ಬೇಲಿಗೆ ಬೇಲಿ ಹಾಕಬಹುದೇ? ನ್ಯಾಯಾಂಗದಲ್ಲಿನ ಶಿಸ್ತುಕ್ರಮಗಳು ಮತ್ತು ನ್ಯಾಯಮೂರ್ತಿ ಗಣೇಡಿವಾಲಾ ಅವರ ಪ್ರಕರಣ

19 ಜನವರಿ 2021 ರಂದು, ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀಮತಿ ಪುಷ್ಪಾ ಗಣೇಡಿವಾಲಾ ಅವರು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆಯ ಅಧಿನಿಯಮ, ೨೦೧೨’ (‘ಪೋಕ್ಸೋ’) ರ ಅಡಿಯಲ್ಲಿ ಒಂದು ಕೃತ್ಯವನ್ನು ‘ಲೈಂಗಿಕ ಅತ್ಯಾಚಾರ’ ಎಂದು ಲೆಕ್ಕಿಸಲು ಅಲ್ಲಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಅತ್ಯಗತ್ಯ ಎಂಬ ವಿವಾದಾತ್ಮಕ ತೀರ್ಪು ನೀಡಿದರು.[i] ಒಂದು ವಾರದ ಹಿಂದೆ, ಅದೇ ನ್ಯಾಯಾಧೀಶರು ಕೇವಲ ಸಂತ್ರಸ್ತೆಯ ಕೈ ಹಿಡಿದುಕೊಳ್ಳುವುದು (ಸಂತ್ರಸ್ತೆ ಐದು ವರ್ಷದ ಮಗುವಾಗಿದ್ದಳು) ಪೋಕ್ಸೋ ಅಡಿಯಲ್ಲಿ ‘ತೀವ್ರತರ ಲೈಂಗಿಕ ಅತ್ಯಾಚಾರ’ ಎಂದು ಲೆಕ್ಕಿಸಲಾಗುವುದಿಲ್ಲ, “ಲೈಂಗಿಕ ಉದ್ದೇಶದೊಂದಿಗೆ ದೈಹಿಕ ಸಂಪರ್ಕ” ಇರಬೇಕಾದುದೂ  ಅತ್ಯಗತ್ಯ ಎಂದು ತೀರ್ಪು ನೀಡಿದ್ದರು.[ii] ಈ ಲೇಖನ ಬರೆಯುವ ಸಮಯದಲ್ಲಿ ಎರಡನೇ ಕೇಸಿನ ತೀರ್ಪು ವ್ಯಾಪಕವಾಗಿ ಟೀಕಿಸಲ್ಪಟ್ಟಿದ್ದರೂ, ಸುಪ್ರೀಂ ಕೋರ್ಟ್‌ ತಲುಪಿಲ್ಲ. ಮೊದಲ ತೀರ್ಪೂ ದೇಶದೆಲ್ಲೆಡೆ ಕೋಲಾಹಲ ಹುಟ್ಟಿಸಿತು, ತೀರ್ಪನ್ನು “ಅಸಹ್ಯಕರ, ಒಪ್ಪಿಕೊಳ್ಳಲಾಗದ್ದು, ಅತಿರೇಕ” ಎನ್ನಲಾಯಿತು, ಮತ್ತು”ಅಪಾಯಕಾರಿ ಪೂರ್ವನಿದರ್ಶನ” ಎಂದು ಖಂಡಿಸಲಾಯಿತು.[iii] ಜನವರಿ 27 ರಂದು, ಸುಪ್ರೀಂ ಕೋರ್ಟ್ ಮೊದಲ ತೀರ್ಪನ್ನು ತಡೆಹಿಡಿಯಿತು.[iv] ಆದರೂ, ವಿವಾದವು ಅಲ್ಲಿಗೆ ಮುಗಿಯಲಿಲ್ಲ, ನ್ಯಾಯಮೂರ್ತಿ ಗಣೇಡಿವಾಲಾ ಅವರು, ಅವರ ಆ  “ಅತಿರೇಕದ” ಎನ್ನಲಾಗುವ ತೀರ್ಪಿನಿಂದಾಗಿ ಶಿಸ್ತಿನ ಕ್ರಮವನ್ನು ಸಹಿಸಬೇಕಾಯಿತು.

ನ್ಯಾಯಮೂರ್ತಿ ಗಣೇಡಿವಾಲ ಅವರ ಹೆಚ್ಚುವರಿ ಹೈಕೋರ್ಟ್ ನ್ಯಾಯಾಧೀಶರಾಗಿ ಎರಡು ವರ್ಷಗಳ ಅಧಿಕಾರಾವಧಿಯಾಗಿ ಮುಗಿಯುತ್ತಿದ್ದಂತೆ ಬಾಂಬೆ ಹೈಕೋರ್ಟಿನ ಖಾಯಂ ನ್ಯಾಯಾಧೀಶರನ್ನಾಗಿ ಅವರನ್ನು ನೇಮಿಸಬೇಕಿತ್ತು. ಆದರೆ ಆ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್ ಕೋಲಿಜಿಯಂ ಜನವರಿ 20, 2021ರಂದು ಹಿಂತೆಗೆದುಕೊಂಡಿತು. ಬದಲಾಗಿ, ಹೆಚ್ಚುವರಿ ನ್ಯಾಯಾಧೀಶರಾಗಿಯೇ ಅವರನ್ನು ಮುಂದುವರಿಸಲು ಹೊಸ ಶಿಫಾರಸ್ಸನ್ನು ಮಾಡಿತು. ಇದನ್ನು ಸರ್ಕಾರವೂ ಒಪ್ಪಿಕೊಂಡು, ಅವರ ನೇಮಕವನ್ನು ಒಂದು ವರ್ಷಕ್ಕೆ ವಿಸ್ತರಿಸಿತು. ಹೀಗೆ ಕೊಲೀಜಿಯಂ ತನ್ನ ಶಿಫಾರಸು ಹಿಂತೆಗೆದುಕೊಳ್ಳುವುದು ಅಪರೂಪ. ಇದು ಒಂದು ಶಿಸ್ತು ಕ್ರಮ ಎಂತಲೇ ಹೇಳಬಹುದು. ಕಾರಣ, ಇದರ ಪರಿಣಾಮ, ನ್ಯಾಯಮೂರ್ತಿ ಗಣೇಡಿವಾಲಾ ಅವರ ನೇಮಕಾತಿಯನ್ನು ಹೊಸತೆಂದು ಲೆಕ್ಕಿಸಬೇಕು, ಆಗ ಸತತ ಸೇವೆಯಲ್ಲಿ ವಿರಾಮವಾಗುತ್ತದೆ, ಅದರಿಂದ ನ್ಯಾಯಾಧೀಶರ ಹಿರಿತನದ ಪಟ್ಟಿಯಲ್ಲಿ ಅವರು ಕೆಳಗಿಳಿಯುತ್ತಾರೆ ಮತ್ತು ಅದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಥವಾ ಯಾವುದೇ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಹುದ್ದೆಗಳಿಗೆ ಅವರ ಬಡ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ, ಅವರು ಮತ್ತೆ 2022 ರಲ್ಲಿ ಹೊಸತಾಗಿ ಶಿಫಾರಸಿನ ಪ್ರಕ್ರಿಯೆಗೆ ಒಳಪಡಬೇಕಾಗಿದೆ. 

ಸುಪ್ರೀಂ ಕೋರ್ಟು ಮತ್ತು ಹೈಕೋರ್ಟ್‌ಗಳು ಸಮಾನ ಮತ್ತು ಸ್ವಾಯತ್ತ ನ್ಯಾಯಾಂಗ ಸಂಸ್ಥೆಗಳು, ಹೈಕೋರ್ಟ್‌ಗಳ ಆಡಳಿತದ ಮೇಲೆ ಸುಪ್ರೀಂ ಕೋರ್ಟಿಗೆ ಮೇಲ್ವಿಚಾರಣೆಯ ಯಾವುದೇ ಅಧಿಕಾರವಿಲ್ಲ.[v] ಆದರೆ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ವಿ. ಯೂನಿಯನ್ ಆಫ್ ಇಂಡಿಯಾ[vi] ಕೇಸಿನ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್‌ನ ಮೂವರು ಹಿರಿಯ ನ್ಯಾಯಾಧೀಶರ ಕೊಲಿಜಿಯಮ್ಮಿನ ತೀರ್ಮಾನ ಹೈಕೋರ್ಟಿನ ಮತ್ತು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ನೇಮಕಾತಿ ಮತ್ತು ಧೃಡೀಕರಣದ ವಿಷಯದಲ್ಲಿ ಪ್ರಾಶಸ್ತ್ಯ ಪಡೆಯಿತು. ಆದ್ದರಿಂದ ಈಗ ಈ ವಿಷಯಗಳಲ್ಲಿ, ಸರ್ಕಾರವು ಕೊಲಿಜಿಯಂನ ಶಿಫಾರಸನ್ನು ಅನುಸರಿಸಲೇಬೇಕು.

ನಮ್ಮ ಸಂವಿಧಾನದಲ್ಲಿ ತಪ್ಪಾದ ನಡವಳಿಕೆ ಅಥವಾ ಅಸಮರ್ಥತೆಯ ಆಧಾರದ ಮೇಲೆ ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ವಿಧಾನವನ್ನು ಹೇಳಿದೆ. ಅಷ್ಟೇ ಅಲ್ಲದೆ, ನ್ಯಾಯಾಧೀಶರ ವಿರುದ್ಧ ಬರುವ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಂದು ತಾತ್ಕಾಲಿಕ ಆಂತರಿಕ ವಿಚಾರಣೆಯ ಬಗೆಯನ್ನೂ ಗುರುತಿಸಿದೆ.[vii] ಆದರೂ, ತೆಗೆದುಹಾಕುವುದನ್ನು ಹೊರತುಪಡಿಸಿ ಚಿಕ್ಕ – ಪುಟ್ಟ ಆರೋಪಗಳ ವಿಚಾರದಲ್ಲಿ ವಿಚಾರಣೆ ನಡೆಸಲು ಅಥವಾ ಕ್ರಮ ಕೈಗೊಳ್ಳಲು ಯಾವುದೇ ಪ್ರಕ್ರಿಯೆ ಕಾನೂನು ಪ್ರಕಾರ ಇಲ್ಲ.

ಸುಪ್ರೀಂ ಕೋರ್ಟಿನ ಕೊಲಿಜಿಯಂನ ನಿರ್ಣಯದ ಪ್ರಕಾರ ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂಗೊಳಿಸುವ ಸಲುವಾಗಿ ಶಿಫಾರಸು ಮಾಡುವುದು ಈ ಅಂಶಗಳ ಆಧಾರ ಮೇಲೆ: 

  1. ಸಂಬಂಧಪಟ್ಟ ಹೈಕೋರ್ಟ್ ಕೊಲಿಜಿಯಂನ ವತಿಯಿಂದ ಪ್ರಸ್ತಾವನೆ
  2. ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ನ್ಯಾಯಮೂರ್ತಿಗಳ ತೀರ್ಪುಗಳ ಗುಣಮಟ್ಟದ ಕುರಿತು ವರದಿ; ಮತ್ತು
  3. ರಾಜ್ಯ ಸರ್ಕಾರದಿಂದ ಶಿಫಾರಸು.

ಗಣೇಡಿವಾಲಾ ಅವರ ವಿಚಾರದಲ್ಲಿ ಮೊದಲು ಸರಕಾರ ಮತ್ತು ಕೊಲಿಜಿಯಂ ಇಬ್ಬರೂ ಶಿಫಾರಸು ಮಾಡಿದ್ದನ್ನು ಗಮನಿಸಿದರೆ, ಗಣೇಡಿವಾಲಾ ಅವರ ಕೆಲಸ ಮಾಡುವ ರೀತಿ ಕೊಲಿಜಿಯಂಗೆ ತೃಪ್ತಿ ನೀಡಿತ್ತು ಎಂದೇ ಅನಿಸುತ್ತದೆ. ಆದರೆ, ಒಂದೆರಡು ವಿವಾದಾತ್ಮಕ ತೀರ್ಪುಗಳಿಂದ ಕೊಲಿಜಿಯಂ ತನ್ನ ಶಿಫಾರಸ್ಸನ್ನು ಬದಲಿಸಿತು ಎಂಬುದು ಬಹಳ ಸ್ಪಷ್ಟ. ಅಷ್ಟೇ ಅಲ್ಲದೆ, ಹೀಗೆ ಧಿಡೀರ್ ಎಂದು ತನ್ನ ತೀರ್ಮಾನವನ್ನು ಕೊಲಿಜಿಯಂ ಹಿಂತೆಗೆದುಕೊಂಡಿದ್ದು ನೋಡಿದರೆ, ಅದು ಶಿಸ್ತು ಕ್ರಮ ಜರುಗಿಸುವ ಮೊದಲು ನ್ಯಾಯಮೂರ್ತಿ ಗಣೇಡಿವಾಲ ಅವರ ಭಾಗವನ್ನು ಕೇಳುವುದು ಅನಗತ್ಯವೆಂದು ಲೆಕ್ಕಿಸಿದೆ ಎಂದೇ ಹೇಳಬಹುದು.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಮತ್ತು ಭಾರತದ ಮುಖ್ಯ ನ್ಯಾಯಾಧೀಶರು ಇಬ್ಬರೂ ಪಾಲಿಸಬೇಕಾದ ಪ್ರಕ್ರಿಯೆಯನ್ನು ಪಾಲಿಸಲಿಲ್ಲ. ಭಾರತದ ಮುಖ್ಯ ನ್ಯಾಯಾಧೀಶರ ನಡೆ ಜನತೆಯಲ್ಲಿ ವಿಶ್ವಾಸ ಹುಟ್ಟಿಸುವಂತದ್ದಾಗಿಲ್ಲ. ಕರಾರುವಕ್ಕಾಗಿ ಹೇಳುವುದಾದರೆ, (ಎ) ಮುಖ್ಯ ನ್ಯಾಯಾಧೀಶರ ಪೀಠ ಮೇಲೆ ಹೇಳಿದ ತೀರ್ಪನ್ನು ತಡೆ ಹಿಡಿಯಿತು (ಬಿ) ಮುಖ್ಯ ನ್ಯಾಯಾಧೀಶರೇ ಅಧ್ಯಕ್ಷತೆ ವಹಿಸಿದ್ದ ಕೊಲಿಜಿಯಂ ಮೊದಲು (ಗಣೇಡಿವಾಲಾ ಅವರ) ಖಾಯಂ ನೇಮಕಕ್ಕೆ ಶಿಫಾರಸು ಮಾಡಿತು (ಸಿ) ಅದೇ ಅಧ್ಯಕ್ಷತೆಯ ಕೊಲಿಜಿಯಂ ನಂತರದಲ್ಲಿ ತನ್ನ ಶಿಫಾರಸ್ಸನ್ನು ಹಿಂಪಡೆಯಿತು; ಮತ್ತು (ಡಿ) ಇದೇ ಅಧ್ಯಕ್ಷತೆಯ ಕೊಲಿಜಿಯಂ 2019 ರಲ್ಲಿ (ಗಣೇಡಿವಾಲಾ ಅವರನ್ನು) ಮೊದಲು ನೇಮಕ ಮಾಡಿದ್ದು.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನೇಮಕಾತಿಯಿಂದ ಹಿಡಿದು, ಮೇಲ್ವಿಚಾರಣೆ ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳುವವರೆಗೆ ಕಟ್ಟಳೆಗಳಿಲ್ಲದ ಬೇರೆ ಬೇರೆ ರೀತಿಯ ಅಧಿಕಾರ ಮುಖ್ಯ ನ್ಯಾಯಾಧೀಶರಿಗಿದೆ. ಬೇಸರದ ಸಂಗತಿಯೆಂದರೆ, ಮುಖ್ಯ ನ್ಯಾಯಾಧೀಶರು ಮತ್ತು ಕೊಲಿಜಿಯಂ ಶಿಸ್ತು ಕ್ರಮ ತೆಗೆದುಕೊಳ್ಳುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರ ಎರಡಕ್ಕೂ ಬೇರೆ ಬೇರೆ ಉದ್ದೇಶಗಳಿರುತ್ತವೆ ಮತ್ತು ಎರಡನ್ನೂ ಬೇರೆ ಬೇರೆ ವೇದಿಕೆಗೆ ಕೊಡಬೇಕಾಗುತ್ತದೆ ಎಂಬುದನ್ನು ಲೆಕ್ಕಿಸದಿದ್ದದ್ದು.

ನ್ಯಾಯಾಧೀಶರ ನಿರ್ಣಾಯಕ ಸಾಮರ್ಥ್ಯದ ಮೇಲೆ ಶಿಸ್ತಿನ ಮೇಲ್ವಿಚಾರಣೆ ಕೈಗೊಳ್ಳುವುದು ಸಣ್ಣ ಮಾತಲ್ಲ, ಅದಕ್ಕೆ ಬಲವಾದ ಕಾರಣಗಳಿರಬೇಕಾಗುತ್ತದೆ. ಸಾಮಾನ್ಯವಾಗಿ, ನ್ಯಾಯಾಧೀಶರು ತಪ್ಪಾದ ರೀತಿಯಲ್ಲಿ ಕಾನೂನುಗಳನ್ನು ಅನ್ವಯಿಸಿದರೆ, ಅಥವಾ ತಮಗಿರುವ ವಿವೇಚನೆಯ ದುರುಪಯೋಗ ಮಾಡಿಕೊಂಡರೆ, ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುವಂತಿಲ್ಲ.[viii] ನ್ಯಾಯನಿರ್ಣಯದಲ್ಲಿ ದೊಡ್ಡದೊಂದು ಮನ್ನಿಸಲಾಗದ ಕಾನೂನಿನ ತಪ್ಪನ್ನು, ಕೆಟ್ಟ ಉದ್ದೇಶದಿಂದ ಅಥವಾ ನಿರ್ಲಕ್ಷ್ಯದಿಂದ ಎಸಗಲಾಗಿದೆ ಎಂದು ಶಿಸ್ತು ಮೇಲ್ವಿಚಾರಣಾ ಸಮಿತಿಗೆ ಅನ್ನಿಸಬೇಕು.[ix] ಈ ಪ್ರಕರಣದಲ್ಲೂ, ಗಣೇಡಿವಾಲಾ ಅವರು ಈ ರೀತಿಯ ತೀರ್ಪು ಹೊರಡಿಸುವುದರ ಹಿಂದೆ ಯಾವ ರೀತಿಯ ಮನಸ್ಥಿತಿ ಇತ್ತು ಅಥವಾ ಉದ್ದೇಶ ಎಂಬುದರ ಕುರಿತಾಗಿ ಕೊಲಿಜಿಯಂ ವಿಚಾರಣೆ ಮಾಡಬೇಕಿತ್ತು. ಅಥವಾ ಇಂತಹ ನ್ಯಾಯನಿರ್ಣಯದಲ್ಲಾಗುವ ತಪ್ಪುಗಳನ್ನು ತನಿಖೆ ಮಾಡಲು ಒಂದು ಕಾನೂನುಬದ್ಧವಾದ ಅಥವಾ ಅಧಿಕೃತವಾದ ಒಂದು ವೇದಿಕೆ ಇಲ್ಲದಿರುವುದರಿಂದ, ಗಣೇಡಿವಾಲಾ ಅವರು ಎಸಗಿದ ಅಚಾತುರ್ಯದ ಕುರಿತು ವಿಚಾರಣೆ ನಡೆಸಲು ಕೊಲಿಜಿಯಂ ಬೇರೆ ಸಮಿತಿಯನ್ನಾದರೂ ನೇಮಿಸಬೇಕಿತ್ತು.

ನ್ಯಾಯಮೂರ್ತಿ ಗಣೇಡಿವಾಲಾ ಅವರನ್ನು ನಡೆಸಿಕೊಂಡಂತಹ ರೀತಿ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯ ಶಿಸ್ತುಕ್ರಮಗಳ ಚೌಕಟ್ಟಿನ ಭೀಕರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಒಬ್ಬ ಹೈಕೋರ್ಟ್ ನ್ಯಾಯಾಧೀಶರಾದವರಿಗೆ ಎರಡನೇ ಬಾರಿಗೆ ಅದೇ ಸ್ಥಾನದಲ್ಲಿ ಪ್ರಮಾಣವಚನ ಸ್ವೀಕರಿಸುವುದು ಅವಮಾನಕರ, ಅದೂ ಶಿಸ್ತು ಕ್ರಮ ಜರುಗಿಸಬಾರದಂತಹ ಕೆಲಸ ಮಾಡಿದ ಆರೋಪದ ಮೇಲೆ. ಸಾಲದ್ದಕ್ಕೆ, ಕೊಲಿಜಿಯಂನ ತೀರ್ಮಾನದ ವಿರುದ್ಧ ಕೇಸು ಹಾಕುವ ಸಂಕೀರ್ಣವಾದ ಪ್ರಕ್ರಿಯೆಯಲ್ಲದೆ, ಬೇರೆ ಯಾವ ರೀತಿಯಲ್ಲಿಯೂ ಅವರನ್ನವರು ಸಮರ್ಥಿಸಿಕೊಳ್ಳಲು ದಾರಿ ಇಲ್ಲದೆ ಹೋಯಿತು.

ಕೊಲಿಜಿಯಂ ವ್ಯವಸ್ಥೆಗೆ ಮೂಲಭೂತವಾದ ಸಮರ್ಥನೆ ಎಂದರೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದಕ್ಕೆ ಕೊಲಿಜಿಯಂ ಅತ್ಯಗತ್ಯ ಎಂಬುದು. ಆದರೆ, ವಿಪರ್ಯಾಸವೆಂದರೆ, ಅದೇ ಸಂಸ್ಥೆಯು ಆಗಾಗ್ಗೆ ಒಳಗಿನ ಮತ್ತು ಹೊರಗಿನ ಒತ್ತಡಗಳಿಗೆ ಮಣಿಯುತ್ತದೆ. ಈ ಪ್ರಕರಣದಲ್ಲಿಯೂ, ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಕೊಲಿಜಿಯಂ ಅನ್ನು ಮೊದಲಿನ ಶಿಫಾರಸ್ಸನ್ನು ಹಿಂಪಡೆಯುವಂತೆ ಕೋರಿದರು. ಸರಕಾರವೂ ಗಣೇಡಿವಾಲಾ ಅವರ ಅಧಿಕಾರಾವಧಿಯನ್ನು ಕೊಲಿಜಿಯಮ್ಮಿನ ಶಿಫಾರಸ್ಸಿನಂತೆ ಎರಡು ವರ್ಷದ ಬದಲಾಗಿ ಒಂದು ವರ್ಷದವರೆಗೆ ವಿಸ್ತರಿಸುವ ಮೂಲಕ ಶಿಫಾರಸನ್ನು ಭಾಗಶಃ ಧಿಕ್ಕರಿಸಿತು. ಹಂಗಾಮಿ ಮನೋಭಾವ, ಪಾರದರ್ಶಕತೆ, ಮುಕ್ತತೆ ಮತ್ತು ಹೊಣೆಗಾರಿಕೆ ಇಲ್ಲದಿರುವುದು, ಕೊಲಿಜಿಯಂನ ನ್ಯಾಯಸಮತತೆಯನ್ನು ಬಹಳ ಬಲಹೀನ ಮಾಡಿದೆ. ಆದ್ದರಿಂದಲೇ ಆಗ್ಗಾಗ್ಗೆ ಕೊಲಿಜಿಯಂ ವ್ಯವಸ್ಥೆಯು ವ್ಯಾಪಕವಾಗಿ ಟೀಕೆಗೊಳಪಡುತ್ತಿರುತ್ತದೆ.

ನ್ಯಾಯಮೂರ್ತಿ ಗಣೇಡಿವಾಲಾ ಅವರ ಪ್ರಕರಣವು ಭಾರತದಲ್ಲಿ ನ್ಯಾಯಾಂಗದ ಸ್ವಯಂ ನಿಯಂತ್ರಣದ ವ್ಯವಸ್ಥೆಯ ಕುಂದುಕೊರತೆಗಳ ಎತ್ತಿ ತೋರಿಸಿದೆ. ಉದಾಹರಣೆಗೆ, ಇದೇ ತಪ್ಪನ್ನು ಹೈಕೋರ್ಟಿನ ಅಥವಾ ಸುಪ್ರೀಂ ಕೋರ್ಟಿನ ಖಾಯಂ ನ್ಯಾಯಾಧೀಶರೇನಾದರೂ ಮಾಡಿದ್ದರೆ,[x] ಕೊಲಿಜಿಯಮ್ಮಿಗೆ ಹೀಗೆ ಶಿಸ್ತುಕ್ರಮ ಜರುಗಿಸಲು ಅವಕಾಶವಿರುತ್ತಿರಲಿಲ್ಲ, ಯಾಕೆಂದರೆ ಕೊಲಿಜಿಯಮ್ಮಿಗೆ ಆ ಅಧಿಕಾರವಿಲ್ಲ. ವಾಸ್ತವವಾಗಿ, ಮಾರ್ಚ್ 2021 ರಲ್ಲಿ, ಭಾರತದ ಮುಖ್ಯ ನ್ಯಾಯಾಧೀಶರೇ ಅತ್ಯಾಚಾರ ಆರೋಪಿಯನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆಯನ್ನು ಮದುವೆಯಾಗುತ್ತೀಯ ಎಂದು ಕೇಳಿ, ಟೀಕೆಗೊಳಪಟ್ಟಿದ್ದರು. ನಂತರ ಅವರು ತಪ್ಪಾಗಿ ವರದಿ ಮಾಡಿದ್ದಕ್ಕಾಗಿ ಮಾಧ್ಯಮವನ್ನು ದೂಷಿಸಿದರು. ವರದಿ ಮಾಡಿದ್ದು ನಿಜವಾಗಿದ್ದಿದ್ದರೂ, ಅನೇಕ ಸಲ ಆದಂತೆ,[xi] ಆ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ದಾರಿಗಳಿಲ್ಲ. ಈ ಕೇಸಿನಲ್ಲಿ, ನ್ಯಾಯಮೂರ್ತಿ ಗಣೇಡಿವಾಲಾ ಅವರು ಹಂಗಾಮಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದುದರಿಂದ, ಮತ್ತು ಅವರ ಅಧಿಕಾರಾವಧಿ ಸಂವಿಧಾನದ ರಕ್ಷಣೆಯಲ್ಲಿ ಬರುವುದಿಲ್ಲವಾದ್ದರಿಂದ, ಕೊಲಿಜಿಯಂಗೆ ತನ್ನ ಶಿಫಾರಸ್ಸನ್ನು ಹಿಂತೆಗೆದುಕೊಳ್ಳುವ ಮೂಲಕ ಶಿಸ್ತುಕ್ರಮ ಜರುಗಿಸುವ ಆಯ್ಕೆ ಇತ್ತು. ಆದರೆ, ಈ ಅಧಿಕಾರವನ್ನು ಕೊಲಿಜಿಯಂ ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿ ಮತ್ತು ಸರಿಯಾದ ದಾರಿಯಲ್ಲಿ ಬಳಸಬೇಕಿತ್ತು. ಬದಲಾಗಿ, ಕೊಲಿಜಿಯಂ ಮಾಧ್ಯಮಗಳ ಟೀಕೆಯಿಂದ ಮತ್ತು ನ್ಯಾಯಾಧೀಶರ ವ್ಯಕ್ತಿಗತವಾದ ಅಸಮಾಧಾನದಿಂದಾಗಿ ತರಾತುರಿಯಲ್ಲಿ ನ್ಯಾಯಮೂರ್ತಿ ಗಣೇಡಿವಾಲಾ ಅವರ ನಿರ್ಣಾಯಕ ಸ್ವಾತಂತ್ರ್ಯವನ್ನು ತುಳಿಯುವಂತಹ ಶಿಸ್ತು ಕ್ರಮವನ್ನು ಹೇರಿತು.

ಕನ್ನಡಕ್ಕೆ: ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಲೇಖನ ಮೂಲ ಥಾಮ್ಸನ್ ರಾಯಿಟರ್ಸ್ ಕಾನೂನು ನಿಯತಕಾಲಿಕೆಯಲ್ಲಿ ಜುಲೈ ಆವೃತ್ತಿಯಲ್ಲಿ ಬಂದುದಾಗಿದೆ. (Huchhanavar, Shivaraj. (2021) ‘Disciplining judges for legal errors: a curious case of Justice Ganediwala’. Public Law, 641-644.)

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಇತ್ತೀಚಿನ ಬ್ಲಾಗ್‌ಗಳು

ಲೇಖಕರ ಪರಿಚಯ

ಉಮಾಶಂಕರ ಹಿರೇಮಠ

ಶಿವರಾಜ್ ಹುಚ್ಚನವರ್

ಶಿವರಾಜ್ ಹುಚ್ಚನವರ್ ಅವರು ಪ್ರಸ್ತುತ ಯುಕೆಯ ಡುರ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿಯ ಕಾನೂನು ಶಾಲೆಯಲ್ಲಿ ಪಿ ಹೆಚ್ ಡಿ ಮಾಡುತ್ತಾ, ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಚ್ಚನವರ್ ಅವರು ಮೂಲತಃ ಬೆಳಗಾವಿ ಜೆಲ್ಲೆಯವರಾಗಿದ್ದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆದು, ಈ ಮೊದಲು ಭೋಪಾಲ್ ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Scroll to Top