ಕೋರ್ಟು – ಕಚೇರಿ ಪ್ರಲಾಪ : ಕೈಗೆಟುಕುವ ದ್ರಾಕ್ಷಿಯಾಗಿಸಲು ಕಾನೂನು ಸೇವಾ ಪ್ರಾಧಿಕಾರದ ಕೊಡುಗೆ

ಕಾನೂನು ಸೇವೆಗಳ ಪ್ರಾಧಿಕಾರವು ಭಾರತದ ಸಂವಿಧಾನದ ಮಹದಾಶಯಗಳಲ್ಲೊಂದು. ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೂ ಅವಶ್ಯಕತೆಯಿದ್ದಾಗ ಕಾನೂನಿನ ಸಹಾಯ ಹಸ್ತ ಸಿಗಬೇಕೆಂಬ ಮೂಲೋದ್ದೇಶ ಈ ಪ್ರಾಧಿಕಾರದ್ದು. ಕಾನೂನು ಸೇವೆಗಳೊಂದಿಗೆ ಆರಂಭವಾದ ಈ ಪ್ರಾಧಿಕಾರವು, ಕಾನೂನು ಸಾಕ್ಷರತೆ, ಅಬಲರಿಗೆ ಪರಿಹಾರ, ಮಧ್ಯಸ್ಥಿಕೆ ಮತ್ತು ಅದಾಲತ್ ಮೂಲಕ ವಿವಾದಗಳನ್ನು ಬಗೆಹರಿಸುವುದು ಇತ್ಯಾದಿ ಸೇವೆಗಳನ್ನೂ ಒದಗಿಸುತ್ತಲಿದೆ. ಸಮಾಜದ ‘ಕಾನೂನಿನ ಸ್ವಾಸ್ಥ್ಯ’ ಕಾಪಾಡುವಲ್ಲಿ ಮಹತ್ತರ ಪಾತ್ರ ಇರುವ, ಸಾಮಾನ್ಯರಿಗೆ ಅಷ್ಟು ಪರಿಚಯವಿಲ್ಲದ ಪ್ರಾಧಿಕಾರದ ಕುರಿತು ಇವತ್ತಿನ ಲೇಖನ. ವಿಶೇಷವಾಗಿ ಬಡತನ ನಿರ್ಮೂಲನೆಯಲ್ಲಿ ಹೇಗೆ ಪ್ರಾಧಿಕಾರ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂದು ತಿಳಿದುಕೊಳ್ಳೋಣ.

ಕಾನೂನು ಸಹಾಯ:
ಪ್ರಾಧಿಕಾರಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನೊಂದಾಯಿತರಾದ ವಕೀಲರ ಗುಂಪೊಂದು ಜೊತೆಯಲ್ಲಿರುತ್ತದೆ. ಕಲಂ ೧೨ ರಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿ / ಪಂಗಡಗಳಿಗೆ ಸೇರಿದ್ದರೆ, ಅಥವಾ ಮಹಿಳೆಯಾಗಿದ್ದಲ್ಲಿ, ಅಥವಾ ಮಗುವಾಗಿದ್ದಲ್ಲಿ, ಅಥವಾ ಬಡತನವಿದ್ದಲ್ಲಿ, ಭಿಕ್ಷಾಟನೆ ಅಥವಾ ಮಾರಾಟದ ಜಾಲಕ್ಕೆ ಬಲಿಯಾದಲ್ಲಿ, ದೈಹಿಕವಾಗಿ ಅಥವಾ ಮಾನಸಿಕವಾಗಿ ಅಂಗವಿಕಲರಾಗಿದ್ದಲ್ಲಿ, ಕಾರ್ಮಿಕ ಮಹಿಳೆಯಾಗಿದ್ದಲ್ಲಿ, ಯಾವುದೇ ರೀತಿಯ ದೌರ್ಜನ್ಯಕೊಳಗಾದಲ್ಲಿ ಅಂತಹ ವ್ಯಕ್ತಿಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿಕೊಡಲು ಒಬ್ಬ ವಕೀಲರನ್ನು ನೇಮಕ ಮಾಡಿಕೊಟ್ಟು, ಪ್ರಕರಣ ನಡೆಸುವ ಎಲ್ಲ ವೆಚ್ಚವನ್ನು ಪ್ರಾಧಿಕಾರ ಭರಿಸುತ್ತದೆ.

ಲೋಕ್ ಅದಾಲತ್ ಮತ್ತು ಮಧ್ಯಸ್ಥಿಕೆ:
ಹಲವು ಪ್ರಕರಣಗಳು ಸಣ್ಣ ಸಣ್ಣ ಮನಸ್ತಾಪಗಳು ಮತ್ತು ನಮ್ಮ ದೈನಂದಿನ ಜಂಜಾಟದ ಪರಿಣಾಮವಾಗಿ ಹುಟ್ಟಿಕೊಂಡಿದ್ದಾಗಿರುತ್ತವೆ. ಅಂತಹ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿ ವರುಷಗಟ್ಟಲೆ ಯಾರಿಗೂ ಉಪಯೋಗವಾಗದ ರೀತಿಯಲ್ಲಿ ಕೊನೆಗುಳ್ಳುತ್ತವೆ. ಅದರ ಬದಲು ಕಡಿಮೆ ಸಮಯದಲ್ಲಿ ಹೆಚ್ಚಿನ ಕಟ್ಟು- ಕಟ್ಟಳೆಗಳಿಲ್ಲದೆ ಮಧ್ಯಸ್ಥಿಕೆಯ ರೀತಿಯಲ್ಲಿ ಪರಿಣಿತ ವಕೀಲರ ಸಹಾಯದಿಂದ ಅಥವಾ ಸ್ವಯಂ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು. ಲೋಕ್ ಅದಾಲತ್ ಮತ್ತು ಮಧ್ಯಸ್ಥಿಕೆಯ ಮಾಧ್ಯಮಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳು. ಈ ಸಂಸ್ಥೆಗಳು ಕಾನೂನು ಸೇವಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಸಂತ್ರಸ್ತರಿಗೆ ಪರಿಹಾರ:
2018 ರಲ್ಲಿ ಲೈಂಗಿಕ ಹಲ್ಲೆ ಮತ್ತು ಇತರ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಒದಗಿಸಲು ಯೋಜನೆಯೊಂದನ್ನು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರವಾಗಿ ಪ್ರಾಧಿಕಾರವು ರೂಪುಗೊಳಿಸಿದೆ. ಯಾವುದೇ ಮಹಿಳೆ ಲೈಂಗಿಕ, ದೈಹಿಕ ಅಥವಾ ಮಾನಸಿಕ ದೌರ್ಜನ್ಯಗಳಿಗೆ ಒಳಗಾಗಿದ್ದರೆ ಮತ್ತು ಅದರ ಕುರಿತು ಪೊಲೀಸರಿಗೆ ದೂರು ಕೊಟ್ಟು ಅದು ದಾಖಲಾಗಿದ್ದರೆ, ಅವರು ಈ ಪರಿಹಾರಕ್ಕಾಗಿ ಅಪೇಕ್ಷೆ ಸಲ್ಲಿಸಬಹುದು. ಆಯಾ ಪ್ರಕರಣದ ಗಂಭೀರತೆ, ಶಿಕ್ಷಣ ಮತ್ತು ಉದ್ಯೋಗದ ಅವಕಾಶ ನಷ್ಟದಂತಹ ಸನ್ನಿವೇಶಗಳು ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯ ಆರ್ಥಿಕ ಹಿನ್ನೆಲೆಯನ್ನನುಸರಿಸಿ ಈ ಪರಿಹಾರದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಬಡತನ ನಿರ್ಮೂಲದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ) ಯೋಜನೆ 2015:
ಕಾನೂನು ಸಹಾಯ ಜನರಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕಾನೂನು ಸಾಕ್ಷರತೆ. ಹಲವು ವಿವಾದಗಳು ಜನರಿಗೆ ಅವರ ಹಕ್ಕು- ಭಾದ್ಯತೆಗಳ ಅರಿವಿದ್ದರೆ ಸಂಭವಿಸಲಾರದಂತಹ ಪ್ರಕರಣಗಳಾಗಿರುತ್ತವೆ. ಪ್ರಾಧಿಕಾರ ಕಲಂ 4(1) ರ ಅಡಿಯಲ್ಲಿ ರೂಪಿಸಲಾದ 2015ರ ಈ ಯೋಜನೆ ಬಡತನ ನಿರ್ಮೂಲನೆಯತ್ತ ಸಾಗುವ ನಮ್ಮ ಪ್ರಯಾಣವನ್ನು ಸುಲಭಗೊಳಿಸುವಂತದ್ದಾಗಿದೆ ಎಂದರೆ ತಪ್ಪಿಲ್ಲ. ಸಮಾಜದ ದುರ್ಬಲ ವರ್ಗಗಳ ಸಮಾಜ ಕಲ್ಯಾಣ ಕಾಯ್ದೆಗಳು, ಕಾನೂನುಗಳು, ಆಡಳಿತಾತ್ಮಕ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವುದು ಈ ಯೋಜನೆಯ ಆದ್ಯ ಕರ್ತವ್ಯವಾಗಿದೆ. ಆದರೆ ಅದೆಷ್ಟೋ ಬಾರಿ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಭದ್ರತಾ ಕಾರ್ಯಗಳು ಅಸಮರ್ಥತೆ, ಸಾಮಾಜಿಕ ರಕ್ಷಣೆ, ಆರ್ಥಿಕವಾಗಿ ಹಿಂದುಳಿದಿರುವುದು ಮತ್ತು ಶೋಷಣೆ, ಸಾಮಾಜಿಕ ರಚನೆಗಳು, ಸಾಂಸ್ಕೃತಿಕ ಪದ್ಧತಿಗಳು, ಭೇದಭಾವಗಳು ಫಲಾನುಭವಿಗಳಿಗೆ ತಲುಪದಿರಲು ಕಾರಣವಾಗುತ್ತವೆ. ಬಡತನ ಎಂದರೆ ಅದು ಕೇವಲ ವರಮಾನದ ಕೊರತೆ ಅಲ್ಲ. ಆರೋಗ್ಯ, ವಸತಿ, ಪೋಷಕಾಂಶಗಳು, ಉದ್ಯೋಗ, ವೇತನ, ಮಾತೃತ್ವ ರಕ್ಷಣೆ,‌ ಮಕ್ಕಳ ಮರಣ ಸಂಖ್ಯೆ, ಕುಡಿಯುವ ನೀರು, ಶಿಕ್ಷಣ, ನೈರ್ಮಲೀಕರಣ, ಸಹಾಯಧನ, ಮೂಲಭೂತ ಸೇವೆಗಳು,‌ಸಾಮಾಜಿಕ ಬಹಿಷ್ಕಾರ ಮುಂತಾದವುಗಳನ್ನು ಒಳಗೊಂಡಿದೆ. ಹೀಗೆ ಬಡತನವನ್ನು ಒಂದು ಸಮಗ್ರವಾದ ದೃಷ್ಟಿಯಿಂದ ಪರಿಶೀಲಿಸಿ ಅಗತ್ಯವಾದ ಸಹಾಯ ಮಾಡುವುದು ಈ ಯೋಜನೆಯ ಕಾರ್ಯರೀತಿ.

ಯೋಜನೆಯ ಮುಖ್ಯ ಉದ್ದೇಶಗಳು:

  1. ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೂಲ ಹಕ್ಕು ಮತ್ತು ಸೌಲಭ್ಯಗಳ ಅವಕಾಶ ದೊರಕಿಸುವುದು.
  2. ಬಡತನ ನಿರ್ಮೂಲನಾ ಯೋಜನೆಗಳ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ರಾಷ್ಟ್ರ,ರಾಜ್ಯ,ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾನೂನು ನೆರವು ನೀಡುವುದು.
  3. ಜಿಲ್ಲಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಗಳ ಸದಸ್ಯರು, ನ್ಯಾಯವಾದಿಗಳು, ಸಮಾಜಸೇವಕರು, ಅರೆಕಾಲಿಕ ಕಾನೂನು ಸ್ವಯಂಸೇವಕರು, ಮತ್ತು ಕಾನೂನು ನೆರವು ಕೇಂದ್ರಗಳ ವಿದ್ಯಾರ್ಥಿಗಳ ಮೂಲಕ ಬಡತನ ನಿರ್ಮೂಲನಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು.
  4. ನ್ಯಾಯವಾದಿಗಳು ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಬಡತನ ನಿರ್ಮೂಲನ ಯೋಜನಾಧಿಕಾರಿಗಳಿಗೆ ಕೇಂದ್ರದ ಸ್ವಯಂಸೇವಕ ವಿದ್ಯಾರ್ಥಿಗಳಿಗೆ ಅವರ ಕುಶಲತೆಯ ವೃದ್ಧಿಗಾಗಿ ಮತ್ತು ಯೋಜನೆಯ ಅನುಷ್ಠಾನದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಸಲುವಾಗಿ ದಿಕ್ಸೂಚಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸಮಾಜದಲ್ಲಿನ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕೆ ಸಂಬಂಧಿಸಿದ ಜವಾಬ್ದಾರಿ ಹೊಂದಿರುವ ಸಂಸ್ಥೆಗಳಾದ ಎಲ್ಲಾ ಸರ್ಕಾರಿ ಘಟಕಗಳು ಕಾರ್ಯನಿರ್ವಾಹಕರು ಸಂಸ್ಥೆಗಳು ಪ್ರಾಧಿಕಾರಗಳು ಸಂಸ್ಥೆಗಳು ಇವೆಲ್ಲವುಗಳ ನಡುವೆ ಪರಿಣಾಮಕಾರಿಯಾದ ಅಂತರ್ಗತ ಸಹಯೋಗ ಕಲ್ಪಿಸುವುದು.

ಕಾನೂನುಗಳ ಮತ್ತು ಯೋಜನೆಗಳ ಅರಿವು ಮೂಡಿಸಲು ಜಿಲ್ಲಾ ಪ್ರಾಧಿಕಾರ ದೊಡನೆ ಸೇರಿ ರಾಜ್ಯ ಪ್ರಾಧಿಕಾರಗಳು ಪಂಚಾಯತಿ ಸಭೆಗಳಲ್ಲಿ, ಪುರಸಭೆಗಳಲ್ಲಿ, ಪಲ್ಸ್ ಪೋಲಿಯೋ ಶಿಬಿರಗಳಲ್ಲಿ, ಹಳ್ಳಿಯ ಜಾತ್ರೆಗಳಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಗಳ ಸಹಾಯದಿಂದ ಏರ್ಪಡಿಸುತ್ತವೆ. ಎಲ್ಲ ರಾಜ್ಯ ಪ್ರಾಧಿಕಾರಗಳು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಪಟ್ಟಿಯನ್ನು ಆರು ತಿಂಗಳಿಗೊಮ್ಮೆ ಕೇಂದ್ರ ಪ್ರಾಧಿಕಾರಕ್ಕೆ ಕಳುಹಿಸುತ್ತವೆ. ಯೋಜನೆಗಾಗಿ ಪ್ರತಿ ಜಿಲ್ಲಾ ಪ್ರಾಧಿಕಾರ, ಮತ್ತು ಕಾನೂನು ಸೇವಾ ಸಮಿತಿ ಪಟ್ಟಿಯಲ್ಲಿರುವ ಕನಿಷ್ಠ ಮೂರು ವಕೀಲರನ್ನು ಕಾನೂನು ಸೇವಾ ಅಧಿಕಾರಿಗಳನ್ನು ನೇಮಿಸುತ್ತಾರೆ. ಹಾಗೆಯೇ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗಳು ಕಾನೂನು ಸೇವಾ ಅಧಿಕಾರಿಯ ಅಧೀನದಲ್ಲಿರುವ ತಂಡಗಳನ್ನು ರಚಿಸುತ್ತವೆ ಮತ್ತು ಕಾನೂನು ಅಧಿಕಾರಿ ಮೇಲ್ವಿಚಾರಣೆಯನ್ನುವಹಿಸಿ ತಂಡದ ನೆರವಿನೊಂದಿಗೆ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಾರೆ.

ಈ ಯೋಜನೆಗಳ ಫಲಾನುಭವಿಗಳಿಗೆ ಅಗತ್ಯವಾದ ಕಾನೂನಿನ ನೆರವನ್ನು ಕಾನೂನು ಸೇವಾ ಅಧಿಕಾರಿಗಳು ಅಥವಾ ಯೋಜನೆಯ ಸ್ವಯಂಸೇವಕರು ಸಮಾಲೋಚಿಸಿ ನೀಡುತ್ತಾರೆ. ಕೆಳಕಂಡ ಸಹಾಗಳನ್ನು ಒದಗಿಸುವುದು ಪ್ರಾಧಿಕಾರದ ಕರ್ತವ್ಯವಾಗಿವೆ:

  1. ಯೋಜನೆಯ ಫಲಾನುಭವಿಗಳಿಗೆ ಅರ್ಹವಾದ ಪ್ರತಿ ಯೋಜನೆ ಮತ್ತು ಅದರಿಂದ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಯಪಡಿಸುವುದು.
  2. ಆಯಾ ಯೋಜನೆಯ ಪ್ರಯೋಜನಕ್ಕಾಗಿ ಹೆಸರು ನೊಂದಾಯಿಸಬೇಕಾದ ಅಧಿಕಾರಿಯ ಕಚೇರಿ, ವಿಳಾಸವನ್ನು ಯೋಜನೆಯ ಫಲಾನುಭವಿಗಳಿಗೆ ಒದಗಿಸುವುದು.
  3. ಯೋಜನೆಯಡಿಯಲ್ಲಿ ಸಹಾಯ ಪಡೆಯಲು ಯೋಜನೆಗೆ ಅರ್ಹ ಫಲಾನುಭವಿಗಳ ಅವಕಾಶವನ್ನು ತಿರಸ್ಕರಿಸಿದರೆ ಅಥವಾ ಸಹಕಾರ ನೀಡದಿರುವ ನಿಯುಕ್ತ ಪ್ರಾಧಿಕಾರ ಅಥವಾ ಅಧಿಕಾರಿಯ ವಿರುದ್ಧ, ಕಾನೂನು ಸೇವಾ ಕೇಂದ್ರ ಅಥವಾ ಅರೆಕಾಲಿಕ ಕಾನೂನು ಸ್ವಯಂಸೇವಕರ ದೂರು ದಾಖಲಿಸಲು ಅವರಿಗಿರುವ ಅವಕಾಶವನ್ನು ತಿಳಿಸುವುದು.
  4. ದೂರುಗಳ ಬಗ್ಗೆ ಕಾನೂನು ಸೇವಾ ಅಧಿಕಾರಿಗಳು ಜಿಲ್ಲಾ ಪ್ರಾಧಿಕಾರ ಮತ್ತು ರಾಜ್ಯ ಪ್ರಾಧಿಕಾರಗಳು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು.

ಪರಿಪೂರ್ಣವಾದ ಸಮಾಜ ನಮ್ಮದಲ್ಲದಿರಬಹುದು. ಆದರೆ ಇರುವ ಅವಕಾಶಗಳನ್ನು ಸೌಲಭ್ಯಗಳನ್ನು ನಾವು ಸದುಪಯೋಗಪಡಿಸಿಕೊಂಡರೂ ನಾವು ಅನುಭವಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕಾನೂನು ಸೇವಾ ಪ್ರಾಧಿಕಾರ ಹಲವು ರೀತಿಯಲ್ಲಿ ಅಬಲರ ಸಹಾಯಕ್ಕೊದಗುವ ಒಂದು ಸಂಸ್ಥೆ. ಹೆಚ್ಚಿನ ಜನರಿಗೆ ಈ ಬಗ್ಗೆ ತಿಳಿಸೋಣ ಮತ್ತು ಸಂಸ್ಥೆಯ ಸೇವೆಗಳಿಂದ ಹೆಚ್ಚಿನ ಜನರಿಗೆ ಸದುಪಯೋಗವಾಗಲಿ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಸ್ಮಿತಾ ಅಂಗಡಿ

ಸ್ಮಿತಾ ಅಂಗಡಿ ಅವರು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕರಾಗಿ ಮತ್ತು ದೆಹಲಿಯ ಭಾರತೀಯ ಕಾನೂನು ಮತ್ತು ಮ್ಯಾನೇಜ್ಮೆಂಟ್ ಅಕಾಡೆಮಿಯ ಆನ್ಲೈನ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಮಿತಾ ಅವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ, ಕಾನೂನಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಪಿಎಚ್ ಡಿ ಅಧ್ಯಯನವನ್ನು ನಡೆಸಿದ್ದಾರೆ. ‘ನ್ಯಾಯನಿಷ್ಠ’ದ ಕನಸುಗಳನ್ನು ಹಂಚಿಕೊಂಡವರಲ್ಲಿ ಸ್ಮಿತಾ ಕೂಡಾ ಒಬ್ಬರು.

Scroll to Top