ಮುಟ್ಟು, ಕೆಲಸದ ಸ್ಥಳಗಳು ಮತ್ತು ‘ಮುಟ್ಟಿನ ಅನ್ಯಾಯ’
ನಾವು ಒಂದು ಸಮಾಜ ಎಂಬ ನೆಲೆಯಿಂದ ನೋಡಿದಾಗ ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಇನ್ನೂ ಹಿಂಜರಿಯುತ್ತೇವೆ. ಮುಟ್ಟಿನ ಸಮಯದಲ್ಲಿ ಮುಟ್ಟಾದವರನ್ನು[i] ಅಡುಗೆಮನೆಗೆ ಪ್ರವೇಶಿಸಲು ಅನುಮತಿಸದ ಕುಟುಂಬಗಳಿವೆ. ಆ ಸಮಯದಲ್ಲಿ ಜೀವವಿರುವ ಗಿಡವನ್ನು ಮುಟ್ಟಿದರೆ ಅದು ಸಾಯುತ್ತದೆ ಎಂಬ ನಂಬುವ ಜನರಿದ್ದಾರೆ. ಇಂದಿಗೂ ಮುಟ್ಟಾದವರನ್ನು ಮನೆಯ ಒಂದು ಮೂಲೆಗೆ ಸೀಮಿತವಾಗಿಸುವುದು ಅನೇಕ ಸಮುದಾಯಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ವಿಪರ್ಯಾಸವೆಂದರೆ ತಾಯ್ತನವನ್ನು ಪವಿತ್ರವೆನ್ನುವ ನಾವು ಆ ತಾಯ್ತನವನು ಸಾಧ್ಯವಾಗಿಸುವ ಮುಟ್ಟನ್ನು ಅಶುದ್ಧತೆ, ಅಶುಭ ಅಥವಾ ಶಾಪವಾಗಿ ಕಾಣುತ್ತೇವೆ. ತಮ್ಮ ಉಡುಪಿನ ಹಿಂಭಾಗದ ಚೂರು ರಕ್ತವು ಹಲವರ ಶಕ್ತಿ ಉಡುಗಿಸುತ್ತದೆ ಆದ್ದರಿಂದ, ಮುಟ್ಟಿನ ಸುತ್ತ ಇರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಮುಖ್ಯವಾಗಿದೆ. ಇದರಿಂದ ನಾವು ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನೂ ತೊಡೆದುಹಾಕಬಹುದು.
ಮುಟ್ಟಾದವರು ಕೆಲಸಕ್ಕೆ ಹೋಗುವವರಾದರೆ ಬೇರೆಯದೇ ಆದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಏಕೆಂದರೆ ಹಲವರಿಗೆ ಆ ನೋವಿನ ಸಮಯದಲ್ಲಿಯೂ ಕೆಲಸ ಮಾಡದೆ ಇರುವ ಆಯ್ಕೆಗಳಿಲ್ಲ. ನಿಜ, ಮುಟ್ಟಾದವರಿಗೆ ವಿಶ್ರಾಂತಿ ಮತ್ತು ಆರೈಕೆ ಬೇಕು. ಆದರೆ ಆ ಹೆಸರಲ್ಲಿ ಅಸ್ಪೃಶ್ಯರಂತೆ ಅವರನ್ನು ಮುಟ್ಟಿಸಿಕೊಳ್ಳದಿರುವುದನ್ನು ಸಮರ್ಥಿಸಿಕೊಳ್ಳಲಾಗದು. ಒಬ್ಬ ವ್ಯಕ್ತಿ ಎಂಬ ಘನತೆಯನ್ನು ಬಲಿ ಕೊಡದೆ, ಮುಟ್ಟಾದವರು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಳಜಿ ವಹಿಸಲು ಸಾಧ್ಯಗಬೇಕು. ಮುಟ್ಟು ವ್ಯಕ್ತಿಯ ಜೈವಿಕ ಪ್ರಕ್ರಿಯೆಯ ಭಾಗವಾಗಿದೆ. ಜೈವಿಕ ಪ್ರಕ್ರಿಯೆಯೊಂದರ ಕಾರಣಕ್ಕೆ ವ್ಯಕ್ತಿಗಳನ್ನು ಶೋಷಿಸುವುದನ್ನು ಸುತರಾಂ ಒಪ್ಪಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಮುಟ್ಟಿನ ಕಾರಣದಿಂದಾಗಿ ಯಾವುದೇ ರೀತಿಯ ಅನ್ಯಾಯಕ್ಕೊಳಗಾದರೆ ಅದನ್ನು ‘ಮುಟ್ಟಿನ ಅನ್ಯಾಯ’ (Menstrual Injustice) ಎನ್ನಬಹುದು. ಈ ಕುರಿತು ಇನ್ನೂ ವಿವರವಾಗಿ ತಿಳಿದುಕೊಳ್ಳೋಣ.
ಮುಟ್ಟಿನ ಅನ್ಯಾಯವು ಹಲವು ರೂಪಗಳಲ್ಲಿ ಕಂಡುಬರುತ್ತದೆ. ಸಾರ್ವಜನಿಕ ಜೀವನದಿಂದ ದೂರವಿಡುವಿಕೆ, ಅವಕಾಶಗಳ ವಂಚನೆ, ಶುಚಿಯಾದ ಸವಲತ್ತುಗಳು ಸಿಗದೇ ಇರುವುದು, ಮುಟ್ಟಿನ ಸಮಯದಲ್ಲಿನ ದೈಹಿಕ ಮತ್ತು ಮಾನಸಿಕ ಹಿಂಸೆ, ಮಂಗಳಮುಖಿಯರು ಅಥವಾ ಮುಟ್ಟಾಗುವ ಮೂರನೇ ಲಿಂಗಿಗಳನ್ನು ಮುಟ್ಟಾದವರ ಜೊತೆಯಲ್ಲಿ ಲೆಕ್ಕಿಸದೇ ಇರುವುದು ಹೀಗೆ ಹಲವು ಆಯಾಮಗಳು ಈ ಸಮಸ್ಯೆಗಿದೆ. ಅದರಲ್ಲಿ ಆಲೋಚಿಸಲೇಬೇಕಾದ ಒಂದು ಸಮಸ್ಯೆಯೆಂದರೆ ಕೆಲಸ ಮಾಡುವ ಸ್ಥಳಗಳಲ್ಲಿ ಮುಟ್ಟಾದವರು ಎದುರಿಸುವ ಸಮಸ್ಯೆಗಳು. ಎಷ್ಟೋ ಕಚೇರಿಗಳಲ್ಲಿ ಮುಟ್ಟಿನ ಸಮಯದಲ್ಲಿ ಮುಟ್ಟಾದವರು ಅನುಭವಿಸುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಒಂದು ಆರೋಗ್ಯದ ಸಮಸ್ಯೆಯಾಗಿಯೂ ಪರಿಗಣಿಸಲಾಗುವುದಿಲ್ಲ. ಯಾವುದೇ ರೀತಿಯ ವಿನಾಯ್ತಿಗಳನ್ನು ಈ ವಿಚಾರದಲ್ಲಿ ನಮ್ಮ ಕೆಲಸದ ಸ್ಥಳಗಳ ನೀತಿ ಸೂಚಿಸುವುದಿಲ್ಲ. ಇದರ ಕುರಿತು ರಾಷ್ಟ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ಯಾವುದೇ ನೀತಿ ಅಥವಾ ಕಾನೂನು ಇಲ್ಲ. ಹಾಗಾಗಿ, ಈ ವಿಚಾರ ಸಂಪೂರ್ಣವಾಗಿ, ಖಾಸಗಿ ವ್ಯಕ್ತಿಗಳ ಅಂದರೆ ಕೆಲಸದ ಸ್ಥಳಗಳ ಮಾಲೀಕರ ಕೈಯಲ್ಲಿರುತ್ತದೆ. ‘ಕಲ್ಚರ್ ಮಷಿನ್’ ನಂತಹ ಖಾಸಗಿ ಸಂಸ್ಥೆಗಳು ಮುಟ್ಟಿನ ರಜೆಯನ್ನು ನೀಡುತ್ತಿದ್ದರೂ, ಇಂತಹ ಸಂಸ್ಥೆಗಳು ಅಪರೂಪವೆಂದೇ ಹೇಳಬಹುದು. ಅಷ್ಟೇ ಅಲ್ಲದೆ, ಹೀಗೆ ಖಾಸಗಿ ವ್ಯಕ್ತಿಗಳ ವಿವೇಚನೆಗೆ ಮಾತ್ರ ಈ ವಿಚಾರವನ್ನು ಬಿಟ್ಟಾಗ, ಮೂರನೇ ಲಿಂಗಿಗಳಿಗೆ ಅನ್ಯಾಯವಾಗುವ ಸಾಧ್ಯತೆಗಳೇ ಹೆಚ್ಚು.
ಮೂಲಭೂತ ಹಕ್ಕಾಗಿ ‘ಮುಟ್ಟಿನ ನ್ಯಾಯ’ (Menstrual Justice):
ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ 2020ರಲ್ಲಿ, ಸುವೋ ಮೋಟು ಪ್ರಕರಣದಲ್ಲಿ[ii] ಮುಟ್ಟಿನ ಸಮಸ್ಯೆಗಳಿಂದಾಗಿ ಹುಡುಗಿಯರು ಶಾಲೆ ಬಿಟ್ಟು ಹೋಗುವುದನ್ನು ಗಮನಿಸಿ, ಮುಟ್ಟಿನ ಆರೋಗ್ಯವನ್ನು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ದೊಡ್ಡ ಚೌಕಟ್ಟಿನ ಭಾಗವಾಗಿ ಪರಿಗಣಿಸಬೇಕು ಮತ್ತು ಅನುಚ್ಛೇದ 21 ಮತ್ತು 21 ಎ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಅಡಿಯಲ್ಲಿ ಪರಿಗಣಿಸಬೇಕು ಎಂದಿತು. ಸುಚಿತಾ ಶ್ರೀವಾಸ್ತವ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಸಂತಾನೋತ್ಪತ್ತಿ ಹಕ್ಕುಗಳು ಅನುಚ್ಛೇದ 21 ರ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳ ಭಾಗವೇ ಎಂದು ಹೇಳಿದೆ. ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಗೌಪ್ಯತೆ, ಘನತೆ ಮತ್ತು ದೈಹಿಕ ಸಮಗ್ರತೆಯ ಹಕ್ಕುಗಳ ಒಂದು ಅಂಗವಾಗಿದೆ ಎಂದು ಪುಟ್ಟಸ್ವಾಮಿ ತೀರ್ಪೂ ಹೇಳಿದೆ. ಮುಟ್ಟಿನ ನ್ಯಾಯದ ಜೊತೆ ಬೆಸೆದುಕೊಂಡಿರುವ ಆರೋಗ್ಯದ ಹಕ್ಕೂ ಭಾರತದಲ್ಲಿ ಮೂಲಭೂತ ಹಕ್ಕು ಎಂದು ಗುರುತಿಸಲ್ಪಟ್ಟಿದೆ. ಆದ್ದರಿಂದ, ಮುಟ್ಟಿನ ನ್ಯಾಯದ ಹಕ್ಕನ್ನು ಮುಟ್ಟಾಗುವವರ ಮೂಲಭೂತ ಹಕ್ಕು ಎಂದು ಪರಿಗಣಿಸಲು ಯಾವುದೇ ಅಡ್ಡಿಗಳಿಲ್ಲ. ಆ ಹಿನ್ನೆಲೆಯಲ್ಲಿ ಕಾನೂನು ಮಾಡುವವರು ಅನುಚ್ಛೇದ 15 (3) ರ ಅಡಿಯಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ಕೊಡಬಹುದೆಂಬ ಅಧಿಕಾರವನ್ನು ಅಡಿಪಾಯವಾಗಿಟ್ಟುಕೊಂಡು ಈ ವಿಚಾರದಲ್ಲಿ ಕಾನೂನು ತರಬಹುದು.
ನ್ಯಾಷನಲ್ ಲೀಗಲ್ ಸರ್ವೀಸಸ್ ಅಥಾರಿಟಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮೂರನೇ ಲಿಂಗಿಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರ ಜೊತೆಯಲ್ಲಿಯೇ ಪರಿಗಣಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಆದ್ದರಿಂದ, ಮೂರನೇ ಲಿಂಗಿಗಳಿಗೂ ಅನುಕೂಲವಾಗುವ ರೀತಿಯಲ್ಲಿ, ಮುಟ್ಟಿನ ಸಮಯದಲ್ಲಿ ಸಂಬಳ ಸಹಿತ ರಜೆ, ಸ್ವಚ್ಛ ಮತ್ತು ಆರೋಗ್ಯಕರ ಕೆಲಸ ಮಾಡುವ ವಾತಾವರಣ, ತಾರತಮ್ಯದಿಂದ ರಕ್ಷಣೆ ಮತ್ತು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ರೀತಿಯಲ್ಲಿ ವಿಶೇಷ ಸವಲತ್ತುಗಳನ್ನು ಕೊಡಲು ಕಾನೂನು ಅಥವಾ ನೀತಿಗಳನ್ನು ಜಾರಿಗೆ ತರಬಹುದು.
1947 ರಿಂದ ಜಪಾನ್ ಮಹಿಳೆಯರಿಗೆ ಮುಟ್ಟಿನ ರಜೆ ನೀಡುತ್ತಿದೆ. ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಮುಂತಾದ ದೇಶಗಳೂ ಮುಟ್ಟಿನ ರಜೆ ನೀಡುತ್ತವೆ. ಈ ರೀತಿಯ ಪ್ರಯೋಜನಗಳನ್ನು ನೀಡುವ ಕಾನೂನು ಅಥವಾ ಆರೋಗ್ಯ/ ಕಾರ್ಮಿಕ ನೀತಿ ನಮ್ಮಲ್ಲಿಲ್ಲ. ಆದರೆ, ಬಿಹಾರ ರಾಜ್ಯ ಇದಕ್ಕೆ ಅಪವಾದವಾಗಿ, 1992 ರಿಂದಲೇ ಹಲವು ಹೋರಾಟಗಳ ಫಲವಾಗಿ ಮಹಿಳಾ ಸರಕಾರೀ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಕೊಡುತ್ತಿದೆ.
ವಿರುದ್ಧವಾದ ವಾದಗಳು:
ಕೆಲಸದ ಸ್ಥಳಗಳಲ್ಲಿ ಮುಟ್ಟಿನ ನ್ಯಾಯ ಬೇಕೆಂಬ ಕೂಗಿನ ವಿರುದ್ಧ ಅನೇಕ ವಾದಗಳಿವೆ. ಕೆಲವರು ಮುಟ್ಟಾದವರಿಗೆ ಮುಟ್ಟಿನ ರಜೆ ಮತ್ತು ಇತರ ವಿಶೇಷ ಪ್ರಯೋಜನಗಳನ್ನು ನೀಡುವುದು ತಾರತಮ್ಯ ಎಂದು ವಾದಿಸುತ್ತಾರೆ. ಇದು ಮುಟ್ಟಾಗುವವರಿಗೆ ಉದ್ಯೋಗ ನೀಡಲು ಉದ್ಯೋಗದಾತರು ಹಿಂಜರಿಯುವ ಪರಿಸ್ಥಿತಿಗೆ ಕಾರಣವಾಗಬಹುದು ಎಂದೂ ವಾದಿಸಲಾಗುತ್ತದೆ. ಆದರೆ, ಒಬ್ಬ ವ್ಯಕ್ತಿಗೆ ಜೈವಿಕವಾಗಿ ಮುಟ್ಟಾಗುವ ಸಾಮರ್ಥ್ಯ ಇಲ್ಲದಿದ್ದರೆ, ಮುಟ್ಟಾಗುವವರಿಗೆ ಸಿಗುವ ಪ್ರಯೋಜನಗಳ ಸಲುವಾಗಿ ಬೇಸರಗೊಳ್ಳುವುದು ಸಮಂಜಸವಲ್ಲ. ಈಗಾಗಲೇ ಹೇಳಿದಂತೆ, ಮುಟ್ಟಾಗುವವರ ಸಲುವಾಗಿ ವಿಶೇಷ ಕಾನೂನುಗಳನ್ನು ಮಾಡುವ ಅಧಿಕಾರ ಸಂವಿಧಾನದ ಅನುಚ್ಛೇದ 15 ರ ಅಡಿಯಲ್ಲಿ ಶಾಸಕಾಂಗಕ್ಕಿದೆ. ಅಲ್ಲದೆ, ಜನರು ತಮ್ಮ ಲಿಂಗದ ಕಾರಣದಿಂದ ಉದ್ಯೋಗದಿಂದ ವಂಚಿತರಾಗುವುದಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಲು ಸೋಲುವುದು, ಮುಟ್ಟಿನ ನ್ಯಾಯವನ್ನು ನಿರಾಕರಿಸಲು ಸಮರ್ಥನೆಯಲ್ಲ.
ಇನ್ನೊಂದು ವಾದವೆಂದರೆ ಎಲ್ಲಾ ಮಹಿಳೆಯರಿಗೆ ಮುಟ್ಟಾದಾಗ ತಾಳಲಾರದ ತೊಂದರೆಗಳಾಗುವುದಿಲ್ಲ ಎಂಬುದು. ಹೆರಿಗೆಯಾದ ಒಂದು ವಾರದ ನಂತರ ಕರ್ತವ್ಯಕ್ಕೆ ಸೇರಲು ಬರುವ ಹೆಂಗಸರಿದ್ದಾರೆ, ಆದರೆ ಅದರರ್ಥ ತಾಯ್ತನದ ರಜೆ ನೀಡುವ ಕಾನೂನುಗಳ ಅಗತ್ಯವಿಲ್ಲ ಎಂದಲ್ಲವಲ್ಲ? ತನಿಶಾ ಚಕ್ರವರ್ತಿ ಮತ್ತು ಡಾ.ಮುಖೇಶ್ ಕುಮಾರ್ ಮಿಶ್ರಾ ಅವರಿಂದ ಅಂತರಾಷ್ಟ್ರೀಯ ಅಭಿವೃದ್ಧಿ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ[iii] ಮುಟ್ಟಿನ ಮಹಿಳೆಯರು ಎದುರಿಸುತ್ತಿರುವ ವೈದ್ಯಕೀಯ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಲೇಖನದಲ್ಲಿ ಎಂಡೊಮೆಟ್ರಿಯೊಸಿಸ್ ಸೊಸೈಟಿ ಆಫ್ ಇಂಡಿಯಾದ ವರದಿಯನ್ನು ಉಲ್ಲೇಖಿಸುತ್ತಾ ಅವರು ಹೇಳುವುದೆಂದರೆ 25 ಮಿಲಿಯನ್ ಗೂ ಹೆಚ್ಚು ಮಹಿಳೆಯರು ಎಂಡೊಮೆಟ್ರಿಯೊಸಿಸ್ ಎಂಬ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದು, ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಅವರು BMJ ಪಬ್ಲಿಷಿಂಗ್ ಗ್ರೂಪ್‌ನ ಯುಕೆಯ ಕ್ಲಿನಿಕಲ್ ಎವಿಡೆನ್ಸ್ ಹ್ಯಾಂಡ್‌ಬುಕ್ ನ್ನು ಉಲ್ಲೇಖಿಸುತ್ತಾ ಹೇಳುವುದೆಂದರೆ, ”(ಮುಟ್ಟಿನ ಸಮಯದಲ್ಲಿ) 20 ಪ್ರತಿಶತ ಮಹಿಳೆಯರು ಸೆಳೆತ, ವಾಕರಿಕೆ, ಜ್ವರ ಮತ್ತು ಆಯಾಸದಂತಹ ರೋಗಲಕ್ಷಣಗಳಿಂದ ಬಳಲುತ್ತಾರೆ, ಅದು ಅವರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡುತ್ತದೆ”. ಅನೇಕ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಭಾವನೆಗಳ ಮೇಲಿನ ನಿಯಂತ್ರಣವೂ ಕಡಿಮೆ ಆಗುತ್ತದೆ ಎಂದೂ ಅವರು ಹೇಳುತ್ತಾರೆ. ಆದ್ದರಿಂದ, ಕೆಲಸದ ಸ್ಥಳಗಳಲ್ಲಿ ಸಮಂಜಸವಾದ ಮುಟ್ಟಿನ ನ್ಯಾಯದ ನೀತಿಯನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ.
ಕಾನೂನು ಮಾಡುವ ಪ್ರಯತ್ನಗಳು:
“ಯುನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ನಡೆಸಿದ, ಈ ವರ್ಷದ ಆರಂಭದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮುಟ್ಟಿನ ನೋವು ಹೃದಯಾಘಾತದಷ್ಟು ನೋವಾಗಬಹುದು ಎಂದು ಬಹಿರಂಗಪಡಿಸಿತು”- ಇದು ನಿನೊಂಗ್ ಎರಿಂಗ್ ಅವರು ಲೋಕಸಭೆಯಲ್ಲಿ ಮಂಡಿಸಿದ ‘ಮುಟ್ಟಿನ (ಪ್ರಯೋಜನಗಳು) ಮಸೂದೆ, 2017’ ಯ ಕಾರಣೋದ್ದೇಶ ಹೇಳಿಕೆಯ ಭಾಗ.
ಈ ಮಸೂದೆ ಮುಟ್ಟಿನ ನ್ಯಾಯದ ವ್ಯಾಪ್ತಿಯಲ್ಲಿ ಬರುವ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿತು. ಇದರಲ್ಲಿ ಮಹಿಳೆಯರಿಗೆ ನಾಲ್ಕು ದಿನಗಳ ಸಂಬಳ ಸಹಿತ ರಜೆ ಮತ್ತು 8 ನೇ ತರಗತಿಯಿಂದ ಬಾಲಕಿಯರಿಗೆ ರಜೆ, ಮುಟ್ಟಿನ ರಜೆಯನ್ನು ಪಡೆಯದಿದ್ದಲ್ಲಿ ಹೆಚ್ಚುವರಿ ಸಂಬಳ, ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ನಾಲ್ಕು ದಿನಗಳಿಗಿಂತ ಹೆಚ್ಚಿಲ್ಲದೆ ದಿನಕ್ಕೆ ಎರಡು ಬಾರಿ 30 ನಿಮಿಷಗಳ ವಿಶ್ರಾಂತಿ ಸಮಯ, ಮುಟ್ಟಿನ ರಜೆ ಬೇಕೋ ಬೇಡವೋ ಎಂದು ಅವರೇ ತೀರ್ಮಾನಿಸುವ ಹಕ್ಕು, ಶಿಶುಪಾಲನಾ ಸೌಲಭ್ಯ, ಮಹಿಳಾ ಉದ್ಯೋಗಿಗೆ ತನ್ನ ನೇಮಕಾತಿಯ ಸಮಯದಲ್ಲಿ ಆಕೆಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳ ಬಗ್ಗೆ ಮತ್ತು ಬಿಲ್‌ನ ನಿಬಂಧನೆಗಳ ಉಲ್ಲಂಘನೆಗಾಗಿ ಶಿಕ್ಷೆ ಇತ್ಯಾದಿಗಳನ್ನು ತಿಳಿಸಲು ಕಡ್ಡಾಯಗೊಳಿಸುವುದು ಮುಂತಾದ ಶರತ್ತುಗಳನ್ನೊಳಗೊಂಡಿತ್ತು. ಕೆಲವು ಖಾಸಗಿ ವಲಯದ ಸಂಸ್ಥೆಗಳಿಗೂ ಕಾನೂನು ಅನ್ವಯವಾಗುವಂತೆ ಇತ್ತು ಮಸೂದೆ. ಆದರೂ ಈ ಮಸೂದೆಯಲ್ಲಿಯೂ ಕುಂದು – ಕೊರತೆಗಳಿದ್ದವು. ಮುಖ್ಯವಾದದ್ದೆಂದರೆ, ಕೇವಲ ಮಹಿಳೆಯರನ್ನು ಮಾತ್ರ ಲೆಕ್ಕಿಸಿ ಮಸೂದೆ ಮಂಡಿಸಲಾಗಿತ್ತು, ಮುಟ್ಟಾಗುವ ಮೂರನೇ ಲಿಂಗಿಗಳಿಗೆ ಯಾವುದೇ ಪ್ರಯೋಜನ ಇರಲಿಲ್ಲ ಈ ಮಸೂದೆಯಲ್ಲಿ. ಆದರೆ ದುರದೃಷ್ಟವಶಾತ್, ಈ ಮಸೂದೆ ಮಾತ್ರ ಖಾಸಗಿ ಮತ್ತು ಸಾರ್ವಜನಿಕ ಕೆಲಸದ ಸ್ಥಳಗಳಲ್ಲಿ ಮುಟ್ಟಿನ ಅನ್ಯಾಯದ ಕುರಿತು ಕಾನೂನು ಮಾಡಲು ಭಾರತದಲ್ಲಿ ಇದುವರೆಗೆ ಮಾಡಿದ ಒಂದೇ ಒಂದು ವಿಫಲ ಪ್ರಯತ್ನ.
ಮುಟ್ಟಿನ ಕುರಿತು ಮತ್ತೊಂದು ಮಸೂದೆಯನ್ನು ಲೋಕಸಭಾ ಸದಸ್ಯರಾದ ಡಾ. ಶಶಿ ತರೂರ್ ‘ಮಹಿಳೆಯರ ಲೈಂಗಿಕ ಸಂತಾನೋತ್ಪತ್ತಿ ಮತ್ತು ಮುಟ್ಟಿನ ಹಕ್ಕುಗಳ ಮಸೂದೆ, 2018’ ಎಂಬ ಹೆಸರಲ್ಲಿ ಮಂಡಿಸಿದ್ದರು. ಈ ವಿಧೇಯಕವು ಮುಟ್ಟಿನ ಸಮಾನತೆಗಾಗಿ ವಾದಿಸಿದರೂ ಸಹ, ತನ್ನ ವ್ಯಾಪ್ತಿಯನ್ನು ಮಹಿಳೆಯರ ಲೈಂಗಿಕ, ಸಂತಾನೋತ್ಪತ್ತಿ ಮತ್ತು ಮುಟ್ಟಿನ ಹಕ್ಕುಗಳಿಗೆ ಸೀಮಿತಗೊಳಿಸಿತು. ಕೆಲಸದ ಸ್ಥಳಗಳಲ್ಲಿ ಮುಟ್ಟಿನ ಅನ್ಯಾಯದ ಸಮಸ್ಯೆಯನ್ನು ಈ ಮಸೂದೆ ಲೆಕ್ಕಿಸಲಿಲ್ಲ. ಇನ್ನೋರ್ವ ಲೋಕಸಭೆ ಸದಸ್ಯರಾದ ಸುಪ್ರಿಯಾ ಸದಾನಂದ್ ಸುಲೆ ಅವರು “ಮುಟ್ಟಿನ ನೈರ್ಮಲ್ಯ ನಿರ್ವಹಣೆ (ಅರಿವು ಮತ್ತು ಕೈಗೆಟುಕುವಂತೆ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ) ವಿಧೇಯಕ, 2018” ನ್ನು ಮಂಡಿಸಿದರು. ಈ ಮಸೂದೆಯೂ ಮೇಲೆ ಹೇಳಿದ ಹಲವು ಅಂಶಗಳನ್ನು ಒಳಗೊಂಡಿರಲಿಲ್ಲ.
ಈ ಮೂರೂ ಮಸೂದೆಗಳು ಪಾಸಾಗದೆ, ಅವುಗಳ ಅವಧಿ ಮುಗಿದಿದೆ. ಹೀಗಾಗಿ, ಮುಟ್ಟಿನ ಅನ್ಯಾಯವನ್ನು ಮಟ್ಟ ಹಾಕುವಲ್ಲಿ, ಕೆಲಸದ ಸ್ಥಳಗನ್ನು ಮುಟ್ಟಾಗುವವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುವ ಒಂದು ಸಮಗ್ರ ಕಾನೂನು ಇನ್ನೂ ಕನಸಾಗಿಯೇ ಉಳಿದಿದೆ.
ಇತ್ತೀಚಿನ ಬ್ಲಾಗ್‌ಗಳು
ಲೇಖಕರ ಪರಿಚಯ

ಅರುಣಾ ಎ.
ಅರಣಾ ಎ. ಯವರು ಕೇರಳ ಉಚ್ಛ ನ್ಯಾಯಲಯ ಮತ್ತು ಸರ್ವೋಚ್ಛ ನ್ಯಾಯಲಯದಲ್ಲಿ ವಕೀಲರಾಗಿದ್ದು, ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದಾರೆ. ಅರುಣಾರವರು ಹವ್ಯಾಸಿ ಬ್ಲಾಗ್ ಬರಹಗಾರರೂ ಹೌದು.