“ಆ ದಿನಗಳು”, ಸಮಾಜ ಮತ್ತು ಕಾನೂನುಗಳು: ಒಂದಿಷ್ಟು ಚರ್ಚೆ
ನಿನ್ನೆಯ ದಿನವನ್ನು, ಅಂದರೆ ಮೇ 28 ನ್ನು ಋತುಚಕ್ರ ನೈರ್ಮಲ್ಯ ದಿನವನ್ನಾಗಿ ಇಡೀ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ಪರಿಕಲ್ಪನೆಯನ್ನು 2014ರಲ್ಲಿ ಹುಟ್ಟುಹಾಕಿದ್ದು, ಜರ್ಮನ ಮೂಲದ ಎನ್ ಜಿ ಒ, ವಾಷ್ ಯುನೈಟೆಡ್. ಹೆಣ್ಣುಮಕ್ಕಳಿಗೆ ಪ್ರಕೃತಿ ಸಹಜವಾಗಿ ಆಗುವ ಒಂದು ಪ್ರಕ್ರಿಯೆ ಋತುಚಕ್ರವಾಗಿದ್ದರೂ ಇದರ ಸುತ್ತ ಅನಾವಶ್ಯ ಕಥೆಗಳು, ನಂಬಿಕೆಗಳು, ಮಿಥ್ಯೆಗಳು ಅಥವಾ ಮೌಢ್ಯಗಳು ಹುಟ್ಟಿಕೊಂಡು ಸುಲಭಕ್ಕೆ ಬಿಡಿಸಲಾಗದ ಸಾಮಾಜಿಕ – ರಾಜಕೀಯ – ಕಾನೂನಿನ ಸಿಕ್ಕಾಗಿ ಬದಲಾಗಿದೆ. ಜನರಲ್ಲಿ ಅದರ ಅರಿವು ಮತ್ತು ಜಾಗೃತಿ ಇಲ್ಲದಿರುವ ಕಾರಣ ಇತರ ಹಲವಾರು ಸಮಸ್ಯೆಗಳು ಹುಟ್ಟಿಕೊಂಡಿವೆ. 2021ರ ಋತುಚಕ್ರ ನೈರ್ಮಲ್ಯ ದಿನದ ಘೋಷವಾಕ್ಯವು “ಕ್ರಿಯೆ ಹಾಗೂ ಋತುಚಕ್ರ ನೈರ್ಮಲ್ಯ ಮತ್ತು ಆರೋಗ್ಯದಲ್ಲಿ ವಿನಿಯೋಜನೆ” ಎಂಬುದಾಗಿದೆ. ಪ್ರತಿವರ್ಷ ಮೇ 28 ಋತುಚಕ್ರ ನೈರ್ಮಲ್ಯ ದಿನವನ್ನಾಗಿ ಆಚರಿಸುವುದಕ್ಕೆ ಕಾರಣ, ಋತುಚಕ್ರವು ಸಾಮಾನ್ಯವಾಗಿ 28 ದಿನಗಳಿಗೊಮ್ಮೆ ಹಾಗೂ ಐದು ದಿನಗಳ ಕಾಲ ಆಗುತ್ತದೆ. ಅದಕ್ಕೆ 5ನೇ ತಿಂಗಳ 28 ನೇ ತಾರೀಖಿನಂದು ಈ ದಿನವನ್ನು ಆಚರಿಸಲಾಗುವುದು.
ಇಂದಿಗೂ ಸಹ ಮುಟ್ಟು ಎಂದರೆ ಮೈಲಿಗೆ ಅಸಹ್ಯ ಎಂಬ ಅಭಿಪ್ರಾಯವಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಬಹಳ ಅಲಕ್ಷವಿದೆ. ಈ ಮುಟ್ಟಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಹಿಳೆಯರಿಗೆ ಶುಚಿತ್ವ ನಿರ್ವಹಣೆಗೆ ಅವಕಾಶ ಕಲ್ಪಿಸಿ ಕೊಡುವುದು ಬಹುಮುಖ್ಯವಾದು. ಹಾಗೆ ಮಾಡದಲ್ಲಿ ಹೆಣ್ಣುಮಕ್ಕಳು ಹಲವು ಹಕ್ಕಿನಿಂದ ವಂಚಿತರಾಗುತ್ತಾರೆ.
ಋತುಚಕ್ರಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದಾಗಿ ಹಲವಾರು ಗುಪ್ತರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ರೋಗಗಳ ಬಗ್ಗೆ ಹೇಳಿಕೊಳ್ಳಲೂ ಹೆಣ್ಣು ಮಕ್ಕಳು ಮುಜುಗರ ಪಡುವುದರಿಂದ, ಸರಿಯಾದ ಚಿಕಿತ್ಸೆ ದೊರಕದೆ ಆರೋಗ್ಯದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಭಾರತ ಸಂವಿಧಾನದ ಅನುಚ್ಛೇದ 21 ರ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿ ಆರೋಗ್ಯದ ಹಕ್ಕು ಸಹ ಅವಿಭಾಜ್ಯ ಅಂಗವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹಲವಾರು ಪ್ರಕರಣಗಳಲ್ಲಿ ತಿಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ ಋತುಮತಿಯಾದ ನಂತರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುತ್ತಾರೆ. ಆದ್ದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಇಂತಹ ಅಪಾಯಗಳನ್ನು ತಡೆಗಟ್ಟುವುದಕ್ಕಾಗಿ ಸರಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವು ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿದೆ. ಋತುಚಕ್ರ ಶುಚಿತ್ವ ನಿರ್ವಹಣೆಗೆ ಅವಶ್ಯ ಅಂಶಗಳೆಂದರೆ ಸಕಾಲಿಕ ಮಾಹಿತಿ ಮತ್ತು ಜಾಗೃತಿ, ಶೌಚಾಲಯ ಬಳಕೆ ಮತ್ತು ನೀರಿನ ಸೌಲಭ್ಯ, ಕೈಗೆಟುಕುವ ಬೆಲೆಯಲ್ಲಿ ಸುರಕ್ಷಿತ ಋತುಚಕ್ರಗಳ ಉತ್ಪನ್ನಗಳ ಲಭ್ಯತೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಚಿಂತನೆ. ಈ ನಿಟ್ಟಿನಲ್ಲಿ, ನಮ್ಮ ಕರ್ನಾಟಕದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಋತುಚಕ್ರದ ಬಗ್ಗೆ ಯಾವುದೇ ಕೀಳರಿಮೆ ಬೇಡ, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮುಕ್ತವಾಗಿ ಮಾತನಾಡಿ ನೆರವಾಗಬೇಕು ಎಂಬ ಅಂಶವನ್ನು ಹೇಳಿದೆ. ಇನ್ನು ಸರಕಾರೀ ಶಾಲೆಗಳಲ್ಲಿ, ಆರನೇ ಮತ್ತು ಏಳನೇ ತರಗತಿಯ ಹೆಣ್ಣುಮಕ್ಕಳಿಗೆ ಕಿಶೋರಿ ಎಂಬ ವಿಶೇಷ ವಿಷಯದ ಕುರಿತು ಪಠ್ಯಕ್ರಮವನ್ನು ಮಾಡಿ, ಮಕ್ಕಳಿಗೆ ಋತುಸ್ರಾವದ ಕುರಿತು ತಿಳಿಸಲಾಗುತ್ತಿದೆ. ಹಾಗೆಯೇ ಋತುಮತಿಯಾದ ಹೆಣ್ಣು ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಕೊಡುವಂತಹ ವ್ಯವಸ್ಥೆಯೂ ಸಹ ನಮ್ಮಲ್ಲಿದೆ.
ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಾಂಚಾಯತ್ ರಾಜ್ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಋತುಚಕ್ರದ ಸಮಯದಲ್ಲಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಪಂಚಸೂತ್ರಗಳನ್ನು ಸರ್ಕಾರ ನೀಡಿದೆ:
೧. ಪ್ರತಿ ೪-೬ ಗಂಟೆಗಳಿಗೊಮ್ಮೆ ಪ್ಯಾಡ್ ಗಳನ್ನು ಬದಲಾಯಿಸಬೇಕು.೨. ಋತುಚಕ್ರಗಳ ಸಮಯದಲ್ಲಿ ಬಳಸಿದ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು.
೩. ಬಹುಮುಖ್ಯವಾಗಿ ಒಳಉಡುಪುಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
೪. ಶೌಚಾಲಯಕ್ಕೆ ಹೋಗುವಾಗ ಅಥವಾ ಪ್ಯಾಡ್ ಗಳನ್ನು ಬದಲಾಯಿಸುವಾಗ ಹಾಗೂ ಬದಲಾಯಿಸಿದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು.
೫. ಪ್ರತಿದಿನ ಸ್ನಾನ ಮಾಡುತ್ತಾ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
ಬಹುಮುಖ್ಯವಾಗಿ ಋತುಚಕ್ರ ದ ಸಮಯದಲ್ಲಿ ಪೌಷ್ಟಿಕ ಆಹಾರದ ಕಡೆಗೂ ಸಹ ಗಮನ ಹರಿಸಬೇಕು.
1992 ರಲ್ಲಿ ಭಾರತ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದನಂತರ ಪಂಚಾಯಿತಿಗಳು ಹಾಗೂ ಮುನ್ಸಿಪಾಲಿಟಿಗಳಿಗೆ ಸಂವಿಧಾನಿಕ ವ್ಯವಸ್ಥೆಯ ಸ್ಥಾನಮಾನಗಳನ್ನು ನೀಡಲಾಯಿತು. ಸಂವಿಧಾನದ ಭಾಗ IX ರಲ್ಲಿ ಉಲ್ಲೇಖಿಸಿದ ಅನುಚ್ಛೇದ 243G ಅಡಿಯಲ್ಲಿ ನೀಡಿದ ಪಂಚಾಯತ್-ಗಳಿಗೆ ಇರುವ ಅಧಿಕಾರಗಳು ಮತ್ತು ಜವಾಬ್ದಾರಿಗಳು ಅಡಿಯಲ್ಲಿ ಅನುಸೂಚಿ ಹನ್ನೊಂದರಲ್ಲಿ ಸೂಚಿಸಿದ ಒಟ್ಟು 29 ವಿಷಯಗಳಲ್ಲಿ ಆರೋಗ್ಯ, ನೈರ್ಮಲ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವೂ ಒಂದು. ಇದರ ಪ್ರಕಾರ ತಳಮಟ್ಟದಲ್ಲಿ ಋತುಚಕ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವದು, ತಿಂಗಳ ಸ್ರಾವದ ಕಸ ವಿಲೇವಾರಿ ಮಾಡುವ ಪರಿಸರ ಸ್ನೇಹಿ, ಸಮರ್ಥ ವಿಧಾನಗಳನ್ನು ಕಂಡು ಹಿಡಿದು ಜಾರಿಗೆ ತರುವುದು ಮುಂತಾದ ವಿಚಾರಗಳ ಪ್ರಾಥಮಿಕ ಜವಾಬ್ದಾರಿ ಈ ಸ್ಥಳೀಯ ಸಂಸ್ಥೆಗಳದ್ದು. ಭಾಗ IX A ಅಡಿಯಲ್ಲಿ ಉಲ್ಲೇಖಿಸಿದ 243 W ಮುನ್ಸಿಪಾಲಿಟಿ ಗಳಿಗೂ ಇದೇ ರೀತಿಯ ಅಧಿಕಾರವನ್ನು ನೀಡಿದೆ. ಇದಕ್ಕೆ ಪೂರಕವಾಗಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಋತುಚಕ್ರ ನೈರ್ಮಲ್ಯಕ್ಕಾಗಿ ವಿಶೇಷ ಯೋಜನೆಯೊಂದನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ತಂದಿದೆ.
ಇನ್ನು ಋತುಚಕ್ರದ ಸಮಯದಲ್ಲಿ ಮಹಿಳೆಯರು ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ಅನುಭವಿಸುವುದರಿಂದ ಐದು ದಿನಗಳಲ್ಲಿ ಕನಿಷ್ಠ ಎರಡು ದಿನಗಳ ರಜೆಯನ್ನು ದುಡಿಯುವ ಮಹಿಳೆಯರಿಗೆ ನೀಡಬೇಕೆಂದು ಚರ್ಚೆ ನಡೆಯುತ್ತಲೇ ಇದೆ. ಜಪಾನ್ ದೇಶವು 1947 ರಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಎರಡು ದಿನಗಳ ಕಾಲ ರಜೆಯನ್ನು ನೀಡುವಂತಹ ಕಾನೂನನ್ನ ತಂದಿದೆ. ಹಾಗೆಯೇ ದಕ್ಷಿಣ ಕೊರಿಯಾದಲ್ಲಿ ಋತುಚಕ್ರದ ರಜೆಯೆಂದು 2001ರಿಂದ ಮಹಿಳೆಯರಿಗೆ ತಿಂಗಳಲ್ಲಿ ಎರಡು ದಿನ ರಜೆಯನ್ನು ನೀಡಲಾಗುತ್ತಿದೆ. ಅದರಂತೆ ಪ್ರಸಿದ್ಧ ಕಂಪನಿಯಾದ “ನೈಕ್” ಇದೇ ತರಹದ ಪಾಲಿಸಿಯನ್ನು ತನ್ನ ಕಂಪನಿಯಲ್ಲಿ ಅಳವಡಿಸಿಕೊಂಡಿದೆ. ಹಾಗೆಯೇ ಬಿಹಾರ ರಾಜ್ಯವು 1992ರಿಂದ ದುಡಿಯುವ ಮಹಿಳೆಯರಿಗೆ ಋತುಚಕ್ರ ಸಮಯದಲ್ಲಿ ಎರಡು ದಿನಗಳ ರಜೆಯನ್ನು ನೀಡುತ್ತ ಬಂದಿದೆ. ಎರಡು ದಿನಗಳಂದು ಕೆಲಸಕ್ಕೆ ಹೋಗಬೇಕು ಇಲ್ಲವೋ ಎಂಬುದು ಮಹಿಳೆಯರಿಗೆ ಬಿಟ್ಟ ವಿಷಯವಾಗಿದೆ. ಹಾಗೆಯೇ ಕೇರಳದ ಹೆಣ್ಣುಮಕ್ಕಳ ಶಾಲೆಯೊಂದು 1912ರಿಂದ ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ರಜೆಯನ್ನು ನೀಡುತ್ತಾ ಬಂದಿದೆ.
ನಿನೊಂಗ್ ಏರಿಂಗ್ ಎಂಬ ಲೋಕಸಭೆಯಲ್ಲಿ ಅರುಣಾಚಲ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಸಂಸತ್ತಿನ ಸದಸ್ಯರು 2018ರಲ್ಲಿ ಋತುಚಕ್ರ ಪ್ರಯೋಜನ ಎಂಬ ಖಾಸಗಿ ಮಸೂದೆಯನ್ನ ಸಂಸತ್ತಿನ ಮುಂದೆ ಮಂಡಿಸಿದರು. ಈ ಮಸೂದೆಯು ಸರ್ಕಾರ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಎಲ್ಲ ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಎರಡು ದಿನಗಳ ರಜೆಯನ್ನು ನೀಡುವ ಮುಖ್ಯ ಆಶಯವನ್ನು ಹೊಂದಿತ್ತು. ಈ ಮಸೂದೆಯ ಸೌಲಭ್ಯಗಳು ಸರ್ಕಾರದಿಂದ ಗುರುತಿಸಲ್ಪಟ್ಟ ಶಾಲೆಗಳ ಎಂಟನೇ ತರಗತಿ ಹಾಗೂ ಅದರ ಮುಂದಿನ ಹಂತದ ತರಗತಿಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೂ ಸಹ ಅನ್ವಯವಾಗುತ್ತದೆ. ಆ ಮಸೂದೆ ಇದುವರೆಗೆ ತಿರಸ್ಕರಿಸಲ್ಪಟ್ಟಿತೋ ಅಥವಾ ಇನ್ನೂ ಅನುಮೋದನೆಗೆ ಬಾಕಿ ಉಳಿದಿದೆಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಇಂತಹ ಪ್ರಸ್ತಾವನೆಗಳು ಹಲವಾರು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆಗೆ ಇತ್ತೀಚಿಗೆ ಬರುತ್ತಲಿವೆ. ಇಂತಹ ಮಸೂದೆಗಳು ಕಾಯ್ದೆಯಾದರೆ ದುಡಿಯುವ ಸ್ಥಳಗಳಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಹಾಗೂ ವಿಶ್ರಾಂತಿಯ ಹಕ್ಕು ಸಿಕ್ಕಂತಾಗುತ್ತದೆ. ಆದರೆ ಈ ಮಸೂದೆಯ ವಿರುದ್ಧ ಅದೆಷ್ಟೋ ಮಹಿಳೆಯರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಅವರ ಪ್ರಕಾರ ದುಡಿಯುವ ಸ್ಥಳಗಳಲ್ಲಿ ಈಗಾಗಲೇ ಅವರ ವಿರುದ್ಧ ತಾರತಮ್ಯವಾಗುತ್ತಿದೆ. ಈ ರೀತಿಯ ಹೊಸ ಸೌಲಭ್ಯದಿಂದ ಮತ್ತಷ್ಟು ತಾರತಮ್ಯಕ್ಕೆ ಒಳಗಾಗಬಹುದು ಹಾಗೂ ಅವರಿಗೆ ಕಡಿಮೆ ಸಂಬಳ ಅಥವಾ ಪದೋನ್ನತಿಯ ಸಮಯದಲ್ಲಿ ಕಡಿಮೆ ಅವಕಾಶಗಳು ಹಾಗೂ ಮಂಡಳಿಯ ಸಭೆಗಳಲ್ಲಿ ಕಡಿಮೆ ಭಾಗವಹಿಸುವಿಕೆ ಮುಂತಾದ ತೊಂದರೆಗಳನ್ನು ಅನುಭವಿಸಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ವ್ಯಾಪಕ ಚರ್ಚೆಯ ಅಗತ್ಯವಂತೂ ಇದೆ.
ಇನ್ನು ಋತುಸ್ರಾವ ಮತ್ತು ರಜಸ್ವಲೆಯ ಹೆಂಗಸರ ಕುರಿತು ದೇಶದಲ್ಲಿ ಅತಿ ಹೆಚ್ಚಿನ ಸದ್ದು ಮಾಡಿತ್ತು ಶಬರಿಮಲೆ ದೇವಸ್ಥಾನ ಪ್ರಕರಣ. ಸರ್ವೋಚ್ಚ ನ್ಯಾಯಾಲಯ ಋತುಮತಿಯಾಗುವ ವಯಸ್ಸಿನ ಹೆಂಗಸರ ದೇವಸ್ಥಾನದಲ್ಲಿ ಬರಗೊಡದಿರುವುದು ತಪ್ಪೆಂದಿದ್ದರೂ, ಈಗ ಆ ತೀರ್ಪಿನ ಪುನಃ ಪರಿಶೋಧನೆಗೆ ಇನ್ನೂ ಹೆಚ್ಚಿನ ನ್ಯಾಯಾಧಿಪರಿರುವ ಪೀಠಕ್ಕೆ ಅದನ್ನು ಬಿಡಲಾಗಿದೆ. ಈ ತೀರ್ಪು ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ದೇಶದ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿಯೂ ಋತುಸ್ರಾವದ ದಿನಗಳಲ್ಲಿ ಮಹಿಳೆಯರು ಒಂದೋ ತಾವಾಗಿಯೇ ದೂರ ಇರುತ್ತಾರೆ ಇಲ್ಲವೇ, ಕುಟುಂಬ ಅಥವಾ ಸಮುದಾಯ ಅವರು ದೇವಸ್ಥಾನ ಪ್ರವೇಶಿಸಬಾರದೆಂದು ಅಪೇಕ್ಷಿಸುತ್ತದೆ. ಇಂತಹ ಕಟ್ಟುಪಾಡುಗಳು ಪರೋಕ್ಷವಾಗಿ ಸಮಾಜದಲ್ಲಿ ಮುಟ್ಟಿನ ಬಗ್ಗೆ ಕೀಳರಿಮೆ ಅಥವಾ ಮೌಢ್ಯವನ್ನು ಹುಟ್ಟು ಹಾಕುವುದಕ್ಕೆ ಇಂಬು ನೀಡುತ್ತದೆ ಎಂದರೆ ಅದು ಸಂಪೂರ್ಣ ಸುಳ್ಳಲ್ಲ. ಆ ನಿಟ್ಟಿನಲ್ಲಿ ಶಬರಿಮಲೆ ತೀರ್ಪು ಭಾರತದ ಹೆಂಗೆಳೆಯರ ನಿತ್ಯಶೋಕಕ್ಕೆ ಒಂದು ಹೊಸ ಭಾಷ್ಯ ಬರೆಯುತ್ತದೆಯೇ? ಕಾದು ನೋಡಬೇಕಾಗಿದೆ.
ಇತ್ತೀಚಿನ ಬ್ಲಾಗ್‌ಗಳು
ಲೇಖಕರ ಪರಿಚಯ

ಸ್ಮಿತಾ ಅಂಗಡಿ
ಸ್ಮಿತಾ ಅಂಗಡಿ ಅವರು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಮತ್ತು ದೆಹಲಿಯ ಭಾರತೀಯ ಕಾನೂನು ಮತ್ತು ಮ್ಯಾನೇಜ್ಮೆಂಟ್ ಅಕಾಡೆಮಿಯ ಆನ್ಲೈನ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಮಿತಾ ಅವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ, ಕಾನೂನಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪಿಎಚ್ ಡಿ ಅಧ್ಯಯನವನ್ನು ನಡೆಸಿದ್ದಾರೆ. ‘ನ್ಯಾಯನಿಷ್ಠ’ದ ಕನಸುಗಳನ್ನು ಹಂಚಿಕೊಂಡವರಲ್ಲಿ ಸ್ಮಿತಾ ಕೂಡಾ ಒಬ್ಬರು.