ಕೊಟ್ಟ ಮಾತು ಕೆಟ್ಟ ಮೇಲೆ: ಕರಾರುಗಳ ಮೇಲೆ ಕೊರೋನಾ ಕರಿಛಾಯೆ “ದೇವರ ಆಟ ಬಲ್ಲವರಾರು? ಆತನ ಎದಿರು ನಿಲ್ಲುವರಾರು? “
‘ಅವಳ ಹೆಜ್ಜೆ’ ಚಲನಚಿತ್ರದ, ಲಕ್ಷ್ಮಿ ಅವರ ಅಭಿನಯದ, ಎಸ್. ಜಾನಕಿ ಅವರ ಸಿರಿಕಂಠದಿಂದ ಮೂಡಿಬಂದ ಈ ಹಾಡು ನಮ್ಮೆಲ್ಲರಿಗೆ ಚಿರಪರಿಚಿತ. ಪ್ರಪಂಚದ ಎಲ್ಲ ಶಕ್ತಿಗಳಿಗಿಂತ ಮಿಗಿಲಾದ ಶಕ್ತಿಯೊಂದಿದೆ ಎಂದು ನಂಬುವವರು ನಾವು, ಮನುಷ್ಯರು. ಆ ಶಕ್ತಿಗೆ ನಾನಾ ರೂಪ, ಭಾಷೆ- ವೇಷ ಕೊಟ್ಟು, ಕಥೆಗಳನ್ನು ಹೆಣೆದು, ಪೂಜಿಸುವವರು ನಾವು. ನಮ್ಮ ಅಂಕೆಗೆ ನಿಲುಕದ ಘಟನೆಗಳು ಸುತ್ತ ನಡೆದರೆ, ಅವನ್ನೂ ಈ ಸರ್ವಶಕ್ತಿಗೆ ಆರೋಪಿಸಿ ಭಗವಂತನಾಟ ಎನ್ನುತ್ತೇವೆ. ಅಷ್ಟೇ ಯಾಕೆ, ಹುಲ್ಲು ಕೂಡ ಭಗವಂತನ ಆಜ್ಞೆ ಇಲ್ಲದೆ ಕದಲದು ಎಂದು ನಂಬುವವರು ಹಲವರು. ಹಾಗಿದ್ದ ಮೇಲೆ ಈ ಕೋವಿಡ್ -೧೯ ಕೂಡ ಆ ಮಹಾಶಕ್ತಿಯ ಆಟವೇ ಅಲ್ಲವೇ? ಕಾನೂನಿನ ದೃಷ್ಟಿಯಲ್ಲಿ ಈ ದೇವರ ಆಟಗಳಿಗೆ ಯಾವ ರೀತಿಯ ಸ್ಥಾನಗಳಿವೆ, ಕೋವಿಡ್ ಪರಿಣಾಮವನ್ನು ಹೇಗೆ ಈ ನಿಟ್ಟಿನಲ್ಲಿ ಅರ್ಥೈಸಬಹುದು ಮತ್ತು ಹೇಗೆ ನಮ್ಮ ನಿತ್ಯ ಜೀವನದಲ್ಲಿ ಈ ಪರಿಕಲ್ಪನೆಗಳು ಪ್ರಭಾವ ಬೀರುತ್ತವೆ ಎಂಬುದರ ಕುರಿತು ಪಕ್ಷಿನೋಟ, ಈ ಲೇಖನ.
‘ದೈವೀಕೃತ್ಯ’ (Act of God) ಎನ್ನುವ ಪರಿಕಲ್ಪನೆ ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳ ಮತ್ತು ದೇಶ – ದೇಶಗಳ ನಡುವಿನ ಕಾಯ್ದೆಗಳಲ್ಲಿ ಸ್ಥಾನ ಪಡೆದಿರುವಂತದ್ದು. ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅಭಿನಯದ ‘ಓ ಮೈ ಗಾಡ್’ ಹಿಂದಿ ಚಲನಚಿತ್ರ (ಕನ್ನಡದ ಮುಕುಂದ ಮುರಾರಿ) ನೋಡಿದವರಿಗೆ ಈ ಪದಪುಂಜ ನೆನಪಿನಲ್ಲಿರುತ್ತದೆ. ಈ ಕಲ್ಪನೆಯನ್ನು ‘ಫೋರ್ಸ್ ಮೆಝರ್’ (Force Majeure) ಎಂದರೆ ಮಹಾಶಕ್ತಿ ಎಂದೂ ಕರೆಯಲಾಗುತ್ತದೆ. ಮೂಲತಃ ಫ್ರಾನ್ಸ್ ನ ನೆಪೋಲಿಯನ್ ಸಂಹಿತೆಯಲ್ಲಿ ಬಸಿರೊಡೆದ ಈ ಪದಗಳು ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷ್ ನ್ಯಾಯಾಲಯಗಳ ತೀರ್ಪುಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಭೂಕಂಪ, ಪ್ರವಾಹ, ಸುನಾಮಿ, ಬಿರುಗಾಳಿ, ಚಂಡಮಾರುತ ಇವೇ ಮೊದಲಾದ ನಿರೀಕ್ಷೆಯಿಲ್ಲದ, ನಿಯಂತ್ರಿಸಲಾಗದ ಮಾನವಾತೀತ ನೈಸರ್ಗಿಕ ವಿಕೋಪಗಳನ್ನು ಕಾನೂನು ಭಾಷೆಯಲ್ಲಿ ದೈವೀಕೃತ್ಯ ಎಂದು ಕರೆಯಲಾಗುತ್ತದೆ. ಇಂತಹ ಅವಘಡಗಳು ಸಂಭವಿಸಿದಾಗ, ಅದರ ಪರಿಣಾಮವಾಗಿ ಯಾವುದೋ ಒಂದು ಪಕ್ಷದಾರನು ಒಪ್ಪಂದದ ಷರತ್ತುಗಳನ್ನು ಪೂರೈಸಲಾಗದಿದ್ದಲ್ಲಿ, ಈ ಸಿದ್ಧಾಂತ ಅವರ ಸಹಾಯಕ್ಕೆ ಬರುತ್ತದೆ. ನ್ಯಾಯಾಲಯಗಳು ಈ ಘಟನೆಗಳ ಕಾರಣದಿಂದಲೇ ಒಪ್ಪಂದ ಮುರಿದು ಬಿತ್ತು ಎಂದು ಕಂಡು ಹಿಡಿದರೆ, ಅಂತಹ ಉಲ್ಲಂಘನೆಗೆ ಕರಾರಿನಲ್ಲಿ ಹೇಳಿದ ದಂಡ ಅಥವಾ ಜುಲ್ಮಾನೆಯನ್ನು ತೆರಬೇಕಾಗಿಲ್ಲ.
ಇವತ್ತು ಜಾಗತೀಕರಣದ ಮತ್ತು ತಂತ್ರಜ್ಞಾನದ ಶಕೆಯಲ್ಲಿ ನಮಗರಿವಿದ್ದೂ, ಇಲ್ಲದೆಯೂ, ನೂರಾರು ಕರಾರುಗಳ ಜೇಡರಬಲೆಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ದಿನ ಬೆಳಗಾದರೆ ಓದುವ ದಿನಪತ್ರಿಕೆಯಿಂದ ಹಿಡಿದು, ರಾತ್ರಿ ಮಲುಗುವಾಗ ಯೂಟ್ಯೂಬ್ ನಲ್ಲಿ ಕೇಳುವ ಹಾಡುಗಳವವರೆಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಕರಾರುಗಳೇ. ಕೊರೋನಾ ಕುಚೇಷ್ಟೆ ಈ ಎಲ್ಲಾ ಕರಾರುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಂಗೆಡಿಸಿದೆ.
ಕರಾರುಗಳನ್ನು ಪ್ರಮುಖವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು, ಮೊದಲನೆಯದು ಖಾಸಗಿ ಕರಾರುಗಳು ಮತ್ತು ಎರಡನೆಯದು ಸರಕಾರೀ ಕರಾರುಗಳು. ಈ ಎರಡೂ ರೀತಿಯ ಕರಾರುಗಳ ಮೇಲೆ ಕೊರೋನಾ ಸಂಬಂಧಿತ ಉಲ್ಲಂಘನೆಗಳು ಮತ್ತು ದೈವೀಕೃತ್ಯ ಸಿದ್ಧಾಂತ ಬೇರೆ ಬೇರೆಯಾಗಿ ಪ್ರಭಾವ ಬೀರುತ್ತವೆ.
ಎಲ್ಲ ಒಪ್ಪಂದಗಳು ಭಾರತೀಯ ಕರಾರು ಕಾಯ್ದೆ, 1872 ರ ವ್ಯಾಪ್ತಿಗೆ ಒಳಪಟ್ಟುದದಾಗಿವೆ. ಈ ಕಾಯ್ದೆಯಲ್ಲಿ ದೈವೀ ಕೃತ್ಯ ಎಂದಾಗಲೀ ಮಹಾ ಶಕ್ತಿ ಎಂಬ ಪದಗಳನ್ನು ಬಳಸಿಲ್ಲ. ಆದರೆ ಕಲಂ 32 ಮತ್ತು 56 ಈ ಕಲ್ಪನೆಗಳಿಂದ ಮೂಡಿದ ನಿಬಂಧನೆಗಳಾಗಿವೆ. ಕಲಂ 32 ರ ಪ್ರಕಾರ, ಮೊದಲೇ ಊಹಿಸಿದ ಘಟನೆಗಳು ನಡೆಯದೆ ಒಂದು ಒಪ್ಪಂದ ನಡೆಯುವುದು ಅಸಾಧ್ಯವಾದಲ್ಲಿ, ಅಂತಹ ಒಪ್ಪಂದವು ಅನೂರ್ಜಿತ (void) ಅಥವಾ ಬಲಹೀನ ಆಗುತ್ತದೆ ಎಂದು ಹೇಳಿದೆ. ಹಾಗೆಯೇ ಕಲಂ 56 ರ ಪ್ರಕಾರ ಒಂದು ಕರಾರು ಯಾವುದಾದರೂ ತಡೆಯಲಾಗದ ಸನ್ನಿವೇಶದ ಕಾರಣದಿಂದ ಅಸಾಧ್ಯವೋ, ಅಸಿಂಧುವೋ ಆದರೆ, ಅಂತಹ ಒಪ್ಪಂದ ಬಲಹೀನವಾಗುತ್ತದೆ ಎಂದಿದೆ. ಇವು ನೋಡಲು ‘ಅಳಿಯ ಅಲ್ಲ, ಮಗಳ ಗಂಡ’ ಎಂದೆನಿಸಿದರೂ, ಒಂದು ಸಣ್ಣ ವ್ಯತ್ಯಾಸವಿದೆಯಿಲ್ಲಿ. ಕಲಂ 32 ಅನ್ವಯಿಸಬೇಕೆಂದರೆ ಕರಾರಿನಲ್ಲಿ ಈ ಕುರಿತು ಮುಂಚಿತವಾದ ಪ್ರಸ್ತಾಪವಿರಬೇಕು. ಉದಾಹರೆಣೆಗೆ: “ಯಾವುದೇ ನೈಸರ್ಗಿಕ ವಿಕೋಪ / ಅಥವಾ ನಿಯಂತ್ರಣಕ್ಕೆ ಸಿಗಲಾಗದ ಕಾರಣದಿಂದ ಮರುಪಾವತಿ ಸಾಧ್ಯವಾಗದೆ ಇದ್ದಲ್ಲಿ……” ಇಂತಹ ನಿಬಂಧನೆಯಿರಬೇಕು. ಕಲಂ 56ರ ಅನ್ವಯಕ್ಕೆ ಅಂತಹ ನಿರ್ಬಂಧಗಳಿಲ್ಲ. ಫೆಬ್ರವರಿ 19 ರಂದು ವಿತ್ತೀಯ ಸಚಿವಾಲಯ ಹೊರಡಿಸಿದ ಜ್ಞಾಪಕ ಪಾತ್ರ (Office Memorandum) ದ ಪ್ರಕಾರ ಕೋವಿಡ್ – ೧೯ ಒಂದು ದೈವೀ ಕೃತ್ಯ ಎಂದು ಸರಕಾರ ಘೋಷಿಸಿದ್ದರೂ ಸಹ, ಮೇಲೆ ಹೇಳಿದ ಸೂತ್ರಗಳು ಅನ್ವಯವಾಗುತ್ತವೆ.
ದೆಹಲಿಯ ಉಚ್ಚ ನ್ಯಾಯಾಲಯ, ಮೆಸರ್ಸ್ ಹ್ಯಾಲಿಬರ್ಟನ್ ಆಫ್ ಶೋರ್ ಸರ್ವೀಸಸ್ ವಿ. ವೇದಾಂತ ಲಿಮಿಟೆಡ್ ಪ್ರಕರಣ (2020 SCC OnLine Del 542) ದಲ್ಲಿ ಕೋವಿಡ್ -೧೯ ನ್ನು ಮತ್ತು ದೇಶದಾದ್ಯಂತ ಜಾರಿಯಾಗಿಸಿದ್ದ ಲಾಕ್ಡೌನ್ ನ್ನು ದೈವೀಕೃತ್ಯ ಎಂದು ಪರಿಗಣಿಸಿ, ಬ್ಯಾಂಕ್ ಗ್ಯಾರಂಟಿಗಳನ್ನು ಉಪಯೋಗಿಸದಂತೆ ಬ್ಯಾಂಕ್ ಗೆ ತಡೆಯಾಜ್ಞೆ ನೀಡಿದೆ. ಆದರೆ ದೆಹಲಿ, ಬಾಂಬೆ ಮತ್ತು ಇತರ ಉಚ್ಚ ನ್ಯಾಯಾಲಯಗಳು ಈ ವಿಷಯದಲ್ಲಿ ಇತ್ತ ತೀರ್ಪುಗಳನ್ನು ಗಮನಿಸಿದಾಗ, ಅಪರೂಪವಾದ ಪ್ರಕರಣಗಳಲ್ಲಿ ಮಾತ್ರವೇ ದೈವೀಕೃತ್ಯವನ್ನು ನೆಪವಾಗಿಸಿ ಕರಾರನ್ನು ಉಲ್ಲಂಘಿಸಿದ ದಂಡದಿಂದ ಪಾರಾಗಲು ಪಕ್ಷದಾರರಿಗೆ ಅಸ್ತು ಎಂದಿವೆ. ಹಾಗೆಯೇ ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದಗಳ ವಿಚಾರದಲ್ಲಿ ಕಲಂ ೩೨ ಅಥವಾ ಕಲಂ ೫೬ ರ ಅಡಿಯಲ್ಲಿ ಕೋವಿಡ್ ಕಾರಣದಿಂದಾಗಿ ರಕ್ಷಣೆ ಪಡೆಯುವುದು ಅಸಾಧ್ಯ ಎಂದು ದೆಹಲಿಯ ಉಚ್ಚ ನ್ಯಾಯಾಲಯ ರಮಾನಂದ್ ವಿ. ಗಿರೀಶ್ ಪ್ರಕರಣ (2020 SCC OnLine Del 635) ದಲ್ಲಿ ಸ್ಪಷ್ಟಪಡಿಸಿದೆ. ಒಟ್ಟಾರೆ ಹೇಳಬೇಕೆಂದರೆ, ಒಪ್ಪಂದಗಳ ಮೇಲೆ ಕೋವಿಡ್ ಕರ್ಮಕಾಂಡದ ಪರಿಣಾಮವನ್ನು ‘ಇದಮಿತ್ಥಮ್” ಎಂದು ಹೇಳಲಾಗುವುದಿಲ್ಲ. ಒಂದೊಂದು ಕರಾರನ್ನೂ ಪರಿಶೀಲಿಸಿದರೆ ಮಾತ್ರ ನಿಖರವಾಗಿ ಆ ಕರಾರಿನ ಮೇಲೆ ಏನು ಪರಿಣಾಮವಿರಬಹುದು ಎಂದು ಹೇಳಲು ಸಾಧ್ಯ.
ಇನ್ನು ಸರಕಾರ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ಒಪ್ಪಂದಗಳು, ಕೇಂದ್ರ – ರಾಜ್ಯ ಸರಕಾರಗಳ ಕರಾರುಗಳು, ರಾಜ್ಯ – ರಾಜ್ಯಗಳ ಒಪ್ಪಂದಗಳು ಇವೆಲ್ಲವನ್ನೂ ಸರಕಾರೀ ಕಾನೂನುಗಳ ವಿಭಾಗದಲ್ಲಿ ಲೆಕ್ಕಿಸಬಹುದು. ಸರಕಾರೀ ಕಾನೂನುಗಳಿಗೂ ಕರಾರು ಕಾಯ್ದೆ ಅನ್ವಯಿಸುವುದಾದರೂ, ಸರಕಾರೀ ಕರಾರುಗಳನ್ನು ಖಾಸಗಿ ಕರಾರುಗಳ ಜೊತೆ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸಮಂಜಸವಲ್ಲ. ಯಾಕೆಂದರೆ ಸರಕಾರವು ಒಂದು ಒಪ್ಪಂದಕ್ಕೆ ಭಾಗಿ ಮಾತ್ರವಾಗಿರದೆ ಕಲ್ಯಾಣರಾಜ್ಯದ ಹೊಣೆ ಹೊತ್ತ ವ್ಯವಸ್ಥೆಯಾಗಿದೆ. ರಮಣ ದಯಾರಾಂ ಶೆಟ್ಟಿ ವಿ. ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ ಮತ್ತು ಇತರರು (1979) 3 SCC 489 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸರಕಾರದ ಯಾವ ಕ್ರಮಗಳೂ ಕಾರಣವಿಲ್ಲದೆ ನಿರಂಕುಶವಾಗಿ ಕೈಗೊಳ್ಳುವುದು ಸಾಧುವಲ್ಲ, ಅದು ಒಪ್ಪಂದಗಳಾದರೂ ಸರಿಯೇ ಎಂದು ಸ್ಫುಟವಾಗಿ ಹೇಳಿದೆ. ಹಾಗಾಗಿ ಸರಕಾರಗಳು ಖಾಸಗಿ ವ್ಯಕ್ತಿಗಳಂತೆ ಕೇವಲ ಲಾಭಕ್ಕಾಗಿ ಅಥವಾ ಪೂರ್ವಾಗ್ರಹಗಳಿಂದ ಅಥವಾ ವಿವೇಚನೆಯಿಲ್ಲದೆ ಕರಾರುಗಳಲ್ಲಿ ನಡೆದುಕೊಳ್ಳುವುದು ಕಾನೂನುಬಾಹಿರವಾಗಿದೆ.
ಜೈ ದುರ್ಗಾ ಫಿನ್ವೆಸ್ಟ್ ಲಿಮಿಟೆಡ್ ವಿ. ಹರಿಯಾಣ ರಾಜ್ಯ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸರಕಾರಗಳು ಕಾಯ್ದೆಗಳ ಪ್ರಕಾರ ವಿಧಿಸಲಾದ ಕರ್ತವ್ಯಗಳನ್ನು ಪೂರೈಸಿದಲ್ಲಿ ಮಾತ್ರ ಕರಾರುಗಳ ಉಲ್ಲಂಘನೆಯ ಕುರಿತಾಗಿ ದೂರಬಹುದು ಎಂದಿದೆ. ಅಂದರೆ ತಮ್ಮ ಕೆಲಸ ಸರಿಯಾಗಿ ಮಾಡದೆ, ಇತರರನ್ನು ದೂರಲು ಸರಕಾರಗಳಿಗೆ ಅವಕಾಶವಿಲ್ಲ ಎಂಬುದಾಗಿದೆ. ಆದ್ದರಿಂದ ಸರಕಾರಗಳು ದೈವೀಕೃತ್ಯದ ನೆಪವಾಗಿಸಿಕೊಂಡು ಖಾಸಗಿ ವ್ಯಕ್ತಿಗಳಂತೆ ಜವಾಬ್ದಾರಿಯಿಂದ ನುಸುಳುವುದು ಅಮಾನ್ಯವಾಗುತ್ತದೆ. ಉದಾಹರಣೆಗೆ: ಇತ್ತೀಚಿಗೆ ನಮ್ಮ ವಿತ್ತೀಯ ಸಚಿವೆ ಕೋವಿಡ್ -೧೯ ನ್ನು ದೈವೀಕೃತ್ಯ ಎಂದು ಸಂಭೋದಿಸಿ, ಇದರಿಂದಾಗಿ ರಾಜ್ಯಗಳಿಗೆ ಜಿ.ಎಸ್.ಟಿ. ವಿಂಗಡಣೆಯಲ್ಲಿ ತಡವಾಗಬಹುದು ಮತ್ತು ಆದ್ದರಿಂದ ರಾಜ್ಯಗಳು ಕೇಂದ್ರ ಸರಕಾರದಿಂದ ಅನುಚ್ಛೇದ 292 ರ ಅಡಿಯಲ್ಲಿ ಸಾಲ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ. ದೈವೀಕೃತ್ಯ ಸಿದ್ಧಾಂತವನ್ನು ಸರಕಾರಗಳು ಈ ರೀತಿ ಬಳಸಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಯಾಕೆಂದರೆ ಸಂವಿಧಾನದ ಅನುಚ್ಛೇದ 270 ರ ಪ್ರಕಾರ ಜಿ.ಎಸ್.ಟಿ. ತೆರಿಗೆ ಹಣವನ್ನು ರಾಜ್ಯ ಮತ್ತು ಕೇಂದ್ರಗಳ ನಡುವೆ ಹಂಚುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಈ ಸಾಂವಿಧಾನಾತ್ಮಕವಾದ ಜವಾಬ್ದಾರಿಯಿಂದ ದೈವೀಕೃತ್ಯದ ಹೆಸರು ಹೇಳಿ ನುಣುಚಿಕೊಳ್ಳುವದು ಖಂಡನಾರ್ಹವಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಈ ಜಾಡ್ಯದಿಂದಾಗುವ ಅಡ್ಡ ಪರಿಣಾಮಗಳು ನಮ್ಮ ಜನಜೀವನವನ್ನು ಇನ್ನೂ ಬೇರೆ ಬೇರೆ ರೀತಿಯಲ್ಲಿ ಭಾಧಿಸುತ್ತಲೇ ಇವೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಈವರೆಗೆ ಇಲ್ಲದ ಅರ್ಥೈಸುವಿಕೆ, ಒಳನೋಟಗಳು ಕಾನೂನು – ಕಾಯ್ದೆಗಳ ಪರಿಕಲ್ಪನೆಗಳಿಗೆ ಅಗತ್ಯವಾಗಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯವಾದಿಗಳು, ವಿದ್ಯಾರ್ಥಿಗಳು ಮತ್ತು ನ್ಯಾಯಾಲಯಗಳು ಸಮಸ್ಯೆಗಳ ವಿವಿಧ ಮಜಲುಗಳನ್ನು ಪರಿಶೋಧಿಸಬೇಕಾದ ಅಗತ್ಯವಿದೆ. ದೈವೀಕೃತ್ಯ ಮತ್ತು ಕೋವಿಡ್ ಪರಿಣಾಮಗಳ ಕುರಿತು ವಿವರವಾದ ಹೊಸ ಕಾನೂನನ್ನೇ ಜಾರಿಗೊಳಿಸಬೇಕೆಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೊಸ ಕಾನೂನು ಬೇಕೆಂದು ನಾನು ಪ್ರತಿಪಾದಿಸದಿದ್ದರೂ, ಈ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂಬ ಮಾತು ಸತ್ಯ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
ಇತ್ತೀಚಿನ ಬ್ಲಾಗ್ಗಳು
ಲೇಖಕರ ಪರಿಚಯ

ಮೈತ್ರೇಯಿ ಸಚ್ಚಿದಾನಂದ ಹೆಗಡೆ
ಮೈತ್ರೇಯಿ ಸಚ್ಚಿದಾನಂದ ಹೆಗಡೆಯವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರು. ಶಿರಸಿಯ ಮೂಲದವರಾದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವ್ಯಾಸಂಗ ಮಾಡಿದ್ದಾರೆ. ಕಾನೂನು ನಿಯತಕಾಲಿಕೆಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಅವರು, ‘ನ್ಯಾಯನಿಷ್ಠ’ ದ ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರೂ ಆಗಿದ್ದಾರೆ.