ಕಾಯಕವೇ ಕೈಲಾಸ

ಕರಿ ಕೋಟು, ಕತ್ತಿಗೆರಡು ಬಿಳಿ ಪಟ್ಟಿ
ಏನೆಂದು ಕೇಳಿದರೆ, ಹೇಳಿದ್ದು-
‘ಅವು ಎರಡು ನಾಲಗೆಗಳಂತೆ!!’
ಮಾಡುವ ಕೆಲಸವನ್ನು ಪ್ರೀತಿಸಬೇಕು;
ಕಡಿಯುವುದಾಗಿದ್ದರೂ, ಧರ್ಮವ್ಯಾಧನಂತೆ…!!
‘ಕಕ್ಷಿದಾರನಿಗಾಗಿ ವಾದ’, ವೃತ್ತಿಧರ್ಮ..
ಎಷ್ಟೊಂದು ಬಗೆಯ ಕಕ್ಷಿದಾರರು!
ಬಡವ, ಬಲ್ಲಿದ, ಕುಡುಕ,
ಕೊಲೆಗಡುಕ, ಸಂನ್ಯಾಸಿ, ಭಿಕ್ಷುಕ!!
ಎಲ್ಲರಿಗೂ ನ್ಯಾಯ ಒದಗಿಸಲು
ಹೊರಟ ನ್ಯಾಯವಾದಿ
ಬೆಳಗ್ಗೆ ಹೊತ್ತು ಹುಟ್ಟುವಾಗಿನಿಂದ
ನಿದ್ದೆ ಅಪ್ಪಿಕೊಳ್ಳುವವರೆಗೆ,
ಕರಿಯ ಬಣ್ಣದ್ದೇ ಕಾರು-ಬಾರು!
ಇವರಿಗೆಲ್ಲ ದೇವರಂತೆ,
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ,
ಕೈಯಲ್ಲಿ ತಕ್ಕಡಿ ಹಿಡಿದ
ಗ್ರೀಸ್ ದೇಶದ ಗಾಂಧಾರಿ,
ಮನದಲ್ಲೇ ಲೆಕ್ಕ ಹಾಕುತ್ತಿದ್ದೆ..
ಲಕ್ಷ-ಲಕ್ಷ ಸಂಖ್ಯೆಯ ಧರ್ಮವ್ಯಾಧರಿಗೆಲ್ಲ
ಮೋಕ್ಷ ಕರುಣಿಸುವ ದೇವರ
ಶಕ್ತಿಯನ್ನು!!
ದೂರದಿಂದ ಹಾಡೊಂದು ತೇಲಿ ಬಂತು-
“ಇದು ಎಂಥಾ ಲೋಕವಯ್ಯಾ…”
ನಕ್ಕು,
ಕೋರ್ಟಿಗೆ ಹೋಗಲು ಎದ್ದು ನಿಂತೆ!

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.

Scroll to Top