ಹೆಚ್ ಐ ವಿ ರೋಗಿಗಳು, ಕಾನೂನು ಮತ್ತು ನ್ಯಾಯಾಲಯಗಳು
ಎಚ್ಐವಿ ಅನ್ನೋದು ಒಂದು ಕಾಲದಲ್ಲಿ ಭಯಂಕರ ನಡುಕ ಹುಟ್ಟಿಸಿದ ರೋಗ. ಹೆಸರು ಕೇಳಿದಾಕ್ಷಣ ಎಲ್ಲರೂ ಬೆಚ್ಚಿ ಬೀಳುತ್ತಿದ್ದರು. ಎಚ್ಐವಿ ಎಂದರೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್. ಇದು ಮನುಷ್ಯನ ದೇಹದಲ್ಲಿ ಮಾತ್ರ ಬದುಕಿ ಉಳಿಯಬಹುದಾದ ಒಂದು ಬಗೆಯ ವೈರಾಣು. ಏಡ್ಸ್ ಅಕ್ವಾಗಾರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ ಅಂದರೆ ಅರ್ಜಿತ ರೋಗನಿರೋಧಕ ಶಕ್ತಿಯ ಕೊರತೆಗಳ ಕೂಟ, ಎಚ್ಐವಿ ಸೋಂಕಿನ ಅಂತಿಮ ಹಂತವೆಂದು ಹೇಳಲಾಗುವ ಈ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ಸಂಪೂರ್ಣವಾಗಿ ವಿಫಲಗೊಂಡು ವ್ಯಕ್ತಿಯು ಅಪಾಯಕಾರಿಯಾದ ಸೋಂಕುಗಳು ಮತ್ತು ಕ್ಯಾನ್ಸರ್ ನಂತಹ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚಾಗುತ್ತದೆ. ಎಚ್ಐವಿ ಸೋಂಕು ಕೇವಲ ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುತ್ತದೆ. ಅವುಗಳೆಂದರೆ ೧. ಹೆಚ್ಐವಿ ಹೊಂದಿರುವ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿರುವುದರಿಂದ, ೨. ಎಚ್ಐವಿ ಸೋಂಕಿತ ರಕ್ತದಾನವನ್ನು ಮಾಡುವುದರಿಂದ, ೩. ಎಚ್ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆಹಾಲಿನ ಮೂಲಕ, ಮತ್ತು ೪. ಎಚ್ಐವಿ ಸೋಂಕಿತ ಸೂಜಿ, ಸಿರಂಜು, ಹರಿತವಾದ ಸಲಕರಣೆಗಳನ್ನು ಸಂಸ್ಕರಿಸದೇ ಬಳಸುವುದರಿಂದ. ರಕ್ತ, ವೀರ್ಯ, ಯೋನಿ ಸ್ರಾವಗಳು ಹಾಗೂ ಎದೆಹಾಲು ಮಾತ್ರ ಸೋಂಕು ಹರಡಬಲ್ಲ ದೇಹದ ಸ್ರಾವಗಳು. ಇತರ ಸ್ರಾವಗಳಾದ ಜೊಲ್ಲು, ಕಣ್ಣೀರು, ಬೆವರು ಮತ್ತು ವಾಂತಿಯಿಂದ ಸೋಂಕು ಹರಡುವುದಿಲ್ಲ.
ಸೋಂಕಿತ ತಾಯಿಯಿಂದ ಮಗುವಿಗೆ ಸೋಂಕು ಹರಡುವ ಅಪಾಯ ಶೇಕಡಾ 30ರಷ್ಟು ಇದೆ. ಇದನ್ನು ಹೆತ್ತವರಿಂದ ಮಕ್ಕಳಿಗೆ ಸೋಂಕು ಹರಡುವುದು ಎಂದು ಹೇಳಲಾಗುತ್ತದೆ. ಇದರಲ್ಲಿ 5% ಗರ್ಭಧಾರಣೆಯ ಸಂದರ್ಭದಲ್ಲಿ, ಇನ್ನು 15% ಹೆರಿಗೆ ಸಂದರ್ಭದಲ್ಲಿ ಮತ್ತು 10% ಎದೆಹಾಲು ಸೇವನೆಯ ಮೂಲಕ ವರ್ಗಾವಣೆಯಾಗುತ್ತದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು ತಪ್ಪದೇ ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಎಸ್ ಟಿ ಐ (Sexually Transmitted Infection) ಎಂದರೆ ಲೈಂಗಿಕ ಸಂಪರ್ಕದ ಸೋಂಕುಗಳು ಅಥವಾ ಗುಪ್ತರೋಗ. ಇದು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ಉಂಟಾಗುತ್ತದೆ. ಮುಖ್ಯವಾಗಿ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಉದಾಹರಣೆಗೆ ಸಿಫಿಲಿಸ್, ಗೊನೊರಿಯಾ, ಹರ್ಪಿಸ್. ಅಸುರಕ್ಷಿತ ಲೈಂಗಿಕ ಸಂಪರ್ಕ ಜನರನ್ನು ಎಚ್ಐವಿ ಮತ್ತು ಇತರ ಎಸ್ ಟಿ ಐಗಳ ಅಪಾಯಕ್ಕೆ ತುತ್ತಾಗುತ್ತದೆ. ಎಸ್ ಟಿ ಐ ತಗುಲಿದರೆ ಎಚ್ಐವಿ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.
ಆರಂಭದ ಹಂತದಲ್ಲಿ ವ್ಯಕ್ತಿಯು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಎಚ್ಐವಿ ದೇಹದೊಳಗೆ ಬೆಳೆಯುತ್ತಿದ್ದಂತೆಯೇ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಅವಕಾಶವಾದಿ ಸೋಂಕುಗಳಿಗೆ ಆಗಾಗ ತುತ್ತಾಗುತ್ತಾನೆ. ಇದರಿಂದ ವ್ಯಕ್ತಿಯಲ್ಲಿ ಗಣನೀಯ ಪ್ರಮಾಣದ ತೂಕ ನಷ್ಟ, ದೀರ್ಘಾವಧಿ ಜ್ವರ, ದೀರ್ಘಾವಧಿ ಬೇಧಿ, ನಿಮೋನಿಯಾ, ಚರ್ಮದ ಸೋಂಕುಗಳು, ಮೆದುಳಿಗೆ ಸೋಂಕು ಮತ್ತು ಸೋಂಕಿತರಲ್ಲಿ ಸಾಮಾನ್ಯವಾಗಿರುವ ಟಿಬಿಯ ಸೂಚನೆಯಾಗಿ ಮೂರು ವಾರಕ್ಕಿಂತ ಹೆಚ್ಚಿನ ಅವಧಿಯ ಕೆಮ್ಮು ಕಂಡುಬರುತ್ತದೆ. ರಕ್ತ ಪರೀಕ್ಷೆಯಿಂದ ಮಾತ್ರ ವ್ಯಕ್ತಿಯೊಬ್ಬರ ಎಚ್ಐವಿ ಸ್ಥಿತಿಯನ್ನು ದೃಢಪಡಿಸಬಹುದು. ಹೊರನೋಟದಿಂದ ಅಥವಾ ರೋಗಲಕ್ಷಣಗಳ ಆಧಾರದಲ್ಲಿ ವ್ಯಕ್ತಿಯೊಬ್ಬರಿಗೆ ರೋಗ ಹೆಚ್ಚಾಗಿದೆ ಎಂದು ಹೇಳಲಾಗದು. ಎಚ್ಐವಿ ಮತ್ತು ಏಡ್ಸ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ಔಷಧಿ ಇಲ್ಲ ಆದರೆ ಜೀವನಾವಧಿ ಹೆಚ್ಚಿಸುವ ಮತ್ತು ಸೋಂಕಿತ ವ್ಯಕ್ತಿಯ ಜೀವನ ಗುಣಮಟ್ಟವನ್ನು ಸುಧಾರಿಸುವ “ಎಆರ್ ಟಿ” ಚಿಕಿತ್ಸೆ ಲಭ್ಯವಿದೆ. ಆದರೆ ಎ.ಆರ್.ಟಿ.ಯು ಎಚ್ಐವಿ ಅನ್ನು ಗುಣಪಡಿಸುವುದಿಲ್ಲ. ವೈರಸ್ ನ ಬೆಳವಣಿಗೆಯನ್ನು ಕುಂಠಿತಗೊಳಿಸಿ, ನಿರೋಧಕ ಶಕ್ತಿಯನ್ನು ವೃದ್ಧಿಸಿ, ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಔಷಧಿಯನ್ನು ಜೀವನವಿಡಿ ತೆಗೆದುಕೊಳ್ಳಬೇಕು ಮತ್ತು ವೈದ್ಯರು ನಿಗದಿಪಡಿಸಿದಂತೆ ತೆಗೆದುಕೊಳ್ಳಬೇಕು. ಪ್ರಮಾಣಿಕೃತ ವೈದ್ಯರಿಂದಲೇ ಚಿಕಿತ್ಸೆ ಪಡೆದುಕೊಳ್ಳಬೇಕು.
ಎಚ್ಐವಿ ಪರೀಕ್ಷೆಯೆಂದರೆ ವ್ಯಕ್ತಿಯೊಬ್ಬರಿಗೆ ಎಚ್ಐವಿ ಸೋಂಕು ಇದೆಯೇ, ಇಲ್ಲವೇ ಎಂಬುದನ್ನು ತಿಳಿಯುವುದಕ್ಕೆ ಮಾಡುವ ಪರೀಕ್ಷೆ. ಈ ಪರೀಕ್ಷೆಗಳು ಸರ್ಕಾರದ ಆಸ್ಪತ್ರೆಗಳಲ್ಲಿರುವ ಐಸಿಟಿಸಿ (ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ)ಗಳಲ್ಲಿ ಲಭ್ಯವಿದೆ. ಇಲ್ಲಿ ಸಾಮಾನ್ಯವಾಗಿ ಬಳಸುವ ಪರೀಕ್ಷಾ ವಿಧಾನಗಳಲ್ಲಿ ಹೆಚ್ಐವಿ ಪರೀಕ್ಷೆ ನಡೆಸಿದರೆ ಒಂದೇ ದಿನದಲ್ಲಿ ಫಲಿತಾಂಶ ತಿಳಿಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಎಲ್ಲಾ ಐಸಿಟಿಸಿ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಮಾಡುತ್ತಾರೆ ಹಾಗೂ ಉಚಿತ ಆಪ್ತಸಮಾಲೋಚನೆ, ಉಚಿತ ಸಲಹೆ ಮತ್ತು ಗೌಪ್ಯ ಪಾಲನೆಯನ್ನು ಮಾಡುತ್ತಾರೆ.
ಪಾಸಿಟಿವ್ ಅಥವಾ ರಿಯಾಕ್ಟಿವ್ ಫಲಿತಾಂಶ ಎಂದರೆ ಹೆಚ್ಚಾಗಿ ಸೋಂಕು ಇದೆ ಎಂದರ್ಥ. ನೆಗೆಟಿವ್ ಅಥವಾ ನಾನ್ ರಿಯಾಕ್ಟಿವ್ ಫಲಿತಾಂಶ ಎಂದರೆ ಪರೀಕ್ಷೆ ಸಂದರ್ಭದಲ್ಲಿ ರಕ್ತದಲ್ಲಿ ಎಚ್ಐವಿ ಪ್ರತ್ಯಾಣು ಪತ್ತೆಯಾಗಿಲ್ಲ ಎಂದರ್ಥ. ಭಾರತ ಸರ್ಕಾರದ ಹೆಚ್ಐವಿ ಪರೀಕ್ಷೆ ನೀತಿಯಲ್ಲಿ ಮೂರು ತತ್ವಗಳಿವೆ. ೧. ಪರೀಕ್ಷಾಪೂರ್ವ ಆಪ್ತ ಸಮಾಲೋಚನೆಯ ಮೂಲಕ ಪರೀಕ್ಷೆಗೊಳಪಡುವ ವ್ಯಕ್ತಿಗೆ, ಅವನಿಗೆ ಅರ್ಥವಾಗುವ ಭಾಷೆಯಲ್ಲಿ, ಪರೀಕ್ಷೆಯ ಪರಿಣಾಮಗಳ ಬಗ್ಗೆ ವಿವರಿಸಿ, ಆತನ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಅನುಮತಿ ಇಲ್ಲದೆ ಯಾವ ವ್ಯಕ್ತಿಯನ್ನೂ ಪರೀಕ್ಷೆಗೆ ಒಳಪಡಿಸಬಾರದು. ೨. ಫಲಿತಾಂಶವನ್ನು ಗೌಪ್ಯವಾಗಿ ರಿಸಬೇಕು. ೩. ಪರೀಕ್ಷಾ ಪೂರ್ವ ಮತ್ತು ಪರೀಕ್ಷಾ ನಂತರದ ಆಪ್ತಸಮಾಲೋಚನೆ ಮುಖ್ಯ. ಇದು ಪರೀಕ್ಷೆಯ ಭಾಗವೇ ಆಗಿದೆ.
ಭಾರತ ಸಂವಿಧಾನದ ಭಾಗ III ರಲ್ಲಿರುವ ಮೂಲಭೂತ ಹಕ್ಕುಗಳು ಎಚ್ಐವಿ ಸೋಂಕಿತರಿಗೆ ಸಹ ಅನ್ವಯವಾಗುತ್ತವೆ. ಎಚ್ಐವಿ ಸೋಂಕಿತರು ಸಹ ಸಮಾನತೆಯ ಹಕ್ಕು, ತಾರತಮ್ಯದ ವಿರುದ್ಧದ ಹಕ್ಕು, ಜೀವಿಸುವ ಹಕ್ಕು, ಶಿಕ್ಷಣದ ಹಕ್ಕು,ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕು, ಆಶ್ರಯದ ಹಕ್ಕು, ವೃತ್ತಿ ತರಬೇತಿ ಹಕ್ಕು, ಮುಂತಾದ ಹಕ್ಕುಗಳನ್ನು ಹೊಂದಿದ್ದಾರೆ. ಕುಟುಂಬದೊಳಗೆ, ಸಮುದಾಯಗಳಲ್ಲಿ, ಆರೋಗ್ಯ ಸೇವೆ ನೀಡುವಾಗ, ಶೈಕ್ಷಣಿಕ ಸಂಸ್ಥೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ ತಾರತಮ್ಯ ಮಾಡಬಾರದು. ಈ ಕಳಂಕದ ಪರಿಣಾಮ ಪ್ರಮುಖವಾಗಿ ಮಾನಸಿಕವಾಗಿ, ಸಾಮಾಜಿಕ, ದೈಹಿಕ ಮತ್ತು ಆರ್ಥಿಕವಾಗಿರುತ್ತದೆ. ಸಾಮಾನ್ಯವಾಗಿ, ಇದು ಆತ್ಮಗೌರವ, ಖಿನ್ನತೆ, ಮನೋವಿಕಾರಕ್ಕೆಗೊಳಗಾಗುವುದು, ಆತ್ಮಹತ್ಯಾ ಪ್ರವೃತ್ತಿ ಇತರರನ್ನು ಕೊಲ್ಲಬೇಕೆಂಬ ಪ್ರವೃತ್ತಿ, ಸೇಡು, ಹತಾಶೆ, ಸೋಮಾರಿತನ, ಜನರಿಂದ ತಾರತಮ್ಯ, ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಅಸಮರ್ಥತೆ ಇತ್ಯಾದಿಗಳಿಗೆ ದಾರಿ ಮಾಡಿಕೊಡುತ್ತದೆ.
ಎಚ್ಐವಿ ಬಾಧಿತರ ಹಕ್ಕು ಸಂರಕ್ಷಣೆಯಲ್ಲಿ ನ್ಯಾಯಾಂಗದ ಕೊಡುಗೆ ಅಪಾರವೆಂದೆರೆ ಸುಳ್ಳಾಗದು. ಸರ್ವೋಚ್ಚ ನ್ಯಾಯಾಲಯವು ಎಚ್ಐವಿ ಸೋಂಕಿತರ ಮೂಲಭೂತ ಹಕ್ಕುಗಳ ರಕ್ಷಕನಾಗಿ ತನ್ನ ನ್ಯಾಯಾಂಗ ಕ್ರಿಯಾಶೀಲತೆಯನ್ನು ಮೆರೆದಿದೆ. ಮಿಸ್ಟರ್ X ವಿರುದ್ಧ Z ಆಸ್ಪತ್ರೆ (AIR 1999 SC 495), ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮದುವೆಯಾಗುತ್ತಿರುವ ಮಹಿಳೆಗೆ ತನ್ನ ಭಾವಿ ಪತಿಯ ಎಚ್ಐವಿ ಸೋಂಕಿನ ಬಗ್ಗೆ ತಿಳಿದುಕೊಳ್ಳುವುದು ಅವಳ ಮೂಲಭೂತ ಹಾಗೂ ಮಾನವ ಹಕ್ಕಾಗಿದೆ ಎಂದು ಹೇಳಿದೆ. ಇಲ್ಲಿ ಎಚ್ಐವಿ ಸೋಂಕಿತ ಖಾಸಗಿ ಹಕ್ಕಿಗೆ ಧಕ್ಕೆ ಆಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿತು. ಬಾಂಬೆ ಉಚ್ಚ ನ್ಯಾಯಾಲಯವು MX ವಿರುದ್ಧ M/s ZY, (AIR 1997 Bom 406), ಈ ಪ್ರಕರಣದಲ್ಲಿ ಎಚ್ಐವಿ ಸೋಂಕಿತ ವ್ಯಕ್ತಿಗೆ ಉದ್ಯೋಗದ ಹಕ್ಕಿದೆ ಅವನನ್ನು ಎಚ್ಐವಿ ಆಧಾರದ ಮೇಲೆ ಕೆಲಸದಿಂದ ತೆಗೆದು ಹಾಕಲು ಬರುವುದಿಲ್ಲ ಎಂದು ತೀರ್ಪು ನೀಡಿತು. ಇದೇ ಪ್ರಕರಣದಲ್ಲಿ ಎಚ್ಐವಿ ಸೋಂಕಿತ ವ್ಯಕ್ತಿಯನ್ನು ಸೇವೆಯಿಂದ ತೆಗೆದುಹಾಕುವುದು ಅಮಾನ್ಯ, ಕಾನೂನುಬಾಹಿರ ಹಾಗೂ ಅಸಂವಿಧಾನಕರ ಎಂದು ತೀರ್ಪು ನೀಡಿ, ನೋಂದಿತ ವ್ಯಕ್ತಿಗೆ ನಷ್ಟ ಪರಿಹಾರವನ್ನು ಒದಗಿಸಲು ಆದೇಶ ನೀಡಿತು.
ಲೂಸಿ ಆರ್. ಡಿಸೋಜಾ ವಿರುದ್ಧ ರಾಜ್ಯ (AIR 1990 Bom 355), ಈ ಪ್ರಕರಣದಲ್ಲಿ ನ್ಯಾಯಾಲಯವು ರೋಗಕ್ಕೆ ವ್ಯಕ್ತಿಗಳನ್ನು ಪ್ರತ್ಯೇಕ ಸಂಸ್ಥೆಗಳಲ್ಲಿ ಹಾಗೂ ವಾರ್ಡ್ಗಳಲ್ಲಿ ಸರಕಾರದ ಯೋಜನೆಯು ಮಾನ್ಯ ವಾಗಿದ್ದು, ಅದು ಎಚ್ಐವಿ ಸೋಂಕಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳಾದ ಅನುಚ್ಛೇದ 14 ಮತ್ತು 21ರ ಉಲ್ಲಂಘನೆ ಮಾಡುವುದಿಲ್ಲ ಎಂದು ತೀರ್ಪು ನೀಡಿತು.
ಹೆಚ್ಐವಿ ಸೋಂಕನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು, ಎಚ್ಐವಿ ಸೋಂಕಿತ ಹಾಗೂ ಏಡ್ಸ್ ಗೆ ರೋಗಕ್ಕೆ ತುತ್ತಾದವರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು ಭಾರತದ ಕೇಂದ್ರ ಸರ್ಕಾರವು The Human Immunodeficiency Virus and Acquired Immune Deficiency Syndrome (Prevention and Control)Act, 2017 ಜಾರಿಯಲ್ಲಿ ತಂದಿದೆ. ಈ ಕಾಯ್ದೆಯಲ್ಲಿ ಒಟ್ಟು 50 ಕಲಂ ಗಳಿವೆ. ಈ ಕಾಯ್ದೆ ಭಾರತದ್ಯಾಂತ ಅನ್ವಯವಾಗುತ್ತದೆ. ಕಲಂ 5 ಪರೀಕ್ಷೆ ಮಾಡುವಾಗ ಅಥವಾ ಚಿಕಿತ್ಸೆಯನ್ನು ನೀಡುವಾಗ ಆ ವ್ಯಕ್ತಿಯ ಪೂರ್ವ ಸಮ್ಮತಿಯನ್ನು ಪಡೆದುಕೊಳ್ಳಬೇಕೆಂದು ಹೇಳುತ್ತದೆ. ಅಲ್ಲದೆ ಪರೀಕ್ಷಾ ಕೇಂದ್ರಗಳಿಗೆ ನಿರ್ದೇಶನಗಳನ್ನು ಸಹ ನೀಡಿದೆ. ಕಲಂ 8, ಎಚ್ಐವಿ ಕುರಿತಾಗಿ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಖಾಸಗಿ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸತಕ್ಕದ್ದಲ್ಲ. ಆದರೆ ನ್ಯಾಯಿಕ ಹಿತಾಸಕ್ತಿ ಅಡಿಯಲ್ಲಿ ನ್ಯಾಯಾಲಯದ ಆದೇಶವಿದ್ದರೆ ಬಹಿರಂಗಪಡಿಸಬಹುದು. ಕಲಂ 9ರ ಪ್ರಕಾರ ಎಚ್ಐವಿ ಸೋಂಕಿತ ವ್ಯಕ್ತಿಯ ಕುರಿತು ಅವನ ಅಥವಾ ಅವಳ ಜತೆಗಾರರಿಗೆ(Partner) ವೈದ್ಯರು ಅಥವಾ ಆಪ್ತ ಸಮಾಲೋಚಕರು ಮಾಹಿತಿಯನ್ನು ನೀಡಬಹುದು. ಕಲಂ 10 ಎಚ್ಐವಿ ಸೋಂಕಿತ ವ್ಯಕ್ತಿಗಳು, ಸೋಂಕು ತನ್ನಿಂದ ಇನ್ನೊಬ್ಬ ವ್ಯಕ್ತಿಗೆ ಹರಡದಂತೆ ಮುಂಜಾಗ್ರತೆ ವಹಿಸಿಕೊಳ್ಳುವ ಕರ್ತವ್ಯವನ್ನು ಹೊಂದಿರುತ್ತಾರೆ. ಕಲಂ 11ರ ಪ್ರಕಾರ ಎಚ್ಐವಿ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿಕೊಳ್ಳುವ ಪ್ರತಿ ಸಂಸ್ಥೆಯು ಸೋಂಕಿತರ ಮಾಹಿತಿಯನ್ನು ರಕ್ಷಿಸಬೇಕು ಹಾಗೂ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಕಲಂ 13 ರ ಪ್ರಕಾರ ಕೇಂದ್ರ ಹಾಗೂ ಪ್ರತಿ ರಾಜ್ಯ ಸರ್ಕಾರಗಳು ಎಚ್ಐವಿ ಅಥವಾ ಏಡ್ಸ್ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಲಂ 15ರ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಐವಿ ಅಥವಾ ಏಡ್ಸ್ ವ್ಯಕ್ತಿಗಳ ಹಿತಕ್ಕಾಗಿ ಯೋಜನೆಗಳನ್ನು ಕೈಗೊಳ್ಳಬೇಕು. ಕಲಂ 16 ಎಚ್ಐವಿ ಅಥವಾ ಮಕ್ಕಳ ಆಸ್ತಿಯನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕು. ಕಲಮ 17ರ ಪ್ರಕಾರ ಹೆಚ್ಐವಿ ಮತ್ತು ಏಡ್ಸ್ ಗೆ ಸಂಬಂಧಿಸಿದ ಮಾಹಿತಿ ಶಿಕ್ಷಣ ಸಂಪರ್ಕ ಸಾಧನಗಳ ಯೋಜನೆಗಳನ್ನು ಪ್ರಚಾರ ಮಾಡುವಂತಹ ಕರ್ತವ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಂದಿವೆ. ಕಲಂ 18ರ ಪ್ರಕಾರ ಹೆಚ್ಐವಿ ಅಥವಾ ಏಡ್ಸ್ ಗೆ ತುತ್ತಾದ ಮಕ್ಕಳ ಕಾಳಜಿ, ಚಿಕಿತ್ಸೆ ಹಾಗೂ ಸಹಕಾರ ನೀಡಲು ನಿರ್ದೇಶನಗಳನ್ನು ತರುವಂತಹ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಎಚ್ಐವಿ ಸೋಂಕಿತ ಗರ್ಭಿಣಿ ಮಹಿಳೆಯ ಪೂರ್ವ ಸಮ್ಮತಿ ಇಲ್ಲದೆ ಗರ್ಭಪಾತ ಮಾಡುವಂತಿಲ್ಲ. ಕಲ 39 ರ ಪ್ರಕಾರ ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ಒಬ್ಬ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಬಹಿರಂಗ ಪಡಿಸಿದರೆ ಆ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಲಾಗುವುದು.
ಒಟ್ಟಿನಲ್ಲಿ ಈ ಕಾಯ್ದೆಯ ಮುಖ್ಯ ಉದ್ದೇಶವು ಎಚ್ಐವಿ ಸೋಂಕು ಹರಡದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು, ಸೋಂಕಿತರ ಮಾನವ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸೋಂಕಿತರು ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬದುಕಲು ಪ್ರೋತ್ಸಾಹಿಸುವುದು. ಬದುಕುವ ರೀತಿ ಬದಲಿಸಿಕೊಂಡರೆ, ಪೌಷ್ಟಿಕಾಹಾರ ತೆಗೆದುಕೊಂಡರೆ, ವೈದ್ಯರ ಸಲಹೆಯಂತೆ ಎ.ಆರ್.ಟಿ. ಚಿಕಿತ್ಸೆ ಪಡೆದುಕೊಂಡರೆ, ಎಚ್ಐವಿ ಸೋಂಕಿತರು ಹೆಚ್ಚು ವರ್ಷ ಬದುಕಬಲ್ಲರು. ಸೋಂಕಿತರೊಂದಿಗೆ ತಾರತಮ್ಯವನ್ನು ಮಾಡದೆ ಅವರನ್ನು ಸಹ ನಮ್ಮೊಳಗೊಬ್ಬ ರು ಎಂದು ತಿಳಿದು, ಅವರ ನೋವಿಗೆ ಸ್ಪಂದಿಸುತ್ತಾ, ಗೌರವ ನೀಡುತ್ತಾ, ಪ್ರೀತಿ, ಮಮತೆ ಜೊತೆಗೆ ನೆರವು, ಸಹಕಾರ ಮತ್ತು ಬೆಂಬಲ ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ

ಸ್ಮಿತಾ ಅಂಗಡಿ
ಸ್ಮಿತಾ ಅಂಗಡಿ ಅವರು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಮತ್ತು ದೆಹಲಿಯ ಭಾರತೀಯ ಕಾನೂನು ಮತ್ತು ಮ್ಯಾನೇಜ್ಮೆಂಟ್ ಅಕಾಡೆಮಿಯ ಆನ್ಲೈನ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಮಿತಾ ಅವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ, ಕಾನೂನಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪಿಎಚ್ ಡಿ ಅಧ್ಯಯನವನ್ನು ನಡೆಸಿದ್ದಾರೆ. ‘ನ್ಯಾಯನಿಷ್ಠ’ದ ಕನಸುಗಳನ್ನು ಹಂಚಿಕೊಂಡವರಲ್ಲಿ ಸ್ಮಿತಾ ಕೂಡಾ ಒಬ್ಬರು.