ಉಪನ್ಯಾಸ ಮಾಲಿಕೆ – 2 : “ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ಪಾತ್ರ” – ನಟ ಉಪೇಂದ್ರ

ಉಪನ್ಯಾಸಕರು: ಶ್ರೀ ಉಪೇಂದ್ರ, ನಟ, ನಿರ್ದೇಶಕ ಮತ್ತು ಪ್ರಜಾಕೀಯ ಪಕ್ಷದ ಸಂಸ್ಥಾಪಕರು

ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜಿಸಿದ 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿಚಾರ ಕಲರವದಲ್ಲಿ ಎರಡನೇ ದಿನದ ವಿಷಯ, “ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಯುವಕರ ಪಾತ್ರ” ಮಾತನಾಡಿದ್ದು ಹೆಸರಾಂತ ನಟ, ನಿರ್ದೇಶಕರಾದ ಶ್ರೀ ಉಪೇಂದ್ರರವರು. 2018ರಲ್ಲಿ ಪ್ರಜಾಕೀಯ ಪಕ್ಷವನ್ನು ಸ್ಥಾಪನೆ ಮಾಡಿದ ಇವರು ರಾಜಕೀಯ ರಂಗದಲ್ಲಿ ಮಹಾತ್ವಾಕಾಂಕ್ಷೆಯ ಕನಸುಗಳನ್ನು ಜನರ ಮುಂದಿಡುವಲ್ಲಿ ಇತ್ತೀಚಿಗೆ ಜನರ ಗಮನ ಸೆಳೆದಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸುತ್ತಾ ಇವತ್ತು ಕೂಡ ನಾನೊಬ್ಬ ವಿದ್ಯಾರ್ಥಿಯೇ ಎಂದು ಹೇಳಿದ ಅವರು, ರಾಜಕೀಯ ಕ್ಷೇತ್ರ ಎನ್ನುವುದು ರಾಜಕಾರಣಿಗಳನ್ನು ಬೆಳೆಸುವುದಕ್ಕಿರುವುದಲ್ಲ, ಪ್ರಜೆಗಳನ್ನು ಬೆಳೆಸುವುದಕ್ಕೆ ಎಂದು ಹೇಳಿದರು. ಸರಕಾರವು ಜನರ ಅಭಿಪ್ರಾಯದ ಮೇಲೆ ನಡೆಯಬೇಕು, ಇದನ್ನು ಮಾಡಲು ತಂತ್ರಜ್ಞಾನದ ಮೂಲಕ ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ, ಈ ನಿಟ್ಟಿನಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಮುಂದುವರಿದು ಮಾತನಾಡುತ್ತಾ, ಜನಗಳಿಗೆ ವಿರುದ್ಧವಾಗಿ ಯಾವುದೇ ರೀತಿಯ ಕೆಲಸಗಳನ್ನು ಜನಪ್ರತಿನಿಧಿಯು ಮಾಡುತ್ತಿದ್ದರೆ ಅಂತಹ ಪ್ರತಿನಿಧಿಯನ್ನು ಕೆಳಗಿಳಿಸುವಂತಹ ಕಾಯ್ದೆ ಇರಬೇಕು ಎಂದು ಹೇಳಿದರು. ಸರಿಯಾಗಿ ಕೆಲಸ ಮಾಡಿದಂತಹ ಜನಪ್ರತಿನಿಧಿಗಳಿಗೆ ಪ್ರಮೋಷನ್ ಕೊಡಬೇಕೆಂದು ಕೂಡ ಅಭಿವ್ಯಕ್ತ ಪಡಿಸಿದರು.

ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಪೂರೈಸದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅಂತಹ ಪ್ರಣಾಳಿಕೆಗಳು ಕೋರ್ಟಲ್ಲಿ ರಜಿಸ್ಟರ್ ಆಗಬೇಕು, ಹಾಗೆ ಜನಗಳ ಬೇಡಿಕೆಗೆ ಅನುಗುಣವಾಗಿ ಕಾನೂನನ್ನು ಜಾರಿಗೆ ತರಬೇಕು ಎಂದು ಸಲಹೆ ಕೊಟ್ಟರು. ನಾಯಕರಿಗಿಂತ ಹೆಚ್ಚಾಗಿ ಜನರಿಗೆ ಯಾವ ರೀತಿಯ ಕಾನೂನು ಬೇಕು ಎಂದು ಗೊತ್ತಿರುತ್ತದೆ, ಯಾವುದೇ ಯೋಜನೆಯನ್ನು ತರಬೇಕಾದರೆ ಆ ಯೋಜನೆಗೆ ಜನರು ಒಪ್ಪಿಗೆ ಕೊಡಲೇಬೇಕು ಮತ್ತು ಒಪ್ಪಿಗೆ ಕೊಡದಿದ್ದರೆ ಯೋಜನೆ ಜಾರಿಗೆ ತರುವಂತೆ ಇಲ್ಲ ಎಂಬಂತಹ ವ್ಯವಸ್ಥೆ ಬರಬೇಕು ಎಂದು ಹೇಳಿದರು. ಯಾರ ಆಶ್ವಾಸನೆಗಳನ್ನೂ ನಂಬಬೇಡಿ ಎಂದು ಜನರನ್ನು ಎಚ್ಚರಿಸಿದ ಉಪೇಂದ್ರ ಅವರು “ಜನರ ವಿಚಾರ, ಅಭಿಪ್ರಾಯಗಳೇ ಪ್ರಮುಖ ನಾಯಕರು”, ಹಾಗಾಗಿ ಜನನಾಯಕರು ಹೋಗುತ್ತಿರುವ ದಾರಿ ತಪ್ಪಿದರೆ ಜನಗಳ ಅಭಿಪ್ರಾಯವನ್ನು ಪಡೆದು ಮುಂದುವರೆಯಬೇಕು ಎಂದು ಹೇಳಿದರು.

ಮಂಡಿಸಿ ದಂತಹ ಬಜೆಟ್ ನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದೆ ಎನ್ನುವುದನ್ನು ಮುಕ್ತವಾಗಿ ತೆರೆದಿಡಬೇಕು ಎಂದೂ ಅವರು ಆಗ್ರಹಿಸಿದರು. ಅಷ್ಟೇ ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಯಂತಹ ಕಾಯ್ದೆಗಳನ್ನು ಜನರು ಹೆಚ್ಚಿನ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಇಂತಹ ಕೆಲಸಗಳು ಒಬ್ಬ ವ್ಯಕ್ತಿಯಿಂದ ಎಲ್ಲವು ಸಾಧ್ಯವಿಲ್ಲ ಎಲ್ಲರೂ ತೊಡಗಿಕೊಳ್ಳಬೇಕು ಎಂದೂ ಸೂಚಿಸಿದರು.

ಈಚಿನ ದಿನಗಳಲ್ಲಿ ಕ್ರಿಮಿನಲ್ ಪ್ರಕರಣಗಳು ಇರುವಂತಹ ವ್ಯಕ್ತಿಗಳಿಗೆ ಪಕ್ಷಗಳು ಟಿಕೆಟ್ ನೀಡುತ್ತವೆಯಲ್ಲ, ಅದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬ ಬಗ್ಗೆ ಪ್ರಶ್ನೆಗೆ, ಆರೋಪಿಗಳು ನಿಲ್ಲಬಹುದೇ ವಿನಾ ಅಪರಾಧಿಗಳಲ್ಲ ಎಂದು ಸ್ಪಷ್ಟ ಪಡಿಸಿದರು. ಅದೇ ರೀತಿ ಆರೋಪವಿರುವವರು ಚುನಾವಣೆಗೆ ನಿಲ್ಲಬಾರದು ಎಂದರೆ ಎಲ್ಲರ ಮೇಲೂ ಆರೋಪ ಮಾಡುತ್ತಾ ಹೋಗುತ್ತಾರೆ, ಆಗ ಯಾರೂ ಚುನಾವಣೆಯಲ್ಲಿ ನಿಲ್ಲಲು ಸಾಧ್ಯವೇ ಇರುವುದಿಲ್ಲ ಎಂದು ನುಡಿದರು.

ಪ್ರಜಾಕೀಯ ಪಕ್ಷದಲ್ಲಿ ಯುವಕರ ಪಾತ್ರ ಏನು ಕೇಳಿದಾಗ ನಾನು ಎನ್ನುವರು ಪಕ್ಷಕ್ಕೆ ಬರಲೇಬೇಡಿ, ಕೇವಲ ಸೇವಕರಾಗಿ ಕೆಲಸ ಮಾಡುತ್ತೇನೆ ಎನ್ನುವುದು ಮಾತ್ರ ಈ ಪಕ್ಷಕ್ಕೆ ಮುಕ್ತವಾಗಿದೆ ಎಂದು ಹೇಳಿದರು.

ಆಳುವವರ ವಿದ್ಯಾರ್ಹತೆಯ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಕೊಟ್ಟಂತಹ ಈ ಮಹಾನ್ ಸಂವಿಧಾನದಲ್ಲಿ ದೇಶವಾಳುವವರು ವಿದ್ಯೆಯನ್ನು ಹೊಂದಿದವನಾಗಿರಲೇಬೇಕೆಂದು ಹೇಳದೆ ಇದ್ದುದ್ದು ಸರಿಯಾಗಿಯೇ ಇದೆ, ರಾಜಕೀಯ ಅನ್ನುವುದು ಜನರು ಮತ್ತು ವ್ಯವಸ್ಥೆಯ ನಡುವೆ ಕೆಲಸ ಮಾಡುವ ಸೇತುವೆಯಿದ್ದಂತೆ, ಅದಕ್ಕೆ ಸಾಮಾನ್ಯ ಜ್ಞಾನ ಸಾಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಇಂದಿನ ಭ್ರಷ್ಟ ಆಡಳಿತ ವ್ಯವಸ್ಥೆಗೆ ಯಾವ ರೀತಿಯ ಕಾಯ್ದೆ ಬೇಕು ಎಂದು ಕೇಳಿದಾಗ ಮತದಾನದ ದಿನವೇ ಎಲ್ಲವನ್ನೂ ವಿಚಾರ ಮಾಡಿ ಮತದಾನ ಮಾಡಬೇಕು, ಮತದಾನ ಒಳ್ಳೆಯ ಅಭ್ಯರ್ಥಿಗೆ ಮಾಡಿದರೆ ಒಳ್ಳೆಯ ಆಡಳಿತ ನಿಮಗೆ ಸಿಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲದೆ, ಸರಕಾರವು ನಮ್ಮ ಎಲ್ಲ ರೀತಿಯ ವೈಯಕ್ತಿಕ ದಾಖಲೆಗಳನ್ನು ಕೇಳುವಂತೆ ನಾವೂ ಸರ್ಕಾರ ಮಾಡಿದ ಕೆಲಸಗಳ ಬಗ್ಗೆ ಕೇಳಬೇಕು, ಕೇಳುವುದು ತಪ್ಪಲ್ಲ ಎಂದರು. ಮಾಹಿತಿ ಹಕ್ಕಿನಡಿ ಎಲ್ಲ ಮಾಹಿತಿಗಳನ್ನು ಪಡೆಯಬಹುದು, ಅದೇ ರೀತಿ ಸರ್ಕಾರ ಮಾಡುವ ಪ್ರತಿಯೊಂದು ಕೆಲಸಗಳನ್ನು ನೇರವಾಗಿ ಜನರಿಗೆ ತಿಳಿಸುತ್ತಾ ಹೋದರೆ ಯಾವುದೇ ಭ್ರಷ್ಟಾಚಾರ ವಾಗಲು ಸಾಧ್ಯವಿಲ್ಲ. ನೇರವಾಗಿ ತಿಳಿಸದ ಸಂದರ್ಭದಲ್ಲಿ ಮಾಹಿತಿ ಹಕ್ಕಿನಡಿ ಜನ ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು. ಶೇಕಡ ನೂರರಷ್ಟು ಮತದಾನ ವಾಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ, ಇಂದಿನ ಚುನಾವಣೆಗಳು ಆಡಂಬರದ ಪ್ರಚಾರಗಳಿಂದ ಕೂಡಿದೆ. ಆದರೆ ನನ್ನ ಪ್ರಕಾರ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆಡಂಬರದ ಚುನಾವಣೆ ಪ್ರಚಾರವನ್ನು ಸರಳ ಮಾಡಿ, ಇನ್ನೂ ಹೆಚ್ಚಿನ ಜನ ಮತದಾನ ಮಾಡುವಂತೆ ಪ್ರೇರೇಪಿಸಬಹುದು ಎಂದರು.

ಪ್ರತಿಭಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಎಂಬ ಪ್ರಶ್ನೆಗೆ ಅವರು, ನನ್ನ ಪ್ರಕಾರ ಮತದಾನವೇ ಪ್ರತಿಭಟನೆ. ಇಂದಿನ ದಿನಮಾನಗಳಲ್ಲಿ ಒಂದು ಪ್ರತಿಭಟನೆ ಆಗಬೇಕಾದರೆ ಅದಕ್ಕೆ ಸಮಯ ಹಣ ವ್ಯರ್ಥವಾಗುತ್ತದೆ, ಇದರಿಂದಾಗಿ ಪ್ರತಿಭಟನೆಗಳು ಉತ್ತಮವಾದ ಫಲವನ್ನು ನೀಡಲಾರವು. ಅದರ ಬದಲು ಚುನಾವಣೆಯ ಸಮಯದಲ್ಲಿ ಒಂದು ಬಾರಿ ನೀವು ಯೋಚಿಸಿ ಮತದಾನ ಮಾಡಿದರೆ ಅದೇ ದೊಡ್ಡ ಪ್ರತಿಭಟನೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಯೋಜಧಿಕಾರಿ ಸತೀಶ್ ಗೌಡ ಹಾಗೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ: ರವಿಚಂದ್ರ ಎಂ. ದದೆಗಲ್,

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ರವಿಚಂದ್ರ ಎಂ ದದೆಗಲ್

ರವಿಚಂದ್ರ ಎಂ ದದೆಗಲ್ ಅವರು ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನ ಎರಡನೆ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Scroll to Top