೆ ತಡೆಯುವುದು ಮಾತ್ರವಲ್ಲ, ಎಲ್ಲರ ಆರೋಗ್ಯವನ್ನು ಕಾಪಾಡುವ ಸವಲತ್ತುಗಳನ್ನು ಒದಗಿಸುವಂತಹ ಜವಾಬ್ದಾರಿ ಕೂಡಾ ಸರಕಾರದ ಮೇಲೆ ಇದೆ ಎಂದು ನವತೇಜ್ ಸಿಂಗ್ ಜೋಹರ್ ಕೇಸಿನಲ್ಲಿ ((2018) 10 SCC 1), ಸ್ಪಷ್ಟವಾಗಿ ಹೇಳಿದೆ. ಆದರೆ ದುಬಾರಿಯಾಗಿರುವ ಸ್ತನ ಕ್ಯಾನ್ಸರ್ ಮತ್ತು ಸರ್ವಿಕಲ್ ಕ್ಯಾನ್ಸರಿನ ಔಷಧಿಗಳು ಮಹಿಳೆಯರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತವೆ.
ಹಾಗಾದರೆ ಯಾಕೆ ಇನ್ನೂ ಈ ಔಷಧಿಗಳು, ಚಿಕಿತ್ಸಾ ವಿಧಾನಗಳು ಇಷ್ಟು ದುಬಾರಿಯಾಗಿವೆ? ಇದಕ್ಕೆ ಕಾಯ್ದೆಯ ಚೌಕಟ್ಟಿನಲ್ಲಿರುವ ಉಪಾಯವೇನು ಎಂದು ನೋಡೋಣ. ಹಕ್ಕುಸ್ವಾಮ್ಯ ಕಾಯ್ದೆ ಎನ್ನುವುದು ಆವಿಷ್ಕಾರಗಳನ್ನು ಕಂಡುಹಿಡಿದವರ ಹಕ್ಕುಗಳು ಮತ್ತು ಸಾರ್ವಜನಿಕ ಆರೋಗ್ಯ ಹಿತಾಸಕ್ತಿಗಳು ಇವೆರಡರನ್ನೂ ತೂಗಿಸಿಕೊಂಡು ಹೋಗಲು ಇರುವ ಕಾನೂನು. ಕಾಯ್ದೆಯ ಸೆಕ್ಷನ್ 83 ಎಂತಹ ಸಂದರ್ಭದಲ್ಲಿ ಕಡ್ಡಾಯ ಪರವಾನಗಿಯನ್ನು ಕೊಡಬಹುದು ಎಂದು ಹೇಳುತ್ತದೆ. ಈ ಸೆಕ್ಷನ್ನನ್ನು ಓದಿದರೆ ಕಾಯ್ದೆಯ ಉದ್ದೇಶ ತಿಳಿಯಾಗುತ್ತದೆ. ಕಡ್ಡಾಯ ಪರವಾನಗಿ ಎಂದರೆ ಒಂದು ಆವಿಷ್ಕಾರ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲ್ಪಡುತ್ತಿದ್ದರೆ, ಅತೀವ ಲಾಭದಿಂದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಆಗಿಬಿಟ್ಟಿದ್ದರೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿದ್ದರೆ ಅಂತಹ ಕಂಡುಹಿಡಿತವನ್ನು ಆಸಕ್ತ ಕಂಪನಿಗಳಿಗೆ ಅಥವಾ ವ್ಯಕ್ತಿಗಳಿಗೆ ಉತ್ಪಾದನೆ ಮಾಡುವ ಸಲುವಾಗಿ ಕೊಡುವ ಪ್ರಕ್ರಿಯೆ. ಈ ಪರವಾನಗಿಯಲ್ಲಿ ಹಕ್ಕುಸ್ವಾಮ್ಯ ಹೊಂದಿರುವ ವ್ಯಕ್ತಿಯ ಪರವಾನಗಿ ರದ್ದಾಗುವುದಿಲ್ಲ, ಬದಲಿಗೆ, ಆ ವ್ಯಕ್ತಿ ಅಥವಾ ಕಂಪನಿಯ ಜೊತೆಗೇ ಬೇರೆ ವ್ಯಕ್ತಿ ಅಥವಾ ಕಂಪನಿಗೂ ಉತ್ಪಾದನೆ ಮಾಡಲು ಪರವಾನಗಿ ಕೊಡಲಾಗುತ್ತದೆ. ಸೆಕ್ಷನ್ 84 ರ ಅಡಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಕಂಪನಿ ಈ ಪರವಾನಗಿ ಸಲುವಾಗಿ ಅರ್ಜಿ ಸಲ್ಲಿಸಿದಾಗ, ಅರ್ಜಿಯ ವಿಚಾರಣೆ ನಡೆಸಿ ಪೇಟೆಂಟ್ ಅಧಿಕಾರಿ ಆದೇಶ ಹೊರಡಿಸಬೇಕು. ಸರಕಾರಕ್ಕೆ ಯಾವುದೇ ಕಂಪನಿ ಅಥವಾ ವ್ಯಕ್ತಿ ಕಡ್ಡಾಯ ಪರವಾನಗಿಗಾಗಿ ಅರ್ಜಿ ಸಲ್ಲಿಸದಿದ್ದರೂ, ಸೆಕ್ಷನ್ 83 ರಲ್ಲಿ ಹೇಳಿದ ಸಂದರ್ಭಗಳಿದ್ದರೆ ಆಸಕ್ತ ವ್ಯಕ್ತಿ ಅಥವಾ ಕಂಪನಿಗಳು ಕಡ್ಡಾಯ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದೆಂದು ಸೆಕ್ಷನ್ 92 ರ ಅಡಿಯಲ್ಲಿ ಸರಕಾರ ಸುತ್ತೋಲೆಯನ್ನೂ ಹೊರಡಿಸಬಹುದು. ಆಮೇಲೆ ಸುತ್ತೋಲೆಯನ್ನು ಕಂಡು, ಬರುವ ಅರ್ಜಿಗಳ ವಿಚಾರಣೆ ನಡೆಸಿ ಕಡ್ಡಾಯ ಪರವಾನಗಿ ಕೊಡಬಹುದು.
ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿಗಳ ಅಂತಾರಾಷ್ಟ್ರೀಯ ಒಪ್ಪಂದದ (TRIPS) ಪ್ರಕಾರ ಹಕ್ಕುಸ್ವಾಮ್ಯ ಕಾನೂನನ್ನು ಭಾರತದಲ್ಲಿ ತರಬೇಕಾಗಿ ಬಂದಾಗ, ಔಷಧಿಗಳಂತಹ ಜನಜೀವನಕ್ಕೆ ಬೇಕಾಗುವಂತಹ ಆವಿಷ್ಕಾರಗಳನ್ನು ಹೀಗೆ ಸಂಪೂರ್ಣವಾಗಿ ವ್ಯಾಪಾರಿಗಳ ಕೈಗೆ ಸರಕಾರದ ಹಿಡಿತವಿಲ್ಲದೆ ದುಡ್ಡು ಮಾಡುವ ಉದ್ದೇಶಗಳಿಗೆ ಕೊಡಲು ಅವಕಾಶವಿರುವ ಈ ಕಾನೂನಿಗೆ ಭಾರತ, ಆಫ್ರಿಕಾದಂತಹ ದೇಶಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಆ ಒಪ್ಪಂದದಲ್ಲೇ ಸಾರ್ವಜನಿಕ ಆರೋಗ್ಯ ಕಾಪಾಡುವುದಕ್ಕಾಗಿ ಸರಕಾರಗಳು ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ನೀಡುವ ಹಲವು ವಿಭಾಗಗಳಿವೆ. ಇದನ್ನೇ ದೋಹಾ ಒಪ್ಪಂದದಲ್ಲೂ ಸ್ಪಷ್ಟವಾಗಿ 2001 ರಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹೇಳಿರುವುದು. ಈ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಭಾರತದ ಹಕ್ಕುಸ್ವಾಮ್ಯದ ಕಾನೂನಿನಲ್ಲೂ ಬದಲಾವಣೆ ತರಲಾಯಿತು, ಸೆಕ್ಷನ್ 100 ಜಾರಿಗೆ ಬಂದಿದ್ದು ಹಾಗೆ. ಈ ಸೆಕ್ಷನ್ನುಗಳನ್ನು ಜಾರಿಗೆ ತರಬೇಕಾದರೆ ಔಷಧಿಗಳ ಪೇಟೆಂಟ್ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಬೇಕಾದ ಅಗತ್ಯವಿಲ್ಲ, ಸೆಕ್ಷನ್ 100 ಮತ್ತು 102 ಗಳ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎಂದು ಸದನದಲ್ಲಿ ನಡೆದ ಚರ್ಚೆಯಲ್ಲಿ ಆಗಿನ ಸರಕಾರ ಹೇಳಿತ್ತು.
ಸಾರ್ವಜನಿಕ ಹಿತಾಸಕ್ತಿ ಕಾಪಾಡಲೆಂದೇ ಕಡ್ಡಾಯ ಪರವಾನಗಿಯನ್ನು ನೀಡುವ ಅವಕಾಶ ಸೆಕ್ಷನ್ 84 ರಲ್ಲಿ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿದ್ದರೂ, ಅದರಲ್ಲಿ ಹಲವು ಮಾನದಂಡಗಳು ಮತ್ತು ಪ್ರಕ್ರಿಯೆಗಳನ್ನು ಹೇಳಿದೆ. ಅವುಗಳನ್ನು ಅನುಸರಿಸಿದರೆ ಮಾತ್ರ ಕಡ್ಡಾಯ ಪರವಾನಗಿ ಕೊಡಲು ಸಾಧ್ಯ. ಆದರೆ ಸೆಕ್ಷನ್ 100 ರ ಅಡಿಯಲ್ಲಿ ಸರಕಾರಕ್ಕೆ ಯಾವುದೇ ನಿರ್ದಿಷ್ಟ ಮಾನದಂಡದ ಹಂಗಿಲ್ಲದೆ, ಆವಿಷ್ಕಾರಗಳನ್ನು ಬಳಸುವ, ಬಳಸಿ ಔಷಧಿ ಉತ್ಪಾದಿಸುವ ಅಧಿಕಾರ ಇದೆ. ಇದನ್ನು ಈವರೆಗೆ ಮಾರಕ ರೋಗಗಳ ಯಾವುದೇ ದುಬಾರಿ ಔಷಧಿಗಾಗಿ ಸರಕಾರ ಉಪಯೋಗಿಸಿಲ್ಲ. ಇನ್ನು ಈ ವಿಚಾರ ಸರಕಾರದ ವಿವೇಚನೆಗೆ ಬಿಟ್ಟದ್ದಲ್ಲವೇ, ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೇರೆ ಯಾರಾದರೂ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ತಿಳಿಯಾದ ಉತ್ತರ ಈವರೆಗೆ ಇಲ್ಲವಾದರೂ, ಈ ಗಂಭೀರವಾದ ಪ್ರಶ್ನೆ ಎರಡು ಉಚ್ಚ ನ್ಯಾಯಾಲಯಗಳಲ್ಲಿ, ಎರಡು ಪ್ರಕರಣಗಳಲ್ಲಿ ನ್ಯಾಯಾಲಯದ ಪರಿಗಣನೆಯಲ್ಲಿದೆ. ಟಿ.ಬಿ. ಖಾಯಿಲೆಯ ಔಷಧೀಯ ವಿಚಾರವಾಗಿ ಬಾಂಬೆ ಹೈಕೋರ್ಟಿನಲ್ಲಿ ಪ್ರಕರಣ ಬಾಕಿಯಿದ್ದರೆ, ಸ್ತನ ಕ್ಯಾನ್ಸರಿನ ವಿಚಾರದಲ್ಲಿ ಕೇರಳ ಹೈಕೋರ್ಟ್ ಮುಂಭಾಗದಲ್ಲಿ ಪ್ರಕರಣವೊಂದು ಬಾಕಿಯಿದೆ.
ಎಷ್ಟೋ ಪ್ರಕರಣಗಳಲ್ಲಿ ಜೀವ ಉಳಿಸುವ ಮದ್ದುಗಳು ತುಂಬಾ ದುಬಾರಿ ಇರುವಂತಹ ಸಂದರ್ಭದಲ್ಲಿ, ಯಾವುದೇ ವ್ಯಕ್ತಿ ಅದನ್ನು ಭರಿಸಲಾಗದೆ, ಕೋರ್ಟ್ ಮೊರೆ ಹೋಗಿದ್ದಲ್ಲಿ ಕೋರ್ಟುಗಳು ಅಂತಹ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಬೇಕೆಂದು ಆದೇಶ ಹೊರಡಿಸಿದ ಉದಾಹರಣೆಗಳಿವೆ.[vi] ಆದರೆ, ಕೋರ್ಟ್ ಮೆಟ್ಟಿಲೇರುವ ಶಕ್ತಿ, ತಾಳ್ಮೆ ಅಥವಾ ಸಂಪನ್ಮೂಲಗಳು ಎಲ್ಲರ ಹತ್ತಿರವೂ ಇರಲು ಸಾಧ್ಯವೇ? ಲಕ್ಷಗಟ್ಟಲೆ ಮಹಿಳೆಯರು ನರಳುವ ಮತ್ತು ಸಾವಿರಗಟ್ಟಲೆ ಮಹಿಳೆಯರು ವರ್ಷವೂ ಸಾಯುವ ಈ ರೋಗವು ಖಂಡಿತವಾಗಿ ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ ಮತ್ತು ಸೆಕ್ಷನ್ 83 ರಲ್ಲಿ ಹೇಳಿದ ಬಹುತೇಕ ಕಾರಣಗಳು ಸ್ತನ ಮತ್ತು ಸರ್ವಿಕಲ್ ಕ್ಯಾನ್ಸರಿನ ವಿಷಯದಲ್ಲಿ ಇದೆ, ಹಾಗಾಗಿ ಸರಕಾರಕ್ಕೆ ಸೆಕ್ಷನ್ 92 ರ ಅಡಿಯಲ್ಲಿ ಸುತ್ತೋಲೆ ಹೊರಡಿಸುವ ಅಥವಾ ಸೆಕ್ಷನ್ 100 ರಡಿಯಲ್ಲಿ ಆವಿಷ್ಕಾರವನ್ನು ಬಳಸಿಕೊಂಡು ಔಷಧಿಗಳನ್ನು ಸರಕಾರದ ಕಂಪನಿಗಳಿಂದ ಅಥವಾ ಬೇರೆ ಅಧಿಕೃತ ಕಂಪನಿಗಳಿಂದ ಉತ್ಪಾದನೆಯನ್ನು ಮಾಡುವ ಅಧಿಕಾರ ಖಂಡಿತ ಇದೆ. ಇದು ಸರ್ಕಾರಕ್ಕಿರುವ ಅಧಿಕಾರ ಮಾತ್ರವಲ್ಲ, ಮೂಲಭೂತವಾದ ಆರೋಗ್ಯದ ಹಕ್ಕಿನ ದೃಷ್ಟಿಯಿಂದ ನೋಡಿದಾಗ, ಸರಕಾರದ ನಿಷ್ಕ್ರಿಯತೆ ಮೂಲಭೂತ ಹಕ್ಕಿನ ಉಲ್ಲಂಘನೆಯೇ ಆಗುತ್ತದೆ.
ಸ್ತನ ಕ್ಯಾನ್ಸರ್ ಮತ್ತು ಸರ್ವಿಕಲ್ ಕ್ಯಾನ್ಸರ್ ಮಹಿಳೆಯರನ್ನೇ ಹೆಚ್ಚಾಗಿ ಕಾಡುವ ಮಾರಕ ರೋಗ. ದೊಡ್ಡ ಸಂಖ್ಯೆಯಲ್ಲಿ ರೋಗ ಉಲ್ಬಣವಾಗುತ್ತಿದ್ದರೂ, ಮಹಿಳೆಯರು ವರುಷವೂ ಸಾವನ್ನಪ್ಪುತ್ತಿದ್ದರೂ, ಉಚಿತವಾಗಿ ಈ ರೋಗಗಳಿಗೆ ಚಿಕಿತ್ಸೆಯೋ, ಔಷಧಿಗಳೋ ಲಭ್ಯವಲ್ಲ. ವಿಮಾ ಪಾಲಿಸಿಗಳಲ್ಲಿ ಈ ರೋಗಗಳೂ, ರೋಗಗಳ ಔಷಧಿಗಳೂ ಒಳಗೊಂಡಿರುವ ಸಾಧ್ಯತೆ ಕಡಿಮೆ ಮತ್ತು ಎರಡು ಲಕ್ಷಕ್ಕಿಂತ ಜಾಸ್ತಿ ಹಣದ ಸಹಾಯ ಕೇಂದ್ರ ಸರಕಾರದ ಯೋಜನೆಗಳಲ್ಲಿಲ್ಲ, ಅದೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಆ ಸಹಾಯ ಲಭ್ಯ. ಮೇಲ್ಮಧ್ಯಮ ವರ್ಗದವರಿಗೂ ಭರಿಸಲು ಕಷ್ಟವಾಗುವಂತಹ ದುಬಾರಿಯಾಗಿರುವ ಚಿಕಿತ್ಸೆಗೆ ಸರಕಾರದಿಂದ ದೊರಕುವ ಸಹಾಯ ಇದು. ಅಮ್ಮನಾಗಿ, ಮಗಳಾಗಿ, ತಂಗಿಯಾಗಿ ಎಂದೆಲ್ಲ ಗಂಡಿನ ಜೀವನದಲ್ಲಿ ಹೆಣ್ಣಿನ ಕೊಡುಗೆಗಳನ್ನು ನೆನೆಸುವ ಬದಲು, ಈ ಮಹಿಳಾ ದಿನಾಚರಣೆ ಒಂದು ಜೀವಿಯ ಬದುಕಿನಲ್ಲಿ ಅತ್ಯಂತ ಅಗತ್ಯವಾದ ಆರೋಗ್ಯದ ಹಕ್ಕುಗಳ ಕುರಿತು ತಿಳಿದುಕೊಳ್ಳೋಣ ಮತ್ತು ಈ ನಿಟ್ಟಿನಲ್ಲಿ ಚರ್ಚೆ ಮಾಡೋಣ.
ಇತ್ತೀಚಿನ ಬ್ಲಾಗ್‌ಗಳು
ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ
ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.