ಉಪನ್ಯಾಸ ಮಾಲಿಕೆ-1- “ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ”- ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ ಹೆಗ್ಡೆ

ಉಪನ್ಯಾಸಕರು: ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀಯುತ ಸಂತೋಷ ಹೆಗ್ಡೆ

ಭಾರತ ದೇಶದ 70ಕ್ಕು ಹೆಚ್ಚು ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಉತ್ತಮ ಆಡಳಿತ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಹೊರೆತು ಸಫಲರಾಗಿಲ್ಲ, ಸಂವಿಧಾನ ರಚನೆ ಸಂದರ್ಭದಲ್ಲಿನ ಕೆಲ ಲೋಪಗಳು ಇಂದಿನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಹಾಗೂ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಎನ್‍ಎಸ್‍ಎಸ್ ಘಟಕವು ಆಯೋಜಿಸಿದ್ದ 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿಚಾರ ಕಲರವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಮೊದಲ ಉಪನ್ಯಾಸದ ಮಾಲಿಕೆಯ “ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ” ಕುರಿತು ಮಾತನಾಡಿದ ಅವರು, ಸಂವಿಧಾನದ ಮೂರು ಅಂಗಳಲ್ಲಿಯೂ ನೂನ್ಯತೆಗಳಿರುವುದರಿಂದ ಉತ್ತಮ ಆಡಳಿತ ಎಷ್ಟರ ಮಟ್ಟಿಗೆ ನಿರೀಕ್ಷಿಸಲು ಸಾಧ್ಯವಾಗುತ್ತದೆ, ಸಂವಿಧಾನ ರಚನೆ ಸಂದರ್ಭದಲ್ಲಿನ ಹಿರಿಯರು ಜನಪ್ರತಿನಿಧಿಗಳಾಗಲು ವಿದ್ಯಾರ್ಹತೆಯನ್ನು ನಿರಾಕರಿಸಿದ್ದರ ಪರಿಣಾಮ ದೇಶವನ್ನು ಆಡಳಿತ ನಡೆಸುವವರು ಯಾರಾಗುತ್ತಿದ್ದಾರೆಂದು ಬೇರೆ ಹೇಳಬೇಕಿಲ್ಲ ಎಂದರು.

ಎಲೆಕ್ಷನ್ ವಾಚ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಕಳೆದ ಚುನಾವಣೆಗೆ ಹೋಲಿಸಿದರೆ ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಜನಪ್ರತಿನಿಧಿಗಳಾದ ಪ್ರಮಾಣ ಶೇ 7.2ರಷ್ಟು ಹೆಚ್ಚಳವಾಗಿದೆ. ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಯಾವ ರೀತಿ ಆಡಳಿತ ಮಾಡಲು ಸಾಧ್ಯ? ಸಭೆಯಲ್ಲಿ ಯಾವುದೇ ಗಂಭೀರವಾದ ವಿಚಾರಗಳಾಗಲಿ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಅನೇಕ ಮಸೂದೆಗಳು ಸರಿಯಾಗಿ ಚರ್ಚೆಗಳಿಗೆ ಒಳಪಡದೇ ಪಾಸ್ ಆಗುತ್ತಿರುವುದು ಸದ್ಯದ ಬೇಜವಾಬ್ದಾರಿ ಆಡಳಿತಕ್ಕೆ ಕೈಗನ್ನಡಿ. ಉತ್ತಮ ವ್ಯಕ್ತಿತ್ವ ಇಲ್ಲದೇ ಇರುವ ವ್ಯಕ್ತಿಗಳಿಂದ ಉತ್ತಮ ಆಡಳಿತ ನಿರೀಕ್ಷಿಸುವುದೇ ತಪ್ಪು ಎಂಬಂತಾಗಿದೆ ಎಂದು ನುಡಿದರು.

ಕಾರ್ಯಾಂಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶಾಸಕಾಂಗದ ಕೈವಾಡವಿಲ್ಲದೇ ಒಬ್ಬ ಅಧಿಕಾರಿ ನೇಮಕವಾಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಪಬ್ಲಿಕ್ ಸರ್ವಿಸ್ ಕಮಿಷನ್‍ನ ಮುಖ್ಯಸ್ಥರ ಬಗ್ಗೆ ಎಷ್ಟೆಷ್ಟು ಅಪರಾಧ ಪ್ರಕರಣಗಳು ದಾಖಲಿವೆ, ಹಾಗೆಯೆ ಕೆಲ ಸದಸ್ಯರ ಮೇಲಿನ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದನ್ನು ಗಮನಿಸಿದರೆ ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನಿಸುತ್ತಿದೆ. 1985ರಲ್ಲಿ ಆಗಿನ ಪ್ರಧಾನಿ ದಿ. ರಾಜೀವ ಗಾಂಧಿಯವರು ಸರ್ಕಾರದ ಯೋಜನೆಯ 1ರೂ ಹಣದಲ್ಲಿ ಕಾಯಾನುಷ್ಟಾನಕ್ಕೆ ತಲುಪುವುದು ಕೇವಲ 15ಪೈಸೆ ಮಾತ್ರ ಎಂದು ನುಡಿದುದ್ದನ್ನು ನೆನಪಿಸಿಕೊಂಡು ಶ್ರೀಯುತ ಸಂತೋಷರವರು, ಪ್ರಧಾನಿಯವರೇ ಹಣ ಮಾಯಾವಾಗುತ್ತಿರುವ ಬಗ್ಗೆ ಸ್ಪಷ್ಟನೆ ಕೊಡುವುದಾದರೆ ಉಳಿದವರ ಧೋರಣೆಗಳು ಯಾವ ರೀತಿ ಇರಲು ಸಾಧ್ಯ? ಎಂದು ಪ್ರಶ್ನಿಸಿದರು.

ದೇಶದಲ್ಲಿನ ಕೆಲ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಂಕಿ ಅಂಶಗಳನ್ನು ಅವಲೋಕಿಸಿದರೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಕಂಡು ಬರುತ್ತದೆ. 50ರ ದಶಕದಲ್ಲಿನ 52 ಲಕ್ಷ ಮೊತ್ತದ ಜೀಪ್ ಹಗರಣ (ಹೊರದೇಶದಿಂದ ಯೋಧರಿಗೆ ಜೀಪು ಖರೀದಿ)ದ ಜೊತೆಗೆ ಬ್ಯಾಂಕಿಂಗ್ ವಲಯದಲ್ಲಿ ಹಗರಣಗಳು ಬಯಲಿಗೆ ಬಂದವು. 60ರ ದಶಕದಲ್ಲಿ 64 ಕೋಟಿ ಹಣದ ಭೋಪರ್ಸ್ ಹಗರಣ(ಶಸ್ತ್ರಾಸ್ತ್ರಗಳ ಖರೀದಿ)ವು ದೇಶದಲ್ಲಿ ಭಾರೀ ಸಂಚಲಕ್ಕೆ ಕಾರಣವಾಗಿತ್ತು. 70ರಲ್ಲಿ 70,000 ಕೋಟಿ ಮೊತ್ತದ ಕಾಮನ್‍ವೇಲ್ತ್ ಹಗರಣದ ಬಗ್ಗೆ ಸಿಎಜಿ ವರದಿಮಾಡಿತ್ತು. ಹಾಗೆಯೇ 2ಜಿ ತರಂಗಾಂತರ ಪ್ರಕರಣದ ಮೊತ್ತವು 7,70,000 ಕೋಟಿ
ಮೊತ್ತದ್ದಾಗಿತ್ತು. ನಂತರದಲ್ಲಿ ಕಲ್ಲಿದ್ದಲು ಖರೀದಿ ಹಗರಣವು ಕೂಡಾ 1,86,000 ಕೋಟಿಗಳಷ್ಟಾಗಿತ್ತು. ಇಂತಹ ಹಗರಣಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇದ್ದು, ಭ್ರಷ್ಟ ಮತ್ತು ದುರಾಡಳಿತ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಮೊತ್ತದ ಹಣ ಸೋರಿಕೆಯಾಗುತ್ತರುವುದು ಕಣ್ಮುಂದೆ ಇರುವಾಗ ಉತ್ತಮ ಆಡಳಿತ ಬರೀ ನಿರೀಕ್ಷೆಯಾಗಿಯೇ ಉಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಂಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಸಕಾಂಗ, ಕಾಯಾಂಗದ ಮೇಲೆ ಜನರ ವಿಶ್ವಾಸವಿಟ್ಟಿಲ್ಲ. ಆದರೆ ಇನ್ನೂ ಸ್ವಲ್ಪ ನ್ಯಾಯಾಂಗದ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಆದರೆ ನ್ಯಾಯಾಂಗದಲ್ಲಿಯೂ ಕೆಲ ದೋಷಗಳಿವೆ. ಕೆಲವೊಂದು ಪ್ರಕರಣಗಳು 40-50 ವರ್ಷಗಳ ವರೆಗೆ ಇತ್ಯರ್ಥಕಾಣದೇ ಮುಂದುವರೆಸುತ್ತಾ ಸಾಗಿದರೆ ಕಕ್ಷಿದಾರರ ಗತಿಏನು? ನಮ್ಮಲ್ಲಿ ಹಂತಹಂತವಾಗಿ ಕೋರ್ಟ್‍ಗಳನ್ನು ನಿರ್ಮಿಸಿದ್ದಾರೆ. ಅವುಗಳು ವಿಳಂಬಕ್ಕೆ ಕಾರಣವಾಗುತ್ತಿವೆ ಹೊರತು ತ್ವರಿತ ನ್ಯಾಯ ನಿರ್ಣಯಕ್ಕೆ ಸಾಧ್ಯವಾಗುವುದಿಲ್ಲ,

ಮೂರು ಅಂಗಗಳಲ್ಲಿ ಪ್ರಾಮಾಣಿಕತೆ ಹುಡುಕುವುದು ಕಷ್ಟಸಾಧ್ಯ. ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ದುರಾಸೆ, ದುರಾಸೆಗೆ ಸಮಾಜದ ಕಾರಣ, ಮೊದಲು ಪ್ರಾಮಾಣಿಕರನ್ನು ಮಾತ್ರ ಗೌರವಿಸುತ್ತಿದ್ದರು. ಆದರೆ ಈಗ ಭ್ರಷ್ಟರನ್ನು, ವಂಚಿಸಿದುಡ್ಡು ಮಾಡಿದವರನ್ನು ಮಾತ್ರ ಗೌರವಿಸುವ ಧೋರಣೆಗಳು ಬೆಳೆದುಬಿಟ್ಟಿದೆ, ಈ ಕಾರಣದಿಂದಲೇ ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಪದೇ ಪದೇ ಹೇಳುತ್ತಿದ್ದೇನೆ. ಭ್ರಷ್ಟಾಚಾರವು ಇಂದು ನಿನ್ನೆಯದಲ್ಲ, ಸುಮಾರು ವರ್ಷಗಳಿಂದಲೂ ಬಂದಿರುವಂತಹದು, ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ ನಿಯಂತ್ರಣಕ್ಕೆ ತರಬಹುದಾಗಿದೆ. ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಎರಡು ಮೌಲ್ಯಗಳನ್ನು ತಿಳಿಸಿಕೊಡಬೇಕು ಹಾಗೆಯೇ ಅದೇ ರೀತಿ ಬೆಳೆಯುವಂತೆ ನೋಡಿಕೊಳ್ಳಬೇಕು ತೃಪ್ತಿ ಹಾಗೂ ಮಾನವೀಯತೆ ಅವೇ ಎರಡು ಗುಣಗಳು. ಇವುಗಳನ್ನು ರೂಢಿಸಿಕೊಂಡರೆ ದುರಾಸೆ ಮೂಡುವುದಿಲ್ಲ, ಇದ್ದುದರಲ್ಲಿಯೇ ತೃಪ್ತಿಪಡುವ ಗುಣ ಹಾಗೂ ಮಾನವೀಯತೆಯಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ. ಪ್ರಶಸ್ತಿಯ ಜೊತೆಗೆ ಒಂದು ಕೋಟಿ ಮೊತ್ತದ ಹಣವನ್ನು ದೇಶದ ಯೋಧರಿಗೆ ಸಮರ್ಪಿಸಿದ್ದನ್ನು ಸ್ಮರಿಸಿದ ಗೌರವಾನ್ವಿತ ಹೆಗ್ಡೆಯವರು, ತಾವು ನಿವೃತ್ತಿ ವೇತನದಲ್ಲಿಯೇ ನೆಮ್ಮದಿಯ ಜೀವನ ಕಳೆಯುತ್ತಿದ್ದೇನೆ, ನನಗೆ ಹೆಚ್ಚಿನ ಹಣದ ಅವಶ್ಯಕತೆಯಿಲ್ಲ, ತೃಪ್ತಿಯ ಬದುಕು ನನ್ನದಾಗಿದೆ, ಮತ್ತು ಯುವಕರು ಬದಲಾಗಲು ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕಪಾಲ್ ಮಸೂದೆ ಜಾರಿಗೆ ಬರುವುದು ಮುಖ್ಯವಲ್ಲ. ಆ ಸಂಸ್ಥೆಗೆ ಕಲ್ಪಿಸಿಕೊಡುವ ಅಧಿಕಾರ ಹಾಗೂ ನೇಮಕಗೊಳ್ಳುವ ಅಧಿಕಾರಿಯ ಪ್ರಮಾಣಿಕತೆ ಮುಖ್ಯವಾಗಿದೆ. ಪ್ರಮಾಣಿಕವಾಗಿ ಆಸ್ತಿ ಎಷ್ಟೇ ಸಂಪಾದನೆ ಮಾಡಿದರೂ ತಪ್ಪಲ್ಲ, ಅನ್ಯಾಯವಾಗಿ ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು ಅಕ್ರಮವಾಗಿ ಸಂಪಾದನೆ ಮಾಡಿದ ಆಸ್ತಿಯಿಂದ ಯಾವುದೇ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ, ಕೆಲ ಅಧಿಕಾರಿಗಳು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಭ್ರಷ್ಟಾಚಾರದ ಉದ್ದೇಶವಿರುತ್ತದೆ. ಇದಕ್ಕೆ ಸಾಮಾಜವೇ ಪ್ರೇರಣೆ, ಅನ್ಯಾಯದ ಮಾರ್ಗಕ್ಕೆ ದಾರಿಮಾಡಿಕೊಡುವವರು ನಾವುಗಳಾಗಿರತ್ತೇವೆ. ಭವಿಷ್ಯತ್ತಿನಲ್ಲಿ ಬಂಡವಾಳಶಾಹಿಗಳಿಂದಾಗಲಿ, ಪುರೋಹಿತಶಾಹಿಗಳಿಂದಾಗಲಿ ದೇಶಕ್ಕೆ ಯಾವುದೇ ತೊಂದರೆಗಳಿಲ್ಲ, ತಮ್ಮ ತಮ್ಮ ಕರ್ತವ್ಯನಿಷ್ಠೆ, ಪ್ರಮಾಣಿಕತೆ ಹಾಗೂ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಣೆಯಿದ್ದರೆ ಅಪಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿ ಡಾ.ಕೆ. ಆರ್. ವೇಣುಗೋಪಾನ್ಅ ವರು ಉಪನ್ಯಾಸ ಮಾಲಿಕೆ ಉದ್ದೇಶದ ಕುರಿತು ಹೇಳಿದರು. ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಎನ್‍ಎಸ್‍ಎಸ್ ಘಟಕದ ಅಧಿಕಾರಿ ಪ್ರತಾಪ ಲಿಂಗಯ್ಯ, ವಿವಿಯ ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ. ಸತೀಶಗೌಡ ಮಾತನಾಡಿದರು.

ವರದಿ: ಉಮಾಶಂಕರ ಹಿರೇಮಠ, ಯಲಬುರ್ಗಾ-583236

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು, ಮಾಹಿತಿಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಹೊರಟಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ಉಮಾಶಂಕರ ಹಿರೇಮಠ

ಉಮಾಶಂಕರ ಹಿರೇಮಠರವರು ಪ್ರಜಾವಾಣಿ ದಿನಪತ್ರಿಕೆಯ ಯಲಬುರ್ಗಾ ತಾಲ್ಲೂಕು ವರದಿಗಾರರಾಗಿ ೧೭ ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

Scroll to Top